ನಿರವಯವ (ಕತೆಗಳು)

ನಿರವಯವ (ಕತೆಗಳು)

ಪುಸ್ತಕದ ಲೇಖಕ/ಕವಿಯ ಹೆಸರು
ನಾಗರಾಜ ವಸ್ತಾರೆ
ಪ್ರಕಾಶಕರು
ಛಂದ ಪುಸ್ತಕ, ಬೆಂಗಳೂರು
ಪುಸ್ತಕದ ಬೆಲೆ
ರೂ.125/-

ಬೆಂಗಳೂರಿನಲ್ಲಿ ಆರ್ಕಿಟೆಕ್ಟ್ ಆಗಿರುವ ನಾಗರಾಜ ವಸ್ತಾರೆ ಅವರದು ಕಳೆದೆರಡು ದಶಕಗಳಲ್ಲಿ ಹೊಸಗನ್ನಡದ ಕತೆಗಾರರಲ್ಲಿ ಗಮನಾರ್ಹ ಹೆಸರು. ಕತೆ, ಕವನ ಮತ್ತು ಅಂಕಣ ಬರಹ ಅವರ ಆಸಕ್ತಿ. “ಹಳೆಮನೆ ಕತೆ", “ಬಯಲು ಆಲಯ” ಮತ್ತು “ಪಟ್ಟಣ ಪುರಾಣ” ಅವರ ಅಂಕಣ ಬರಹಗಳು. ನಗರ ಬದುಕಿನ ಒಳತೋಟಿಗಳು, ಸಂಕೀರ್ಣ ಸಂಬಂಧಗಳು ಹಾಗೂ ಮೇಲ್ನೋಟಕ್ಕೆ ಕಾಣಿಸದ ಸೂಕ್ಷ್ಮ ಸಂಗತಿಗಳನ್ನು ಕತೆಗಳನ್ನಾಗಿ ಹೆಣೆಯುವುದರಲ್ಲಿ ಅವರು ಸಿದ್ಧಹಸ್ತರು.  

ಇಲ್ಲಿನ 18 ಕತೆಗಳ ಬಗ್ಗೆ ಮುನ್ನುಡಿಯಲ್ಲಿ ಕತೆಗಾರ ನಾಗರಾಜ ವಸ್ತಾರೆ ಬರೆದದ್ದು: “..... ಇಲ್ಲಿನಷ್ಟೂ ಕತೆಗಳಷ್ಟೂ ಒಂದಲ್ಲೊಂದು ರೀತಿಯಲ್ಲಿ ಊಹೆಯಲ್ಲದ ವಾಸ್ತವವೆನ್ನುವುದನ್ನು ಮುಲಾಜಿಲ್ಲದೆ ಒಪ್ಪಿಕೊಳ್ಳುತ್ತೇನೆ. ಇಲ್ಲಿನಷ್ಟೂ ಪಾತ್ರಗಳು ನನ್ನ ಮಗ್ಗುಲಿಗೇ, ಆಸುಪಾಸಿನಲ್ಲೇ ಜರುಗಿದಂಥವು…… ಇವೊತ್ತೂ ಜರುಗುತ್ತಿರುವಂಥವು. ಅವು ಘಟಿಸಿರುವುದು ಸತ್ಯ. ಆದರೆ ಘಟನೆಗಳು ಕತೆಯಾಗುವುದು ಮಾತ್ರ ನನ್ನೊಳಗಿನ ಸ್ವಕೀಯ. ಹೀಗಾಗಿ ಇವಷ್ಟು ನಿಜವೂ ಹೌದು. ಅಷ್ಟೇ ಕಲ್ಪನೆಯೂ ಸಹ. ….. ನಾನು ಇರುವುದು, ಇರುತ್ತಿರುವುದು ಬೆಂಗಳೂರೆಂಬ ಉದ್ದಾಮ ಊರಿನಲ್ಲಿ. ಇಲ್ಲಿ ಬಂದು ನೆಲೆಯೂರಿ 28 ವರ್ಷಗಳೇ ಸಂದಿವೆ. ಈ ಊರು ನನಗೆ ಸಲ್ಲುವಷ್ಟು ನಾನದಕ್ಕೆ ಸಲ್ಲೆನೆನ್ನುವುದು ಯಾರೂ ಒಪ್ಪದೆಯೂ ನನ್ನೊಟ್ಟಿಗಿರುವ ಸತ್ಯ ಮತ್ತು ಸದ್ಯ. ಈ ಸಂಕಲನದಲ್ಲಿನ ಕತೆಗಳು, ಅವುಗಳೊಳಗಿನ ಪಾತ್ರಗಳು, ಚಿತ್ರಿಕೆಗಳು ಈ ಊರಿಗಷ್ಟೇ ಸಲ್ಲುವಂಥವು. ಇಲ್ಲಿನ ಪರಿಧಿಯಾಚೆ, ಪರಿಸರದಾಚೆ ಅವು ಪಸರುವುದಿಲ್ಲ. ಪಸರಿದರೂ ಅವು ಅಲ್ಲಿಗೊಗ್ಗುವುದಿಲ್ಲ. ಈ ಊರಿನಾಚೆಯಲ್ಲೂ ಈ ಕತೆಗಳಿಗೆ ಅಸ್ತಿತ್ವವಿಲ್ಲ. ಹಾಗಾಗಿಯೇ - ಇವನ್ನು ಓದಲಿಕ್ಕೆ, ಅರಿಯಲಿಕ್ಕೆ ಇನ್ನೊಂದೇ ಮನಃಸ್ಥಿತಿ ಬೇಕೇನೋ…."

