ನಿಮ್ಮ ಮತದ ಶಕ್ತಿ ಅಪಾರ
ಪ್ರಜಾಪ್ರಭುತ್ವದ ಅತಿದೊಡ್ದ ಉತ್ಸವವಾದ ಚುನಾವಣಾ ಹಬ್ಬಕ್ಕೆ ನಾಡು ಸಾಕ್ಷಿಯಾಗಿರುವುದು ಮತದಾರರಲ್ಲಿ ಪುಳಕವನ್ನೂ ಕಾತರವನ್ನೂ ಹೆಚ್ಚಿಸಿದೆ. ಎಲ್ಲೋ ದೂರದ ಕಚೇರಿಗಳಲ್ಲಿ ಐಷರಾಮಿ ಬಂಗಲೆಯಲ್ಲಿ ಕೂರುತ್ತಿದ್ದ ರಾಜಕಾರಣಿಗಳು ಈ ಹೊತ್ತಿನಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿಯ ಮನೆಬಾಗಿಲಿಗೆ ಬಂದು, ಕೈಮುಗಿದು ಮತ ಯಾಚಿಸುವಂತೆ ಮಾಡಿರುವುದು ಚುನಾವಣೆಯ ಸಫಲತೆಯಷ್ಟೇ ಅಲ್ಲ, ಇದು ಪ್ರಜಾಪ್ರಭುತ್ವದ ಸೌಂದರ್ಯ ಕೂಡ. ಪ್ರತಿಯೊಬ್ಬ ಮತದಾರರನ್ನು ಸೆಳೆಯಲು ರಾಜಕಾರಣಿಗಳು ಮಾಡಿರುವ ವಿಭಿನ್ನ ತಂತ್ರಗಳು, ರೂಪಿಸಿದ ಕಾರ್ಯಕ್ರಮಗಳು, ನಿದ್ದೆಗೆಟ್ಟ ದಿನಗಳು, ಪ್ರಭಾವಿಸಲು ಬಳಸಿದ ಮಾರ್ಗಗಳೆಲ್ಲವೂ ಒಂದು ಮತಕ್ಕಿರುವ ಮೌಲ್ಯವನ್ನು ಮನದಟ್ಟು ಮಾಡಿಸಿವೆ.
ಭಾರತದಲ್ಲಿ ಕಳೆದ ಏಳು ದಶಕಗಳಲ್ಲಿ ನಡೆದ ಯಾವುದೇ ಚುನಾವಣೆಗಳಲ್ಲೂ ಶೇ.೧೦೦ ರ ಪ್ರಮಾಣದ ಮತದಾನ ನಡೆದಿಲ್ಲ. ಶೇಕಡಾವಾರು ೬೦-೭೦ರ ಆಸುಪಾಸಿನಲ್ಲಿಯೇ ಮತ ದಾಖಲಾತಿ ಜರುಗಿದೆ. ಮತದಾನ ಕುರಿತು ಚುನಾವಣಾ ಆಯೋಗ ಸಾಕಷ್ಟು ಜಾಗೃತಿ ಕಾರ್ಯಕ್ರಮಗಳನ್ನು ಜಾಹೀರಾತುಗಳನ್ನೂ ಸಮಾಜಿಕ ಪ್ರಭಾವಿ ವ್ಯಕ್ತಿಗಳ ಮೂಲಕ ಸಂದೇಶ ರವಾನಿಸುವ ಕಾರ್ಯವನ್ನು ಜವಾಬ್ದಾರಿಯುತವಾಗಿ ನಿರ್ವಹಿಸುತ್ತಿದೆ. ಕೆಲವು ಸಂಘ-ಸಂಸ್ಥೆಗಳೂ ಸಾಕಷ್ಟು ಮತಸಾಕ್ಷರತೆಗೆ ಶ್ರಮಿಸುತ್ತಿವೆ. ಆದಾಗ್ಯೂ, ಮತಗಟ್ಟೆಯತ್ತ ಸುಳಿಯದೆ ಸಂವಿಧಾನ ಕಲ್ಪಿಸಿರುವ ತಮ್ಮ ಅತ್ಯಮೂಲ್ಯ ಕರ್ತವ್ಯವನ್ನೇ ಮರೆಯುವ ವರ್ಗ ಪ್ರತಿ ಚುನಾವಣೆಯಲ್ಲೂ ಸವಾಲಾಗಿ ಪರಿಣಮಿಸಿದೆ.
