ನಿರಾಳ
‘ಚಿನ್ನು’
‘ಹ್ಞೂಂ’
‘ಹತ್ರ ಬಾ’
‘ಹೋಗೋ, ನನಗೆ ನಾಚ್ಕೆ ಆಗುತ್ತೆ’
‘ಬೆಳಕಿಲ್ಲ, ಕತ್ತಲಲ್ಲೂ ಎಂಥ ನಾಚಿಕೆ?, ಬಾ ಹತ್ರ’
‘ಊಹೂಂ’
‘ನಾನೇ ಬಂದೆ’
‘ಹೇಯ್...’
‘ಏನು?’ಚಿ
‘ಮುಟ್ಬೇಡ’
‘ಒಂದು ಮುತ್ತು ಕೊಡೆ’
‘ಕೊಡಲ್ಲಪ್ಪ’
‘ಯಾಕೆ?’
‘ಮುತ್ತು ನೀರು ಜಿನುಗೋ ಜಾಗ ಇದ್ದಂತೆ, ಅಲ್ಲಿಂದ ಪ್ರಾರಂಭ ಆದ್ರೆ ಸಿಕ್ಕಿದ ಕಡೆಗೆಲ್ಲಾ ಹಬ್ಕೊಂಡು ಹೋಗ್ತಾ ಇರುತ್ತೆ’
‘ಇಲ್ಲ ಸುಮ್ನೆ ತುಟಿಗೆ ತುಟಿ ಒತ್ತಿಬಿಟ್ಟು ಮುಖ ಹಿಂದಕ್ಕೆ ತೆಗೆದುಕೊಳ್ಳುತ್ತೇನೆ’
‘ಊಹೂಂ’
‘ನಾವಿಬ್ರೂ ಪ್ರೇಮಿಗಳು ಅಲ್ವಾ? ಮುಂದೆ ಮದ್ವೆ ಆಗ್ತೀವಲ್ವ? ಮತ್ತೇಕೆ ಈ ನಾಚ್ಕೆ, ಮಕರಂದ ಹೀರುವ ದುಂಬಿಗೆ ಹೊತ್ತು ಗೊತ್ತೇನು?’
‘ಮ್... ಓಕೆ... ಆದ್ರೆ’
‘ಆದ್ರೆ?’
‘ಆದ್ರೆ ಒಂದೇ ಒಂದು ಮತ್ತು’
‘ಆಗಲಿ’
‘ಹೇಯ್, ಇದೇನಿದು? ನಿನ್ನ ತುಟಿ ನನ್ನ ತುಟಿಗೆ ಸೋಕ್ತಾನೇ ಇಲ್ಲ’
‘ಹೌದಾ?’
‘ಹೌದು, ಗಟ್ಟಿಯಾಗಿ ತಬ್ಬಿಕೊಳ್ಳೋಣ ಅಂದ್ರೆ ನೀನು ಸಿಕ್ತಾನೇ ಇಲ್ಲ, ಕಳ್ಳಿ ನಾಟಕ ಮಾಡ್ತೀಯಾ?’
‘ಇಲ್ಲ ಕಣೋ’
‘ಸುಳ್ಳು'
‘ಇಲ್ಲೇ ಇದ್ದೀನಿ’
‘ಹೇಯ್, ನೀನು ಸಿಕ್ತಾನೇ ಇಲ್ಲ, ಮುತ್ತು ಕೊಡೋಕೆ ಕತ್ತಲೆ ಸರಿ ಅಂದುಕೊಂಡ್ರೆ ನೀನು ಕಣ್ಣಾ ಮುಚ್ಚಾಲೆ ಆಟ ಆಡ್ತಾ ಇದ್ದೀಯಾ ಕಳ್ಳಿ’
‘ಹೇಯ್, ಪುಟ್ಟು ದೀಪ ಹೊತ್ತಿಸು, ನನಗೆ ಭಯ ಆಗ್ತಾ ಇದೆ’
‘ಯಾಕೆ?’
