ನಿಯಂತ್ರಣ ಇರಬೇಕಲ್ಲವೇ?

ನಿಯಂತ್ರಣ ಇರಬೇಕಲ್ಲವೇ?

ನಿಯಂತ್ರಣವು ಸ್ವಾತಂತ್ರ್ಯಕ್ಕೆ ಭಂಗದಾಯಕ ಎಂಬ ವಾದವಿದೆ. 1964ರ ಆಸುಪಾಸಿನ ಬರಗಾಲ ಅವಧಿಯಲ್ಲಿ ಜಿಲ್ಲೆಯಿಂದ ಜಿಲ್ಲೆಗೆ ಆಹಾರ ಸಾಮಗ್ರಿಗಳನ್ನು ಸಾಗಿಸುವಾಗ ಜಿಲ್ಲಾ ಗಡಿಭಾಗದ ಗೇಟುಗಳಲ್ಲಿ ಪೋಲೀಸ್ ಇಲಾಖೆ ತಪಾಸಣೆ ಮಾಡುತ್ತಿತ್ತು. ಬೇರೆ ರಾಜ್ಯಗಳಿಗೆ ಸಾಗಾಟ ನಡೆಯುತ್ತಿದೆಯೋ ಎಂಬುದನ್ನು ಪರಿಶೀಲಿಸುತ್ತಿತ್ತು. ಆಹಾರ ಸಾಮಗ್ರಿಗಳ ಸಾಗಾಟದ ಮೆಲೆ ಬಲವಾದ ನಿಯಂತ್ರಣ ಮಾಡಲು ಮುಖ್ಯ ಕಾರಣ ರಾಜ್ಯದೊಳಗೆ ಆಹಾರದ ಅಭಾವವಾಗದಂತೆ ಜನರಿಗೆ ಆಹಾರ ಭದ್ರತೆ ನೀಡುವ ಘನ ಉದ್ದೇಶವಿತ್ತು. ಅಂದು ಇದು ಅನಿವಾರ್ಯವೂ ಆಗಿತ್ತು. ನಿಯಂತ್ರಣಗಳು ಕೆಲವೊಮ್ಮೆ ಅನಿವಾರ್ಯ. ಪರಿಸರ ಮಾಲಿನ್ಯ ನಿಯಂತ್ರಣ ಜನರ ಆರೋಗ್ಯದ ಹಿತದೃಷ್ಟಿಯನ್ನು ಹೊಂದಿದೆ. ಸರಕಾರವು ವಾಹನ ಸಂಚಾರ ನಿಯಂತ್ರಣ, ಸರಕಾರಿ ಆಡಳಿತ ವ್ಯವಸ್ಥೆಯ ನಿಯಂತ್ರಣ, ಭೂಖನನದ ಮೇಲೆ ನಿಯಂತ್ರಣ ಮುಂತಾದ ಅನೇಕ ನಿಯಂತ್ರಣಗಳನ್ನು ವಿಧಿಸುವುದರ ಹಿಂದೆ ಮಾನವನ ಹಿತ ಸಾಧನೆಯ ಉದ್ದೇಶವಿದೆ. 

