ನಿರಂತರ

ನಿರಂತರ

ಬರಹ

 (ಮಂಗಳೂರು ಆಕಾಶವಾಣಿಗಾಗಿ ಬರೆದು ಪ್ರಸಾರವಾದ ಕಥೆ)

ನನಗೆ ಚೆನ್ನಾಗಿಯೇ ಗೊತ್ತು. ಈ ಇಡೀ ಕತೆ ಕೇಳಿ ಮುಗಿದದ್ದೆ ನೀವು ಅರೆರೆ, ಇದೆಂಥ ಕತೆಯಪ್ಪ, ಒಂಚೂರೂ ಅರ್ಥವಾಗ್ಲಿಲ್ಲ, ಎಂಥ ಕಥೆಯೋ ಏನೋ ದೇವ್ರೇ ಬಲ್ಲ ಎನ್ನುತ್ತೀರಿ. ಅದಕ್ಕೇ ಈ ಕಥೆಯ ಅರ್ಥ ಏನು ಅಂತ ನಾನು ಮೊದಲೇ ನಿಮಗೆ ಹೇಳಿ ಬಿಡ್ತೇನೆ. ಆ ಮೇಲೆ ನೀವು ಆರಾಮಾಗಿ ಕತೆ ಕೇಳಬಹುದು.

ಈಗ ನಾನು ಹೇಳ್ತೇನೆ, ನೀವು ಯಾರನ್ನೋ ಹುಡುಕ್ತಾ ಇದ್ದೀರಿ, ಅವರು ನಿಮಗೆ ಇನ್ನೂ ಸಿಕ್ಕಿಯೇ ಇಲ್ಲ ಅಂತ. ಆದರೆ ನೀವೆಲ್ಲಿ ಒಪ್ತೀರಿ? ಇಲ್ಲಪ್ಪ, ಯಾರು ಹೇಳಿದ್ದು ನಿಮಗೆ, ನಾವು ಯಾರನ್ನೂ ಹುಡುಕ್ತಾ ಇಲ್ಲ, ಇಶಿಶಿ,ನಮಗೆ ಬೇರೆ ಕೆಲಸ ಇಲ್ಲಂತ ಎಣಿಸಿದ್ದೀರಾ ಹೇಗೆ, ಎಂದೆಲ್ಲ ಸುರು ಮಾಡುತ್ತೀರಿ. ಆದ್ರೆ ನಂಗೆ ಗೊತ್ತಿದೆ, ನಿಮಗೆ ಗೊತ್ತಿಲ್ಲ ಅಷ್ಟೆ ವ್ಯತ್ಯಾಸ. ಅಥವಾ, ನೀವು ಎಣಿಸಿರಬಹುದು, ನೀವು ಹುಡುಕ್ತಾ ಇದ್ದ ಜನ ಆಗಲೇ ಸಿಕ್ಕಿದೆ ಅಂತ. ತುಂಬ ಪಾಪದವ್ರು ನೀವು. ಸುಳ್ಳು ಹೇಳಿದ್ರೂ ಸತ್ಯ ಅಂತ ನಂಬಿ ಬಿಡ್ತೀರಿ. ಆದ್ರೆ ನಾನು ಮಾತ್ರ ಸುಳ್ಳು ಹೇಳ್ತ ಇಲ್ಲ. ನಿಮಗೆ ಸಿಕ್ಕಿದ ಜನ ನೀವು ಹುಡುಕ್ತಿದ್ದ ಜನ ಅಲ್ಲವೆ ಅಲ್ಲ. ನೋಡಿ ನೋಡಿ, ನಿಮಗೆ ಸಿಟ್ಟೇ ಬಂತಲ್ಲ! ಸ್ವಲ್ಪ ಸಮಾಧಾನದಿಂದ ಕೇಳಬಾರದ? ಪ್ಲೀಸ್!

ಮೊದಲು ನಿಮಗೆ ಸಹ ಅದು ಇವರಲ್ಲವೇನೋ ಅಂತನೇ ಅನಿಸಿತ್ತು, ನೆನಪು ಮಾಡಿಕೊಳ್ಳಿ. ಅನುಮಾನ ಇತ್ತು ನಿಮಗೂ. ಇರಲಿಕ್ಕಿಲ್ಲ ಇರಲಿಕ್ಕಿಲ್ಲ ಅಂತ ನಿಮಗೆ ನೀವೇ ನೂರು ಸರ್ತಿಯಾದರೂ ಹೇಳಿಕೊಂಡಿದ್ರಿ. ಆಗಲೂ ನಿಮ್ಗೆ ಒಳಗೊಳಗೆ ಒಂದು ಆಸೆ, ಅದು ಇವರೇ ಆಗಿರ್ಲಿ ಅಂತ! ಮತ್ತೆ ದಿನಕಳೆದ ಹಾಗೆ ಅದು ಇದೇ ಜನ ಅಂತ ವಿಶ್ವಾಸ ಕುದುರಲಿಕ್ಕೆ ಸಹ ಸುರುವಾಯ್ತು. ನಂಗೆ ಗೊತ್ತಿತ್ತು, ಇದು ಹೀಗೇ ಆಗ್ತದೆ ಅಂತ. ಕೊನೆಗೆ ನೀವು ನಂಬಿ ಬಿಟ್ರಿ, ನಿಮಗೇ ಗೊತ್ತಾಗದ ಹಾಗೆ! ಸುಳ್ಳ ನಾನು ಹೇಳಿದ್ದು? ಇವರನ್ನೇ ಹುಡುಕ್ತಾ ಇದ್ದಿದ್ದು ಅಂತ ನೀವು ನಂಬಿದ್ದು.

ಎಷ್ಟು ವರ್ಷ ಆಯ್ತು ಇದೆಲ್ಲ ಆಗಿ. ಹೀಗೇ ಆಗೋದು ಇದೆಲ್ಲ. ಮನಸ್ಸಿನ ಮಾತು ಏನಂತ ಹೇಳ್ತೀರಿ? ಎಲ್ಲೋ ಸ್ವಲ್ಪ ಸ್ವಲ್ಪ ಅನಿಸ್ತದೆ, ಮೊದಲಿಗೆ. ಇರಬಹುದಾ ಇರಬಹುದಾ ಅಂತ. ಯಾರಿಗೂ ಗೊತ್ತಿರುವುದಿಲ್ಲ ಹೌದ ಅಲ್ಲವ ಅಂತ! ಕಡೆಗೆ ಎಲ್ಲ ಅನುಮಾನವೇ ನಿಜವಾಗಿ ಬಿಡ್ತದೆ. ಸ್ವಲ್ಪ ಸ್ವಲ್ಪ ಅನಿಸ್ತಿತ್ತಲ್ಲ ನಿಮಗೆ, ಅದು ಸತ್ಯವೇ ಆಗಿರ್ತದೆ. ಆದ್ರೆ, ಯಾವಾಗ ನಂಬಬೇಕೋ ಆಗ ನಂಬುವುದಿಲ್ಲ ಮನಸ್ಸು. ಯಾವಾಗ ಅನುಮಾನಿಸಬೇಕೋ ಆಗ ನಂಬ್ತದೆ ಮನಸ್ಸು.