‘ಆ...’
‘ಏನಾಯ್ತು ಚಿನ್ನು?’
‘ಯಾರೋ ಬೆನ್ನಿಗೆ ಚುಚ್ಚಿಬಿಟ್ರು’
‘ಹೇಯ್... ಯಾರು ಯಾರದು?, ಆ...’
‘ಏನಾಯ್ತು ಪುಟ್ಟ’
‘ಯಾರೋ ನನ್ನ ಬೆನ್ನನ್ನ ಸುಡ್ತಾ ಇದ್ದಾರೆ’
‘ಇಲ್ಲಿ ನಮಗಿಂತ ಮುಂಚೆನೇ ಯಾರೋ ಬಂದಿದ್ದಾರೆ, ಬೇಗ ಎದ್ದು ದೀಪ ಹಚ್ಚು’
‘ಓಕೆ, ಆದ್ರೆ ಬೆಂಕಿಪೊಟ್ಟಣ ಸಿಗ್ತಾನೇ ಇಲ್ಲ’
‘ಬೇಗ ಹುಡುಕು, ಯಾರೋ ನನ್ನ ಕತ್ತನ್ನ ಹಿಡಿದುಕೊಂಡಿದ್ದಾರೆ, ಹೇಯ್ ಬಿಡ್ರೋ’
‘ಹೇಯ್... ಯಾರದು ನನ್ನ ಪ್ರಾಣಕ್ಕಿಂತಲೂ ಹೆಚ್ಚಾದ ನನ್ನ ಹುಡುಗಿ ಕತ್ತನ್ನು ಒತ್ತಿರೋರು, ಬಿಡ್ರೋ ಲೇ, ಇಲ್ಲಾಂದ್ರೆ ಕೊಂದ್ಬಿಡ್ತೀನಿ’
‘ಉಸಿರು ಕಟ್ತಾ ಇದೆ ಚಿನ್ನ, ಬೆಂಕಿಪೊಟ್ಟಣ ಸಿಕ್ತಾ, ಬೇಗ ಹುಡುಕು, ಇವರು ಯಾರೂ ಅಂಥ ನೋಡು, ಹೇಯ್ ನಿನ್ನ ಬೆನ್ನು ನೋಡ್ಕೋ, ಬೆಂಕಿ ಉರಿತಾ ಇದೆ, ಆ ಗೋಡೆಗೆ ಉಜ್ಜಿ ಬೆಂಕಿ ನಂದಿಸಿಕೋ’
‘ಹೌದು, ಉರಿ, ಗೋಡೆಗೆ ಬೆನ್ನು ಉಜ್ಜಿ ಬೆಂಕಿ ಆರಿಸ್ಕೊಂಡೆ, ಅಯ್ಯೋ ಆ ಬೆಂಕಿಯಲ್ಲಿಯೇ ದೀಪ ಹಚ್ಚಬಹುದಾಗಿತ್ತಲ್ವ, ಚಿನ್ನಾ? ಹೇಯ್ ಚಿನ್ನು? ಮಾತಾಡು’
?
‘ಹೇಯ್, ಯಾರದು? ನನ್ನ ಹುಡುಗಿ ಕತ್ತು ಬಿಡ್ರೋ, ಚಿನ್ನ ನಿನ್ನ ಹತ್ರ ಬಂದೆ, ಅವರಾರೂ ಕೈಗೆ ಸಿಗ್ತಾ ಇಲ್ಲ’
‘ನೀನು ಹತ್ರ ಬಂದಂಗೆ ಓಡಿ ಹೊರಟುಹೋದ್ರು ಕಣೋ, ಉಸಿರಾಡೋಕು ಆಗ್ತಾ ಇರ್ಲಿಲ್ಲ, ಅವರು ಯಾರೋ ನಮ್ಮನ್ನ ಕೊಲೆ ಮಾಡೋಕೆ ಅಂತ ಬಂದಿದ್ದಾರೆ, ನೀನು ಇಲ್ಲೇ ಇರು, ಮಲಗು’
‘ಹೇಯ್’
‘ಏನು?’
