ನಿರುದ್ಯೋಗ ಪ್ರಮಾಣ ಕುಸಿತ

ನಿರುದ್ಯೋಗ ಪ್ರಮಾಣ ಕುಸಿತ

ಭಾರತದ ಆರ್ಥಿಕತೆಯು ಸದೃಢವಾಗಿ ಸಾಗುತ್ತಿರುವ ಕುರಿತಂತೆ ಸಾಕಷ್ಟು ವರದಿಗಳು ಬರುತ್ತಿವೆ. ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳು, ವಿತ್ತ ಪರಿಣತರು ಕೂಡಾ ಭಾರತದ ಆರ್ಥಿಕತೆಯು ಜಗತ್ತಿಗೇ ಮಾದರಿಯಾಗಿ ಬೆಳೆಯುತ್ತಿರುವ ಕುರಿತಂತೆ ಶ್ಲಾಘಿಸುತ್ತಿದ್ದಾರೆ. ಇದೀಗ ಇದಕ್ಕೆ ಪೂರಕವಾಗಿ ಭಾಗತದಲ್ಲಿ ನಿರುದ್ಯೋಗ ಪ್ರಮಾಣವು ಇಷ್ಟು ವರ್ಷಗಳಲ್ಲೇ ಅತ್ಯಂತ ಕಡಿಮೆ ಮಟ್ಟಕ್ಕೆ ತಲುಪಿರುವುದರ ಕುರಿತು ವರದಿಯಾಗಿದೆ. ಎಸ್ ಬಿ ಐ ನಡೆಸಿದ ಅಧ್ಯಯನವೊಂದರ ಪ್ರಕಾರ ಭಾರತದಲ್ಲಿನ ನಿರುದ್ಯೋಗ ಪ್ರಮಾಣವು ೨೦೧೮ರ ಹಣಕಾಸು ವರ್ಷದಲ್ಲಿ ೬.೧ ಶೇಕಡಾ ಇದ್ದುದು ೨೦೨೩ರ ವೇಳೆಗಾಗುವಾಗ ೩.೨ ಶೇಕಡಾಕ್ಕೆ ಇಳಿದಿದೆ. ಇದಂತೂ ದೇಶದ ಪಾಲಿಗೆ ಅತ್ಯಂತ ಹರ್ಷದ ಸುದ್ದಿಯಾಗಿದೆ. ನಿರುದ್ಯೋಗ ಪ್ರಮಾಣವು ಕಡಿಮೆಯಾಗಲು ದೇಶದಲ್ಲಿ ಸ್ವೌದ್ಯೋಗಕ್ಕೆ ಹೆಚ್ಚಿನ ಆದ್ಯತೆ ದೊರಕುತ್ತಿರುವುದು ಕೂಡಾ ಪ್ರಮುಖ ಕಾರಣವೆಂದು ತಿಳಿದುಬಂದಿದೆ. ಸ್ವ ಉದ್ಯೋಗವು ೨೦೧೮ರಲ್ಲಿ ಶೇ ೧೩.೬ ರಷ್ಟಿದ್ದುದು ಇದೀಗ ಶೇ. ೧೮.೩ಕ್ಕೇರಿರುವುದು ಕಂಡುಬಂದಿದೆ. ಇದು ಮೋದಿ ಸರಕಾರವು ಪ್ರತಿಪಾದಿಸುತ್ತಾ ಬಂದ ಆತ್ಮನಿರ್ಭರ ಭಾರತವನ್ನು ಸಾಕಾರವಾಗಿಸುವತ್ತ ಒಂದು ಪ್ರಮುಖ ಹೆಜ್ಜೆಯೆಂದು ಹೇಳಬಹುದಾಗಿದೆ.

