ನಿಮ್ಮ ಆಲೋಚನಾ ಶಕ್ತಿಯೇ ನಿಮ್ಮ ಸಂಪತ್ತು !
ಒಂದು ಶಾಲೆಯಲ್ಲಿ ದಿನದ ಪಾಠಗಳು ಎಂದಿನಂತೆ ನಡೆಯುತ್ತಿತ್ತು. ಹೊರಗೆ ಜೋರಾಗಿ ಮಳೆ ಬರುತ್ತಿತ್ತು. 4ನೇ ತರಗತಿಯಲ್ಲಿ ಪಾಠದ ನಡುವೆ ಶಿಕ್ಷಕರೊಬ್ಬರು ತಮಾಷೆಗೆ ಮಕ್ಕಳನ್ನು ಕೇಳಿದರು - ನಿಮಗೆಲ್ಲರಿಗೂ ನಾನು ನೂರು ರೂಪಾಯಿ ಕೊಟ್ಟರೆ ನೀವೆಲ್ಲರೂ ಏನು ಖರೀದಿಸುತ್ತೀರಿ?
ಒಬ್ಬ ವಿದ್ಯಾರ್ಥಿ ಹೇಳಿದ - ನಾನು ವಿಡಿಯೋ ಗೇಮ್ ಖರೀದಿಸುತ್ತೇನೆ..
ಇನ್ನೊಬ್ಬ ಹೇಳಿದ - ನಾನು ಕ್ರಿಕೆಟ್ ಬಾಲ್ ಖರೀದಿಸುತ್ತೇನೆ.
ಮತ್ತೊಬ್ಬ ಹೇಳಿದ- ನಾನು ಒಂದು ಮುದ್ದಾದ ಗೊಂಬೆಯನ್ನು ಖರೀದಿಸುತ್ತೇನೆ.
ಬೇರೆಯೊಬ್ಬ ಹೇಳಿದ - ನಾನು ಚಾಕೊಲೇಟ್ ಗಳನ್ನು ಖರೀದಿಸುತ್ತೇನೆ.
ಆದರೆ...
ಒಬ್ಬ ಹುಡುಗ ಮಾತ್ರ ಆಲೋಚನೆಯಲ್ಲಿ ಮುಳುಗಿದ್ದ. ಅದನ್ನು ಗಮನಿಸಿದ ಶಿಕ್ಷಕರು ಆ ಹುಡುಗನನ್ನು ಕೇಳಿದರು - ನೀನು ಏನು ಯೋಚಿಸುತ್ತಿದ್ದಿಯ ಮರಿ, ನೀನು ಏನು ಖರೀದಿಸುತ್ತೀಯಾ? ಆ ಮಗು ಹೇಳಿತು - ನಾನು ಕನ್ನಡಕವನ್ನು ಖರೀದಿಸುವೆ !
ಶಿಕ್ಷಕ- : ಕನ್ನಡಕವಾ....ಯಾಕೆ ನಿನಗೆ ಅದು? ನಿನಗೆ ಕಣ್ಣಿನ ಸಮಸ್ಯೆ ಇಲ್ಲವಲ್ಲಾ?
ಆ ಹುಡುಗ ಹೇಳಿದ- ಸಾರ್, ನನಗಲ್ಲ, ನನ್ನ ತಾಯಿಗೆ ಸ್ವಲ್ಪ ದೃಷ್ಟಿ ಮಂಜು, ಸರಿಯಾಗಿ ಕಣ್ಣು ಕಾಣಿಸುವುದಿಲ್ಲ. ಆದಕ್ಕಾಗಿ ನಾನು ನನ್ನ ತಾಯಿಗೆ ಕನ್ನಡಕವನ್ನು ಖರೀದಿಸುತ್ತೇನೆ!
ಶಿಕ್ಷಕರು ಕೇಳಿದರು - ನಿನ್ನ ತಂದೆ ನಿನ್ನ ತಾಯಿಗೆ ಕನ್ನಡಕವನ್ನು ತಂದು ಕೊಡಬಹುದಲ್ಲಾ, ಅವರ ಬಳಿ ಹೇಳು. ನಾನು ಕೊಡುವ ನೂರು ರೂಪಾಯಿಯಲ್ಲಿ ನೀನು ನಿನಗಾಗಿ ಏನಾದರೂ ಖರೀದಿಸಬೇಕಲ್ಲವೇ?
ಆಗ ಆ ಹುಡುಗ ನೀಡಿದ ಉತ್ತರದಿಂದ ಶಿಕ್ಷಕರ ಕಣ್ಣು ತುಂಬಿ ಬಂತು.