“ಎಕ್ಸ್ - ಫಾಕ್ಟರ್" ಎಂಬ ಕತೆಯ ಕಥಾನಾಯಕ ಸೈರಸ್ ಎಂಬ ಸೊಗಸುಗಾರ. ಚಂದದ ಮೈಕಟ್ಟಿನ, ಸುಂದರ ಮುಖದ ಅವನ ಕಣ್ಣಿನ ಆಲಿಗಳಿಗೆ ವಿಶಿಷ್ಟ ಬಣ್ಣ - ಹಸಿರಿಗೂ ನೀಲಿಗೂ ನಡುವಿನ ನವಿಲುಗರಿಯ ಮಿರುಗು. ಥೇಟು ಗಾಜಿನ ಗೋಲಿಗಳ ಹಾಗೆ. ಇದರಿಂದಾಗಿ ಅವನನ್ನು ಕಾಣು ಎಲ್ಲ ಹೆಣ್ಣುಗಳಿಗೂ ಅವನ ಬಗ್ಗೆ ವಿಚಿತ್ರ ಆಕರ್ಷಣೆ. ಅವನಿಗೊಬ್ಬಳು ಪ್ರೇಯಸಿ. ಅದೊಂದು ದಿನ ಸೈರಸ್ ಹೇಳುತ್ತಾನೆ: “ಯಾರೊಬ್ಬಳಿಗೋಸ್ಕರ ನಮ್ಮ ಹೃದಯದ ಬಡಿತ ಹೆಚ್ಚುತ್ತಲ್ಲ. ಅವಳಿಗೋಸ್ಕರ ಅಂತ ನಾವು ಏನನ್ನಾದರೂ ಗುಟ್ಟಾಗಿ ಮಾಡುತ್ತೀವಲ್ಲ …. ಅದು ಪ್ರೀತಿ ಅಲ್ಲ ಅಂತ ಹತ್ತಿಕ್ಕಲಿಕ್ಕೇ ಆಗೋದಿಲ್ಲವಲ್ಲ - ಆ ನಮ್ಮ ಅಂಶಕ್ಕೆ ಎಕ್ಸ್-ಫಾಕ್ಟರ್ ಅಂತೀನಿ. ನನ್ನಲ್ಲೂ ಈ ಎಕ್ಸ್-ಫಾಕ್ಟರನ್ನು ಉದ್ದೀಪಿಸಿರುವ ಹೆಣ್ಣೊಬ್ಬಳಿದ್ದಾಳೆ. ....ಅವಳು ನನ್ನಿಂದ ದಿನಾ
ಒಂದು (ರೋಚಕ) ಕತೆ ಕೇಳುವ ಕರಾರು ಹಾಕಿದ್ದಾಳೆ...." ಸೈರಸ್ ಎಷ್ಟು ಕಾಲ ಹಾಗೆ ಕತೆ ಹೇಳಿಯಾನು?

