ನಿಯಮ - ಶೌಚ

ನಿಯಮ - ಶೌಚ

ಇಂದು ಪಾತಂಜಲ ಸೂತ್ರದ ಎರಡನೇ ಮೆಟ್ಟಿಲು ನಿಯಮದ ಬಗ್ಗೆ ತಿಳಿದುಕೊಳ್ಳೋಣ. ನಿಯಮ ಎಂದರೆ ಪಾಲಿಸಬೇಕಾದದ್ದು. ಯಮ ಹೊರಗಿನ ಸ್ವಚ್ಛತೆಗೆ ಅವಕಾಶ ಕಲ್ಪಿಸಿದರೆ, ನಿಯಮ ಆಂತರಿಕ ಮತ್ತು ಬಾಹ್ಯ ಸ್ವಚ್ಛತೆಗೆ ಒತ್ತು ನೀಡುತ್ತದೆ. ನಿಯಮದಲ್ಲಿ ಐದು ಉಪ ಅಂಗಗಳಿವೆ :

1 ಶೌಚ

2 ಸಂತೋಷ

3 ತಪಸ್ಸು 

4 ಸ್ವಾಧ್ಯಾಯ

5 ಈಶ್ವರಪ್ರಣಿಧಾನ

ಶೌಚ : ಶೌಚ ಅಂದರೆ ಸ್ವಚ್ಛತೆ, ನಿರ್ಮಲತೆ, ಹೊಲಸು ಇಲ್ಲದಿರುವುದು. ನಾವಿರುವ ಸ್ಥಳವಾಗಲಿ, ನಮ್ಮ ದೇಶವಾಗಲಿ, ನಮ್ಮ ಮನಸ್ಸಾಗಲಿ, ಅದು ಸ್ವಚ್ಛವಾಗಿರಬೇಕು. ಎಲ್ಲಿ ಹೊಲಸು ಇದೆಯೋ? ಅಲ್ಲಿ ದುಃಖ. ಮನಸ್ಸಿನ ವಿಕಾರವಿದೆ. ಎಲ್ಲಿ ಸ್ವಚ್ಛತೆ ಇದೆ...? ಅಲ್ಲಿ ಬೆಳಕು, ಸಂತೋಷ ಇರುತ್ತದೆ. ಅಲ್ಲಿ ಮನಸ್ಸಿನ ವಿಕಾರವಿಲ್ಲ. ಪಾತಂಜಲ ಮಹರ್ಷಿ ಶೌಚಕ್ಕೆ ಬಹಳ ಮಹತ್ವ ನೀಡಿದರು. ನಿಸರ್ಗವೂ ಕೂಡ ಮಳೆ ಉಯ್ದು, ಪರಿಸರ ಸ್ವಚ್ಛ ಮಾಡುತ್ತದೆ. ಗಾಳಿ ಬೀಸಿ, ಬಿಸಿಲು ಬಂದು, ನಿಸರ್ಗ ಸ್ವಚ್ಛ ಮಾಡುತ್ತದೆ. ನಿಸರ್ಗ ಸ್ವಚ್ಛ ಮಾಡದೇ ಇದ್ದರೆ, ನಮ್ಮ ಪರಿಸರವೆಲ್ಲ ಗಟಾರ ತುಂಬುತ್ತಿತ್ತು. ಭೂಮಿ ರಾಸಾಯನಿಕದಿಂದ ಕೆಟ್ಟು ಹೋಗುತ್ತಿತ್ತು. ಇಡೀ ಭೂಮಿಯನ್ನೇ ಸ್ವಚ್ಛ ಮಾಡುತ್ತದೆ. ಮಳೆಯಿಂದ ಸ್ವಚ್ಛ ಮಾತ್ರವಲ್ಲ, ಗಿಡ ಮರ ಅರಳುತ್ತದೆ. ನೋಡುವವರಿಗೆ ಮುದ ನೀಡುತ್ತದೆ. ಸ್ವಚ್ಛತೆ ಇದ್ದರೆ ಮನಸ್ಸು ಅರಳುತ್ತದೆ. ಅದಕ್ಕಾಗಿ ಹೊರಗೆ, ಒಳಗೆ ಸ್ವಚ್ಛತೆ ಬೇಕಾಗುತ್ತದೆ. ಬರೀ ಮೈ ತೊಳೆದುಕೊಂಡು, ಮನಸ್ಸು ಹೊಲಸಾದರೆ ಪ್ರಯೋಜನವಿಲ್ಲ. ಮನಸ್ಸು ಹೊಲಸಾದರೆ ಒಳಗೆ, ಹೊರಗೆ ಎರಡು ಕಡೆ ತೊಂದರೆ. ಒಂದು ಗುಬ್ಬಿ, ತಾನೇ ನಿಸರ್ಗದ ವಸ್ತು ತಂದು, ಗೂಡು ಕಟ್ಟುತ್ತದೆ. ಅದರಲ್ಲಿ ಮೊಟ್ಟೆ ಇಡುತ್ತದೆ. ಅದರಲ್ಲಿ ಬೇರೆ ವಸ್ತು ಇದ್ದರೆ, ತಂದು ಹೊರಹಾಕುತ್ತದೆ. ನಮಗೆ ಹೊಲಸು ಯಾವುದು? ಸ್ವಚ್ಛ ಯಾವುದು? ತಿಳಿಯುವುದಿಲ್ಲ. ಆ ಗೂಡಿನಲ್ಲಿ ಮುತ್ತು, ರತ್ನ ಇಟ್ಟರೂ ತೆಗೆದು ಹಾಕುತ್ತದೆ. ನಾವು ಪರ ವಸ್ತುಗಳನ್ನು ಹೊರ ಹಾಕುವುದಿಲ್ಲ. ಏಕೆಂದರೆ ಮನಸು ಹೊಲಸಾಗಿದೆ. ಹೊಲಸು ಹೇಗೆ ಮನಸ್ಸನ್ನು ಪ್ರವೇಶಿಸುತ್ತದೆ? ಅಂದರೆ ಕೆಲವೊಂದು ನಾವೇ ಹಾಕಿಕೊಳ್ಳುತ್ತೇವೆ. ಮಂದಿ ಕೆಲವನ್ನು ಹಾಕುತ್ತಾರೆ. ಇದರಿಂದ ಬಹುತೇಕರ ಮನಸು ಹೊಲಸಾಗುತ್ತದೆ. 

