ನಿಮ್ಮ ಪ್ರತಿಕ್ರಿಯೆ ನಮಗೆ ಮುಖ್ಯ, ಏಕೆಂದರೆ…

ನಿಮ್ಮ ಪ್ರತಿಕ್ರಿಯೆ ನಮಗೆ ಮುಖ್ಯ, ಏಕೆಂದರೆ…

ಓಶಿನಾ ಧರ್ಮರಾಜ್- ಸಾಮಾಜಿಕ ಜಾಲತಾಣದಲ್ಲಿ ಪ್ರಚಲಿತ ಹೆಸರು. ವಯಸ್ಸು ಇನ್ನೂ ೨೧. ಫೇಸ್ಬುಕ್, ಇನ್ಸ್ಟಾಗ್ರಾಂ, ವಾಟ್ಸಾಪ್, ಟ್ವಿಟರ್ ಎಲ್ಲೆಡೆಯಲ್ಲಿ ಅವಳ ಬರಹಗಳು ಕಂಡು ಬರುತ್ತಿದ್ದವು. ಕವನ, ಕಥೆ ಎಲ್ಲವನ್ನೂ ಬರೆಯುತ್ತಿದ್ದಳು. ಎಲ್ಲದಕ್ಕೂ ಸಾವಿರಾರು ಲೈಕ್ ಗಳು ಇರುತ್ತಿದ್ದವು. ತಾನೊಬ್ಬಳು ಖ್ಯಾತ ಸಾಹಿತಿಯಾಗುತ್ತಿದ್ದೇನೆ ಎನ್ನುವ ಪುಟ್ಟ ‘ಅಹಂ’ ಅವಳ ಮನದ ಒಳಗೆ ಬೆಳೆಯಲು ಶುರುವಾಗಿತ್ತು. ತಾನು ಬರೆದದ್ದೆಲ್ಲಾ ಸಾಹಿತ್ಯ, ಗೀಚಿದ್ದೆಲ್ಲಾ ಕವಿತೆ ಎನ್ನುವ ಭಾವ ಅವಳಲ್ಲಿತ್ತು.

ಒಂದು ದಿನ ಅನಿರೀಕ್ಷಿತವಾಗಿ ಅವಳಿಗೆ ಒಂದು ಸಮಾರಂಭದಲ್ಲಿ ಖ್ಯಾತ ಹಿರಿಯ ಸಾಹಿತಿ, ವಿಮರ್ಶಕರಾದ ಹನುಮಂತರಾಯರು ಸಿಕ್ಕಿದರು. ಹನುಮಂತರಾಯರ ವಿದ್ವತ್ ಬಗ್ಗೆ ಕೇಳಿದ್ದ ಓಶಿನಾಳಿಗೆ ಅವರನ್ನು ಪ್ರತ್ಯಕ್ಷ ಕಂಡದ್ದು ಬಹಳ ಸಂತೋಷವಾಯಿತು. ತನ್ನ ಬರಹಗಳನ್ನು ಅವರಿಗೆ ತೋರಿಸಿ ಮೆಚ್ಚುಗೆ ಪಡೆದುಕೊಳ್ಳಬೇಕೆಂದು ಮನಸ್ಸಾಯಿತು. ಕಾರ್ಯಕ್ರಮ ಮುಗಿದ ಬಳಿಕ ಹನುಮಂತರಾಯರ ಬಳಿ ತೆರಳಿ ತನ್ನ ಪರಿಚಯ ಹೇಳುವಾಗ ತನಗೆ ಜಾಲತಾಣಗಳಲ್ಲಿ ಸಾವಿರಾರು ಬೆಂಬಲಿಗರು ಇದ್ದಾರೆ ಎಂಬುವುದನ್ನು ಒತ್ತಿ ಒತ್ತಿ ಹೇಳಿದಳು. ಹನುಮಂತರಾಯರಿಗೆ ಈ ಹುಡುಗಿಗೆ ತನ್ನ ಬರಹದ ಗುಣಮಟ್ಟಕ್ಕಿಂತ ಪ್ರಚಾರದ ಹುಚ್ಚೇ ಅಧಿಕವಾಗಿದೆ ಎಂದು ಕೂಡಲೇ ಅರಿವಾಯಿತು.