ಎಷ್ಟೋ ಸಲ ಎಲ್ಲ ಸೈಲೆಂಟಾಗಿ ಬಿಡುತ್ತೆ ನೋಡಿ. ಎಂಥಾ ಮೌನ ತುಂಬಿಕೊಳ್ಳುತ್ತೆ ಅಂದ್ರೆ, ಯಾವ ಶಬ್ದವೂ ಬೇಡಾ ಅನಿಸಿಬಿಡ್ತದೆ. ಎಲ್ಲೋ ಒಂದು ಗಡಿಯಾರ ಮಾತ್ರ ಕ್ಲಕ್ ಕ್ಲಕ್ ಅನ್ನತಾ ಇರ್ತದೆ. ಹಾಲು ಕುಡಿದು ಮಲಗಿದ ಬೆಕ್ಕು ನಿದ್ದೆಯಲ್ಲೇ ಪುರ್ರ್ರ್ ಅಂತ ಹೊರಡಿಸುವ ಶಬ್ದ ಸಹ ಕೇಳಿಸ್ತದೆ. ದೂರದಲ್ಲೆಲ್ಲೋ ವಂಯ್ಯೋ ಅಂತ ಏರು ಹತ್ತಲು ಒದ್ದಾಡುವ ಲಾರಿ, ಎಲ್ಲೋ ದೂರದಲ್ಲಿ ಕಾಂಪೌಂಡಿನಾಚೆ ಸೈಕಲಿನ ಮೇಲೆ ತೇಕುತ್ತಾ ಹೋಗುವ ನೀಲಿ ಅಂಗಿಯ ಪೋಸ್ಟ್ ಮ್ಯಾನ್...

ಯಾರಾದರೂ ನನಗೂ ಒಂದು ಕಾಗದ ಬರೀಬಾರದ ಅನಿಸುವಾಗಲೇ ಎಲ್ಲೋ ಯಾರೋ ಚಿವುಟಿದ ಹಾಗೆ ನೋವು. ಮತ್ತದೇ ಬೇಸರ. ಕಿಟಕಿಯಿಂದ ಗೆರೆಗೆರೆಯಾಗಿ ಮನೆಯೊಳಗೂ ಬಂದು ಬಿಟ್ಟ ಹತ್ತೂವರೆಯ ಬಿಸಿಲು ಇನ್ನು ಪರ್ಮನೆಂಟಾಗಿ ಹೀಗೆ ಇಲ್ಲೇ ಇದ್ದು ಬಿಡ್ತದೋ ಎನಿಸಿ ವಿಚಿತ್ರ ಅಸಹನೆ. ಯಾರ ಮೇಲೋ ಸಿಟ್ಟು. ಬೆಳಿಗ್ಗೆ ಒಂದು ನಿಮಿಷ ತಡವಾದ್ರೆ ಪ್ರಳಯವೇ ಆಗ್ತದೋ ಎನ್ನುವ ಹಾಗೆ ದಡಬಡಿಸಿ ತಿಂದು, ಬಟ್ಟೆ ಸಿಕ್ಕಿಸಿಕೊಂಡು ಆಫೀಸಿಗೆ, ಕಾಲೇಜಿಗೆ, ಶಾಲೆಗೆ ಓಡಿದವರ ಚಡ್ಡಿ, ಲುಂಗಿ, ಪ್ಲೇಟು, ಚಮಚ, ಟವಲ್ಲು ಎಲ್ಲ ಅಲ್ಲಲ್ಲೇ ಇದೆ ನೋಡಿ. ಈ ಸೂತಕದ ಗುರುತನ್ನೆಲ್ಲ ಅಳಿಸಿ ಹಾಕಿ ಪ್ರೆಷ್ ಆಗುವುದಕ್ಕೆ ಸಹ ಮನಸ್ಸಿಲ್ಲದೆ ಆಲಸ್ಯದಿಂದ ಕೂತ ಹೊತ್ತಿನಲ್ಲೇ ಎಲ್ಲೋ ಎಳೆ ಬಿಸಿಲಿನಲ್ಲಿ ಟ್ರಾಫಿಕ್ಕಿನ ಕೆಂಪುದೀಪವನ್ನೆ ಗುರುಗುಟ್ಟಿ ನೋಡುತ್ತ ನಿಂತ ಎಕ್ಸಿಲೇಟರು ಹಿಡಿದವರು, ಬ್ರೇಕು ಮೆಟ್ಟಿದವರು, ಬುತ್ತಿಚೀಲ ಎತ್ತಿ ಹಿಡಿದವರು. ಪೂರ್ತಿ ಅರವತ್ತು ನಿಮಿಷದೊಳಗಿಂದ ಬರೇ ಒಂದೂವರೆ ನಿಮಿಷ ಎತ್ತಿ ತೆಗೆದು ಅದರ ನೂರೆಂಭತ್ತು ಸೆಕೆಂಡಿನ ಒಂದೊಂದು ಕ್ಷಣವನ್ನೂ ಚಿಂಗಮ್ಮಿನ ಹಾಗೆ ಜಗ್ಗಿ ಜಗ್ಗಿ ಎಳೆಯುತ್ತದೆ ಮನಸ್ಸು. ಹೀಗೇ ಹುಟ್ಟಿದಾಗಿನಿಂದ ಟ್ರಾಫಿಕ್ಕಿನೆದುರು ಬಿಸಿಲಿನಲ್ಲಿ ಗರಬಡಿದು ನಿಂತವರ ಹಾಗೆ ಅನಾದಿಕಾಲದಿಂದ ಯಾರನ್ನೂ ಕಾಯದೆ ಯಾರನ್ನೋ ಕಾಯುತ್ತಿರುವವರ ಸ್ಟೈಲಿನಲ್ಲಿ ನಿಂತಿರುವಾಗಲೂ ಕೈಯಲ್ಲಿ ಹಿಡಿದ ಬ್ಯಾಗು, ಕುತ್ತಿಗೆಯ ಟೈ, ಕಿವಿಯ ಹಿಂದೆ ಒತ್ತುವ ಕನ್ನಡಕದ ಕೊಕ್ಕೆ, ಬೆನ್ನಹುರಿಯುದ್ದಕ್ಕೂ ನಿಧಾನಕ್ಕೆ ಜಾರುತ್ತಿರುವ ಬೆವರಿನ ಹನಿ, ಎಡಗಾಲಿಗೆ ಬಿಗಿಯೆನಿಸುತ್ತಿರುವ ಶೂಸು... ಎಲ್ಲ ಬರೇ ಒಂದು ಹಸಿರು ಲೈಟಿಗಾ ಕಾಯುತ್ತಿರುವುದು?