‘ಪಕ್ಕ ಬಾರೋ’
‘ಬಂದೆ’
‘ತಬ್ಕೋ’
‘ತಬ್ಕೊಂಡೆ’
‘ಹೇಯ್ ಬೇಡ ಬೇಡ ಇರು, ಯಾರೋ ಬಾಗಿಲು ತಟ್ತಾ ಇದ್ದಾರೆ?’
‘ತೆಗಿಲಾ?’
‘ಬೇಡ ಕಣೋ, ಈ ಜಾಗಕ್ಕೆ ನಾವು ಬರಬಾರದಾಗಿತ್ತು, ಇಲ್ಲೇನೋ ತೊಂದರೆ ಇದೆ’
‘ಹೌದು, ನಮಗೆ ಹೊಡೆದವರು ಇಲ್ಲೇ ಎಲ್ಲೋ ಬಚ್ಚಿಟ್ಕೊಂಡಿದ್ದಾರೆ, ಹುಷಾರು’
‘ಹೇಯ್, ಬಾಗಿಲನ್ನ ಜೋರಾಗಿ ಬಡಿತಾ ಇದ್ದಾರೆ’
‘ಬಡಿದುಕೊಳ್ಳಲಿ, ತೆಗೆಯೋದೆ ಬೇಡ, ಬೆಳಗಾದ ತಕ್ಷಣ ಇಲ್ಲಿಂದ ಹೊರಟುಬಿಡೋಣ’
‘ಹ್ಞೂಂ’
‘ಪಾಚು’
‘ಹೇಯ್... ಬಾಗಿಲು ತೆರೆದುಕೊಳ್ತಾ ಇದೆ ಕಣೋ, ನನಗೆ ಭಯ ಆಗ್ತಾ ಇದೆ’
‘ಹೆದರಬೇಡ, ನಾನಿದ್ದೀನಿ’
‘ಬಾಗಿಲು ತೆರೆದುಕೊಳ್ತು’
‘ಹೆದರಬೇಡ, ನಾನಿರೋವಾಗ ನಿನಗೆ ಯಾರೂ ಏನೂ ಮಾಡೋಕಾಗಲ್ಲ’
‘ಹೌದು, ಸತ್ರೆ ನಾನು ನಿನ್ನ ಜೊತೆನೇ ಸಾಯ್ತೀನಿ’
‘ಯಾರೂ? ಯಾರೂ ನೀವು? ಬಾಗಿಲು ತೆಗೆಯದೇ ಇದ್ರೆ ಈ ರೀತಿ ಅಗುಳಿ ಮುರಿದು ಯಾಕೆ ಬರಬೇಕು?’
‘ಇಲ್ಲಿ ಯಾರೋ ಕೂಗಿಕೊಂಡ ಶಬ್ದ ಬಂತು, ಅದಕ್ಕೆ ಬಂದದ್ದು, ಏನಾದರೂ ತೊಂದರೆಯೇ?’
‘ಹೌದು, ಇಲ್ಲಿ ಯಾರೋ ಬಚ್ಚಿಟ್ಕೊಂಡಿದ್ದಾರೆ, ನಮಗೆ ತೊಂದರೆ ಕೊಡ್ತಾ ಇದ್ದಾರೆ’
‘ಹೌದಾ? ಈಗ ಬಾಗಿಲು ತೆಗೆದಾಕ್ಷಣ ಒಂದಷ್ಟು ಜನ ಹೆದರಿ ಹೊರಗೆ ಓಡಿದರು’
‘ಹೌದಾ? ಧನ್ಯವಾದ, ಅಂದಹಾಗೆ ನೀವು ಯಾರು? ನಮ್ಮಂತೆ ಜೋಡಿ ಇದ್ದೀರಿ’
‘ಹೌದು, ನನ್ನ ಹೆಸರು ದೇವದಾಸ್...’