‘ನಿನ್ನ ಹೆಸರನ್ನು ನಾನು ಕೇಳಿಯೇ ಇಲ್ಲವಲ್ಲ...' ಎಂದ ಹನುಮಂತರಾಯರನ್ನು ಒಂಥರಾ ನಾಚಿಕೆ, ಅವಮಾನದಿಂದ ನೋಡಿದಳು. ಅವಳ ಮುಖದ ವರ್ಣಗಳು ಬದಲಾಗುತ್ತಿರುವುದನ್ನು ಗಮನಿಸಿಯೂ, ಅದರ ಬಗ್ಗೆ ಗಮನ ಹರಿಸದೇ ‘ನೀನು ಬರೆದ ಸಾಹಿತ್ಯವನ್ನಾದರೂ ತೋರಿಸುವೆಯಾ?’ ಎಂದರು. ಓಶಿನಾ ತನ್ನ ಮೊಬೈಲ್ ಹೊರ ತೆಗೆದು ಬರಹಗಳನ್ನು ತೋರಿಸಿದಳು. ಅದನ್ನು ನೋಡಿದ ಹನುಮಂತರಾಯರು ‘ಇದೆಲ್ಲಾ ಬರೀ ಕಳಪೆ ಬರಹಗಳು, ಇವುಗಳಿಗೆ ಮೆಚ್ಚುಗೆ ಸೂಚಿಸಿದವರು ಬಹುಷಃ ನಿನ್ನ ಸ್ನೇಹಿತರೂ, ಸಂಬಂಧಿಕರೋ ಆಗಿರಬಹುದು ಅನಿಸುತ್ತೆ ನನಗೆ' ಅಂದರು. ಇದನ್ನು ಕೇಳಿದ ಓಶಿನಾಳ ಕಣ್ಣಲ್ಲಿ ನೀರು ಬಂತು. ಇದನ್ನು ನೋಡಿದ ಹನುಮಂತರಾಯರು ಮನದಲ್ಲೇ ‘ಇವಳನ್ನು ಪರೀಕ್ಷೆ ಮಾಡಿದ್ದು ಇನ್ನು ಸಾಕು' ಎಂದೆಣಿಸಿ, ‘ಸಮಾಧಾನ ಮಾಡಿಕೋ,ಬಾ ಒಂದೆಡೆ ಕುಳಿತು ಮಾತನಾಡುವ.’ ಎಂದರು.

ಒಂದೆಡೆ ಖಾಲಿಯಿದ್ದ ಕುರ್ಚಿಗಳಲ್ಲಿ ಇಬ್ಬರೂ ಕುಳಿತು ಕೊಂಡರು. ಹನುಮಂತರಾಯರು ಹೇಳಿದರು ‘ನೋಡು ಮಗಳೇ, ನಿನ್ನ ಬರಹಗಳು ಚೆನ್ನಾಗಿವೆ. ಕೆಲವೆಡೆ ಸೊಗಸಾದ, ಆಸಕ್ತಿದಾಯಕ ವಿಷಯಗಳನ್ನೂ ಆರಿಸಿಕೊಂಡಿರುವೆ. ಆದರೆ ಹಲವೆಡೆ ಅದರ ಲಯ ತಪ್ಪಿದೆ. ಅಕ್ಷರಗಳ ಬಳಕೆ, ವ್ಯಾಕರಣ ತಪ್ಪಾಗಿದೆ. ಕವನಗಳಲ್ಲಿ ಸಾಲುಗಳು ತಪ್ಪಿವೆ. ಗಝಲ್ ಎಂದು ಭಾವಿಸಿ ಬರೆದದ್ದು ಖಂಡಿತವಾಗಿಯೂ ಅದು ಗಝಲ್ ರೂಪದಲ್ಲಿ ಇಲ್ಲ, ಕವನ ಎಂದು ಹೇಳಬಹುದೇನೋ? ಅಷ್ಟೇ.' ನೀನು ನಿನಗೆ ಬಂದ ಮೆಚ್ಚುಗೆಯನ್ನು ಮಾತ್ರ ಗಮನಿಸಿದ್ದಿ, ನಿನ್ನ ಬರಹಗಳ ಬಗ್ಗೆ ಯಾರೂ ನಿನಗೆ ವಸ್ತುನಿಷ್ಟ ಪ್ರತಿಕ್ರಿಯೆ ನೀಡಿಲ್ಲ. ಆದುದರಿಂದ ನೀನು ನಿನ್ನ ಬರವಣಿಗೆಯನ್ನು ತಿದ್ದಿಕೊಳ್ಳುವ ಅವಕಾಶವಾಗಿಲ್ಲ, ಅಷ್ಟೇ’. ಈ ಮಾತುಗಳಿಂದ ಓಶಿನಾಳಿಗೆ ತನ್ನ ತಪ್ಪಿನ ಅರಿವಾಯಿತು. ಸಾಮಾಜಿಕ ಜಾಲತಾಣದಲ್ಲಿ ತನ್ನ ಬರಹಗಳನ್ನು ಹಂಚಿಕೊಂಡಾಗ ಯಾರೂ ತನಗೆ ನೈಜವಾದ ಪ್ರತಿಕ್ರಿಯೆ ನೀಡಲಿಲ್ಲ.  ಎಲ್ಲರೂ ಕಾಟಾಚಾರಕ್ಕೆ ಲೈಕ್ ಬಟನ್ ಒತ್ತಿ ಮೆಚ್ಚುಗೆಯನ್ನು ಸೂಚಿಸಿದರು. ನನಗೆ ಬೇಸರವಾಗಬಾರದೆಂದು ನನ್ನೆಲ್ಲಾ ಸಂಬಂಧಿಕರು ಬರಹ ಚೆನ್ನಾಗಿದೆ ಎಂದೇ ಹೇಳಿದರು. ನಾನು ಅದನ್ನೇ ತಪ್ಪಾಗಿ ತಿಳಿದುಕೊಂಡು ನನ್ನ ಬರಹಗಳು ಬಹಳ ಚೆನ್ನಾಗಿವೆ ಎಂದು ಅಂದುಕೊಂಡೆ ಎಂದು ಅವಳಿಗೆ ಅರಿವಾಯಿತು. 