ಸ್ಕೂಟರು, ಬೈಕು, ಕಾರು ಎಲ್ಲದರೊಳಗೆ ಒಂದೊಂದು ಆದರ್ಶ ಜೋಡಿ, ಅವರ ಪುಟ್ಟ ಬೊಂಬೆಯಂಥ ಮಗು ಮತ್ತು ಕೆಲವು ಸಲ ನಾಯಿಮರಿ....ಮತ್ತೆ ಮೇಲೆ ಬಸ್ಸಿನೊಳಗೆ ವಸುದೈವ ಕುಟುಂಬಕಂ ಎನ್ನುವ ಹಾಗೆ ಮೈಗೆ ಮೈ ಅಂಟಿಸಿಕೊಂಡು ನಿಂತ ನೂರಾ ಎಂಟು ಕಣ್ಣುಗಳು ಎಲ್ಲೋ ಆ ನೂರಾ ಎಂಭತ್ತು ಸೆಕೆಂಡಿನ ನೂರನೇ ಒಂದು ತುಂಡು ಹೊತ್ತು ಇನ್ಯಾವುದೋ ಎರಡು ಕಣ್ಣಿನ ಕೂಡ ಕೂಡಿದ್ದೇ ಅರೆರೆ, ಯಾರನ್ನು ಹುಡುಕ್ತಿರೋದು ಇವರೆಲ್ಲ...ಅನಿಸುವಷ್ಟರಲ್ಲಿ ಹಸಿರು ಲೈಟು.

ಮೆಜಿಸ್ಟಿಕ್ಕಿನಲ್ಲಿ ಬಸ್ಸಿಳಿದು ನಡೆಯ ತೊಡಗಿದಾಗ ಹನಿಹನಿ ಮಳೆ. ಬೆಂಗಳೂರಿನ ಮಳೆ ನಮ್ಮ ಮಂಗಳೂರಿನ ಮಳೆಯ ಎದುರು ಏನೂ ಅಲ್ಲ ಅಂತ ಮನಸ್ಸಿಗೆ ಹೇಳಿಕೊಳ್ಳುತ್ತ ಹೆಜ್ಜೆ ಹಾಕಿದೆ. ಆಗಲೇ ಗಂಟೆ ಏಳು ದಾಟಿ ಹತ್ತು ನಿಮಿಷವಾಗಿತ್ತು. ಆಗಲೇ ಎಲ್ಲ ಕಡೆ ಕಪ್ಪು ಕತ್ತಲೆ. ಇಡೀ ನಗರ ನಿಗಿನಿಗಿ ಲೈಟಿನಲ್ಲಿ ಜಗಜಗ ಹೊಳೆಯುತ್ತಿರುವಾಗ ದಾರಿಯಲ್ಲಿ ಕತ್ತಲೆ. ಒಂದು ಮುಖದ ಗುರುತು ಹತ್ತಿದರೆ ಬೆಳಕಿನಾಣೆ. ಎಲ್ಲ ಕಡೆ ಮಬ್ಬು ಕತ್ತಲೆ. ದಾರಿ ಕೂಡಾ ಸರಿಯಾಗಿ ಕಾಣಿಸದ ಕಡೆಗೆ ಕತ್ತಲಲ್ಲೇ ಹೊರಟಿತ್ತು. ಒಂಭತ್ತೂ ನಲವತ್ತಕ್ಕೆ ಬಸ್ಸು ನನಗೆ. ಅಷ್ಟರ ಒಳಗೆ ರೂಮಿಗೆ ಹೋಗಿ ಬೆಳಿಗ್ಗೆ ಸ್ನಾನ ಮಾಡಿ ಒಣಗ ಹಾಕಿದ ಒದ್ದೆ ಬಟ್ಟೆಯನ್ನೆಲ್ಲಾ ಪ್ಯಾಕ್ ಮಾಡಿ, ಲೈಟಾಗಿ ಹೊಟ್ಟೆಗೆ ಏನಾದರೂ ಹಾಕಿಕೊಂಡು ವಾಪಾಸ್ಸು ಇಲ್ಲಿಗೇ ಬರಬೇಕು. ಒಮ್ಮೆ ಓಲ್ವದಲ್ಲಿ ಕೂತು ಓಲಾಡಿದೆನೆಂದರೆ ಮತ್ತೆ ಎಲ್ಲ ಆರಾಮ.

ಅದೇ ಅರೆಬರೆ ಕತ್ತಲಿನಲ್ಲಿ ಆನಂದರಾವ್ ಸರ್ಕಲ್ಲಿನ ಕಡೆಗೆ ಹೋಗುವ ದಾರಿಯಲ್ಲಿ ಹೆಜ್ಜೆ ಹಾಕುವಾಗ ಮನಸ್ಸಿನಲ್ಲಿದ್ದಿದ್ದು ಶೇಷಾದ್ರಿಪುರಂನ ಯಾವುದೋ ಸಂದಿಯೊಳಗಿದ್ದ ಫ್ಲ್ಯಾಟ್ ತರದ ಲಾಡ್ಜ್ ಅಲ್ಲವೇ ಅಲ್ಲ. ವಾರಿಜಾ ತುಂಬಿಕೊಂಡಿದ್ದಳು ಮನಸ್ಸಿನ ತುಂಬ. ಕೊನೆಗೂ ವಾರಿಜಾ ಸಿಕ್ಕಲೇ ಇಲ್ಲ. ವೆಸ್ಟ್ ಆಫ್ ಕಾರ್ಡ್‌ರೋಡಿನ ಯಾವುದೋ ಲೇಡೀಸ್ ಹಾಸ್ಟೇಲ್ ಎಂದರು. ಅಲ್ಲಿಗೆ ಹೋದೆ. ಅಲ್ಲಿ, ಈಗ ಅವರು ಇಲ್ಲಿ ಇಲ್ಲ, ಇದ್ದರೆ ಬಸವನಗುಡಿ ಹತ್ತಿರ ಯಾರದೋ ಮನೆಯಲ್ಲಿ ಅಂದರು. ಅವರು ದೊಡ್ಡ ಬಳ್ಳಾಪುರದ ವಿಳಾಸ ಕೊಟ್ಟರು. ಅಲ್ಲಿಗೆ ಹೋಗಿ ವಿಚಾರಿಸಿದರೆ ನೀವು ಬಹುಷಃ ಚಿಕ್ಕಬಳ್ಳಾಪುರಕ್ಕೆ ಹೊರಟಿದ್ದಿರೇನೋ, ಇದು ದೊಡ್ಡಬಳ್ಳಾಪುರ ಎಂದರು! ಕೊನೆಗೂ ಸರಿಯಾದ ವ್ಯಕ್ತಿ ಸಿಕ್ಕಿ, ಅವರ ಮನೆಗೆ ಹೋಗಿ ಕೂತು ಎಲ್ಲ ವಿವರಿಸಿದಾಗ ಮದುವೆ ಅಂದರೆ ಏನು, ಹೊಂದಾಣಿಕೆ ಅಂದರೆ ಏನು ಎಂದೆಲ್ಲ ಅರ್ಧ ಮುಕ್ಕಾಲುಗಂಟೆ ಉಪದೇಶ ಕೊಟ್ಟರು.