‘ಹಾ... ಗೊತ್ತಾಯಿತು, ಜೊತೆಯಲ್ಲಿರುವವಳು ಪಾರ್ವತಿಯೇ?’
‘ಹೌದು’
‘ಒಳ ಬಂದಿದ್ದವರು ಯಾರು?’
‘ಅವರು ನಿಮ್ಮವರೇ, ಏನಾದರೂ ತೊಂದರೆ ಆಯಿತೇ?’
‘ಹೌದು, ನನ್ನವಳ ಬೆನ್ನಿಗೆ ಚುಚ್ಚಿಬಿಟ್ಟರು, ನನ್ನ ಬೆನ್ನಿಗೆ ಬೆಂಕಿ ಇಟ್ಟಿದ್ದರು’
‘ನೋವಾಯಿತೇ?’
‘ಆಗ ಆಗಿತ್ತು, ಆದರೆ ಈಗಿಲ್ಲ’
‘ಸರಿ, ಮತ್ತೇನಾದರೂ ತೊಂದರೆ ಆದರೆ ಕೂಗಿಕೊಳ್ಳಿ, ನಾವು ಬರುತ್ತೇವೆ’
‘ಆಗಲಿ, ನಿಮ್ಮ ಕೈಯಲ್ಲಿರುವ ದೀಪದಿಂದ ನಮ್ಮ ಕೋಣೆಯ ದೀಪವನು ಹಚ್ಚಿಹೋಗಿ, ದಯವಿಟ್ಟು’
‘ಬೇಡ’
‘ಯಾಕೆ?’
‘ಪ್ರೇಮಿಗಳಿಗೆ ಬೆಳಕಿಗಿಂತ ಕತ್ತಲೇ ಸೂಕ್ತ’
‘ಹೌದಾ?’
‘ಬೆಳಕಿನಲ್ಲಿ ನೀವು ಎಲ್ಲರಿಗೂ ಕಾಣುವಿರಿ, ನಿಮ್ಮನ್ನು ನೋಡಿದರೆ ಅವರು ತಮ್ಮನ್ನೇ ತಾವು ದ್ವೇಷಿಸಿಕೊಳ್ಳುತ್ತಾರೆ'
‘ಸರಿ, ನಿಮ್ಮಂತಹ ಅಮರ ಪ್ರೇಮಿಗಳಿಗೆ ಸಾವು ಬರಬಾರದಾಗಿತ್ತು’
‘ಸಾವು ಯಾರನ್ನೂ ಕೇಳಿ ಬರುವುದಿಲ್ಲ, ನಮ್ಮನ್ನು ಸಾಯಿಸಿದವರೂ ಬದುಕಲಿಲ್ಲ’
‘ಹೌದು’
‘ಸರಿ ನಾವು ಹೊರಡುತ್ತೇವೆ’
‘ಹೇಯ್ ಪುಟ್ಟು'
‘ಹೇಳೇ’
‘ಇವರು ನಾವು ಪುಸ್ತಕದಲ್ಲಿ ಓದಿದ್ದೇವಲ್ಲ, ಆ ‘ದೇವದಾಸ್ ಪಾರ್ವತಿಯೇ’?’
‘ಹೌದು’
‘ಪಾಪ ಅಲ್ವಾ?’
‘ಹೌದು, ಈ ಪ್ರಪಂಚ ಅವರನ್ನ ನೆಮ್ಮದಿಯಾಗಿ ಬದ್ಕೋಕೇ ಬಿಡಲಿಲ್ಲ’
‘ಹೇಯ್, ಯಾರೋ ಕಿಟಕಿ ಹತ್ತಿರ ಇಣುಕಿ ನೋಡುತ್ತಿದ್ದಾರೆ ಕಣೋ’
‘ಹೌದು, ಚೆ! ಈ ಜಾಗಕ್ಕೆ ಬಂದು ತಪ್ಪು ಮಾಡಿಬಿಟ್ಟೆವು’
‘ಹೇಯ್, ಅವರು ಕಿಟಕಿ ತೆರೆದೇ ಬಿಟ್ರು’
‘ಓಹ್, ಇವರು ಯಾರೋ ಬೇರೆ ದೇಶದವರ ರೀತಿ ಕಾಣಿಸ್ತಾ ಇದ್ದಾರೆ?’
