ನಿರ್ಧಾರ
ಬರಹ
ಅಂಗೈಗೆ ಅಂಗೈಯ ಮಸೆದು
ಹುಟ್ಟಿದ ಶಾಖವ ಕಣ್ಣಿಗೊತ್ತಿಕೊಳ್ಳುವ ಅಪ್ಪ
ಬೆರಳಿಗೆ ಬೆರಳ ಹೊಸೆದು
ಉರಿಯುವ ಸೂರ್ಯನನೂ ದಿಟ್ಟಿಸುತ್ತಾನೆ.......
ಹೀಗೆ ಇರದ ಶಾಖವ ಹುಟ್ಟಿಸಿ
ಹಾಗೇ ಉರಿವ ಸೂರ್ಯನುರಿಯನೂ ತಗ್ಗಿಸಿ
ಬ್ರಹ್ಮಾಂಡದ ಸಂತಸವನ್ನೆಲ್ಲ
ತನ್ನೊಳಕ್ಕೆ ಎಳೆದುಕೊಂಡು ಸುಖಿಸುತ್ತಾನೆ......
ಕಣ್ಣು, ಕಿವಿ, ಮೂಗು, ತುಟಿ, ನಾಭಿ
ಇತ್ಯಾದಿ ಸೂಕ್ಷ್ಮಗಳನ್ನೆಲ್ಲ ಮುಟ್ಟಿಕೊಳ್ಳುತ್ತಲೇ
ಪ್ರತಿ ಆಚಮನಕ್ಕೂ ಮತ್ತೆ ಮತ್ತೆ
ತನ್ನೊಳಗನ್ನೂ ಮೀಯಿಸುತ್ತಲೇ ಇದ್ದಾನೆ....
ನಾನು ಏನೆಲ್ಲ ಭೌತಿಕದ ಸವಲತ್ತುಗಳಿದ್ದರೂ
ನನ್ನೊಳಕ್ಕಿಳಿಯದ ನನ್ನದೇ ಪಾತ್ರವನ್ನು ದ್ವೇಷಿಸುತ್ತಿದ್ದೇನೆ......
ಅದಕ್ಕೇ ನನ್ನ ಮಗ ಅವನಜ್ಜನ ಜೊತೆಗಿರುವಷ್ಟೂ ಹೊತ್ತು
ಅವನನ್ನು ಈ ಇಹದ ಲೌಕಿಕ್ಕೆಳೆಯದಿರಲು ನಿರ್ಧರಿಸಿದ್ದೇನೆ!
* * * * * * *