ನಿಮ್ಮ ಸಂತೋಷದ ಸಂದರ್ಭಗಳಲ್ಲಿ ಇವರುಗಳೂ ನೆನಪಾಗಲಿ....
ಮೇ 1..... ನಾಳೆ..... " ಜಗತ್ತಿನ ಎಲ್ಲಾ ಶೋಷಿತರು - ದೌರ್ಜನ್ಯಕ್ಕೆ ಒಳಗಾದವರು ನನ್ನ ಸಂಗಾತಿಗಳು "- ಚೆಗುವಾರ.
ವಿಶ್ವ ಕಾರ್ಮಿಕರ ದಿನದಂದು ಜಗತ್ತಿನ ಎಲ್ಲಾ ಜೀವಚರಗಳು ಒಂದಲ್ಲ ಒಂದು ರೀತಿಯಲ್ಲಿ ಕಾರ್ಮಿಕರೇ ಎಂಬ ಭಾವದೊಂದಿಗೆ.... ಎಲ್ಲರಿಗೂ ಶುಭಾಶಯಗಳು.
ಚುಮು ಚುಮು ಚಳಿಯಲ್ಲಿ ನಿಮಗೆ ನಿಮ್ಮ ಪ್ರೇಯಸಿ/ ಪ್ರಿಯಕರ ನೆನಪಾದರೆ ಸಂತೋಷಿಸುವೆವು. ಹಾಗೆಯೇ, ಹಿಮಾಲಯದ ತಪ್ಪಲಿನಲ್ಲಿ ಆ ನಡುಗುವ ಚಳಿಯಲ್ಲಿ ನಮಗಾಗಿ ಕಾರ್ಯ ನಿರ್ವಹಿಸುತ್ತಿರುವ ಸೈನಿಕರೂ ನೆನಪಾಗಲಿ ಎಂದು ಆಶಿಸುವೆ. ಅತ್ಯಂತ ತೀವ್ರ ಉಷ್ಣ ತಾಪಮಾನದಲ್ಲಿ ಅನಿರೀಕ್ಷಿತವಾಗಿ ತಣ್ಣನೆಯ ನೀರ ಮಜ್ಜಿಗೆ ಮತ್ತು ಎಳನೀರು ದೊರೆತು ಅದು ಗಂಟಲಲ್ಲಿ ಇಳಿಯುವಾಗ ಆಸ್ವಾದಿಸುವ ನಿಮ್ಮ ಮನಸ್ಥಿತಿಗೆ ಸಂತೋಷಪಡುವೆವು, ಆದರೆ ಅದೇ ಸಮಯದಲ್ಲಿ ಅದು ತಯಾರಾಗಲು ಬೆವರು ಸುರಿಸಿದ ರೈತರು ನೆನಪಾಗಲಿ ಎಂದು ಆಶಿಸುವೆ.
ಮೋಡ ಬಿರಿದಂತೆ ಸುರಿಯುವ ಮಳೆ ಮತ್ತು ಗಡಗಡ ನಡುಗುವ ಚಳಿಯಲ್ಲಿ ಬೆಚ್ಚಗಿನ ಹೊದಿಕೆ - ಆಶ್ರಯ ನಿಮಗೆ ಸಿಕ್ಕರೆ ಸಂತೋಷಿಸುವೆವು, ಹಾಗೆಯೇ, ಬೀದಿ ಬದಿಯಲ್ಲಿ ಹೊದಿಕೆ ಇಲ್ಲದೆ ಚಳಿಗೆ ವಿಲವಿಲ ಒದ್ದಾಡುತ್ತಾ ಮಲಗಿರುವ ಅನಾಥ ನಿರ್ಗತಿಕ ಜನರೂ ನೆನಪಾಗಲಿ ಎಂದು ಆಶಿಸುವೆ.
ಮಾಗಿಯ ಚಳಿಗೆ ನಿಮಗೆ ಬಿಸಿಬಿಸಿ ಕಾಫಿ/ಟೀ ಸಿಕ್ಕರೆ ಸಂತೋಷಿಸುವೆವು. ಹಾಗೆಯೇ, ಸುರಿಯುವ ಮಂಜಿನಲ್ಲಿ ಕಾಫಿ/ಟೀ ತೋಟಗಳಲ್ಲಿ ಕೆಲಸ ಮಾಡುವ ಆ ಕೂಲಿ ಕಾರ್ಮಿಕರ ಸ್ಥಿತಿಯೂ ನಿಮಗೆ ನೆನಪಾಗಲಿ ಎಂದು ಆಶಿಸುವೆ. ಹಿಮದ ರಾಶಿಯ ನಡುವೆ ಗರಿಗರಿ ಸುಟ್ಟ ಕೋಳಿ ಮಾಂಸದ ಜೊತೆಗೆ ರಮ್/ವಿಸ್ಕಿ ನಿಮಗೆ ಸಿಕ್ಜರೆ ಸಂತೋಷಿಸುವೆವು. ಹಾಗೆಯೇ, ಬೆಳಗಿನ ಅದುರುವ ಚಳಿಯಲ್ಲಿ ಹೊಲ ಉಳುವ ರೈತನೂ ನಿಮಗೆ ನೆನಪಾಗಲಿ ಎಂದು ಆಶಿಸುವೆ. ತಲೆಯಿಂದ ಪಾದದವರೆಗೂ ಬೆಚ್ಚನೆ ಹೊದ್ದು ಮನೆಯ ಬಾಲ್ಕನಿಯಲ್ಲಿ ಕಾಲಮೇಲೆ ಕಾಲುಹಾಕಿ ಕುಳಿತು ಬಿಸಿಬಿಸಿ ಬೆಣ್ಣೆ ದೋಸೆ / ತುಪ್ಪದ ಉಪ್ಪಿಟ್ಟು ತಿನ್ನುತ್ತಾ ಪತ್ರಿಕೆ ಓದುವ ಸುಖ ನಿಮ್ಮದಾದರೆ ಸಂತೋಷಿಸುವೆವು. ಹಾಗೆಯೇ, ಹತ್ತರ ಪುಟ್ಟ ಹುಡುಗನೊಬ್ಬ ಆ ಭಯಂಕರ ಚಳಿಯಲ್ಲಿ ಚಡ್ಡಿಹಾಕಿಕೊಂಡು ಬೆಳಗ್ಗೆ 4ಕ್ಕೆ ಎದ್ದು ಮನೆಮನೆಗೆ ಪತ್ರಿಕೆ ಹಾಕುವ ಕಷ್ಟ ನೆನಪಾಗಲಿ ಎಂದು ಆಶಿಸುವೆ.
ನಿಮ್ಮ ಸುಖಕ್ಕೆ ಹೊಟ್ಟೆ ಉರಿ ಪಡಲಾರೆವು. ಆದರೆ ಆ ಶ್ರಮಜೀವಿಗಳ ಸಂಕಷ್ಷಗಳಿಗೆ ಮರುಕವಿದೆ/ ಸಹಾನುಭೂತಿಯಿದೆ. ಅವರೂ ಶ್ರಮಪಡಲಿ. ಆದರೆ ಅವರ ನೋವು ಕಷ್ಟದ ಪ್ರಮಾಣ ಕಡಿಮೆಯಾಗಿ ಅವರ ಜೀವನಮಟ್ಟ ಸುಧಾರಣೆಯಾಗಿ ಅವರೂ ನೆಮ್ಮದಿ ಬದುಕು ಕಾಣುವಂತಾಗಲಿ ಎಂದು ಆಶಿಸುತ್ತಾ...
-ವಿವೇಕಾನಂದ. ಎಚ್.ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