ನಿಮ್ಮ ಓಟು ಯಾರಿಗೆ ?
ಪ್ರಜಾಪ್ರಭುತ್ವದ ಪರಿಕಲ್ಪನೆಯಲ್ಲಿ " ಗೌಪ್ಯ ಮತದಾನ " ಒಂದು ಅತ್ಯದ್ಭುತ ವಿಧಾನ. ಚುನಾವಣಾ ಸಂದರ್ಭದಲ್ಲಿ ನಾವು ನಮ್ಮ ಮತದಾನದ ಹಕ್ಕನ್ನು ಅತ್ಯಂತ ಗೌಪ್ಯವಾಗಿ ಚಲಾಯಿಸಬಹುದು. ಅದು ಯಾರಿಗೂ ತಿಳಿಯುವುದಿಲ್ಲ. ಮುಕ್ತವಾಗಿ ಮತ್ತು ಧೈರ್ಯವಾಗಿ ಯಾರ ಹಂಗಿಗೂ ಒಳಗಾಗದೆ, ಯಾರಿಗೂ ನೇರವಾಗಿ ನೋಯಿಸದೆ ನಮ್ಮ ಮತವನ್ನು ಅತ್ಯಂತ ವಿವೇಚನೆಯಿಂದ ಚಲಾಯಿಸಬಹುದು. ಇದರಲ್ಲಿ ಪ್ರಜಾಪ್ರಭುತ್ವದ ಪ್ರಾಮಾಣಿಕತೆ, ಮುಕ್ತತೆ, ಮಹತ್ವ ಮತ್ತು ಸೌಂದರ್ಯ ಅಡಗಿದೆ.
ದುರಂತವೆಂದರೆ ಈ ಮೂರ್ಖ ಎಲೆಕ್ಟ್ರಾನಿಕ್ ಸುದ್ದಿ ಮಾಧ್ಯಮಗಳು ನಾಚಿಕೆ ಮಾನ ಮರ್ಯಾದೆ ಇಲ್ಲದೇ, ಅವಿವೇಕತನದಿಂದ ತಮ್ಮ ಹೊಟ್ಟೆ ಪಾಡಿನ ತೆವಲಿಗಾಗಿ ಇನ್ನೂ ಸುಮಾರು 5 ತಿಂಗಳ ಮೊದಲೇ ಅನಾವಶ್ಯಕವಾಗಿ ಮತ್ತು ಬಹಿರಂಗವಾಗಿ ಜನರ ಮುಂದೆ ಕ್ಯಾಮರಾ ಮತ್ತು ಮೈಕ್ ಹಿಡಿದು ನಿಮ್ಮ ಮತ ಯಾರಿಗೆ ನೀಡುವಿರಿ ಮತ್ತು ಯಾಕೆ ಎಂದು ಕೇಳಿ ಮತದಾನದ ಪಾವಿತ್ರ್ಯ ಮತ್ತು ಗಾಂಭೀರ್ಯವನ್ನು ಹಾಳು ಮಾಡುತ್ತಿರುವುದಲ್ಲದೇ ಅನೇಕ ಉತ್ತಮ ಸಂಬಂಧಗಳನ್ನು ಹಾಳು ಮಾಡಿ ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿವೆ.
ಒಂದು ವಿಷಯ ದಯವಿಟ್ಟು ಯೋಚಿಸಿ. ಚುನಾವಣಾ ಆಯೋಗ ಸ್ವತಂತ್ರ ಅಧಿಕಾರ ಮತ್ತು ಸಾಕಷ್ಟು ಸಂಪನ್ಮೂಲಗಳನ್ನು ಬಳಸಿಕೊಂಡು ವ್ಯವಸ್ಥಿತವಾಗಿ ಅನೇಕ ದಿನಗಳ ಶ್ರಮದಿಂದ ಚುನಾವಣೆ ನಡೆಸುತ್ತದೆ. ಅಂತಹ ಸಂದರ್ಭದಲ್ಲಿಯೇ ಒಟ್ಟು ಮತದಾನ ಸುಮಾರು ಸರಾಸರಿ ಶೇಕಡಾ 60-70 ರ ಆಸುಪಾಸಿನಲ್ಲಿ ಇರುತ್ತದೆ. ಅದೇ ದೊಡ್ಡ ಸಾಧನೆ. ಅಂತಹುದರಲ್ಲಿ ಕೇವಲ ಒಂದು ಚಿಕ್ಕ ಸ್ಟುಡಿಯೋ ಮತ್ತು ಕೆಲವೇ ಸಿಬ್ಬಂದಿಗಳನ್ನು ಹೊಂದಿರುವ ಒಂದು ಸುದ್ದಿ ಮಾಧ್ಯಮ ಎಷ್ಟು ಜನರನ್ನು ಸಂದರ್ಶಿಸಬಹುದು ಯೋಚಿಸಿ. ಚುನಾವಣಾ ಆಯೋಗದ ವ್ಯಾಪ್ತಿಗೆ ಹೋಲಿಸಿದರೆ ಇದು ಅತ್ಯಂತ ಕಡಿಮೆ. ಅವರು ಮತದಾರರ ಒಟ್ಟು ಅಭಿಪ್ರಾಯ ಹೇಗೆ ಸಂಗ್ರಹಿಸಲು ಸಾಧ್ಯ?