ಹೆತ್ತವರು ಮಕ್ಕಳನ್ನು ನಿಯಂತ್ರಿಸುವರು. ಅಧ್ಯಾಪಕರು ವಿದ್ಯಾರ್ಥಿಗಳನ್ನು ನಿಯಂತ್ರಿಸುವರು. ವಾಹನದಲ್ಲಿ ಬ್ರೇಕ್ ಎಂಬ ನಿಯಂತ್ರಕ ಇರುವುದರಿಂದಲೇ ರಕ್ಷಣೆ. ಹೀಗೆ ಬಾಹ್ಯ ನಿಯಂತ್ರಣಗಳು ಹೇಗೆ ನಮ್ಮನ್ನು ನಿರಾಳಗೊಳಿಸುತ್ತವೆಯೋ ಹಾಗೆಯೇ ನಮ್ಮೊಳಗೂ ಸ್ವನಿಯಂತ್ರಣಗಳಿರಬೇಕು. ನಮ್ಮನ್ನು ನಿಯಂತ್ರಣ ಮಾಡಲು ನಾವು ವಿಫಲರಾದರೆ ನಾವೇ ಸೋಲುತ್ತೇವೆ. ನಮ್ಮ ಜೊತೆಗೊಬ್ಬ ಕಾಲಿಲ್ಲದೆ ನಡೆಯುವವನಿದ್ದಾನೆ. ಅವನು ಎಲ್ಲ ಕಡೆಗೂ ಅತ್ಯಂತ ವೇಗವಾಗಿ, ವಿಮಾನಗಳಂತಹ ವಾಹನವಿಲ್ಲದೇ ಯಾನಿಸಬಲ್ಲ. ಕ್ಷಣ ಮಾತ್ರದಲ್ಲಿ ಅಮೇರಿಕಾ ಇಂಗ್ಲೆಂಡ್ ಸುತ್ತಬಲ್ಲ. ಎಲ್ಲ ಕಡೆಗೂ ಹೋಗಬಲ್ಲ. ಒಳ್ಳೆಯದರ ಕಡೆಗೂ ಕೆಟ್ಟದರಕಡೆಗೂ ಗಮಿಸ ಬಲ್ಲ. ಅವನು ಯಾರೆಂದು ನಿಮಗೆ ಈಗಾಗಲೇ ತಿಳಿಯಿತಲ್ಲವೇ? ಅವನ ವೇಗದ ನಡಿಗೆಗೆ ಅಥವಾ ಸಂಚಾರಕ್ಕೆ ನಿಯಂತ್ರಣ ಬೇಕು. ಮನಸ್ಸು ಎಲ್ಲಿಂದೆಲ್ಲಿಗೆ ಹೋಗುತ್ತದೆ. ಅದರ ವೇಗವನ್ನು ನಡಿಗೆಯ ವೇಗದೊಂದಿಗೆ ಹೋಲಿಸುವಂತಿಲ್ಲ. ಮನಸ್ಸಿನ ಓಟದ ವೇಗವು ರಾಕೆಟ್ ಗಿಂತಲೂ ಅಧಿಕ ಅಲ್ಲವೇ? ಮನಸು ಒಳಿತು ಕೆಡುಕುಗಳೆರಡರತ್ತವೂ ನಮ್ಮನ್ನು ಸಾಗಿಸುತ್ತದೆ. ಆದರೆ ನಾವು ಮನೋ ನಿಯಂತ್ರಣ ಹೊಂದಿದರೆ ಒಳ್ಳೆಯದನ್ನು ಮಾತ್ರ ಆಯ್ಕೆ ಮಾಡಿದರೆ ಹೆಚ್ಚು ಸುಂದರರಾಗುತ್ತೇವೆ. ಮುಖದ ಅಂದಕ್ಕಿಂತ ಮನಸ್ಸಿನ ಅಂದವೇ ಶ್ರೇಷ್ಠ. ಶ್ರೇಷ್ಠ ಮನಸ್ಸೇ ವ್ಯಕ್ತಿತ್ವ ವಿಕಸನದ ಹೆದ್ದಾರಿ. ಅತ್ತಿತ್ತ ಓಡಾಡುವ ಮನಸ್ಸಿಗೆ ನಿಯಂತ್ರಣ ಹೇರಬಲ್ಲವನೇ ವಿಜಯಶಾಲಿ.