ಅವಳು ಕೂಡಲೇ ಹನುಮಂತರಾಯರ ಬಳಿ ಕ್ಷಮೆ ಕೇಳಿದಳು. ಹನುಮಂತರಾಯರು ಕಿರುನಗೆ ನಕ್ಕು ‘ನಿನಗೆ ಬರವಣಿಗೆಯಲ್ಲಿ ಆಸಕ್ತಿ ಇದೆ. ಬರವಣಿಗೆಯಲ್ಲಿ ವಿಷಯಗಳ ಗ್ರಹಣ ಶಕ್ತಿಯೂ ಉತ್ತಮವಾಗಿದೆ. ಕೆಲವೊಂದು ವಿಭಾಗದಲ್ಲಿ ಸ್ವಲ್ಪ ಪಳಗಬೇಕಾಗಿದೆ ಅಷ್ಟೇ. ದಾಸರು ಹೇಳಿದಂತೆ ‘ನಿಂದಕರನ್ನು ಹತ್ತಿರ ಇರಿಸಿಕೋ’ ಏಕೆಂದರೆ ನಿನ್ನಲ್ಲಿರುವ ಹುಳುಕುಗಳನ್ನು ಅವರು ದೂರಮಾಡುತ್ತಾರೆ' ಎಂದು ಅವಳ ಬರಹದಲ್ಲಿ ಆಗಬೇಕಾದ ಬದಲಾವಣೆಗಳ ಬಗ್ಗೆ ಸೂಚ್ಯವಾಗಿ ತಿಳಿಸಿದರು. ಅವಳಿಗೂ ಅದರ ಅರಿವಾಯಿತು. ಜೀವನದಲ್ಲಿ ವಸ್ತು ನಿಷ್ಟ ಪ್ರತಿಕ್ರಿಯೆಗಳ, ವಿಮರ್ಶೆಗಳ ಅಗತ್ಯ ಎಷ್ಟು ಇದೆ ಎನ್ನುವ ಸತ್ಯ ಗೊತ್ತಾಯಿತು. ಹನುಮಂತರಾಯರು ಎದ್ದು ಹೋಗುವ ಮೊದಲು ‘ಮಗಳೇ, ನಿನಗೆ ಏನಾದರೂ ಸಂಶಯವಿದ್ದರೆ ನೀನು ನನಗೆ ಕರೆ ಮಾಡು, ಬಿಡುವಾದಾಗ ಮನೆ ಕಡೆಗೆ ಬಾ. ಸಾಹಿತ್ಯದ ಬಗ್ಗೆ ಮಾತನಾಡಲು, ನನಗೆ ಗೊತ್ತಿರುವುದನ್ನು ಕಲಿಸಲು ನಾನು ಸದಾ ಸಿದ್ಧ' ಎಂದರು. ಈ ಮಾತುಗಳು ಓಶಿನಾಳಿಗೆ ಬಹಳ ಸಂತಸವನ್ನು ತಂದುಕೊಟ್ಟವು. ಹಿರಿಯರ, ಅನುಭವಸ್ಥ ಜನರ ಮಾರ್ಗದರ್ಶನ ಎಲ್ಲಾ ರಂಗದಲ್ಲಿ ಬಹಳ ಮುಖ್ಯ ಎಂಬ ಸತ್ಯವನ್ನು ಅರಿತುಕೊಂಡಳು. ಭವಿಷ್ಯದಲ್ಲಿ ಹಿರಿಯರು ತೋರಿಸಿದ ಮಾರ್ಗದಲ್ಲಿ ನಡೆದು ಉತ್ತಮ ಪ್ರತಿಕ್ರಿಯೆಗಳಿಗೆ ಹಿಗ್ಗದೇ, ನೇರವಾದ ಕಟು ಪ್ರತಿಕ್ರಿಯೆಗಳಿಗೆ ಕುಗ್ಗದೇ ಬರವಣಿಗೆಯನ್ನು ಮುಂದುವರೆಸಿ ಯಶಸ್ವೀ ಲೇಖಕಿಯಾದಳು.