ಸಂತರು ಅಂದರೆ ಹೊಲಸನ್ನು ಹೊರಹಾಕಿದವರು. ಹಿಂದೆ ಹೇಳುತ್ತಾ ಇದ್ದರು. ಬೆಳಗ್ಗೆ ಎದ್ದ ಕೂಡಲೇ ಒಂದಿಷ್ಟು ನೆನಪು ಮಾಡಿಕೊ. ಸುತ್ತ ಮುತ್ತ ಇರುವ ವಸ್ತು, ಆ ವಸ್ತುವಿನ ಹಿಂದಿರುವ ಶಕ್ತಿಯನ್ನು, ನೆನಪು ಮಾಡಿಕೊ. ಇಲ್ಲ ದೊಡ್ಡವರ ನೆನಪು ಮಾಡಿಕೊ ಎನ್ನುತ್ತಿದ್ದರು. ಇದರ ಅರ್ಥ ಮನಸ್ಸಿನ ಕಸ ಹೊಡೆಯುವುದು. ಮನಸ್ಸು ಸ್ವಚ್ಛ ಇದ್ದರೆ ದಿನಪೂರ್ತಿ ಸಂತೋಷ ಇರುತ್ತದೆ. ಬೆಳಗ್ಗೆ ಎದ್ದಾಗ ಮಂದಸ್ಮಿತ ಇದ್ದರೆ, ದಿನಪೂರ್ತಿ ಆನಂದ ಇರುತ್ತದೆ. ಅದಕ್ಕೆ ಎದ್ದ ಕೂಡಲೇ ಜನರ ಮುಖ ನೋಡಬಾರದು ಅಂತಾರೆ. ಏಕೆಂದರೆ ಆ ಮುಖ ಪೇಲವವಾಗಿದ್ದರೆ, ದಿನಪೂರ್ತಿ ಅದರ ಛಾಯೆ ಬೀಳುತ್ತದೆ. ನಗುಮುಖ ನೋಡಿದರೆ, ದಿನದ ತುಂಬಾ ಅದರ ಕಳೆ ತುಂಬಿರುತ್ತದೆ. ನಾವು ಬೇರೆಯವರ ಮುಖ ನೋಡಿ, ಅವರು ಚೆನ್ನಾಗಿಲ್ಲ. ಇವರು ಚೆನ್ನಾಗಿಲ್ಲ ಅನ್ನುತ್ತೇವೆ. ನಮ್ಮ ಕೋಣೆಯಲ್ಲಿ ಕನ್ನಡಿ ಇಟ್ಟುಕೊಂಡು ನೋಡಬೇಕು. ಪ್ರಸನ್ನ ಇದೆಯಾ, ಇಲ್ಲವಾ ಅಂತ. ಏಕೆಂದರೆ ಪ್ರಸನ್ನತೆ ಇಲ್ಲದೆ, ಹೊರಗೆ ಹೋದರೆ, ನಮ್ಮ ಜೀವನ ಹಾಳಾಗುತ್ತದೆ. ಮುಂಜಾನೆ ಬೇಗ ಎದ್ದು, ಸ್ನಾನ ಮಾಡಿ, ದೇವರ ನೆನಪು ಮಾಡಿಕೊಳ್ಳಬೇಕೆಂದು ಹೇಳುತ್ತಾರೆ. ದೇವರು ಅಂದರೆ ಸತ್ಯಂ, ಶಿವಂ, ಸುಂದರಂ. ಮನಸ್ಸು ಸ್ವಚ್ಛ ಮಾಡಿಕೊಂಡು, ಹೊರಗೆ ಹೋಗಬೇಕು. ಬೆಳಗ್ಗೆ ಪಕ್ಷಿಧ್ವನಿ ಕೇಳಿ. ಒಂದಾದರೂ ಅಳುತ್ತಾ ಹಾಡುವುದಿಲ್ಲ, ನಗುತ್ತಾ ಹಾಡುತ್ತವೆ. ಬೇರೆಯವರಿಗೆ ತಕರಾರು ಮಾಡುವುದಿಲ್ಲ. ತಮ್ಮಷ್ಟಕ್ಕೆ ತಾವು ಹಾಡಿಕೊಳ್ಳುತ್ತಾ ಇರುತ್ತವೆ. ಪಕ್ಷಿಗಳಿಗೆ ಗೊತ್ತು, ಮಧುರತೆಯಿಂದ ಮಧುರತೆ ಬೆಳೆಯುತ್ತದೆ. ಜಗತ್ತನ್ನು ಮಧುರ ಗೊಳಿಸುವುದು ನಮ್ಮ ಕೆಲಸ. ನಮ್ಮ ಕೆಲಸ ಗಳಿಸಿ, ಕೊರತೆಯಾಯಿತು ಅಂತ ಅಳುವುದು. ಇವುಗಳ ಉದ್ದೇಶ ಮನಸ್ಸನ್ನು ಸ್ವಚ್ಛ ಮಾಡುವುದು, ಸುಗಂಧಿತ ಮಾಡುವುದು, ಚಂದ ಇಟ್ಟುಕೊಳ್ಳುವುದು.        