ಸಾಂಕೇತಿಕವಾಗಿ ಜನರ ನಾಡಿ ಮಿಡಿತ ಗ್ರಹಿಸುತ್ತೇವೆ ಎಂದು ಅವರು ಸಮರ್ಥಿಸಿಕೊಳ್ಳಬಹುದು. ಆದರೆ ಮತದಾರನ ಮತವನ್ನು ಬಹಿರಂಗ ಮಾಡುವುದು ಎಷ್ಟು ಸರಿ ? ಕಾನೂನಾತ್ಮಕವಾಗಿ ಮತ್ತು ತಾಂತ್ರಿಕವಾಗಿ ಸರಿ ಇರಬಹುದು. ಆದರೆ ಸಾಮಾಜಿಕವಾಗಿ ಮತ್ತು ಪ್ರಜಾಪ್ರಭುತ್ವದ ಮುಕ್ತತೆಯ ದೃಷ್ಟಿಯಿಂದ ಇದು ಅತ್ಯಂತ ಅಪಾಯಕಾರಿ.
ಒಂದು ವೇಳೆ ಯಾವುದೋ ಪಕ್ಷದ ಕಾರ್ಯಕರ್ತ ನೇರವಾಗಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾದರೆ ಅದು ಸ್ವೀಕಾರಾರ್ಹ ಮತ್ತು ಆತನ ಆಯ್ಕೆ. ಆದರೆ ಯಾವುದೇ ಪಕ್ಷ ಅಥವಾ ಸಿದ್ದಾಂತದ ಜೊತೆ ಗುರುತಿಸಿಕೊಳ್ಳದ ಸಾಮಾನ್ಯ ಜನರು, ಮಹಿಳೆಯರು, ವಿದ್ಯಾರ್ಥಿಗಳು ಮುಂತಾದವರನ್ನು ನಿಮ್ಮ ಓಟು ಯಾರಿಗೆ ಎಂದು ಕೇಳಿ ಅವರಿಂದ ಉತ್ತರ ಪಡೆದು ಇಡೀ ರಾಜ್ಯಕ್ಕೆ ತೋರಿಸಿ ಅದರಿಂದ ಮಾಧ್ಯಮಗಳು ಸಾಧಿಸುವುದಾದರೂ ಏನು?
ಆದ್ದರಿಂದ ಟಿವಿಯಲ್ಲಿ ಪ್ರಚಾರ ಪಡೆಯಬೇಕು ಎಂಬ ಒಂದೇ ಕಾರಣದಿಂದ ಅನಾವಶ್ಯಕವಾಗಿ ಅವರ ಬಲೆಯೊಳಗೆ ಬಿದ್ದು ನಿಮ್ಮ ಅಭಿಪ್ರಾಯ ವ್ಯಕ್ತಪಡಿಸುವುದನ್ನು ಮತ್ತೊಮ್ಮೆ ಯೋಚಿಸಿ ನಿರ್ಧರಿಸಿ. ನಿಮಗೆ ಆಯ್ಕೆಯ ಸ್ವಾತಂತ್ರ್ಯ ಇದೆ. ಆದರೆ ಗೌಪ್ಯ ಮತದಾನದ ಪಾವಿತ್ರ್ಯತೆಗೆ ಅದು ಧಕ್ಕೆ ತರುತ್ತದೆ ಎಂಬುದು ನಿಮ್ಮ ಗಮನದಲ್ಲಿರಲಿ.