ನಮಗೆ ಮರೆಯಲಾಗದ ಗೆಳೆಯರಿದ್ದಾರೆ. ಈ ಗೆಳೆಯರಿಗೆ ಮೌಲ್ಯ ಕಟ್ಟಲಾಗದು. ಬರೆಯಲಾಗದಿದ್ದರೂ ಇವರು ಓದಬಲ್ಲರು. ಬಹಳ ದೂರದ ತನಕ ಓಡ ಬಲ್ಲರು. ಬೇರೆ ಬೇರೆ ಬಣ್ಣಗಳಿಗೆ ರೂಪಗಳಿಗೆ ವಶರಾಗಬಲ್ಲರು. ಇವರನ್ನು ನಿಯಂತ್ರಣ ಮಾಡದೇ ಇದ್ದರೆ ನಾವು ಕೆಡುಕುಗಳನ್ನು ಮಾಡಿ ಕುಪ್ರಸಿದ್ಧರಾಗುವ ಭಯವಿದೆ. ಆ ನಮ್ಮ ಗೆಳೆಯರನ್ನು ಊಹಿಸಿದಿರಾ? ನಮ್ಮೆರಡು ಕಣ್ಣುಗಳೇ ಆ ಪುನೀತ ಗೆಳೆಯರು. ಕಣ್ಣುಗಳ ನೋಟ ಬಲು ವೇಗ. ಎಲ್ಲವನ್ನೂ ನೋಡಿ ಕೆಲವೊಮ್ಮೆ ಮನಸನ್ನೂ ಕೆಡಿಸುತ್ತವೆ. ನಾವು ಕಣ್ಣಿನ ಎಲ್ಲ ನೋಟಗಳಿಗೂ “ವೋಟ್” ಮಾಡಬಾರದು. ಕೆಲವೊಂದಕ್ಕೆ “ನೋಟಾ” ಬೇಕು. ಸರಿ ತಪ್ಪುಗಳ, ಒಳಿತು ಕೆಡುಕುಗಳ ವಿಮರ್ಶೆ ಮಾಡಿ ಸೂಕ್ತ ಮತ್ತು ಎಲ್ಲರಿಗೂ ಒಪ್ಪಿತವಾಗುವುದರ ಆಯ್ಕೆಯಲ್ಲಿ ಕಣ್ಣುಗಳ ಮೇಲೆ ನಿಯಂತ್ರಣ ಬೇಕು. ನನ್ನ ಗೆಳೆಯರೆಂದು ಅತ್ಯಾಸೆಗೆ ವಶವಾಗಿ ಸಮಾಜದ ಛೀ ಥೂಗಳಿಗೆ ನಾವು ಬಲಿಯಾಗದಿರುವುದೇ ಜಾಣತನ.