‘ಸುಮ್ನಿರು, ಕತ್ತಲೆ ಅಲ್ವಾ ಏನೂ ಕಾಣೋಲ್ಲ, ಅವರ ಪಾಡಿಗವರು ಹೊರಟು ಹೋಗಲಿ’
‘Hello, Is there anyone inside?’
‘Yes, We are here in the eve of Valentines Day’
‘That’s good, We heard someone screaming here, do you need any help, We are here to help Lovers’
‘No Dears, Thank U, Some people have really threaten us and now they ran away’
‘Oh! Stupids, Crooked minded people, they won’t tolerate people being loved each other’
‘Yes Sir’
‘If it repeats, You do Call us, we are next to you people here’
‘Thank U, May I know Your names’
‘Romeo and Juliate’
‘Oh, Thank U both, Nice to meet You’
‘You are welcome, Nice to meet You too’’
‘ಹೇಯ್ ಚಿನ್ನಾ, ಇವರಾರು?’
‘ಇವರು ಕೂಡ ಪ್ರೇಮಿಗಳು, ನಮ್ಮಂತ ಪ್ರೇಮಿಗಳಿಗೆ ಇವರುಗಳೇ ಮಾದರಿ, ಇವರು ಯಾವಾಗಲೂ ಪ್ರೇಮಿಗಳನ್ನ ಈ ರೀತಿ ಬೆಂಬಲಿಸ್ತಾರೆ’
‘ಇವರು ಇನ್ನೂ ಇದ್ದಾರಾ?’
‘ಇಲ್ಲ ಚಿನ್ನು, ಇವರೆಲ್ಲಾ ಸತ್ತುಹೋಗಿ ಬಹಳ ದಿನಗಳೇ ಆಯ್ತು, ಆದ್ರೆ ಯಾರಾದರೂ ಪ್ರೇಮಿಗಳು ಈ ರೀತಿ ತೊಂದ್ರೆಗೆ ಸಿಕ್ಕೊಂಡ್ರೆ ಬಂದ್ಬಿಡ್ತಾರೆ’
‘ಏನೇ ಆಗ್ಲಿ ಪುಟ್ಟು, ಈ ಜಾಗ ಸರಿ ಇಲ್ಲ, ಬೆಳಗ್ಗೆ ಆದ ತಕ್ಷಣ ಮನೆಗೆ ಹೊರಟುಬಿಡೋಣ, ಸತ್ತವರೆಲ್ಲಾ ಬಂದು ಬಂದು ಈ ರೀತಿ ಮಾತಾಡ್ತಾ ಇದ್ದಾರೆ ಅಂದ್ರೆ ಇಲ್ಲೇನೋ ತೊಂದರೆ ಇದೆ’
‘ಹೌದು, ನನಗೂ ಹಾಗೇ ಅನ್ನಿಸ್ತಾ ಇದೆ, ಈಗ ನೆಮ್ಮದಿಯಾಗಿ ಮಲಗು’
‘ಆ ಆ... ಪುಟ್ಟು, ನನ್ನನ್ನ ಕಾಪಾಡು, ಕಾಪಾಡು’
‘ಏನಾಯ್ತು ಚಿನ್ನು, ಹೆದರಬೇಡ ನಾನಿದ್ದೀನಿ’
‘ರಾಕ್ಷಸಿ, ರಾಕ್ಷಸಿ’
‘ಎಲ್ಲಿ?’
