ನಿಮ್ಮ ಪ್ರಶ್ನೆಗೆ ಕೊನೆಗೂ ಸಿಕ್ಕಿತು ಉತ್ತರ !

ಕಳೆದ ವಾರದ ವಿವರಣೆ ತಿಳಿಯಾಗಲಿಲ್ಲ ಎಂದು ಅನ್ನಿಸುತ್ತಿದೆ. ಸೂರ್ಯನ ಬಿಸಿಲಿನಲ್ಲಿ ಹಸಿರು ಬಣ್ಣದಿಂದ ಅತಿ ಹೆಚ್ಚು ವಿದ್ಯುತ್ ದೊರೆಯುತ್ತದೆ ಎಂಬುದು ನ್ಯಾನೋ ವಿದ್ಯುತ್ ಫಲಕಗಳ ಪ್ರಯೋಗದಿಂದ ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಆದರೆ ಸಸ್ಯಗಳು ಯಾಕೆ ಅದನ್ನು ಬಳಸಿಕೊಳ್ಳುತ್ತಿಲ್ಲ ಎಂಬ ಪ್ರಶ್ನೆ ವಿಜ್ಞಾನಿಗಳನ್ನು ಕಾಡತೊಡಗಿತು.
ಅವರು ಪ್ರಯೋಗ ನಡೆಸುವಾಗ ವಿದ್ಯುತ್ಕೋಶಗಳು ಸ್ಥಿರವಾಗಿದ್ದು ಅವುಗಳ ಮೇಲೆ ಬೀಳುವ ಬೆಳಕು ಸ್ಥಿರವಾಗಿತ್ತು. ಆದರೆ ಎಲೆಗಳ ಅಲುಗಾಟದಿಂದ ಈ ಸ್ಥಿರತೆ ಸಾಧ್ಯವಿಲ್ಲ. ಹಸಿರು ಬೆಳಕಿನಲ್ಲಿ ಸ್ವಲ್ಪ ವ್ಯತ್ಯಾಸವಾದರೂ ವೋಲ್ಟೇಜ್ ನಲ್ಲಿ ಬಹಳ ವ್ಯತ್ಯಾಸವಾಗುತ್ತಿತ್ತು. ಆದರೆ ಈ ವ್ಯತ್ಯಾಸ ನೀಲಿ ಮತ್ತು ಕೆಂಪು ವಲಯದಲ್ಲಿ ಕಡಿಮೆ ಇತ್ತು. ಆದ್ದರಿಂದ ಸಸ್ಯಗಳು ತಮ್ಮ ಜೀವ ವಿಕಾಸದ ಹಾದಿಯಲ್ಲಿ ಹಸಿರನ್ನು ಬಳಸುವುದನ್ನು ಕಡಿಮೆ ಮಾಡಲು ನಿಶ್ಚಯಿಸಿರಬೇಕು. ಆದ್ದರಿಂದ ದ್ಯುತಿ ಸಂಶ್ಲೇಷಣೆಯ ವರ್ಣಕವಾಗಿ ಕ್ಲೋರೊಫಿಲ್ ಅನ್ನು ಆವಿಷ್ಕರಿಸಬೇಕಾದ ಅನಿವಾರ್ಯತೆ ಪ್ರಕೃತಿಗೆ ಉದ್ಭವಿಸಿರಬೇಕು. ಈ ರೀತಿ ಯೋಚಿಸಲು ಕಾರಣವೇನೆಂದರೆ ದ್ಯುತಿ ಸಂಶ್ಲೇಷಣೆ ನಡೆಸುವ ಕೆಲವೊಂದು ಹಿಂದುಳಿದ ಬ್ಯಾಕ್ಟೀರಿಯಾಗಳು ಬಳಸುವ ಬ್ಯಾಕ್ಟೀರಿಯೋ ಕ್ಲೋರೊಫಿಲ್ ಈಗಲೂ ಹಸಿರು ಬೆಳಕನ್ನು ಬಳಸುತ್ತಿದೆ. ಆದ್ದರಿಂದ ಈ ಕ್ಲೋರೊಫಿಲ್ ನಿಂದ ಈಗಿನ ಕ್ಲೋರೊಫಿಲ್ ವಿಕಾಸ ಹೊಂದಿದೆ ಎಂದು ಭಾವಿಸಲಾಗುತ್ತಿದೆ. ಅಂದರೆ ಸಸ್ಯಗಳು ಹೆಚ್ಚಿನ ಪ್ರಮಾಣದಲ್ಲಿ ಹಸಿರು ಬೆಳಕನ್ನು ಹೀರಿಕೊಳ್ಳುತ್ತದೇ ಇರುವುದರಿಂದ ಅವುಗಳಲ್ಲಿ ಎಲೆಕ್ಟ್ರಾನ್ ಮತ್ತು ಪ್ರೋಟಾನ್ ಗಳ ಬಿಡುಗಡೆ ಅಂತಹ ಏರುಪೇರಾಗುವುದಿಲ್ಲ. ಅಂದರೆ ಪ್ರೋಟಾನ್ ಮತ್ತು ಎಲೆಕ್ಟ್ರಾನ್ ವರ್ಗಾವಣೆಯ ಪಾತ್ವೇ ಯಾವುದೇ ಕಿರಿಕಿರಿ ಇಲ್ಲದೇ ಮುಂದುವರಿಯುತ್ತದೆ. ಆದ್ದರಿಂದಲೇ ಸಸ್ಯಗಳು ಹೆಚ್ಚಿನ ಹಸಿರು ಬೆಳಕನ್ನು ಬಳಸದೇ ಅವನ್ನು ಪ್ರತಿಫಲಿಸುತ್ತವೆ. ಅಂದರೆ ಸಸ್ಯಗಳು ಹಸಿರಾಗಿವೆ.
ಆದರೆ ಸಸ್ಯಗಳಿಗೆ ಹಸಿರು ಬೆಳಕು ಬೇಕು. ಏಕೆಂದರೆ ಸಸ್ಯ ಬೆಳವಣಿಗೆಯ ಚೋದಕಗಳು (hormones) ಉತ್ಪತ್ತಿಯಾಗಲು ಈ ಹಸಿರು ಬೆಳಕು ಬೇಕು. ಆದ್ದರಿಂದ ಅಲ್ಪ ಪ್ರಮಾಣದ ಹಸಿರು ಬೆಳಕು ಸಸ್ಯಗಳಿಗೆ ಅಗತ್ಯವಿದೆ. ಆದ್ದರಿಂದ ಸಸ್ಯಗಳು ಅಲ್ಪ ಪ್ರಮಾಣದ ಹಸಿರು ಬೆಳಕನ್ನು ಹೀರಿಕೊಳ್ಳುತ್ತವೆ.
ಸಸ್ಯಗಳು ಉಳಿದ ಎಲ್ಲಾ ಬಣ್ಣಗಳನ್ನು ಹೀರಿಕೊಂಡು ಹಸಿರು ಬೆಳಕನ್ನು ಪ್ರತಿಫಲಿಸುವುದರಿಂದ ಹಸಿರಾಗಿವೆ. ಈ ಅಲ್ಪ ಸ್ವಲ್ಪ ಹಸಿರು ತರಂಗಾಂತರವನ್ನೂ ಹೀರಿಕೊಂಡಿದ್ದರೆ ಏನಾಗುತ್ತಿತ್ತು ಹೇಳಿ. ಎಲ್ಲ ಬಣ್ಣಗಳನ್ನೂ ಹೀರಿಕೊಳ್ಳುವ ವಸ್ತುಗಳು ಕಪ್ಪಾಗಿ ಕಾಣಿಸುತ್ತವೆ. ಅಂದರೆ ಎಲೆಗಳು ಕಪ್ಪಾಗಿ ಕಾಣಿಸುತ್ತಿದ್ದವು. ಒಣಗಿರುವ ನೀಟಮ್ (gnetum) ಸಸ್ಯಗಳ ಎಲೆಗಳು ಕಪ್ಪಾಗಿ ಕಾಣುವುದನ್ನು ನೀವು ಗಮನಿಸಿರಬಹುದು.