ದುರಂತವೆಂದರೆ, ಹೆಚ್ಚು ಓದಿದವರು ಎನ್ನಿಸಿಕೊಂಡವರೇ ಮತೋತ್ಸವದಲ್ಲಿ ಪಾಲ್ಗೊಳ್ಳದೆ ಕರ್ತವ್ಯ ವಂಚಿತರಾಗುತ್ತಿರುವುದು. ಅದರಲ್ಲೂ ಬೆಂಗಳೂರು ಮಹಾನಗರದಲ್ಲಿ ನೀರಸ ಮತದಾನ ಪ್ರತಿ ಚುನಾವಣೆಯಲ್ಲೂ ಚರ್ಚೆಗೆ ವಸ್ತುವಾಗಿದೆ. ಇದನ್ನರಿತೇ ನರಸಾಪುರ ಕೈಗಾರಿಕಾ ವಲಯದಲ್ಲಿ ಕೆಲವು ಸಂಸ್ಥೆಗಳು ತಮ್ಮ ನೌಕರರಿಗೆ ಮತದಾನ ಮಾಡದಿದ್ದರೆ ಸಂಬಳ ಕಡಿತ ನೀತಿಯನ್ನು ಪ್ರಕಟಿಸಿವೆ. ಬೆರಳಿಗಂಟಿದ ಶಾಯಿ ಹಲವು ದಿನಗಳವರೆಗೆ ಇದ್ದೇ ಇರುತ್ತದೆ. ಈ ಗುರುತನ್ನು ಆಧರಿಸಿ ಸೌಲಭ್ಯ ಕಡಿತಗೊಳಿಸುವ ಕ್ರಮದಲ್ಲಿ ಯಾವ ತಪ್ಪೂ ಇಲ್ಲ ಎನ್ನಬಹುದು.
ಚುನಾವಣೆ ಎಂದರೆ ಈಗ ಹಣದ ಹೊಳೆ ಎನ್ನುವ ಕಾಲ. ನಾನಾ ಆಮಿಷಗಳನ್ನು ಮುಂದಿಟ್ಟು ಮತದಾರನ ಮನಸ್ಸು ಗೆಲ್ಲುವ ವಾಮಮಾರ್ಗದಲ್ಲಿ ಬಹುತೇಕ ಅಭ್ಯರ್ಥಿಗಳು ತೊಡಗಿಸಿಕೊಂಡಿದ್ದಾರೆ. ಈ ಕಾರ್ಯಕ್ಕಾಗಿ ಕೋಟ್ಯಾಂತರ ರೂಪಾಯಿಗಳನ್ನು ಚೆಲ್ಲುತ್ತಿದ್ದಾರೆ. ಇವರು ಕೊಡುವ ಹಣ ಪಡೆದು ನಮ್ಮ ಅಮೂಲ್ಯ ಮತವನ್ನು ಮಾರಿಕೊಳ್ಳುವುದು ಕೇವಲ ಕ್ಷಣಿಕ ಸುಖ. ಹೀಗೆ ಕೋಟ್ಯಾಂತರ ರೂಪಾಯಿ ಸುರಿದ ಅಭ್ಯರ್ಥಿ ನಾಳೆ ದಿನ ಗೆದ್ದರೆ, ಆತ ತಾನು ಸುರಿದ ಹಣಕ್ಕೆ ಪ್ರತಿಯಾಗಿ ಹತ್ತು ಪಟ್ಟು ಹಣವನ್ನು ಅಕ್ರಮವಾಗಿ ಗಳಿಸಲು ಮುಂದಾಗುತ್ತಾನೆ. ಅದೇ ಭ್ರಷ್ಟಾಚಾರ, ಹಗರಣಗಳಿಗೆ ಎಡೆಮಾಡಿಕೊಡುತ್ತದೆ. ನಾವು ಕಟ್ಟುವ ತೆರಿಗೆ ಹಣ ಸುಲಭವಾಗಿ ಆತನ ಮನೆಯ ಖಜಾನೆ ಸೇರಿಕೊಳ್ಳುತ್ತದೆ.
ಮತಗುಂಡಿಯನ್ನು ಒತ್ತುವ ಮುನ್ನ ಆಯ್ಕೆಮಾಡಿಕೊಳ್ಳುವ ಅಭ್ಯರ್ಥಿಯ ಬಗ್ಗೆ ಹತ್ತು ಹಲವು ಬಾರಿ ಆಲೋಚಿಸಬೇಕಾಗಿದೆ. ಆತ ಸಮರ್ಥನೇ? ಸಮಾಜದ ಎಲ್ಲ ವರ್ಗದ ಹಿತವನ್ನು ಬಯಸುವವನೇ? ಕ್ಷೇತ್ರಕ್ಕೆ ಆತನಿಂದ ಉಜ್ವಲ ಭವಿಷ್ಯವಿದೆಯೇ? ಇವುಗಳ ಬಗ್ಗೆಯೂ ಮತದಾರರು ಚಿಂತಿಸಬೇಕಾಗಿದೆ. ಎಲ್ಲದ್ದಕ್ಕೂ ಮಿಗಿಲಾಗಿ ಕಡ್ಡಾಯವಾಗಿ ಮತಚಲಾಯಿಸಿ, ಪ್ರಜಾಪ್ರಭುತ್ವವನ್ನು ಗೆಲ್ಲಿಸುವ ಬದ್ಧತೆ ತೋರಬೇಕಿದೆ.
ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೧೦-೦೫-೨೦೨೩
ಚಿತ್ರ ಕೃಪೆ: ಇಂಟರ್ನೆಟ್ ತಾಣ