ಅವಳು ನನಗೆ ಮಗಳಿದ್ದ ಹಾಗೆ, ಎಲ್ಲೇ ಇದ್ದರೂ ಮನೆಗೆ ಬರುತ್ತಾಳೆ, ಚಿಂತಿಸಬೇಡಿ, ನೀವು ಅವಳನ್ನು ಸರಿಯಾಗಿ ನೋಡಿಕೊಳ್ಳಬೇಕು ಅಷ್ಟೆ ಎಂದು ನನ್ನನ್ನು ಕಳಿಸಿಕೊಟ್ಟರು. ಏನೋ ಅಪರಾಧ ಮಾಡಿದವನ ಹಾಗೆ ಬುದ್ಧಿ ಹೇಳಿಸಿಕೊಂಡು ವಾಪಾಸು ಬಂದಿದ್ದೆ. ವಾರಿಜಾ ನನ್ನ ಹೆಂಡತಿ. ಮದುವೆಯಾಗಿದ್ದು ಕಳೆದ ಫೆಬ್ರವರಿಯಲ್ಲಿ. ನಿಮಗೆಲ್ಲ ಹೇಳ್ಲಿಕ್ಕೆ ಆಗಲೇ ಇಲ್ಲ. ಅಂದ್ರೆ ಗಡಿಬಿಡಿಯಲ್ಲೇ ಆಗಿದ್ದು ಎಲ್ಲ. ಅವಳು ಸಿಎ ಸ್ಟೂಡೆಂಟು. ಹಾಗಾಗಿ ಮೇನಲ್ಲಿ ಎಗ್ಸಾಂ ಮುಗಿಯುವವರೆಗೆ ಮದುವೆ ಪೋಸ್ಟ್‌ಫೋನ್ ಮಾಡುವಾ ಅಂದಳು. ಸರಿ ಎಂದೆ. ಆದ್ರೆ ಮುಹೂರ್ತಗಳಿಗೆ ಏನು ಗೊತ್ತಿರ್ತದೆ ಈ ಪರೀಕ್ಷೆಗಳದ್ದು, ಅಲ್ವ? ಹಾಗಾಗಿ ಭಟ್ಟರು ಮದುವೆ ಅಂತ ಆಗುವುದೇ ಆದರೆ ಫೆಬ್ರವರಿಯಲ್ಲೇ ಆಗಿ. ಆಮೇಲೆ ಮೇನೋ ಮೇನಾಟೋ, ನಂಗೊತ್ತಿಲ್ಲ, ಅಂದ್ರು. ಹಾಗೆ ಹೆಚ್ಚಿಗೆ ಯಾರಿಗೂ ಹೇಳದೆ ಮದುವೆ ಅಂತ ಒಂದು ಆಯ್ತು. ಆದದ್ದೇ ಎಗ್ಸಾಂ ಮುಗಿಯುವವರೆಗೆ ನೀವು ನಂಗೆ ಉಪದ್ರ ಕೊಡಬಾರ್ದು, ನಾನು ತವರುಮನೆಯಲ್ಲೇ ಇರ್ತೇನೆ ಅಂತ ಖಡಾಖಂಡಿತವಾಗಿ ಹೇಳಿದ್ಲು. ಸರಿ ಮಾರಾಯ್ತೀ ಅಂದೆ. ಅವಳಿಗೆ ಒಂಥರ ಪರೀಕ್ಷೆಯಾದ್ರೆ ನಂಗೆ ಇನ್ನೊಂಥರ. ಕಡೆಗೆ ಒಂದು ವಾರ ಇಲ್ಲಿ ನಮ್ಮ ಮನೆಯಲ್ಲಿದ್ದವಳು ಒಂದಿನ ಮುಸ್ಸಂಜೆ ಹೊತ್ತಿನಲ್ಲಿ ಸೂಟ್‌ಕೇಸ್ ತಗೊಂಡು ಹೊರಟೇ ಬಿಟ್ಟಳು. ಸ್ವಲ್ಪ ತಡೀ ಮಾರಾಯ್ತೀ, ನಾನೂ ಜ್ಯೋತಿ ತನಕ ಬರ್ತೇನೆ, ನಿನ್ನ ಬಿಟ್ಟು ಬರಲಿಕ್ಕೆ ಅಂತ ಆಫೀಸಿನಿಂದಲೇ ಫೋನ್ ಮಾಡಿ ಹೇಳಿದ್ರೆ, ನೀವು ಬರುವಾಗ ರೈಲು ಸ್ಟೇಶನ್ ಬಿಟ್ಟಿರ್ತದೆ, ಅದೆಲ್ಲ ಏನೂ ಬ್ಯಾಡ, ನಾನೇನು ಊರು ನೋಡದವಳ ಅಂತ ಹೇಳಿ ಹೊರಟೇ ಹೋದಳು.