‘ಮುಂದೆ ನೋಡು, ದೀಪ ಹಿಡ್ಕೊಂಡು ನಿಂತಿದ್ದಾಳೆ’
‘ಹೇಯ್, ನೀನ್ಯಾರು? ಇಲ್ಲಿಂದ ತೊಲಗು’
‘ಮಕ್ಕಳೇ, ಹೆದರಬೇಡಿ, ನಾನು ರಾಕ್ಷಸಿ ಅಲ್ಲ’
‘ಸುಳ್ಳು, ನಿನ್ನನ್ನ ನೋಡಿದ್ರೆ ಗೊತ್ತಾಗುತ್ತೆ, ಕಿವಿ ಮತ್ತು ಮೂಗಿಲ್ಲ, ನೀನೊಬ್ಳು ರಾಕ್ಷಸಿ, ನಮ್ಮನ್ನ ತಿನ್ನೋಕೆ ಬಂದಿದ್ದೀಯಾ’
‘ಬಾಹ್ಯ ರೂಪನ್ನೇಕೆ ನೋಡುತ್ತಿರುವಿರಿ, ನನ್ನೊಳಗೆ ನೋಡಿ, ಹಿಂದೊಮ್ಮೆ ನಾನು ಕೂಡ ಬಾಹ್ಯವಾಗಿ ಸುಂದರಿಯಾಗಿದ್ದೆ’
‘ಮತ್ತೇಕೆ ಈಗ ಈ ರೀತಿಯಾಗಿದ್ದೀಯಾ?’
‘ನಾನೊಬ್ಬಳು ಭಗ್ನ ಪ್ರೇಮಿ, ನನ್ನ ಪ್ರಿಯಕರ ನನ್ನ ಕಿವಿ ಮೂಗನ್ನು ಕತ್ತರಿಸಿಬಿಟ್ಟ’
‘ಏಕೆ?’
‘ನನ್ನ ನಿಷ್ಕಲ್ಮಶ ಪ್ರೀತಿಯನ್ನು ಅವನ ಮುಂದೆ ಹರಡಿದ್ದರ ಪ್ರತಿಫಲ’
‘ಓಹ್! ಗೊತ್ತಾಯಿತು, ನೀನು ‘ಶೂರ್ಪನಖಿ’ ಅಲ್ಲವೇ?’
‘ಹೌದು ನನ್ನದು ಮೆಚ್ಚು ಪ್ರೇಮ, ನಮ್ಮಣ್ಣನದು ಹುಚ್ಚು ಪ್ರೇಮ’
‘ಈಗ ನೀನು ನಮಗೆ ಸುಂದರವಾಗಿಯೇ ಕಾಣುತ್ತಿರುವೆ’
‘ಪ್ರೀತಿಯನ್ನು ಅರ್ಥ ಮಾಡಿಕೊಂಡವರಿಗೆ ನಾನು ಕುರೂಪಿಯಲ್ಲ’
‘ಹೌದು’
‘ಇರಲಿ, ಇಲ್ಲಿ ಯಾರೋ ಚೀರಿಕೊಂಡ ಶಬ್ದ ಬಂದಿತು, ಅದಕ್ಕೆಂದೇ ಓಡೋಡಿ ಬಂದೆ, ಏನಾದರೂ ತೊಂದರೆಯೇ?’
‘ತೊಂದರೆಯಾಗಿತ್ತು, ಈಗಿಲ್ಲ, ಯಾರೋ ಕೆಲವರು ನಮಗಿಂತ ಮುಂಚಿ ನಮ್ಮ ಕೋಣೆ ಸೇರಿಕೊಂಡು ತೊಂದರೆ ಕೊಟ್ಟಿದ್ದರು’
‘ಗೊತ್ತಾಯಿತು, ಇಲ್ಲಿರುವ ಸಾವಿರಾರು ಕೋಣೆಯೊಳಗಿನ ಪ್ರೇಮಿಗಳಿಗೆ ಒಂದಷ್ಟು ತೊಂದರೆ ಕೊಡುತ್ತಿದ್ದಾರೆ, ಮತ್ತೆ ತೊಂದರೆ ಆದರೆ ಕೂಗಿಕೊಳ್ಳಿ’
‘ಆಯಿತು, ಧನ್ಯವಾದ’
‘ಹೇಯ್ ಪುಟ್ಟು’
‘ಹೇಳು ಚಿನ್ನು’
‘ಈ ಜಾಗ ಸರಿ ಇಲ್ಲ, ಬೇಗ ಬೆಳಗಾಗಲಿ, ಈಗ ಸಮಯವೆಷ್ಟು?’