***

ಇದು ಕೇವಲ ಕಾಲ್ಪನಿಕ ಕಥನ ಅಷ್ಟೇ. ನಿಜ ಜೀವನದಲ್ಲೂ ಒಂದು ಬರಹ ಪ್ರಕಟವಾದಾಗ ಅದಕ್ಕೆ ಪ್ರತಿಕ್ರಿಯೆಗಳ ಅಗತ್ಯ ತುಂಬಾ ಇರುತ್ತದೆ. ನಾನು ಏಕೆ ಹೇಳುತ್ತೇನೆಂದರೆ, ನಮ್ಮ ‘ಸಂಪದ' ಜಾಲ ತಾಣದಲ್ಲಿ ಪ್ರತೀ ದಿನ ಹಲವಾರು ಬರಹಗಳು ಬೆಳಕು ಕಾಣುತ್ತಿವೆ. ನೂರಾರು ಮಂದಿ ಓದುತ್ತಾರೆ. ಆದರೆ ಅದನ್ನು ಓದಿ ಪ್ರತಿಕ್ರಿಯೆ ನೀಡುವವರು ಅಥವಾ ವಿಮರ್ಶೆ ಮಾಡುವವರು ತೀರಾ ಕಡಿಮೆ ಮಂದಿ. ಪ್ರತೀ ಬರಹವು ಮಂಥನವಾಗಬೇಕು, ಆಗಲೇ ಆ ಬರಹಗಾರನಿಗೆ ಸಾಥ್ಯಕ್ಯ ಸಿಗುತ್ತದೆ. ಇಲ್ಲವಾದರೆ ಒಬ್ಬ ಬರೆಯುತ್ತಾನೆ ಮತ್ತು ಬರೆಯುತ್ತಲೇ ಇರುತ್ತಾನೆ. ಅವನು ಬರೆದದ್ದೇ ಸರಿ, ಸತ್ಯ ಎಂದು ಅವನೇ ನಂಬಲು ಪ್ರಾರಂಭಿಸುತ್ತಾನೆ. ಬರಹದಲ್ಲಿ ಹೊಸತನ ಕಾಣಿಸುವುದಿಲ್ಲ. ಒಂದು ರೀತಿಯಲ್ಲಿ ‘ಬಾವಿಯ ಕಪ್ಪೆ'ಯಂತೆ ಆಗಿ ಹೋಗುತ್ತಾನೆ.