ಕಪ್ಪು ವಸ್ತುಗಳ ಗುಣ ನಿಮಗೆ ತಿಳಿದಿದೆ. ರೈತರಿಗೆ ತಮ್ಮ ಉತ್ಪನ್ನಗಳನ್ನು ಒಣಗಿಸಲು ಅನುಕೂಲವಾಗುವ ಹಾಗೆ ಸರಕಾರ ವಿನಾಯಿತಿ ದರದಲ್ಲಿ ಟಾರ್ಪಾಲಿನ್ ಗಳನ್ನು ಒದಗಿಸುತ್ತಿರುವುದು ನೀವು ನಿಮ್ಮ ಮನೆಗಳಲ್ಲಿ ನೋಡಿರಬಹುದು. ಅವುಗಳು HDPE (high density polyethylene) ಮಾಡಿದ ಕಪ್ಪು ಟಾರ್ಪಾಲಿನ್ ಗಳು. ಕಪ್ಪು ವಸ್ತುಗಳು ಬೆಳಕಿನಲ್ಲಿರುವ ಎಲ್ಲಾ ತರಂಗಾಂತರಗಳನ್ನು ಅಥವಾ ಶಕ್ತಿಯ ಪೊಟ್ಟಣಗಳಾದ ಪ್ರೋಟಾನ್ ಗಳನ್ನು ಹೀರಿಕೊಳ್ಳುವುದರಿಂದ ಅದರಲ್ಲಿ ಶಕ್ತಿಯ ಸಂಚಯವಾಗಿ ಅವುಗಳ ಉಷ್ಣತೆ ತೀವ್ರವಾಗಿ ಏರಿಕೆಯಾಗುತ್ತದೆ. ಆದ್ದರಿಂದ ಕಪ್ಪು ವಸ್ತುಗಳು ಬಿಸಿಲಿಗೆ ಹೆಚ್ಚು ಮತ್ತು ಬೇಗನೇ ಬಿಸಿಯಾಗುತ್ತವೆ. ಆದ್ದರಿಂದ ಸರಕಾರವು ಕಪ್ಪು ಬಣ್ಣದ ಟಾರ್ಪಾಲಿನ್ ಗಳನ್ನು ರೈತರಿಗೆ ಸರಬರಾಜು ಮಾಡುತ್ತಿರುವುದು.
ಈಗ ಆಲೋಚನೆ ಮಾಡಿ ನಿಮ್ಮ ಕೆಲವೊಂದು ಸ್ನೇಹಿತರು ಬಿಸಿಲಿನ ಸಮಯದಲ್ಲಿ ಕಪ್ಪು ಕೊಡೆಗಳನ್ನು ಬಳಸುವುದನ್ನು ನೋಡಿರುತ್ತೀರಿ. ಅದು ಎಷ್ಟು ಸರಿ. ಈ ಕೊಡೆ ನೇರ ಬಿಸಿಲಿನಿಂದ ರಕ್ಷಿಸಬಹುದೇ ಹೊರತು ಶಾಖದಿಂದ ಅಲ್ಲ. ಶಾಖದಿಂದ ರಕ್ಷಣೆ ಪಡೆಯಬೇಕಾದರೆ ಬಿಳಿ ಅಥವಾ ತಿಳಿ ಬಣ್ಣದ ಕೊಡೆಗಳನ್ನು ಬಳಸಬೇಕು. ನಮ್ಮ ಬಿಸಿಲೂರಿನ ಕಲಬುರಗಿ, ವಿಜಯಪುರದ ಹಿರಿಯರನ್ನು ನೋಡಿದ್ದೀರಲ್ಲವೇ ಅವರು ಬಿಳಿಯ ಧೋತರ, ಬಿಳಿಯ ಜುಬ್ಬಾ ಮತ್ತು