‘ಈ ಕತ್ತಲೆಯಲ್ಲಿ ಗಡಿಯಾರ ಕಾಣೋಲ್ಲ, ಅಯ್ಯೋ ನನ್ನ ಕೈಯಲ್ಲಿದ್ದ ಗಡಿಯಾರ, ಬೆರಳಿನಲ್ಲಿದ್ದ ಉಂಗುರ ಎಲ್ಲಾ ಮಾಯ ಆಗಿದೆ’
‘ಹೌದು, ನನ್ನ ಕೈ ಗಡಿಯಾರವೂ ಇಲ್ಲ’
‘ಓಹ್, ಆ ಖದೀಮರು ಹೊತ್ತುಕೊಂಡು ಹೋಗಿರಬಹುದು’
‘ಹೊತ್ತುಕೊಂಡು ಹೋದ್ರೆ ಹೋಗಲಿ ಬಿಡು, ಪ್ರೇಮಿಗಳಿಗೆ ಗಡಿಯಾರದ ಹಂಗೇಕೆ?’
‘ಪಾಚು ಚಿನ್ನು, ನನ್ನ ತೋಳಮೇಲೆ’
‘ಹೇಯ್ ಚಿನ್ನು ಬೆಳಗಾಯಿತು, ಕಿಟಕಿ ನೋಡು’
‘ಹೌದು ಬೆಳಕು ಬರುತ್ತಿದೆ, ಅದೇನದು ಹೊಗೆ’
‘ಅದು ಮುಂಜಾನೆಯ ಮಂಜು ಕಣೇ’
‘ಬಾ ಹೊರಗೆ ಸ್ವಲ್ಪ ಹೊತ್ತು ನಿಲ್ಲೋಣ'
‘ಬಾ ಬೇಗ, ಮಂಜು ಕರಗುವ ಮುನ್ನ ನಿಂತು ಪ್ರಕೃತಿಯ ಸೌಂದರ್ಯ ಅನುಭವಿಸೋಣ’
‘ಹೇಯ್, ಪ್ರಕೃತಿ ಎಷ್ಟು ಪ್ರಶಾಂತವಾಗಿದೆ ಅಲ್ವೇನೋ’
‘ಹೌದು’
‘ಚಳಿ’
‘ತಬ್ಕೋ’
‘ಹೇಯ್, ಅಯ್ಯೋ!’
‘ಏನಾಯಿತು?’
‘ನಿನ್ನ ದೇಹದಲ್ಲಿ ಮೂಳೆಗಳೇ ಕಾಣುತ್ತಿಲ್ಲ, ಬರೀ ಮಾಂಸದ ಮುದ್ದೆಯಾಗಿರುವೆ’
‘ಹೌದು ಚಿನ್ನು, ನೀನು ಕೂಡ’
‘ನಾವು ನಿಂತಿರುವ ಮನೆ ನೋಡು, ಆಕಾಶದಲ್ಲಿ ತೇಲ್ತಾ ಇದೆ’
‘ಹೌದು, ಅಲ್ಲಿ ನೋಡು ಭೂಮಿ’
‘ಹೌದು ಕಣೋ, ನಮ್ಮ ಮೂಳೆಗಳೆಲ್ಲಾ ಅಲ್ಲಿಯೇ ಬಿದ್ದಿವೆ’
‘ಸುತ್ತ ಬೆಂಕಿ ಬರ್ತಾ ಇದೆ’
‘ಅಲ್ಲಿರೋರೆಲ್ಲ್ಲಾ ನಮ್ಮ ಅಪ್ಪ ಅಮ್ಮ ಸಂಬಂಧಿಕರಲ್ಲವೇ’
‘ಹೌದು ಚಿನ್ನು’
‘ಯಾಕೆ ಎಲ್ಲಾ ಆ ರೀತಿಯಾಗಿ ಬಿದ್ದು ಬಿದ್ದು ಅಳ್ತಿದ್ದಾರೆ?’