ಹೋದವಳು ಹೋದಳು, ಒಂದು ಎಸ್ಸೆಮ್ಮೆಸ್ಸಾ, ಫೋನಾ, ಪತ್ರವ, ಈಮೇಲಾ? ಊಹೂಂ ಎಂತದೂ ಇಲ್ಲ. ವಾರ ಕಳೆದ ಮೇಲೆ ಫೋನ್ ಮಾಡಿದ್ದು ಮಾವ. "ಅಲ್ಲಾ ನಮ್ ವಾರೀ ಪರೀಕ್ಸ ಕಟ್ಟುಕ್ಕೆ ಇಲ್ಲಿಗೇ ಬತ್ತೆ ಅಂತಿದ್ಲು, ಬಂದದ್ದೇ ಇಲ್ಲೆ, ಗಂಡನ್ಮನಿ ಸಮಾ ಹಿಡ್ಸಿತ್ತಾ ಕಾಂತ್ ಹೆಣ್ಣಿಗೆ, ಅಲ್ದಾ? ಹ್ಹಿಹ್ಹಿಹ್ಹಿ" ಅಂತೆಲ್ಲ ತಮಾಷೆ ಮಾಡಿದಾಗ ಮಾತ್ರ ಕಂಗಾಲಾದೆ. ಮಾವನ ಹತ್ತಿರ ಬ್ಬೆಬ್ಬೆಬ್ಬೆ ಮಾಡಿ ಫೋನು ಕೆಳಗಿಟ್ಟೆ. ಮೊದಲು ಅವಳ ಕೆಲವು ಪುಸ್ತಕ, ಬಟ್ಟೆಬರೆ ಎಲ್ಲ ಹುಡುಕಾಡಿದೆ. ಆಗ ಸಿಕ್ಕಿತು ಆ ಪತ್ರ. ಯಾರಿಗೆ ಏನು ಅಂತ ಸೈತ ಬರೆಯದೆ ಪತ್ರ ಸುರು ಮಾಡಿದ್ದಳು.

"ನಿಮ್ಮನ್ನ ಏನಂತ ಕರೀಬೇಕೊ ಗೊತ್ತಾಗ್ತಿಲ್ಲ. ಏನಿದ್ದರೂ ನನ್ನನ್ನು ಕ್ಷಮಿಸಿಬಿಡಿ. ನಾನು ಸಿಎ ಮಾಡ್ತಿರುವಾಗಲೇ ಒಬ್ಬರನ್ನ ಮನಸಾರೆ ಪ್ರೀತಿಸಿದ್ದೆ. ಆದರೆ ಅದನ್ನ ಅವರಿಗೆ ಹೇಳಲಿಕ್ಕಾಗದೆ ಒದ್ದಾಡುತ್ತಾ ಇದ್ದೆ. ನಿಮ್ಮ ಜೊತೆ ಮದುವೆ ಫಿಕ್ಸ್ ಆದ ಮೇಲೆ ಗೊತ್ತಾಯಿತು, ಅವರೂ ನನ್ನನ್ನು ಇಷ್ಟಪಟ್ಟಿದ್ದರಂತೆ. ಮನೆಗೆ ಬಂದ ಗೆಳತಿ ಹೇಳಿದ್ದು. ಇದು ತಿಳಿದ ಮೇಲಂತೂ ನನಗೆ ಹುಚ್ಚೇ ಹಿಡಿದ ಹಾಗೆ ಆಗಿತ್ತು. ಹೇಗಾದರೂ ಮಾಡಿ ನಿಮ್ಮ ಜೊತೆಗೆ ಮದುವೆ ಕ್ಯಾನ್ಸಲ್ ಮಾಡಿ ಅವರನ್ನೆ ಮದುವೆ ಆಗಬೇಕು ಅಂತ ತುಂಬ ತುಂಬಾ ಅನಿಸಿತು. ಅವರನ್ನು ಕಾಂಟಾಕ್ಟ್ ಮಾಡಲು ಪ್ರಯತ್ನಿಸಿದೆ. ನನ್ನ ಗ್ರಹಚಾರ, ಇಲ್ಲಿ ಮದುವೆ ಮುಂದೂಡಲು ಯಾರೂ ಒಪ್ಪಲಿಲ್ಲ. ಅವರೂ ಬೆಂಗಳೂರಿಗೆ ಹೋಗಿ ಅಲ್ಲಿಯೇ ಸೆಟ್ಲ್ ಆಗಿದ್ದ ವಿಷಯ ತಿಳಿಯಿತು. ಹೆಚ್ಚು ಸಮಯ ಇರಲಿಲ್ಲ. ಏನು ಮಾಡುವುದಂತಲೂ ಗೊತ್ತಾಗಲಿಲ್ಲ. ನಿಮಗೂ ನಾನು ಬೇರೆ ಬೇರೆಯವರ ಹೆಸರಿನಲ್ಲಿ ಎರಡು ಕಾಗದ ಹಾಕಿದ್ದೆ, ವಾರಿಜಾ ಎನ್ನುವ ಹುಡುಗಿ ಸರಿಯಿಲ್ಲ, ಅವಳನ್ನ ಮದುವೆಯಾಗಬೇಡಿ ಅಂತೆಲ್ಲ. ನೀವು ಅದನ್ನೆಲ್ಲ ಕ್ಯಾರೇ ಮಾಡಲಿಲ್ಲ. ನಾನು ಅಪ್ಪನಿಗೆ ತುಂಬ ಹೆದರುತ್ತಿದ್ದೆ. ಸಿಟ್ಟು ಬಂದರೆ ಅವರು ಭಯಂಕರ. ಜೀವ ತೆಗೆಯಲಿಕ್ಕೂ ಹಿಂದೆ ಮುಂದೆ ನೋಡುವ ಪೈಕಿಯಲ್ಲ. ಹಾಗಾಗಿ ಮಿಣ್ಣಗೆ ನಿಮ್ಮನ್ನೇ ಮದುವೆಯಾಗಬೇಕಾಯ್ತು. ಆದರೆ ನಿಮಗೂ ಗೊತ್ತು, ನಾನು ಯಾವತ್ತೂ ನಿಮ್ಮ ಹೆಂಡತಿಯಾಗಿರಲೇ ಇಲ್ಲ. ಮುಂದೆಯೂ ಹಾಗೆ ಇರುವುದಕ್ಕೆ ನನಗೆ ಸಾಧ್ಯ ಇಲ್ಲ. ದಯವಿಟ್ಟು ನನ್ನನ್ನು ಕ್ಷಮಿಸಿ.

-ವಾರಿಜಾ."