ಬಸವಣ್ಣ ಹೇಳಿದರಲ್ಲ "ಇದೆ ಅಂತರಂಗ ಶುದ್ದಿ, ಇದೇ ಬಹಿರಂಗ ಸುದ್ದಿ, ಇದೇ ನಮ್ಮ ಕೂಡಲಸಂಗಮದೇವನ ಒಲಿಸುವ ಪರಿ". ಎಲ್ಲಿ ಸ್ವಚ್ಛತೆ, ಅಲ್ಲಿ ದೇವರು. ಎಲ್ಲಿ ಸ್ವಚ್ಛತೆ, ಅಲ್ಲಿ ಶಾಂತಿ ಸಮಾಧಾನ. ನಮಗೆ ನಮ್ಮ ಮನಸ್ಸು ಸ್ವಚ್ಛ ಮಾಡಿಕೊಳ್ಳಲು ಆಗದಿದ್ದರೆ, ಯಾರು ಮನಸ್ಸನ್ನು ಸ್ವಚ್ಛ ಮಾಡಿಕೊಂಡಿದ್ದಾರೋ ಅವರ ಬಳಿ ಕುಳಿತರೆ, ನಮ್ಮ ಮನಸ್ಸು ಸ್ವಚ್ಛ. ಹೊರಗಿನ ಸ್ವಚ್ಛ ಕಷ್ಟ. ಹೊಲಸನ್ನು ಹೇಗೆ ತೆಗೆಯಬೇಕು..? ಎಲ್ಲಿ ಹಾಕಬೇಕು...? ಹೀಗೆ. ಮನಸ್ಸಿನದು ಹಾಗಲ್ಲ, ಜಾರಿಸಿಬಿಟ್ಟರೆ ಅದೇ ಕ್ಷಣ ಸ್ವಚ್ಛ. ಒಬ್ಬ ಮನುಷ್ಯ ಹೊರಟಿದ್ದ. ಆತನ ಹೆಗಲ ಮೇಲೆ ಒಂದು ದೊಡ್ಡ ಗಂಟು ಇತ್ತು. ಅದರ ಭಾರಕ್ಕೆ ಬಗ್ಗಿ ಹೋಗಿದ್ದ. ಅದೇ ಸಮಯಕ್ಕೆ ಒಬ್ಬ ಮಹಾನುಭಾವ ಬಂದ. ಮಹಾನುಭಾವ ಹೇಳಿದ, "ಏನಪ್ಪಾ ನಿನ್ನ ನೋಡಿದರೆ ಸೋತು ಹೋಗಿರುವಂತೆ ಕಾಣುತ್ತೀ. ಸೊರಗಿ ಹೋಗಿದ್ದಿ, ಆದರೂ ಈ ಗಂಟು ಏಕೆ ಹೊತ್ತಿದ್ದಿ?" ಎಂದನು. ಅವಾಗ ಆ ಮನುಷ್ಯ ಹೇಳಿದ, "ಈ ಗಂಟನ್ನು ನಮ್ಮ ತಂದೆ ಹೊರಿಸಿದ್ದಾರೆ, ಅದಕ್ಕೆ ಹೊತ್ತಿದ್ದೀನಿ. ಅದನ್ನು ಹೊತ್ತು 50 ವರ್ಷ ಆಗಿದೆ. ಲಗ್ನ ಆಗುವಾಗ ತಂದೆ ಹೇಳಿದ, ಇದನ್ನು ಇಳಿಸಬೇಡ ಅಂತ, ಅದಕ್ಕೆ ಹೊತ್ತಿದ್ದೇನೆ". ಮಹಾನುಭಾವ ಹೇಳಿದ "ಬಿಚ್ಚಿ ನೋಡು, ಅದರ ಒಳಗೆ ಏನಿದೆ ಅಂತ." ಅದಕ್ಕೆ ಮನುಷ್ಯ ಹೇಳಿದ, "ನಮ್ಮ ತಂದೆ ಬಿಚ್ಚಬೇಡ ಅಂತ ಹೇಳಿದ್ದಾನೆ ಅಂದನು. ನಮ್ಮ ತಂದೆ ಸಾಯುವಾಗ ಹೇಳಿದ್ದು. ಇದು ನಮ್ಮ ತಂದೆ ಕೊಟ್ಟಿದ್ದು, ನಾನು ಬಿಚ್ಚಿಲ್ಲ, ನೀನು ಬಿಚ್ಚಬೇಡ" ಎಂದು ಅಂದನು. "ಇದು ನಮ್ಮ ಸಾವಿರಾರು ವರ್ಷ ಪರಂಪರೆಯಿಂದ ಬಂದಿದ್ದು. ಇದನ್ನು