ನೀವು ಓದುವ ಬರಹ ಯಾವುದೇ ಆಗಿರಲಿ, ನಿಮ್ಮಲ್ಲಿ ಒಂದು ಪ್ರತಿಕ್ರಿಯೆ ಹುಟ್ಟೇ ಹುಟ್ಟುತ್ತದೆ. ಎಂಥಾ ಬೋರ್ ಹೊಡೆಸುವ ಲೇಖನ, ಎಂಥಾ ಕೆಟ್ಟ ಲೇಖನ ಅಥವಾ ಈ ಬರಹದ ಬಗ್ಗೆ ಇನ್ನಷ್ಟು ಚಿತ್ರಗಳಿದ್ದರೆ ಚೆನ್ನಾಗಿತ್ತು, ಈ ರೀತಿಯ ಅನಿಸಿಕೆಗಳು ನಿಮ್ಮಲ್ಲಿ ಮೂಡಬಹುದಲ್ಲವೇ? ಅದನ್ನು ನೀವು ನೇರವಾಗಿ ವ್ಯಕ್ತ ಪಡಿಸಬೇಕು. ನಿಮ್ಮ ಪ್ರತಿಕ್ರಿಯೆ ಹೊಗಳುವುದಕ್ಕಷ್ಟೇ ಸೀಮಿತವಾಗದೇ, ಆ ಲೇಖನದ ವಸ್ತುನಿಷ್ಟ ವಿಮರ್ಶೆ ಮಾಡುವಂತಿರಬೇಕು. ನಿಮಗೆ  ಆ ವಿಷಯದ ಬಗ್ಗೆ ತಿಳಿದಿರುವ ಸತ್ಯ ಸಂಗತಿಗಳನ್ನು ಹಂಚಿಕೊಳ್ಳಬೇಕು.

ಉದಾಹರಣೆಗೆ ಒಬ್ಬರು ತಾವು ಮಡಿಕೇರಿ ಪ್ರವಾಸಕ್ಕೆ ಹೋದ ವಿಷಯವನ್ನು ಲೇಖನವಾಗಿ ಬರೆದಿರುತ್ತಾರೆ ಮತ್ತು ಆ ಲೇಖನದಲ್ಲಿ ಮಡಿಕೇರಿಯ ಹಲವಾರು ಸ್ಥಳಗಳ ಉಲ್ಲೇಖ ಮಾಡಲು ಮರೆತಿರುತ್ತಾರೆ ಅಥವಾ ಕೆಲವು ಮಾಹಿತಿಗಳು ತಪ್ಪಾಗಿರುತ್ತವೆ ಎಂದು ಭಾವಿಸಿ. ನಿಮಗೆ ತಿಳಿದಿರುವ ಮಾಹಿತಿಗಳನ್ನು ನೀವು ಕೂಡಲೇ ಪ್ರತಿಕ್ರಿಯಿಸಿ ಬರೆದರೆ ಎಲ್ಲರಿಗೂ ಅಧಿಕ ಮಾಹಿತಿಗಳನ್ನು ತಿಳಿದುಕೊಳ್ಳಲು ಅನುಕೂಲವಾಗುತ್ತದೆ. ದಶಕಗಳ ಹಿಂದೆ 'ಸುಧಾ’ ವಾರಪತ್ರಿಕೆಯಲ್ಲಿ ಕುಂಬಳೆಯ ಶ್ರೀ ಅನಂತಪದ್ಮನಾಭ ದೇವಸ್ಥಾನ (ಮೊಸಳೆ ದೇವಸ್ಥಾನ) ದ ಬಗ್ಗೆ ಮಾಹಿತಿ ಪ್ರಕಟವಾಗಿತ್ತು. ಆ ಬರಹದಲ್ಲಿದ್ದ ಎಲ್ಲಾ ವಿಷಯಗಳು ಬಹಳ ಅರ್ಥಪೂರ್ಣ ಹಾಗೂ ಮಾಹಿತಿಯುಕ್ತವಾಗಿತ್ತು. ಆದರೆ ಆ ಲೇಖನಕ್ಕೆ ಬಳಸಿದ ದೇವಸ್ಥಾನದ ಚಿತ್ರ ಮಾತ್ರ ತುಂಬಾ ಹಳೆಯದಾಗಿತ್ತು. ಇದನ್ನು ಗಮನಿಸಿದ ನಾನು ಕೂಡಲೇ ಪ್ರತಿಕ್ರಿಯಿಸಿ ನನ್ನ ಬಳಿ ಇದ್ದ ಹೊಸ ಚಿತ್ರವನ್ನು ಪತ್ರಿಕೆಗೆ ಕಳುಹಿಸಿದೆ. ಮುಂದಿನ ವಾರದಲ್ಲಿ ಅದು ಓದುಗರ ಅಭಿಪ್ರಾಯದಲ್ಲಿ ಪ್ರಕಟವಾಯಿತು. ಇದರಿಂದ ಹಲವರಿಗೆ ಪ್ರಯೋಜನವಾಗುತ್ತದೆ. ಹಳೆಯ ಚಿತ್ರಕ್ಕಿಂತ ಹೊಸ ಚಿತ್ರಗಳು ಇದ್ದರೆ ನೀಡುವುದು ಒಳ್ಳೆಯದು. ಆಗ ಭೇಟಿ ನೀಡಲು ಬಯಸುವ ಪ್ರವಾಸಿಗರಿಗೆ ಗೊಂದಲವಾಗದೇ, ಅನುಕೂಲವಾಗುತ್ತದೆ. 