ಅಂದರೆ ಈ ಹುಡುಗಿ, ನನ್ನ ಹೆಂಡತಿ, ತನ್ನ ಪ್ರಿಯಕರನನ್ನು ಹುಡುಕಿಕೊಂಡು ಹೊರಟಿದ್ದೆ ಹಾಗಾದರೆ ಎನಿಸಿ ಪೆಚ್ಚಾದೆ. ಅಡ್ಡಿಯಿಲ್ಲ ಹುಡುಗಿ, ನಾನು ಎಣಿಸಿದ ಹಾಗಿಲ್ಲ ಎಂದು ಒಳಗೊಳಗೇ ಕುಗ್ಗಿದೆ. ಅವಳ ಜೊತೆ ಒಂದು ವಾರ ಸ್ನೇಹಿತನ ಹಾಗೆ ವಟವಟ ಮಾತನಾಡಿದ್ದೆಲ್ಲ ಒಂದೊಂದೇ ನೆನಪಾಗಿ ಹಂಗಿಸಿದ ಹಾಗಾಯ್ತು. ಎಂಥ ಮಂಗ ನಾನು, ಮನುಷ್ಯರನ್ನು ಎಷ್ಟು ಬೇಗ ನಂಬಿ ಬಿಡ್ತೇನಲ್ಲ, ಪದೇ ಪದೇ ಮೂರ್ಖ ಎಂದು ಸಾಬೀತಾದರೂ ನನಗೆ ಬುದ್ಧಿ ಬರಲಿಲ್ಲವಲ್ಲ ಎಂದೆಲ್ಲ ನನ್ನನ್ನೆ ನಾನು ಬಯ್ದುಕೊಂಡೆ.

ಇದಾಗಿ ಮೂರು ದಿನಕ್ಕೆ ನನ್ನ ಮೈದುನ, ವಾರಿಜಾಳ ಕೊನೆಯ ತಮ್ಮ ಶೇಖರ ನನ್ನನ್ನು ಹುಡುಕಿಕೊಂಡು ಆಫೀಸಿಗೇ ಬಂದ. ಮುಖ ಕಳೆಗುಂದಿತ್ತು, ಮಾತನಾಡಲು ಹೆದರಿದ ಹಾಗಿತ್ತು. ನಾನೇ ಒತ್ತಾಯ ಮಾಡಿದ ಮೇಲೆ ಬಾಯಿಬಿಟ್ಟ. ನಿನ್ನೆ ವಾರಿಜಾ ಬೆಂಗಳೂರಿನಿಂದ ಫೋನ್ ಮಾಡಿದ್ದಳಂತೆ. ಮಾತನಾಡಿದ್ದಕ್ಕಿಂತ ಅತ್ತಿದ್ದೇ ಹೆಚ್ಚಂತೆ. ಅಳುತ್ತ ಅಳುತ್ತ ಅವಳು ಏನು ಹೇಳಿದಳಂತ ಸೈತ ಗೊತ್ತಾಗಲಿಲ್ಲವಂತೆ. ಒಟ್ಟಾರೆ ಅವಳಿಗೆ ಏನೋ ಆಗಿದೆ, ತನ್ನ ಬದುಕೇ ಸರ್ವನಾಶವಾಯಿತೋ ಅಂದಿದ್ದು ಮಾತ್ರ ಇನ್ನೂ ಕಿವಿಯಲ್ಲಿ ನಿಂತ ಹಾಗಿದೆ ಭಾವಯ್ಯ ಎನ್ನುತ್ತ ಅತ್ತೇಬಿಟ್ಟ.

"ಒಂದು ಸಲ ಬೆಂಗಳೂರಿಗೆ ಹೋಗಿ ಅವಳಿಗೆ ಏನಾಗಿದೆ ಅಂತ ನೋಡಿ ಬನ್ನಿ ಭಾವಾ, ಅಪ್ಪನಿಗೆ ಹೇಳಿದರೆ ಅವಳ ಜೀವ ಇಡುವುದಿಲ್ಲ. ಹಾಗಂತ ಸುಮ್ಮನಿದ್ದರೆ ಅವಳೇ ಜೀವಕ್ಕೇನಾದ್ರೂ ಮಾಡಿಕೊಂಡ್ರೆ ಅಂತ ಯೋಚಿಸಿ ಯೋಚಿಸಿ ನಿನ್ನೆ ರಾತ್ರಿಯಿಡೀ ನಿದ್ದೆಯೇ ಬರಲಿಲ್ಲ ನಂಗೆ. ನಿಮಗೆ ದಮ್ಮಯ್ಯ, ಒಂದ್ಸಲ ಹೋಗಿ ಬನ್ನಿ" ಎಂದ.

ಹಾಗೆ ಬಂದೆ. ಹುಡುಕಿದೆ. ಆದರೆ ವಾರಿಜಾ ಸಿಗಲಿಲ್ಲ.

ಶೇಷಾದ್ರಿಪುರಂನಲ್ಲಿ ಆ ಲಾಡ್ಜ್ ಇತ್ತು ಅನ್ನುವುದನ್ನು ಬಿಟ್ಟರೆ ಎಲ್ಲಿ ಹೋಗಬೇಕು, ಹೇಗೆ ಹೋಗಬೇಕು ಅಂತ ಗೊತ್ತಿರಲಿಲ್ಲ. ಹಗಲಿನಲ್ಲಿ ಸುಲಭದ ದಾರಿಯಾಗಿ, ಇಲ್ಲೇ ಹತ್ತಿರ ಮೆಜೆಸ್ಟಿಕ್ ಅಂತೆಲ್ಲ ಆಗಿ ಕಂಡಿದ್ದು ರಾತ್ರಿಯಾಗಿ ಇಡೀ ನಗರ ಬೆಳಕಿನಲ್ಲಿ ಅದ್ದಿತೆಗೆದ ಹಾಗೆ ಕಣ್ಣುಕುಕ್ಕತೊಡಗಿದ್ದೆ ಜನ, ದಾರಿ, ಗುರುತು ಯಾವುದೂ ಗೊತ್ತಾಗದೆ ನಡುದಾರಿಯಲ್ಲಿ ಕಂಗಾಲಾದೆ. ಎರಡು ಮೂರು ಬಾರಿ ಬೇರೆ ಬೇರೆ ದಾರಿಯಲ್ಲಿ ಕೊನೆತನಕ ಹೋಗಿ ಮತ್ತೆ ಯಾವುದೋ ತಿರುವಿನಲ್ಲಿ ಊಹೂಂ ಇದಿರಲಿಕ್ಕಿಲ್ಲ ಅನಿಸಿ ಪುನಾ ಹಿಂದಕ್ಕೆ ಬಂದು ಮತ್ತೆ ಬೇರೆ ದಾರಿ ಹಿಡಿದು ಅದರಲ್ಲಿ ಮತ್ತೆ ಕವಲು ಎದುರಾಗುವವರೆಗೂ ನಡೆದು ಅದೂ ಅಲ್ಲ ಅನಿಸಿ ಮತ್ತೆ ಪುನಾ ಹಿಂದಕ್ಕೆ ಬಂದು ಇನ್ನೊಂದೇ ದಾರಿ ಹಿಡಿದು ಅದರಲ್ಲೂ ಕವಲು ಸಿಕ್ಕಿದ್ದೇ ಸಿಕ್ಕಿ ಬಿದ್ದ ಹಾಗೆ ನಿಂತು....