ನನ್ನ ಓಟು ನನ್ನ ಆಯ್ಕೆ. ಯಾರಿಗೆ ಯಾಕೆ ಹೆದರಬೇಕು ಎಂಬ ಅಭಿಪ್ರಾಯ ಮತ್ತು ಧೈರ್ಯ ನಿಮ್ಮದಾಗಿದ್ದರೆ ಆ ಸ್ವಾತಂತ್ರ್ಯವೂ ನಿಮಗಿದೆ. ಆದರೆ ಅದನ್ನು ಹೊರತುಪಡಿಸಿ ಸಾಮಾನ್ಯ ಜನರಾದ ನಮಗೆ ನಮ್ಮ ದಿನನಿತ್ಯದ ವ್ಯವಹಾರಗಳಿಗೆ ಇದು ಮುಂದೆ ಅಡ್ಡಿಯೂ ಆಗಬಹುದು. ಟಿವಿ ಮಾಧ್ಯಮದಲ್ಲಿ ನಾವು ಬಹಿರಂಗವಾಗಿ ಒಬ್ಬರ ಪರವಾಗಿ ಮಾತನಾಡಿ ಮುಂದೆ ಆ ವ್ಯಕ್ತಿ ಸೋತು ನಾವು ವಿರೋಧಿಸಿದವರು ಆಯ್ಕೆಯಾಗಿ ಅದನ್ನು ಅವರ ಹಿಂಬಾಲಕರು ಗುರುತಿಸಿ ನಮ್ಮ ಮೇಲೆ ಅಸಮಾಧಾನ ವ್ಯಕ್ತಪಡಿಸಬಹುದು ಅಥವಾ ಗ್ರಾಮೀಣ ಪ್ರದೇಶಗಳಲ್ಲಿ ನಮ್ಮ ವಿರುದ್ಧ ಚಟುವಟಿಕೆಗಳನ್ನು ನಡೆಸಬಹುದು.
ನೋಡಿ, ಅನಿವಾರ್ಯವಾದಾಗ ಎಷ್ಟೇ ಬಲಿಷ್ಠರಾದರೂ ಅವರ ವಿರುದ್ಧ ಹೋರಾಡೋಣ. ಆದರೆ ಮಾಧ್ಯಮಗಳ ತೆವಲಿಗೆ ನಾವು ಬಲಿಯಾಗುವುದು ಬೇಡ ಎಂಬ ಮನವಿ ಮಾತ್ರ ಇಲ್ಲಿದೆ. ಆದ್ದರಿಂದ ದಯವಿಟ್ಟು ಮಾಧ್ಯಮಗಳು ನಿಮ್ಮ ಬಳಿ ಯಾವ ಪಕ್ಷದ ಯಾವ ಅಭ್ಯರ್ಥಿಗೆ ಮತ ಹಾಕುವಿರಿ ಎಂದಾಗ " ಭಾರತದಲ್ಲಿ ಇರುವುದು ಗೌಪ್ಯ ಮತದಾನದ ಚುನಾವಣಾ ವ್ಯವಸ್ಥೆ. ದಯವಿಟ್ಟು ಅದನ್ನು ಹಾಳು ಮಾಡಬೇಡಿ " ಎಂದು ಅವರಿಗೆ ವಿನಯ ಪೂರ್ವಕವಾಗಿ ತಿಳಿವಳಿಕೆ ನೀಡಿ ಅಥವಾ ಇನ್ನೂ ಮುಂದುವರಿದು ನೀವು ಯಾರಿಗೆ ಮತ ನೀಡುವಿರಿ ಎಂದು ಮರು ಪ್ರಶ್ನೆ ಮಾಡಿ. ಆಗ ಖಂಡಿತ ಅವರು ಅದಕ್ಕೆ ಉತ್ತರಿಸದೇ ಓಡಿ ಹೋಗುತ್ತಾರೆ. ಏಕೆಂದರೆ ಅವರಿಗೆ ರಿಸ್ಕ್ ತೆಗೆದುಕೊಳ್ಳುವ ಧೈರ್ಯ ಇರುವುದಿಲ್ಲ. ಸಾಮಾನ್ಯ ಜನರನ್ನು ಮಾತ್ರ ಸಿಕ್ಕಿಸುತ್ತಾರೆ.
ಬೇಕಾದರೆ ಯಾವುದೇ ಎಲೆಕ್ಟ್ರಾನಿಕ್ ಟಿವಿ ಮಾಧ್ಯಮಗಳ ಪತ್ರಕರ್ತರು, ನಿರೂಪಕರು, ಸಂಪಾದಕರುಗಳನ್ನು ಬಹಿರಂಗವಾಗಿ ನಿಮ್ಮ ಮತ ಯಾರಿಗೆ ಎಂದು ಕೇಳಿ ನೋಡಿ. ಅವರು ಉತ್ತರಿಸುವ ಸಾಧ್ಯತೆ ತುಂಬಾ ಕಡಿಮೆ ಅಥವಾ ಹಾರಿಕೆಯ ಉತ್ತರ ನೀಡುತ್ತಾರೆ. ಅವರಿಗೊಂದು ನ್ಯಾಯ ನಮಗೊಂದು ನ್ಯಾಯ. ಇದು ಅನ್ಯಾಯವಲ್ಲವೇ. ನಾವು ಅವರ ಗ್ರಾಹಕರಲ್ಲ. ಭಾರತದ ಸಮಾನ ಹಕ್ಕು ಮತ್ತು ಕರ್ತವ್ಯಗಳನ್ನು ಹೊಂದಿರುವ ಪ್ರಜೆಗಳು.
-ವಿವೇಕಾನಂದ ಎಚ್. ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