ಹೊರೋದೆ ವಿನಹ ಬಿಚ್ಚೋದಲ್ಲ ಅಂದನು. ಅದಕ್ಕೆ ನಾನು ಹೊರುತ್ತಿದ್ದೇನೆ, ಬಿಚ್ಚೋದಿಲ್ಲ". ಮಹಾನುಭಾವ ಹೇಳಿದ, "ಐವತ್ತು ವರ್ಷ ಹೊತ್ತಿದ್ದು, ಒಂದು ದಿನ ಆದ್ರೂ ಅದನ್ನು ಬಿಚ್ಚಿ, ಒಳಗೆ ಏನಿದೆ ಅಂತ ನೋಡಬಾರದೆ" ಎಂದನು. ಒಳಗೆ ಬೆಳ್ಳಿ, ಬಂಗಾರ, ಮುತ್ತು , ರತ್ನ ಏನಿದೆ ನೋಡು" ಅಂದನು. ಆಗ ಮನುಷ್ಯ "ಹೌದಲ್ಲ, ಈ ವಿಚಾರ ಬಂದಿಲ್ಲವಲ್ಲ" ಎಂದನು. "ಭಾರ ಹೊತ್ತಿದ್ದೀನಿ, ಏನದು ನೋಡಬೇಕು ಅನಿಸಲಿಲ್ಲವಲ್ಲ, ಆಯ್ತು ಮಹಾನುಭಾವ, ನಿನ್ನ ಮೇಲೆ ಭಾರ ಹಾಕಿ ಬಿಚ್ಚುತ್ತೇನೆ" ಅಂತ ಹೇಳಿ, ಬಿಚ್ಚಲು ಶುರು ಮಾಡಿದನು. ಬಿಚ್ಚಿದಾ, ಬಿಚ್ಚಿದ. ಆ ಗಂಟನ್ನು, ತಂದೆ ಅವರ ತಂದೆ, ಹೀಗೆ ಹಿಂದಿನಿಂದ ಕಟ್ಟಿತ್ತೇ, ವಿನಹ ಬಿಚ್ಚಿರಲಿಲ್ಲ. ಬಿಚ್ಚಿ ಬಿಚ್ಚಿ ಕೊನೆಗೆ ನೋಡಿದ, ಅಲ್ಲಿ ಏನೂ ಇರಲಿಲ್ಲ. ಅದಕ್ಕೆ ಪಾತಂಜಲ ಮಹರ್ಷಿ ಹೇಳಿದ್ದು, "ಮನಸ್ಸು ಸ್ವಚ್ಛವಾಗಬೇಕಾದರೆ, ಕಣ್ಣು ಸ್ವಚ್ಛ ಇರಲಿ, ಕಿವಿ ಸ್ವಚ್ಛ ಇರಲಿ, ನಾಲಿಗೆ ಸ್ವಚ್ಛ ಇರಲಿ, ಕೈ ಸ್ವಚ್ಛ ಇರಲಿ. ನಾಲಿಗೆ ಹೊಲಸಾದರೆ, ಊರೆಲ್ಲಾ ಹೊಲಸಾಗುತ್ತದೆ. ಕಣ್ಣು, ಕಿವಿ, ಕೈ ಹೊಲಸಾದರೆ ಮನಸ್ಸು ಹೊಲಸಾಗುತ್ತದೆ. ಸ್ವಚ್ಛ ಮಾಡಿಕೋ" ಎಂದನು. ಯಾರಾದರೂ ಮನಸ್ಸಿಗೆ ಹೊಲಸು ಹಾಕಲು ಪ್ರಯತ್ನಿಸಿದರೆ, ಒಮ್ಮೆಲೆ ಹಾಕಿಕೊಳ್ಳಬೇಡ. ನಿಧಾನವಾಗಿ, ನಿಧಾನವಾಗಿ ಆಲೋಚಿಸಿ, ವಿಚಾರ ಮಾಡಿ, ಯಾವುದನ್ನು ಹಾಕಿಕೊಬೇಕು? ಯಾವುದನ್ನು ಬೇಡ?. ವಿವೇಚಿಸಿ ಹಾಕಿಕೊ. ಹೀಗೆ ಸ್ವಚ್ಛ ಮಾಡಿಕೊಳ್ಳಬೇಕು" ಅಲ್ಲವೇ ಮಕ್ಕಳೇ...?

-ಎಂ.ಪಿ. ಜ್ಞಾನೇಶ್, ಮಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