ಥತ್, ಎಂಥ ಬದುಕಿದು, ನಾಯಿ ಪಾಡು. ಕೈ ತೋರಿಸಿದರೆ ಒಂದು ರಿಕ್ಷಾ ನಿಲ್ಲುವುದಿಲ್ಲ. ದಾರಿಯಲ್ಲಿ ಸಿಕ್ಕಿದ ಒಬ್ಬನನ್ನು ಕೇಳಿದರೆ ಇದೇ ಶೇಷಾದ್ರಿಪುರಂ, ನಿಮಗೆ ಎಷ್ಟನೇ ಕ್ರಾಸು ಬೇಕು ಎಂದ, ಕ್ರಯಕ್ಕೆ ಕೊಡುವವನ ಹಾಗೆ. ನನಗೆ ಎಷ್ಟನೇ ಕ್ರಾಸು ಬೇಕು ಎನ್ನುವುದೇ ಮರೆತು ಹೋಗಿತ್ತು. ಅಥವಾ, ನನಗೆ ಅದು ಗೊತ್ತೇ ಇರಲಿಲ್ಲ. ಲಾಡ್ಜಿನ ಎಡ್ರೆಸ್ಸು ಇದ್ದ ಒಂದೇ ಒಂದು ಕಾರ್ಡನ್ನು ದೊಡ್ಡಬಳ್ಳಾಪುರದ ಮನೆಯವರಿಗೆ ಕೊಟ್ಟು ವಾರಿಜಾ ಇವತ್ತೇ ಬಂದರೆ ರಾತ್ರಿ ಒಂಭತ್ತರ ತನಕ ಅಲ್ಲೇ ಇರುವುದಾಗಿ ಹೇಳಿ ಬಂದಿದ್ದೆ. ಈಗ ನನ್ನ ಹತ್ತಿರ ಎಡ್ರೆಸ್ಸು, ಫೋನ್ ನಂಬರು ಏನೂ ಇರಲಿಲ್ಲ. ಕಾಲು ಸೋತಂತೆನಿಸಿ ಸುಸ್ತಾಗಿ ನಿಂತೆ.

ಬಾಯಿ ಒಣಗಿ ಬೆನ್ನೆಲ್ಲ ಬೆವರಿನಿಂದ ತೊಯ್ದು ಶರಟು, ಪ್ಯಾಂಟು ಎಲ್ಲ ಮೈಗೆ ಅಂಟಿತ್ತು. ಶೂಸು ಬೇರೆ ಬಿಗಿಯಾಗಿ, ಅದರಲ್ಲೇ ನಡೆದು ನಡೆದು ಕಾಲು ಊದಿದಂತಾಗಿ ವಿಪರೀತ ನೋಯುತ್ತಿತ್ತು. ತುಂಬ ಹೊತ್ತಿನಿಂದ ಉಚ್ಚೆ ಕೂಡ ಹೊಯ್ಯದೆ ಹೊಟ್ಟೆ ಉಬ್ಬರಿಸಿದಂತಾಗಿತ್ತು. ಇನ್ನು ನನಗೆ ನಡೆಯಲಿಕ್ಕೇ ಸಾಧ್ಯವಿಲ್ಲ ಅನಿಸಿತು. ಆದರೆ ಒಂಭತ್ತರ ಒಳಗೆ ರೂಮಿನಿಂದ ಹೊರಬೀಳದಿದ್ದರೆ ವಾಪಾಸು ಹೋಗುವುದಾದರೂ ಹೇಗೆ? ಅಷ್ಟರಲ್ಲಿ ಇನ್ನೊಬ್ಬ ಎದುರಾದ. ಕೇಳಿದರೆ ಆಸುಪಾಸಿನಲ್ಲಿ ಶೇಷಾದ್ರಿಪುರಂ ಅನ್ನುವ ಸ್ಥಳವೇ ಇಲ್ಲ ಎಂದ! ಕೊನೆಗೆ ಏನಾದರಾಗಲಿ ಅಂತ ಮತ್ತೆ ಮೆಜೆಸ್ಟಿಕ್ಕಿಗೇ ಕಾಲೆಳೆದುಕೊಂಡು ಬಂದು, ರಿಕ್ಷಾ ಹಿಡಿದು ಲಾಡ್ಜ್‌ನ ಹೆಸರು, ಜಾಗ ಹೇಳಿ ಕೂತೆ. ವನ್ ಎಂಡ್ ಹಾಫ್ ಕೊಡ್ಬೇಕು ಸಾರ್ ಎಂದ. ಆಯ್ತು ಮಾರಾಯ, ನಾನೇ ಒನ್ ಎಂಡ್ ಹಾಫ್ ಆಗಿರಬೇಕಾದ್ರೆ ನಿನ್ನದೇನು ಮಹಾ ಎನ್ನುತ್ತ ಒರಗಿದೆ.

ಲಾಡ್ಜ್ ಹೊಕ್ಕಾಗ ರಿಸೆಪ್ಷನ್ನಿನಲ್ಲೇ ಸೋಫಾದ ಮೇಲೆ ವಾರಿಜಾ ಕಾಯುತ್ತ ಕುಳಿತಿದ್ದಳು! ಒಂದು ವಾರದಲ್ಲಿ ಪೂರ್ತಿ ಸೊರಗಿದ್ದಳು. ಕಣ್ಣುಗಳು ಅತ್ತು ಅತ್ತು ಗುಳಿಸೇರಿದ್ದವು. ಅವಳನ್ನು ಹಾಗೆ ಅಲ್ಲಿ ಆ ಅವಸ್ಥೆಯಲ್ಲಿ ನೋಡಿದ್ದೇ ಮನಸ್ಸು ಒಮ್ಮೆಗೇ ಮೃದುವಾಗಿ ಬಿಟ್ಟಿತು.

"ಏನಿದು ನಿನ್ನ ಅವಸ್ಥೆ, ಏನಾಗಿದೆ ನಿಂಗೆ" ಎಂದೆ.

ಅವಳ ಕಣ್ಣುಗಳು ಮತ್ತೆ ತುಂಬಿಕೊಂಡವು. ಮೊದಲು ಅವಳನ್ನು ಕರೆದುಕೊಂಡು ಹತ್ತಿರದ ರೆಸ್ಟೊರೆಂಟಿಗೆ ಹೋದೆ.

