ನಿಮ್ಮ ನಾಣ್ಯದ ಹುಟ್ಟೂರು ಯಾವುದು ಗೊತ್ತಾ?

ನಿಮ್ಮ ನಾಣ್ಯದ ಹುಟ್ಟೂರು ಯಾವುದು ಗೊತ್ತಾ?

ಇದೇನಪ್ಪಾ ಹೀಗೆ ಕೇಳ್ತೀರಾ ಅಂತ ಅಂದ್ಕೋತೀರಾ? ಹಾಗಾದ್ರೆ ಕೇಳಿ. ಈಗೀಗ ಭಾರತೀಯ ನಾಣ್ಯಗಳು ಅನೇಕ ಇತಿಹಾಸದ ಪುಟ ಸೇರಿವೆ. ಮೊದಲಾದರೆ ಆಣೆಗಳಿದ್ದವು. ನಂತರ ಪೈಸೆಗಳು, ರೂಪಾಯಿಗಳು ಬಂದವು. ಒಂದು ಪೈಸೆ ನಾಣ್ಯದಿಂದ ಹಿಡಿದು ಹತ್ತು ರೂಪಾಯಿ ನಾಣ್ಯಗಳವರೆಗೂ ವ್ಯವಹಾರದಲ್ಲಿ ಬಳಕೆಯಿತ್ತು. ಅಪರೂಪದ ಸಂದರ್ಭದಲ್ಲಿ ಭಾರತೀಯ ರಿಜರ್ವ್ ಬ್ಯಾಂಕ್ ೨೦, ೫೦, ೬೦, ೭೫, ೧೦೦, ೧೫೦ ...ಹೀಗೆ ಹತ್ತು ಹಲವಾರು ಸಂಗ್ರಹ ಪ್ರಿಯರಿಗೆ ಅನುಕೂಲವಾಗುವಂತಹ ಸಂದರ್ಭೋಚಿತ (ಗಣ್ಯರ ಜನ್ಮದಿನ, ಖ್ಯಾತ ಸಂಸ್ಥೆಯ ವಾರ್ಷಿಕೋತ್ಸವ ಹೀಗೆ..) ನಾಣ್ಯಗಳ ಬಿಡುಗಡೆಯೂ ನಡೆಯುತ್ತಿತ್ತು. ವರ್ಷಗಳು ಕಳೆದಂತೆ ನಾಣ್ಯಗಳು ನಗಣ್ಯವಾಗತೊಡಗಿದವು. ಈಗ ೫೦ಪೈಸೆಯ ಕೆಳಗಿನ ಮುಖಬೆಲೆಯ ನಾಣ್ಯಗಳನ್ನು ಚಲಾವಣೆಯಿಂದ ಹಿಂದಕ್ಕೆ ಪಡೆಯಲಾಗಿದೆ ಎನ್ನುವುದು ನಿಮಗೆ ತಿಳಿದಿರುವ ಸಂಗತಿಯೇ. 
ಆದರೆ ನಾನು ಹೇಳ ಬಯಸಿರುವುದು ಇದಲ್ಲ. ಉದಾಹರಣೆಗೆ ನಿಮ್ಮ ಕೈಯಲ್ಲಿ ಎರಡು ರೂಪಾಯಿಯ ಒಂದು ನಾಣ್ಯ ಇದೆ ಎಂದು ಅಂದು ಕೊಳ್ಳಿ. ಅದು ಭಾರತದ ಯಾವ ಟಂಕಸಾಲೆಯಲ್ಲಿ ಉತ್ಪಾದಿಸಲಾಗಿದೆ ಎಂದು ಹೇಳ ಬಲ್ಲಿರಾ? ನಿಮಗೆ ಗೊತ್ತಿರಲಿ. ಭಾರತದಲ್ಲಿ ನಾಣ್ಯಗಳನ್ನು ಟಂಕಿಸುವ ಟಂಕಸಾಲೆಗಳಿರುವುದು ನಾಲ್ಕೇ ನಾಲ್ಕು ನಗರಗಳಲ್ಲಿ. ಅವುಗಳೆಂದರೆ ದೆಹಲಿ, ಮುಂಬೈ, ಹೈದರಾಬಾದ್ ಹಾಗೂ ಕೋಲ್ಕತ್ತಾ. ಪಳ ಪಳನೇ ಹೊಳೆಯುವ ವೃತ್ತಾಕೃತಿಯ ತಾಮ್ರ, ನಿಕ್ಕೆಲ್ ಈಗ ಸ್ಟೀಲ್ ಮುಂತಾದ ವಸ್ತುವಿನಿಂದ ತಯಾರಿಸಿದ ಭಾರತೀಯ ನಾಣ್ಯಗಳಲ್ಲಿರುವ ವಿಶೇಷತೆಯನ್ನು ಗಮನಿಸಿದರೆ ನಿಮಗೆ ನಾಣ್ಯದ ಹುಟ್ಟೂರು ಸಿಗುತ್ತದೆ. ಅದು ಹೇಗೆ ಎಂದು ಪರೀಕ್ಷಿಸಿ.
ದೆಹಲಿಯಲ್ಲಿ ಟಂಕಿಸಲಾಗಿದ್ದರೆ ನಾಣ್ಯದಲ್ಲಿ ಮುದ್ರಿತ ವರ್ಷ ಇರುವಲ್ಲಿ ಕೆಳಗಡೆ ಒಂದು 'ಚುಕ್ಕಿ'ಯ ಚಿನ್ಹೆ ಇರುತ್ತದೆ.
ಮುಂಬೈ-ಇಲ್ಲಿ ತಯಾರಾಗುವ ನಾಣ್ಯದ ಇಸವಿಯ ಕೆಳಗಡೆ 'ವಜ್ರಾಕೃತಿ' ಚಿನ್ಹೆ ಇರುತ್ತದೆ.
ಹೈದರಾಬಾದ್-ಈ ನಾಣ್ಯಗಳಲ್ಲಿ ಇಸವಿಯ ಕೆಳಗೆ 'ನಕ್ಷತ್ರಾಕೃತಿ' ಇರುತ್ತದೆ.
ಕೊನೆಗೆ ಕೋಲ್ಕತ್ತಾದಲ್ಲಿ ಉತ್ಪಾದಿಸಲಾಗುವ ನಾಣ್ಯದ ಇಸವಿಯ ಕೆಳಗಡೆ ಯಾವುದೇ ಚಿನ್ಹೆಯನ್ನು ಹುಡುಕಲು ಹೋಗ ಬೇಡಿ. ಅಲ್ಲಿ ಯಾವ ಚಿನ್ಹೆಯನ್ನೂ ಬಳಸಿರುವುದಿಲ್ಲ. 
ನಿಮಗೀಗ ತಿಳಿಯಿತಲ್ಲಾ ನಾಣ್ಯವೊಂದರ ಜನ್ಮ ಸ್ಥಾನದ ರಹಸ್ಯ. ಇನ್ನು ಮುಂದೆ ನಿಮ್ಮ ಕೈಗೆ ಬರುವ ನಾಣ್ಯವನ್ನು ಕೂಲಂಕುಶವಾಗಿ ಪರೀಕ್ಷಿಸಿ ಅದರ ಹುಟ್ಟೂರನ್ನು ಹುಡುಕುವಿರಾ?
ಚಿತ್ರ ಕೃಪೆ: ಅಂತರ್ಜಾಲ