ಎರಡನೆಯ ಕತೆ ಶೀರ್ಷಿಕಾ ಕತೆ, “ನಿರವಯವ". ಇದರ ಕಥಾನಾಯಕನ ಹೆಸರು ಜಮ್‌ಷೆಡ್ ಬರೂಚ. ತನ್ನ ವಿಸಿಟಿಂಗ್ ಕಾರ್ಡಿನಲ್ಲಿ ತನ್ನ ಹೆಸರನ್ನು ಸುಲಭದಲ್ಲಿ ಓದಲಾಗದಂತೆ ಮೋಡಿಯಾಗಿ ಮುದ್ರಿಸಿದ್ದಾನೆ. ಅದನ್ನು ಕೊಡುತ್ತಾ, “ಯೂ ಮೇ ಪ್ಲೀಸ್ ಕಾಲ್ ಮೀ ಜೋಷ್” ಎಂದು ಆಗ್ರಹಿಸುತ್ತಾನೆ! “ಈ ಪ್ರಪಂಚ, ಇಲ್ಲಿರೋ ಎಲ್ಲರೂ ವಿಚಿತ್ರ ಅನಿಸುತ್ತೆ. …ಯಾಕೆಂದರೆ ನಿಮೆಗೆಲ್ಲ ನೀವು ಮಾಡಿದ್ದೆಲ್ಲ ನೀವೇ ಮಾಡಿದ್ದು ಅನ್ನುವ ಧಿಮಾಕಿದೆ. ನಿಮ್ಮಲ್ಲಿ ಯಾರೊಬ್ಬರಿಗೂ ನೀವು ಹೀಗೆ ಮಾಡಲಿಕ್ಕೆ ಒಂದು ನಿಯತಿ ಇದೆ ಅಂತ ಗೊತ್ತಿಲ್ಲ” ಎಂಬುದವನ ಸ್ವಗತ.

ಮೂರನೆಯ ಕತೆ "ದ್ವಂದ್ವಾರ್ಥ". ತನ್ನ ಕಚೇರಿಯಲ್ಲಿ ಒಂದು ಮುಖ್ಯ ಪ್ರಸೆಂಟೇಷನಿಗೆ ತಯಾರಾಗುತ್ತಿರುವ ಕಥಾನಾಯಕನಿಗೆ, ಆಗ ಎದುರಾಗುವ ಆತಂಕಗಳೇ ಇದರ ಹೂರಣ. ತಲೆಚಿಟ್ಟು ಹಿಡಿಸುವ ಕ್ಲೈಯಿಂಟಿನ್ ಭೇಟಿಯಿಂದ ತೊಡಗಿ, ಡೈವೋರ್ಸಿಗೆ ಅರ್ಜಿ ಹಾಕಿರುವ ತನ್ನ ಹೆಂಡತಿಯ ಫೋನ್ ಕಾಲ್ ವರೆಗೆ! ಇವೆಲ್ಲವನ್ನೂ ಅವನು ಹೇಗೆ ನಿಭಾಯಿಸಿದ?

“ಪುಳಕ" ಎಂಬ ಕತೆ ಹದಿಹರೆಯದ ಈಶಾನನ ಹೇಳಲಾಗದ ಸಂಕಟದ್ದು. ಇದರಿಂದಾಗಿ ಅವನ ವರ್ತನೆ ಅವನ ತಂದೆ-ತಾಯಿ ಇಬ್ಬರಲ್ಲೂ ಹತ್ತುಹಲವು ಅನುಮಾನಗಳನ್ನು ಹುಟ್ಟು ಹಾಕುತ್ತದೆ. ಕೊನೆಗೂ ಅವನು ತಂದೆ-ತಾಯಿ ಇಬ್ಬರ ಮುಂದೆ ಕಣ್ಣೀರು ಹಾಕುತ್ತಾ “...ನನಗೆ ಏನು ಮಾಡಬೇಕೂಂತಾನೇ ಗೊತ್ತಾಗುತ್ತಿಲ್ಲ…" ಎಂದು ತನ್ನ ಒಳಗುದಿಯನ್ನು ಬಿಚ್ಚಿಡುತ್ತಾನೆ.

“ಕಾಸ್ಮೊಪೋಲಿಟನ ಮೀಮಾಂಸೆ", "ಹೊಣೆ", “ಡಬಲ್ಡೋರ್ ಕೆಲ್ವಿನೇಟರ್”, "ಮೂಗ ಕೇಡಿಗೆ ಈಡುಗಾಯಿ", ಲಿವಿಂಗ್ ಟುಗೆದರ್ ಬಗೆಗಿನ "ಕಾಡು, ಮೋಡ ಮತ್ತು ಪೇಗನ್ ಪಡೆ”, “ಓಹೋ ಪುರುಷಾಕಾರಂ” - ಇವು ಈ ಸಂಕಲನದ ಇನ್ನೂ ಕೆಲವು ಮರೆಯಲಾಗದ ಕತೆಗಳು.