"ಬರುತ್ತೀಯಲ್ಲ, ಊರಿಗೆ ನನ್ನ ಜೊತೆ?"

"ಬರಬೇಕ?"

"ಮತ್ತೆ ಇಲ್ಲಿದ್ದು ಏನು ಮಾಡ್ತೀಯ?"

ಉತ್ತರವಿಲ್ಲ.

ಮೌನವಾಗಿಯೇ ಊಟ ಮುಗಿಸಿ ಹೊರಬಂದೆವು. ಗಂಟೆ ಒಂಭತ್ತೂ ಕಾಲಾಗಿತ್ತು.

 "ಲಗ್ಗೇಜ್ ಎಲ್ಲ ಅಲ್ಲೇ ಉಂಟು, ತಂದಿಲ್ಲ" ಎಂದಳು.

"ಅದಕ್ಕೇನು, ನಾಳೆ ಹೋದರಾಯ್ತು, ಮುಖ್ಯ, ನಿನ್ನ ನಿರ್ಧಾರ ಏನು ಅನ್ನುವುದೇ ಪ್ರಶ್ನೆ" ಎಂದೆ.

"ನನ್ನದೇನೂ ಉಳಿದಿಲ್ಲ ಈಗ. ಅವನಿಗೆ ಆಗಲೇ ಮದುವೆಯಾಗಿತ್ತು. ಇಲ್ಲಿಗೆ ಬಂದು ಹುಡುಕುವಾಗಲೇ ಗೊತ್ತಾಯ್ತು. ಹುಡುಕುವುದು ಬಿಟ್ಟೆ. ಭೇಟಿ ಆಗಲಿಲ್ಲ. ವಾಪಾಸ್ಸು ಮನೆಗೆ ಬರಲು ಹೆದರಿಕೆ ಆಯ್ತು. ಮುಖ ತೋರಿಸಲಿಕ್ಕೂ ಬೇಡ ನಂಗೆ. ಅಪ್ಪನಿಗೆ ಗೊತ್ತಾಯ್ತ?"

ಕಣ್ಣು, ಮೂಗು ಒರೆಸಿಕೊಳ್ಳುತ್ತಲೇ ಎಲ್ಲ ಹೇಳಿದಳು.

"ಇಲ್ಲ. ಶೇಖರ ಬಂದಿದ್ದ. ಹಾಗೇ ಹೊರಟು ಬಂದುಬಿಟ್ಟೆ. ಅವನಿಗೂ ಹೆಚ್ಚಿಗೆ ಗೊತ್ತಿದ್ದ ಹಾಗಿಲ್ಲ" ಎಂದೆ.

ತುಂಬ ಹೊತ್ತು ಮಾತನಾಡಲಿಲ್ಲ. ಕೊನೆಗೆ "ನಿಜ ಹೇಳಿ, ನಿಮಗೆ ನನ್ನ ಬಗ್ಗೆ ಅಸಹ್ಯ ಇಲ್ಲವ?" ಎಂದು ಬಿಕ್ಕತೊಡಗಿದಳು.

"ಅಸಹ್ಯ ಯಾಕೆ ಮಾರಾಯ್ತೀ, ನಿನಗೆ ಬುದ್ಧಿ ಸ್ವಲ್ಪ ಕಡಿಮೆ ಅನ್ನಿಸ್ತು. ಅನುಭವ ಇಲ್ಲ, ಬದುಕು ನೋಡಿಲ್ಲ ನೀನು. ನಿನ್ನ ಬಗ್ಗೆ ಅಯ್ಯೊ ಪಾಪವೆ ಅನಿಸ್ತದೆ ಅಷ್ಟೆ. ಸದ್ಯ ಅನಾಹುತ ಏನೂ ಮಾಡಿಕೊಳ್ಳಲಿಲ್ಲವಲ್ಲ. ಅದೇ ದೊಡ್ಡದು. ಇಲ್ಲದಿದ್ದರೆ ಯಾರ್‍ಯಾರಿಗೆಲ್ಲ ನಾನು ಉತ್ತರ ಕೊಡಬೇಕಾಗ್ತಿತ್ತೋ ಏನೋ. ಏನೇ ಇರಲಿ, ಎಲ್ಲ ಹೀಗೇ ಮುಗೀತಲ್ಲ. ಇನ್ನು ಅದನ್ನ ಮರೆತು ಬಿಡು. ನನ್ನ ಹೆಂಡ್ತಿಯಾಗಿಯೇ ಇರುವುದಕ್ಕೆ ಪ್ರಯತ್ನ ಮಾಡು" ಎಂದು ಅವಳನ್ನು ನೋಡಿ ನಗಾಡಿದೆ.

ಅವಳು ಮೌನವಾಗಿಯೇ ನನ್ನನ್ನು ನೋಡಿದಳು. ಆ ಕಣ್ಣುಗಳನ್ನು ನೋಡ್ತಿದ್ದ ಹಾಗೆ ನನಗೆ ಹೌದು, ಇವಳನ್ನೆ, ಇವಳನ್ನೇ ನಾನು ಹುಡುಕ್ತಾ ಇದ್ದಿದ್ದು ಅಂತ ಖಾತ್ರಿಯಾಗಿ ಅನಿಸಿತು ನೋಡಿ.

ಸ್ವಲ್ಪ ಹೊತ್ತಿನ ನಂತರ ಅವಳಷ್ಟಕ್ಕೆ ಅವಳು, "ಇಂಥಾ ನಿಮ್ಮನ್ನು ಬಿಟ್ಟು ಇನ್ನೇನೋ ಹುಡುಕಿಕೊಂಡು ಇಲ್ಲಿಗೆ ಬಂದಿದ್ನಲ್ಲ, ನನಗೆ ಏನು ಹೇಳಬೇಕು!" ಎಂದಳು.

ಈಗ ಯಾರೂ ಏನೂ ಹೇಳುವುದು ಬೇಡ. ನಿಜ ಹೇಳ್ತೇನೆ ಕೇಳಿ, ನಮಗೆ ಇಬ್ಬರಿಗೂ ನಾವು ಹುಡುಕ್ತಾ ಇದ್ದಿದ್ದು ಸಿಗುತ್ತೋ ಇಲ್ಲವೋ ಗೊತ್ತಿಲ್ಲ. ಆದ್ರೆ ನಾವು ಹುಡುಕ್ತಾ ಇರುವುದು ಏನು ಅಂತಾದ್ರೂ ಇಬ್ರಿಗೂ ಗೊತ್ತಾಗಿದೆ, ಈಗ. ಅಷ್ಟು ಸಾಕು, ಅಲ್ವ?