ನಿಮ್ಮ ಪ್ರೀತಿಯನ್ನು ನಿವೇದಿಸುವ ಮುನ್ನ...

ನಿಮ್ಮ ಪ್ರೀತಿಯನ್ನು ನಿವೇದಿಸುವ ಮುನ್ನ...

ಬರಹ


Photography by Palachandra, All rights reservedದೈಹಿಕ ಆಕರ್ಷಣೆ ಪ್ರೀತಿಗೆ ಮೊದಲ ಮೆಟ್ಟಿಲು. ಕೆಲವರಿಗೆ ಮೊದಲ ನೋಟದಲ್ಲೇ ಪ್ರೀತಿ ಅಂಕುರವಾದರೆ ಇನ್ನು ಕೆಲವರಿಗೆ ಹಲವು ಭೇಟಿ, ಭಾವನೆಗಳ ಹಂಚಿಕೆಯಿಂದ ಪ್ರೀತಿ ನಿಧಾನವಾಗಿ ಅವರ ಮನವನ್ನು ಆವರಿಸುತ್ತದೆ. ಸಹೋದ್ಯೋಗಿಗಳೋ, ಸಹಪಾಠಿಗಳೋ ಅಥವಾ ಗೆಳೆಯರಾದ ಸಮವಯಸ್ಕರಲ್ಲಿ ಪ್ರೀತಿ ಒಮ್ಮೊಮ್ಮೆ ನಮಗೆ ಅರಿವಿಲ್ಲದಂತೆಯೇ ಅಂಕುರಿಸುತ್ತದೆ. ಅವಳನ್ನು ನೋಡದೆ ಇದ್ದ ದಿನ ಏನೋ ಒಂದು ಬಗೆಯ ಸಂಕಟ, ಅವಳು ನಿಮ್ಮನ್ನು ನೋಡಿ ನಕ್ಕಾಗ ಏನೋ ಒಂದು ಬಗೆಯ ಉಲ್ಲಾಸ!

ಪ್ರತಿಯೊಬ್ಬರ ಜೀವನವೂ ತಾನು ಬೆಳೆದ ಮನೆ, ಪರಿಸರ, ಪಡೆದ ಶಿಕ್ಷಣದ ಪ್ರಭಾವದಿಂದ ತನ್ನದೇ ಆದ ಜೀವನದ ಬಗೆಗಿನ ನೋಟ ಬೆಳೆಸಿಕೊಂಡಿರುತ್ತದೆ. ನಮ್ಮ ಮನ ನಂತರ ಅವಳನ್ನು ಒಲಿಸುವ ಪ್ರಯತ್ನ ಮಾಡುತ್ತದೆ. ಈ ಒಲಿಸುವ ಪ್ರಯತ್ನದಲ್ಲಿ ಒಮ್ಮೊಮ್ಮೆ ನಮ್ಮ ತನವನ್ನು ಹೊರ ನೂಕಿ, ನಮ್ಮ ಕಲ್ಪನೆಯ ಆದರ್ಶ ನಮ್ಮನ್ನು ಸುತ್ತುವರಿಯುತ್ತದೆ. ಈ ಸಮಯದಲ್ಲಿ ನಾವು ನಮ್ಮ ಆದರ್ಶವನ್ನು, ಅವಳ ಆದರ್ಶ ಹಾಗು ಜಗತ್ತಿನ ಆದರ್ಶ ಎಂದು ತಪ್ಪಾಗಿ ತಿಳಿಯುವುದುಂಟು. ಅವಳ ಕುಡಿ ನೋಟ, ಸ್ನೇಹಪೂರ್ವಕ ನಗೆ ನಮ್ಮನ್ನು ಸ್ವಪ್ನ ಲೋಕಕ್ಕೆ ಒಯ್ಯುತ್ತದೆ. ಒಂಟಿಯಾಗಿರುವಾಗ, ಸ್ನೇಹಿತರ ಜೊತೆ ಇರುವಾಗ, ಊಟ ಮಾಡುವಾಗ, ನಿದ್ರೆ ಮಾಡುವಾಗ ಅವಳ ಮಧುರ ನೆನಪು ಕಾಡುತ್ತದೆ.

ಅವಳು ಬೇರೆ ಹುಡುಗರೊಂದಿಗೆ ಮಾತನಾಡಿದರೆ, ಫೋನ್ನಲ್ಲಿ ಗಂಟೆಗಟ್ಟಲೆ ನಗುತ್ತ ಮಾತನಾಡುವಾಗ, ಮಾತಿನ ಮಧ್ಯೆ ಇನ್ನೊಂದು ಹುಡುಗನ ಪ್ರಶಂಸೆ ಮಾಡಿದರೆ, ಆಕೆ ನಮ್ಮ ಕೈ ತಪ್ಪಿ ಹೋಗಬಹುದೇನೋ ಎನ್ನುವ ಏನೋ ಒಂದು ಬಗೆಯ ಸಂಕಟ! ಈ ಭಾವನೆ ನಮ್ಮನ್ನು ಪ್ರೇಮ ನಿವೇದಿಸುವ ಕಾರ್ಯಕ್ಕೆ ಪ್ರಚೋದನೆ ನೀಡುತ್ತದೆ. ಮುಖತಃ ಮಾತನಾಡಲು ಒಂದು ಬಗೆಯ ಅಳುಕು. ಹೀಗಾಗಿ ಕಾವ್ಯಮಯವಾಗಿ ನಮ್ಮ ನಿವೇದನೆಯನ್ನು ಪತ್ರದ ಮೂಲಕ ಪ್ರಕಟಿಸುತ್ತೇವೆ.

ಅವಳು ನೇರವಾಗಿ ತನ್ನ ಭಾವನೆ ಹಂಚಿಕೊಳ್ಳುವವಳಾದರೆ ನಿಮ್ಮ ಅದೃಷ್ಟ, ಇಲ್ಲವಾದಲ್ಲಿ ಇಲ್ಲಿಂದ ಆರಂಭವಾಗುತ್ತದೆ ನಿಮ್ಮ ಮನದ ತುಡಿತ. ಅವಳ ಮುಖ ನೋಡಲು ಯಾವುದೊ ಒಂದು ಬಗೆಯ ಹಿಂಜರಿಕೆ, ನೇರವಾಗಿ ಮಾತನಾಡಲು ಅಳುಕು. ಅವಳ ಮರುಪತ್ರಕ್ಕಾಗಿ ಶಿಕ್ಷೆಯ ನಿರೀಕ್ಷೆ, ನಮ್ಮನ್ನು ಮತ್ತೆ ಮತ್ತೆ ಪ್ರೇಮ ನಿವೇದನೆಗೆ ಪ್ರಚೋದಿಸುತ್ತದೆ. ಈ ಬಗೆಯ ಕಳವಳ ಅವಳ ಮನದಲ್ಲಿ ಏಳಬಹುದಾದ ಭಾವನೆಗಳಿಗೆ ಬೆಲೆ ಕೊಡಲು ಮರೆಯುತ್ತದೆ. ನಿಮ್ಮ ಮತ್ತೆ ಮತ್ತೆ ಮಾಡುವ ಪ್ರೇಮ ನಿವೇದನೆ ಅವಳಿಗೆ ತೊಂದರೆಯಾಗಬಹುದೆಂಬ ಕಲ್ಪನೆ ಅಳಿಯುತ್ತದೆ. ನಿಮ್ಮ ಈ ಬಗೆಯ ವರ್ತನೆ ಅವಳಿಗೆ ಅಸಹನೀಯವಾಗಿ ತೋರಿ ಕೊನೆಗೊಮ್ಮೆ ಋಣಾತ್ಮಕವಾಗಿ ಪ್ರತಿಕ್ರಿಯಿಸಬಹುದು. ಮತ್ತೆ ನಿಮ್ಮೊಂದಿಗೆ ಸ್ನೇಹ ಬೆಳೆಸಲು ಏನೋ ಒಂದು ಬಗೆಯ ಅಳುಕು ಕೂಡ ಅವಳನ್ನು ಕಾಡಬಹುದು.

ನಿಜವಾಗಿಯೂ ನೀವು ಒಬ್ಬರನ್ನು ಪ್ರೀತಿಸುತ್ತ ಇದ್ದರೆ, ಆಕೆಯನ್ನು ಒಲಿಸುವ ಬದಲು ಮೊದಲು ಆಕೆಯ ಒಳ್ಳೆಯ ಸ್ನೇಹಿತರಾಗಿ. ಸ್ನೇಹ ಬಲಿತ ಮೇಲೆ ನಿಮ್ಮ ಪ್ರೇಮವನ್ನು ಮುಖತಃ ನಿವೇದಿಸಿ. ಒಂದು ವೇಳೆ ಆಕೆಗೆ ನಿಮ್ಮಲ್ಲಿ ಅಂತಹ ಭಾವನೆ ಮೂಡಿಲ್ಲವಾದಲ್ಲಿ ನಿಮ್ಮ ಸ್ನೇಹ, ಸಂಬಂಧ ಅಂತೆಯೇ ಮುಂದುವರಿಯುತ್ತದೆ. ಬರಿ ಒಂದು ಪತ್ರವನ್ನು ನಂಬಿ ಆಕೆ ನಿಮ್ಮ ನಿವೇದನೆಯನ್ನು ಸ್ವೀಕರಿಸುತ್ತಾಳೆ ಎಂಬುದು ಬರಿ ಭ್ರಮೆ ಅಷ್ಟೆ! ಜೀವನದುದ್ದಕ್ಕೂ ನಿಮ್ಮೊಂದಿಗೆ ಬಾಳಬೇಕಾದ ಜೀವಕ್ಕೆ ಮೊದಲು ಬೇಕಿರುವುದು ಭರವಸೆ, ಅದು ಪ್ರಕಟವಾಗುವುದು ನಿಮ್ಮ ಕಣ್ಣಿನಲ್ಲಿ ಮಾತಿನ ಮೋಡಿಯಲ್ಲಲ್ಲ!