ಬಿಳಿಯ ಟೋಪಿಗಳನ್ನು ಬಳಸುತ್ತಾರೆ. ಏಕೆ ಎಂದು ತಿಳಿಯಿತಲ್ಲ. ಅದು ಅನುಭವದಿಂದ ಕಲಿತ ಪಾಠ. ಅವರು ವೈಜ್ಞಾನಿಕವಾಗಿ ಬದುಕುತ್ತಿದ್ದಾರೆ. ನಮ್ಮನ್ನು ನೋಡಿ ಬಿಸಿಲು ಕಡಿಮೆ ಇರುವ ಇಂಗ್ಲೆಂಡ್ ನ ವಕೀಲರು ಬಳಸುತ್ತಿದ್ದ ಕರಿಯ ಕೋಟನ್ನು ಉಷ್ಣವಲಯವಾದ ದಕ್ಷಿಣ ಭಾರತದ ವಕೀಲರುಗಳು ಕರಿಯ ಕೋಟನ್ನು ಬಳಸುವುದು ಎಷ್ಟು ವೈಜ್ಞಾನಿಕ ನೀವೇ ಆಲೋಚನೆ ಮಾಡಿ ನೋಡಿ.
ಸಸ್ಯಗಳೇನಾದರೂ ಈ ಹಸಿರು ಬಣ್ಣವನ್ನೂ ಹೀರಿಕೊಳ್ಳುವುದಾಗಿದ್ದರೆ ಸಸ್ಯದ ಎಲೆಗಳು ಶಾಖದಿಂದ ಸುಟ್ಟೇ ಹೋಗುತ್ತಿದ್ದವು. ಭೂಮಿಗೆ ತಂಪು ನೀಡುವ ಈ ಸಸ್ಯಗಳು ಭೂಮಿಯ ಮೇಲೆಯೇ ಇರುತ್ತಿರಲಿಲ್ಲ. ಈಗ ತಿಳಿಯಿತೇ ಪ್ರಕೃತಿ ಸಸ್ಯಗಳನ್ನು ಏಕೆ ಹಸಿರಾಗಿಸಿದೆ ಎಂದು. ಸಸ್ಯಗಳು ಎಲ್ಲ ಬಣ್ಣಗಳನ್ನೂ ಹೀರಿಕೊಂಡರೆ ಸಸ್ಯಗಳು ಶಾಖದಿಂದ ಸುಟ್ಟು ಹೋಗುತ್ತಿದ್ದವು. ಹಸಿರು ಬಣ್ಣವನ್ನು ಹೀರಿಕೊಳ್ಳುತ್ತಿದ್ದರೆ ಆಗುವ ಕಿರಿಕಿರಿಯಿಂದ ದ್ಯುತಿ ಸಂಶ್ಲೇಷಣೆಯಲ್ಲಿ ಕ್ಷಮತ್ವ ಇರುತ್ತಿರಲಿಲ್ಲ. ಆದ್ದರಿಂದ ಬೇಡವಾದ ಹಸಿರನ್ನು ಪ್ರತಿಫಲಿಸಿ ಹಸಿರಾಗಿ ಕಾಣುವುದನ್ನು ಬಿಟ್ಟು ಸಸ್ಯಗಳಿಗೆ ಬೇರೆ ಆಯ್ಕೆಗಳೇ ಇಲ್ಲ. ಕೊನೆಗೂ ಸಸ್ಯಗಳೇಕೆ ಹಸಿರಾಗಿವೆ ಎಂಬ ನಿಮ್ಮ ಪ್ರಶ್ನೆಗೆ ಉತ್ತರ ದೊರೆಯಿತೇ..?
-ದಿವಾಕರ ಶೆಟ್ಟಿ ಎಚ್, ಮಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