ಹುಡುಗ ಹೇಳಿದ- ನನ್ನ ತಂದೆ ಈಗ ಈ ಜಗತ್ತಿನಲ್ಲಿಲ್ಲ. ಅವರು ನಿಧನ ಹೊಂದಿ ವರ್ಷಗಳೇ ಆದುವು. ನನ್ನ ತಾಯಿಯೇ ನನಗೆ ಎಲ್ಲ....ನನ್ನ ತಾಯಿ ಊರ ಜನರ ಬಟ್ಟೆ ಹೊಲಿದು ಬರುವ ಸಂಪಾದನೆಯಿಂದ ನನಗೆ ಊಟ, ನನಗೆ ಬಟ್ಟೆ, ಶಾಲೆಗೆ ಹೋಗಲು ಪುಸ್ತಕ, ಪೆನ್ನು ಕೊಡಿಸುತ್ತಾಳೆ. ಆದರೆ ಕೆಲವು ತಿಂಗಳುಗಳಿಂದ ಅವಳಿಗೆ ಕಣ್ಣಿನ ಸಮಸ್ಯೆ ಪ್ರಾರಂಭವಾಗಿ ದೃಷ್ಟಿ ಸರಿಯಿಲ್ಲದೇ ಬಟ್ಟೆಯನ್ನು ಸರಿಯಾಗಿ ಹೊಲಿಯಲು ಪರದಾಡುತ್ತಾ ಇದ್ದಾಳೆ, ಡಾಕ್ಟರ್ ಪರೀಕ್ಷೆ ಮಾಡಿ ಕನ್ನಡಕ ಮಾಡಿಸಬೇಕು ಎಲ್ಲಾ ಸರಿ ಆಗುತ್ತೆ ಅಂದಿದ್ದಾರೆ. ಅದಕ್ಕಾಗಿಯೇ ನಾನು ನನ್ನ ತಾಯಿಗೆ ಕನ್ನಡಕವನ್ನು ಖರೀದಿಸಿ ನೀಡುತ್ತೇನೆ. ಯಾಕೆ ಅಂದ್ರೆ...ನಾನು ಕೊಡಿಸುವ ಕನ್ನಡಕದಿಂದ ನನ್ನ ತಾಯಿ ನನ್ನನ್ನು ಚೆನ್ನಾಗಿ ಓದಿಸುತ್ತಾಳೆ ಅನ್ನೋ ನಂಬಿಕೆಯಿದೆ ಮತ್ತು ನನ್ನ ತಾಯಿಯ ಸಹಾಯದಿಂದ ನಾನು ಭವಿಷ್ಯದಲ್ಲಿ ದೊಡ್ಡ ವ್ಯಕ್ತಿ ಆದ್ರೂ ಆಗಬಹುದು.
ಶಿಕ್ಷಕ - ಶಭಾಷ್ ಪುಟ್ಟ ನಿನ್ನ ಆಲೋಚನೆಯೇ ನಿನ್ನ ಸಂಪಾದನೆ! ನಾನು ಕೊಟ್ಟ ಭರವಸೆಯ ಮಾತಿನಂತೆ ನಿನಗೆ ನೂರು ರೂಪಾಯಿ ಕೊಡುತ್ತೇನೆ ಮತ್ತು ನಾನು ಇನ್ನೂ 200 ರೂ.ಗಳನ್ನು ಸಾಲವಾಗಿ ನೀಡುತ್ತಿದ್ದೇನೆ. ನೀನು ದೊಡ್ಡ ವ್ಯಕಿಯಾಗಿ ಹಣ ಗಳಿಸಿದಾಗ, ಆ 200 ರೂಪಾಯಿಗಳನ್ನು ಹಿಂತಿರುಗಿಸು. ನೀನು ಅಂತಹ ದೊಡ್ಡ ಮನುಷ್ಯನಾಗಬೇಕೆಂದು ನಾನು ಬಯಸುತ್ತೇನೆ ಎನ್ನುತ್ತಾ ಆ ವಿದ್ಯಾರ್ಥಿಯ ತಲೆಯ ಮೇಲೆ ಕೈಯನ್ನು ಇಟ್ಟು ಆಶೀರ್ವದಿಸಿಸುತ್ತ 300 ರೂ. ಕೊಟ್ಟರು.
30 ವರ್ಷಗಳ ನಂತರ...
