ನಿಲುಕದ ಸುಖ

ನಿಲುಕದ ಸುಖ

ಬರಹ

ಒಂದು ಕವನ ಓದಿ...

ಕಾಣದಾ ಫಲಕಾಗಿ ಕೈಚಾಚಿ ನಿಂತಿರುವೆ| ನಿಲುಕದಾ ಸುಖಕಾಗಿ ಪರಿತಪಿಸುತಿರುವೆ|

ಶಿವಕೊಟ್ಟ ಫಲವ ಉಣಬಯಸದಾ ನೀನು... ನಿನ್ನ ಸತ್ವವ ಮರೆತು ಕುಬ್ಜ ನಾಗಿರುವೆ||

ಓ ಮನವೆ ನೀನೋಡು ನಿನ್ನ ನಿಜ ರೂಪವಾ| ಸಂತಸದಿ ಅನುಭವಿಸು  ಶಿವಕೊಟ್ಟ ಫಲವ|

ಬರಲಿ ಬಿಡು ನಾಳೆ ಹೇಗೋ ಇರಲಿ|  ಎದುರಿಸುವ ಬಲ ವಿರಲಿ  ಬಿಡದೆ ಛಲದಿ||

ಇದು ನಾನು ಬರೆದ ಮೊದಲ ಕವನ. ಇದೊಂದು ಪುಟ್ಟ ಕವನವಾಗಿ ನಿಮಗೆ ಕಾಣ ಬಹುದು, ಆದರೆ ಅದು ಜನ್ಮತಾಳಿದ ಸಂದರ್ಬ, ಜನ್ಮಕ್ಕೆ ಕಾರಣಗಳನ್ನು ತಿಳಿಸಿದರೆ ಅದಕ್ಕೆ ಹೆಚ್ಚು ಅರ್ಥ ಸಿಗಬಹುದು.

ಹಿನ್ನೆಲೆ: ನನ್ನ ಹುಟ್ಟು ಅತ್ಯಂತ ಬಡ ಕುಟುಂಬದಲ್ಲಿ. ಒಪ್ಪತ್ತಿನ ಅನ್ನಕ್ಕೆ ಗತಿಯಿಲ್ಲ. ಇಂದಿನ ಯುವಕರಿಗೆ ಬಡತನದ ನಿಜವಾದ ಅರ್ಥ ತಿಳಿಯಲು ಸಾಧ್ಯವಿಲ್ಲ. ಕಾರಣ ಸೋಮಾರಿ ಮಾತ್ರ ಇಂದು ಬಡತನ ಅನುಭವಿಸುತ್ತಾನೆ ಹೊರತು ಶ್ರಮಿಕನಿಗೆ ತಿನ್ನುವ ಅನ್ನಕ್ಕೇನೂ ಇಂದು ಕೊರತೆ ಯಾಗುವುದಿಲ್ಲ. ಇದು ಇಂದಿನ ಸ್ಥಿತಿ. ಆದರೆ ಹಿಂದೆ ಹಾಗಿರಲಿಲ್ಲ. ಬೆಳಗಿನಿಂದ ಸಂಜೆ ತನಕ ದುಡಿದರೂ ಸಂಸಾರ ನಿಭಾಯಿಸುವುದು ಅತ್ಯಂತ ಕಷ್ಟ. ಈ ವಿಚಾರ ವಿಸ್ತರಿಸುವುದು ಈ ಲೇಖನದ ಉದ್ದೇಶವಲ್ಲ. ಆದರೆ ಆ ಪರಿಸ್ಥಿತಿಯ ಅರ್ಥವಾದರೆ ಮಾತ್ರ ಈ ನನ್ನ ಕವನ ಅರ್ಥವಾಗಲು ಸಾಧ್ಯ. ಹೇಗೋ ಬಿಕ್ಷಾನ್ನ -ವಾರಾನ್ನ ಗಳನ್ನು ಮಾಡಿ ಕೆಲಸ ಸಿಗುವುದಕ್ಕೊಂದು ಓದು ಮುಗಿದಿದ್ದಾಯ್ತು. ನಂತರ ಸಕಾಲದಲ್ಲಿ ಮದುವೆಯೂ ಆಯ್ತು. ಪತ್ನಿ ತುಂಬಾ ಒಳ್ಳೆಯವಳೇ. ಆದರೆ ಅಕ್ಕ ಪಕ್ಕದ ಮನೆಯವರು ಸುಮ್ಮನಿರಲು ಬಿಡಬೇಕಲ್ಲಾ!! ಹೇಗೋ ಬಂದ ಸಂಬಳದಲ್ಲಿ ಜೀವನ ಸಾಗುತ್ತಿತ್ತು. ಅಪ್ಪ ಅಮ್ಮನ ದೊಡ್ಡ ಸಂಸಾರವನ್ನೂ ನಿಭಾಯಿಸುವ ಹೊಣೆ ಇತ್ತು. ಆದರೆ ಪತ್ನಿಗೆ ಸರ-ಬಳೆ ಮಾಡಿಸುವಷ್ಟು ತಾಕತ್ತು ಇರಲಿಲ್ಲ. ನನ್ನ ಪತ್ನಿ ಇಲ್ಲದ ಚಿನ್ನಕ್ಕಾಗಿ ಕೊರಗುತ್ತಾ ನೆಮ್ಮದಿಯನ್ನು ತಾನೂ ಹಾಳುಮಾಡಿಕೊಂಡು ಮನೆಯ ನೆಮ್ಮದಿಯನ್ನೂ ಹಾಳು ಮಾಡುತ್ತಿದ್ದದ್ದನ್ನು ಕಂಡು ಅವಳ ಬಗ್ಗೆ ಅಯ್ಯೋ ಎನಿಸಿದಾಗ ಬಂದ ಭಾವನೆಗಳಿಗೆ ಅಕ್ಷರ ಕೊಟ್ಟಾಗ ಈ ಪುಟ್ಟ ಕವನದ ಜನ್ಮ ವಾಯ್ತು. . ನನಗೆ ಬೇಜಾರಾದಾಗಲೆಲ್ಲಾ ನಾನೇ ರಾಗ ಹಾಕಿಕೊಂಡು ನನಗೆ ಹಿತವಾಗುವಂತೆ ಅದೆಷ್ಟು ಭಾರಿ ಹಾಡಿ ಕೊಂಡಿದ್ದೇನೋ!