ಇದೇ ರೀತಿ ಯಾವುದೇ ವಿಷಯದ ಬಗ್ಗೆ ಬರೆಯುವಾಗಲೂ ಆ ಬಗ್ಗೆ ಹೊಸ ವಿಚಾರಗಳಿದ್ದರೆ ತಿಳಿದು ಬರೆಯುವುದು ಉತ್ತಮ. ಜಗತ್ತಿನಲ್ಲಿ ಬದಲಾವಣೆ ನಿರಂತರ ಪ್ರಕ್ರಿಯೆ. ಆದುದರಿಂದ ನಾವು ಸಾಧ್ಯವಾದಷ್ಟು ಹೊಸ ವಿಚಾರಗಳನ್ನು ನಮ್ಮ ಬರಹದಲ್ಲಿ ಬಳಸಲು ಪ್ರಯತ್ನಿಸಬೇಕು. ಹಾಗೆಂದು ಹಳೆಯ ಸಂಗತಿಗಳನ್ನು ಬರೆಯಬಾರದು ಎಂದಲ್ಲ. ಹಲವಾರು ಹಳೆಯ ವಿಷಯಗಳು ಸ್ವಾರಸ್ಯಕರವೂ, ಮಾಹಿತಿಪೂರ್ಣವೂ ಆಗಿರುತ್ತದೆ. ನೀವು ಓದುವ ವಿಷಯ ಯಾವುದೇ ಆಗಿರಲಿ, ಅದರ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ವ್ಯಕ್ತ ಪಡಿಸಲು ಸಂಕೋಚ ಪಡಬೇಡಿ. ಮೊದಲಿನಂತೆ ಈಗ ಪ್ರತಿಕ್ರಿಯೆ ನೀಡಲು ಕಾಗದ ಬರೆದು ಪೋಸ್ಟ್ ಮಾಡಲು ಅಂಚೆ ಡಬ್ಬಿಯನ್ನು ಹುಡುಕಿಕೊಂಡು ಹೋಗಬೇಕಿಲ್ಲ. ಇಂಟರ್ ನೆಟ್, ಇ-ಮೈಲ್ ಸೌಲಭ್ಯ ಎಲ್ಲಾ ಮೊಬೈಲ್ ನಲ್ಲಿ ಲಭ್ಯವಿದೆ.

ಎಷ್ಟೋ ಮಂದಿ ಬರಹಗಾರರು ತಮ್ಮ ಬರವಣಿಗೆಯ ಪ್ರಾರಂಭವನ್ನು ಓದುಗರ ಓಲೆ ಬರೆಯುವುದರ ಮೂಲಕವೇ ಮಾಡಿದ್ದಾರೆ. ಪ್ರತೀ ದಿನದ ಪತ್ರಿಕೆ ಅಥವಾ ವಾರ, ಮಾಸಿಕಗಳನ್ನು ಓದಿ, ಅದರಲ್ಲಿನ ಬರಹಗಳ ಬಗ್ಗೆ ಮೆಚ್ಚುಗೆ, ಟೀಕೆ, ಸಲಹೆ ನೀಡುತ್ತಾ ಬೆಳೆದವರಿದ್ದಾರೆ. ‘ಸಂಪದ' ಜಾಲತಾಣದ ಓದುಗರಾದ ನೀವೂ ನಮ್ಮಲ್ಲಿ ಪ್ರಕಟವಾದ ಬರಹಗಳ ಬಗ್ಗೆ ಸೂಕ್ತ  ಪ್ರತಿಕ್ರಿಯೆ ನೀಡಿ. ಮೆಚ್ಚುಗೆಯೇ ಆಗಬೇಕೆಂದಿಲ್ಲ, ಟೀಕೆ, ಸಲಹೆ, ಪೂರಕ ಮಾಹಿತಿಗಳು ನಿಮ್ಮ ಕಡೆಯಿಂದಲೂ ಬರಲಿ. ಇನ್ನಷ್ಟು ಉತ್ತಮ ರೀತಿಯಲ್ಲಿ ಸಂಪದವನ್ನು ಉಳಿಸಿ ಬೆಳೆಸೋಣ.

ಚಿತ್ರ ಕೃಪೆ: ಅಂತರ್ಜಾಲ ತಾಣ