ಹೊರಗೆ ಮಳೆ ಬರುತ್ತಿದೆ, ಒಳಗೆ ತರಗತಿ ನಡೆಯುತ್ತಿದೆ! ಅದೇ ಶಿಕ್ಷಕರು ಇನ್ನು ತನ್ನ ನಿವೃತ್ತಿಗೆ ಇರುವುದು ಕೇವಲ ಮೂರು ತಿಂಗಳು ಎಂದು ಯೋಚನೆ ಮಾಡುತ್ತಾ ಮಕ್ಕಳಿಗೆ ಪಾಠ ಮಾಡುತ್ತಿದ್ದರು. ಏಕಾಏಕಿ ಶಾಲೆಯ ಮುಂದೆ ಜಿಲ್ಲಾಧಿಕಾರಿಗಳ ಕಾರು ಕೆಂಪು ಬಣ್ಣದ ದೀಪದ ಸೈರನ್ ಮೊಳಗುತ್ತಾ ಬಂದು ನಿಂತಿತು. ಶಾಲಾ ಸಿಬ್ಬಂದಿ ಆಶ್ಚರ್ಯದಿಂದ ನೋಡತೊಡಗಿದರು.
ಶಾಲೆಯಲ್ಲಿ ಮೌನ! ಏನಿದು ಆಶ್ಚರ್ಯ. ಜಿಲ್ಲಾಧಿಕಾರಿಯೊಬ್ಬರು ತಮ್ಮ ಶಾಲೆಗೆ ಅನಿರೀಕ್ಷಿತ ಭೇಟಿ ನೀಡುತ್ತಿದ್ದಾರಲ್ವಾ? ಎನ್ನುವ ಭಯ ಮಿಶ್ರಿತ ಗಾಬರಿ.
ಶಾಲೆ ಒಳ ಬಂದ ಜಿಲ್ಲಾಧಿಕಾರಿ ಇನ್ನೇನು ನಿವೃತ್ತಿ ಹೊಂದಲಿದ್ದ ಆ ಶಿಕ್ಷಕರ ಬಗ್ಗೆ ವಿಚಾರಿಸಿ, ನೇರ ಅವರಿದ್ದ ಕೊಠಡಿಗೇ ಹೋಗಿ ಅವರ ಕಾಲಿಗೆ ನಮಸ್ಕಾರ ಮಾಡಿ - ಸಾರ್, ನಾನು ನಿಮ್ಮಿಂದ ಸಾಲವಾಗಿ ಪಡೆದ 200 ರೂಪಾಯಿಯನ್ನು ಹಿಂದಿರುಗಿಸಲು ಬಂದಿದ್ದೇನೆ! ಹಣವನ್ನು ತೆಗೆದುಕೊಂಡು ಆಶೀರ್ವಾದ ಮಾಡಬೇಕು ಎನ್ನುತ್ತಾರೆ.
ಇಡೀ ಶಾಲೆಯ ಸಿಬ್ಬಂದಿ ಬೆಚ್ಚಿಬಿದ್ದರು! ಆ ವಯಸ್ಸಾದ ಶಿಕ್ಷಕ ಕಾಲಿಗೆ ಬಿದ್ದ ಆ ಯುವಕನ್ನು ಗುರುತಿಸಿ ಮೇಲೆ ಎತ್ತುತ್ತಾರೆ, ಅಪ್ಪಿಕೊಂಡು ಆತನ ಕೈಗಳನ್ನು ಹಿಡಿದುಕೊಂಡು ಆನಂದ ಭಾಷ್ಪವನ್ನು ಸುರಿಸುತ್ತಾರೆ. 'ನಾನು ಆ ದಿನ ಅಂದ ಮಾತನ್ನು ನೀನು ನಿಜ ಮಾಡಿ ತೋರಿಸಿದೆ. ನಾನು ನಿವೃತ್ತಿಯಾಗುತ್ತಿರುವ ಈ ಸಮಯದಲ್ಲಿ ನನಗೆ ಇದಕ್ಕಿಂತ ದೊಡ್ದ ಉಡುಗೊರೆ ಇನ್ಯಾವುದೂ ಇಲ್ಲ'. ಎನ್ನುತ್ತಾರೆ.
ಕಾಲ ಬದಲಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಚಕ್ರವರ್ತಿಯ ಮಗ ಫಕೀರನಾಗುತ್ತಾನೆ ಮತ್ತು ಫಕೀರನ ಮಗ ಚಕ್ರವರ್ತಿಯಾಗುತ್ತಾನೆ. ಒಳ್ಳೆಯ ಗುರು, ಒಳ್ಳೆಯ ಗುರಿ ಇರಬೇಕು ಅಷ್ಟೇ!.
(ಮಹಾರಾಷ್ಟ್ರದ ಜಿಲ್ಲಾಧಿಕಾರಿಯೊಬ್ಬರ ಜೀವನದ ಸತ್ಯ ಘಟನೆ ಆಧಾರಿತ ಅನುವಾದ)
-ಹರಿಣಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