ಈ ಅಧ್ಯಯನವು ಇನ್ನೂ ಕೆಲವು ಗುಣಾತ್ಮಕ ಅಂಶಗಳತ್ತ ಬೆಳಕು ಚೆಲ್ಲಿದ್ದು ಗಮನಾರ್ಹವಾಗಿದೆ. ಒಂದನೆಯದಾಗಿ ಮಹಿಳೆಯರು ಉದ್ಯೋಗಿಗಳಾಗಿ ಕಾರ್ಯನಿರ್ವಹಿಸುತ್ತಿರುವುದು ಹೆಚ್ಚುತ್ತಿದೆ ಹಾಗೂ ಎರಡನೆಯದಾಗಿ ಜನರು ಸಾಂಪ್ರದಾಯಿಕ ಉದ್ಯೋಗಗಳನ್ನೇ ನೆಚ್ಚಿಕೊಳ್ಳುವುದರ ಬದಲಾಗಿ ತಾವೇ ಸ್ವಂತ ಉದ್ದಿಮೆ ಸ್ಥಾಪಿಸುವ ಕುರಿತಂತೆ ಹಾಗೂ ಆಧುನಿಕ ಮಾದರಿಯ ಉದ್ಯೋಗವನ್ನು ಆಯ್ಕೆ ಮಾಡುವ ಕುರಿತಂತೆ ಹೆಚ್ಚು ಉತ್ಸುಕರಾಗುತ್ತಿದ್ದಾರೆ. ಮಹಿಳೆಯರ ಉದ್ಯೋಗ ಪ್ರಮಾಣವು ೨೦೧೮ರಲ್ಲಿ ಶೇ. ೧೭.೫ರಷ್ಟಿದ್ದುದು ಇದೀಗ ಶೇ ೨೭.೮ಕ್ಕೇರಿದೆ. ವಿಶೇಷವೆಂದರೆ ಈಗಿನ ಪೀಳಿಗೆಯ ಯುವತಿಯರು ಹೆಚ್ಚೆಚ್ಚು ಉದ್ಯೋಗಕ್ಕೆ ಹೋಗತೊಡಗಿದ್ದಾರೆ. ಹಾಗಾಗಿಯೇ ೨೯ರ ಕೆಳಹರಯದ ಮಹಿಳೆಯರು ಉದ್ಯೋಗಕ್ಕೆ ಸೇರಿಕೊಳ್ಳುತ್ತಿರುವುದು ಅಧಿಕವಾಗಿದೆ. ಮಹಿಳೆಯರಲ್ಲಿ ಸ್ವ ಉದ್ಯೋಗ ಕೂಡಾ ಹೆಚ್ಚುತ್ತಿದ್ದು, ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿಯಲ್ಲಿ ಹಣಕಾಸು ನೆರವು ಪಡೆದವರಲ್ಲಿ ಮಹಿಳೆಯರ ಸಂಖ್ಯೆ ಗಣನೀಯವಾಗಿದೆ. ಉನ್ನತ ಶಿಕ್ಷಣ ಪಡೆದವರಲ್ಲಿ ಉದ್ಯೋಗದ ಸಂಖ್ಯೆ ಅಧಿಕವಾಗಿರುವುದು ಕಂಡುಬಂದಿದ್ದು, ಇದು ಶಿಕ್ಷಣಕ್ಕೆ ಆದ್ಯತೆ ನೀಡಬೇಕಾದ ಮಹತ್ವವನ್ನು ಒತ್ತಿ ಹೇಳುತ್ತದೆ. ಒಟ್ಟಿನಲ್ಲಿ ದೇಶದಲ್ಲಿನ ಉದ್ಯೋಗ ಕ್ಷೇತ್ರವು ಪ್ರಗತಿಪರತೆಯನ್ನು ದಾಖಲಿಸುತ್ತಿದ್ದು, ಮೋದಿ ಸರಕಾರದಡಿಯಲ್ಲಿ ನಿರುದ್ಯೋಗ ಹೆಚ್ಚಿದೆ ಎಂಬ ಕೆಲವರ ಟೀಕೆಯ ಪೊಳ್ಳುತನವನ್ನು ಬಯಲಿಗೆಳೆದಿದೆ.

ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೧೬-೧೧-೨೦೨೩

ಚಿತ್ರ ಕೃಪೆ: ಅಂತರ್ಜಾಲ ತಾಣ