‘ಇಷ್ಟು ದಿನ ನಮ್ಮನ್ನು ಅಳಿಸಿದ್ದರಲ್ಲ ಅದಕ್ಕೆ’
‘ಓಹ್... ನಾವು ಜ್ಞಾನ ತಪ್ಪಿ ಇಲ್ಲಿಗೆ ಬಂದಿದ್ದೇವೆ ಅನ್ಸುತ್ತೆ'
‘ಅಲ್ಲಿ ನೋಡು ಚಿನ್ನು, ನಮ್ಮಿಬ್ಬರ ಬೂದಿಗುಡ್ಡೆಯ ನಡುವೆ ಅದೆಷ್ಟು ಅಂತರ ಇದೆ’
‘ಸತ್ತ ನಂತರವೂ ಒಂದಾಗಲು ಅವರು ಬಿಡಲಿಲ್ಲ’
‘ಈಗೆಷ್ಟು ಖುಷಿ ಇದೆ ಅಲ್ವಾ?’
‘ಹೌದು, ರಾತ್ರಿ ಎಲ್ಲಾ ನಾವು ಒದ್ದಾಡಿ ಒದ್ದಾಡಿ ಈ ಮನೆಗೆ ಬಂದಿದ್ದೀವಿ ಅನ್ಸುತ್ತೆ'
‘ಪುಟ್ಟು, ಇಂದಿನ ನಮ್ಮ ಖುಷಿಗೆ ಕಾರಣವಾದವರು ಯಾರೂ ಮತ್ತೆ?’
‘ಅಲ್ಲಿದೆ ನೋಡು, ಆ ಹುಣಸೇ ಮರ, ಅದರ ಕೊಂಬೆ’
‘ಇಷ್ಟು ದಿನ ನಾವು ಎಷ್ಟು ಒದ್ದಾಡಿದ್ದೆವು, ಬದುಕುವ ಹಠ ತೊಟ್ಟವರಿಗೆ ನೆಮ್ಮದಿಯಾಗಿ ಬದುಕಲು ಇವರು ಬಿಡಲಿಲ್ಲ’
‘ಹೌದು, ಈಗ ಎಷ್ಟು ಖುಷಿ ಇದೆ ಅಲ್ವೆ?’
‘ಹೌದು, ಒಂಥರಾ ಮನಸ್ಸು ನಿರಾಳವಾಗಿದೆ’
‘ಐ ಲವ್ ಯೂ ಚಿನ್ನು’
‘ಮೀ ಟೂ ಪುಟ್ಟು’
Comments
ಅದ್ಭುತ ಕಲ್ಪನೆ ಕೊಳ್ಳೆಗಾಲ
In reply to ಅದ್ಭುತ ಕಲ್ಪನೆ ಕೊಳ್ಳೆಗಾಲ by partha1059
ನಿಜ ಪಾರ್ಥ ಅವರೆ, ಸಂಭಾಷಣೆ ಜೋಡಣೆ
In reply to ನಿಜ ಪಾರ್ಥ ಅವರೆ, ಸಂಭಾಷಣೆ ಜೋಡಣೆ by ಮಮತಾ ಕಾಪು
ಧನ್ಯವಾದಗಳು ಇಬ್ಬರಿಗೂ... :)
ದೇಹಕ್ಕೆ ಸಾವು ಇದೆ ....!! ಆದರೆ
ಧನ್ಯವಾದಗಳು... :)