ನಮಗೆ ಮಹಾಶತ್ರುವೊಬ್ಬನಿದ್ದಾನೆ. ಅವನನ್ನು ನಾವು ಕರೆಯಬೇಕಿಲ್ಲ. ಕರೆಯದೇ ಬರುತ್ತಾನೆ. ನಮ್ಮೆದುರಲ್ಲಿ ಪದೇ ಪದೇ ಪ್ರತ್ಯಕ್ಷನಾಗುತ್ತಾನೆ. ಅವನ ನಿಯಂತ್ರಣಕ್ಕೆ ನಾವು ಬಲಿಯಾದರೆ ನಮಗೆ ನಮ್ಮ ಮೇಲೆಯೇ ನಿಯಂತ್ರಣವಿರುವುದಿಲ್ಲ. ನಮ್ಮ ಮೈ ಕಂಪಿಸುತ್ತದೆ, ಕೆಂಪೇರುತ್ತದೆ, ಮಾತು ತೊದಲುತ್ತದೆ, ಧ್ವನಿಯೇರುತ್ತದೆ, ಮಾತಿನಲ್ಲಿ ವ್ಯಾಕರಣ ತಪ್ಪುತ್ತದೆ, ಮಾತು ಅನಿಯಂತ್ರಿತವಗಾತ್ತದೆ, ಕೆಲವೊಮ್ಮೆ ಅಸಹ್ಯದ ಮಾತುಗಳೂ ಬರುತ್ತವೆ...... ಹೀಗೆ ದುರಂತ ಪೋಷಕನಾದ ವ್ಯಕ್ತಿಯೇ ನಮಗೆ ವೀರಾವೇಶ ನೀಡುವ ಕೋಪ. ಕೋಪದೊಂದಿಗೆ ತಾಪವೂ ಸೇರುತ್ತದೆ. ಮೈ ಬಿಸಿಯೇರುತ್ತದೆ. ಕೋಪವನ್ನು ನಿಯಂತ್ರಣ ಮಾಡುವುದರಿಂದಲೇ ನಾವು ವ್ಯಕ್ತಿಗಳಾಗುತ್ತೇವೆ, ಮೇಲಾಗಿ ಮನುಷ್ಯರಾಗುತ್ತೇವೆ. ಕೋಪದ ನಿಯಂತ್ರಣಕ್ಕೊಳಗಾದರೆ ರಾಕ್ಷಸರಾಗುತ್ತೇವೆ. ಕೋಪವನ್ನು ನಿಯಂತ್ರಿಸಲು, ತಾಳ್ಮೆಯನ್ನು ಗಳಿಸಲು ಮಹಾ ಸಾಧನೆ ಬೇಕು. ಧ್ಯಾನ ಮತ್ತು ಜ್ಞಾನ ನಮ್ಮ ಕೋಪ ತಾಪಗಳನ್ನು ಇಳಿಸುತ್ತದೆ. ನಮ್ಮ ಮನಸ್ಸನ್ನು ಕೋಪದ ವಶಕ್ಕೆ ನೀಡದೇ ಶಾಂತಿ ಮತ್ತು ಸಹನೆಯ ವಶಕ್ಕೆ ನೀಡ ಬೇಕು. ಮಾತನ್ನು ಹದಗೆಡಿಸುವಲ್ಲಿ ಕೋಪದ ಪಾತ್ರವೂ ಹಿರಿದು.

ಕಿವಿಯೂ ನಮ್ಮನ್ನು ಸೋಲಿಸುತ್ತದೆ. ಕಿವಿ ಊದುವುದು ಎಂಬ ಹೇಳಿಕೆಯಿದೆ. ಚಾಡಿಯನ್ನು ಸೊಗಸಾಗಿ ಹೇಳಲು ಕಿವಿ ಊದು ಎನ್ನುವರು. ಮನಸ್ಸು ಕಿವಿಯೂದುವಿಕೆಗೆ ಬಲಿಯಾಗಿ ಕೋಪದ ಪ್ರತಾಪ ತೋರಿಸುವುದು ಅತ್ಯಂತ ಹೇಯ. ಸರಿಯಾದುದನ್ನು ಮನಸ್ಸಿಗೆ ತಟ್ಟುವಂತೆ ಹೇಳಿ ಚಾಡಿಕೋರನನ್ನು ಶಾಂತ ಅಥವಾ ನಾಚಿಸುವ ಪ್ರಯತ್ನವಾಗಬೇಕೇ ಹೊರತು ಕಿವಿಗಪ್ಪಳಿಸಿದುದೆಲ್ಲವನ್ನೂ ನಂಬಿ ರುದ್ರಾವತಾರ ತೋರಿಸುವುದು ಉತ್ತಮರ ಲಕ್ಷಣವಲ್ಲ.

ಆದುದರಿಂದ ಸ್ವೇಚ್ಛೆಯನ್ನು ನಿಯಂತ್ರಿಸಿ ಸುಖ, ಸಂತೋಷ, ಶಾಂತಿ, ನೆಮ್ಮದಿಗಳನ್ನು ನೀಡುವ ಸ್ವತಂತ್ರ ಸ್ವಾಭಿಮಾನೀ ಬದುಕಿನಲ್ಲಿ ನಿಯಂತ್ರಣ ಇರಬೇಕಲ್ಲವೇ?

-ರಮೇಶ ಎಂ. ಬಾಯಾರು, ಬಂಟ್ವಾಳ 

ಚಿತ್ರ ಕೃಪೆ: ಇಂಟರ್ನೆಟ್ ತಾಣ