            ಸಾಮಾನ್ಯವಾಗಿ ಮನುಶ್ಯನ ಸಹಜ ಸ್ವಭಾವ ವೆಂದರೆ" ಭಗವಂತ ತನಗೆ ಈಗ ಏನು ಕೊಟ್ಟಿದ್ದಾನೋ , ಅದನ್ನು ಸಂತೋಷವಾಗಿ ಅನುಭವಿಸದೆ ತನ್ನಲ್ಲಿ ಇಲ್ಲದ್ದಕ್ಕೆ ಕೊರಗುತ್ತಾ ಅಂದಿನ ಸಂತೋಷವನ್ನೂ ಕಳೆದುಕೊಳ್ಳುವುದು, ಇದೇ ತಾನೇ ನಮ್ಮ ಜೀವನ.ನಮ್ಮ ಅಂತ: ಸತ್ವವನ್ನು ನಾವು ಅರಿತುಕೊಳ್ಳುವುದೇ ಇಲ್ಲ. ಬದಲಿಗೆ ನಾನು ಅಂದರೆ ’ಇಷ್ಟೆ’ ಎಂದು ಬಹಳ ಚಿಕ್ಕದಾಗಿ ನಮ್ಮನ್ನು ನಾವು ಕಂಡುಕೊಂಡು ಬಿಡುತ್ತೇವೆ. ನಾಳಿನದಕ್ಕಾಗಿ ಕೊರಗುತ್ತಾ ಇಂದಿನದನ್ನು ಕಳೆದುಕೊಂಡು ಬಿಡುತ್ತೇವೆ. ನಮಗೆ ನಮ್ಮಲ್ಲಿರುವ ಆತ್ಮ ಶಕ್ತಿಯ ಪರಿಚಯವೇ ಇಲ್ಲ. ಅಂತೆಯೇ ಭಗವಂತನ ಮೇಲೂ ವಿಶ್ವಾಸ ವಿಲ್ಲ. ತತ್ಪರಿಣಾಮವಾಗಿ ನಾವು ಸ್ವಂತ ಜೀವನದ ಬಗ್ಗೆ ಚಿಂತಾಕ್ರಾಂತರಾಗಿರುತ್ತೇವೆ. ನಿಜವಾಗಿ ಎಷ್ಟು ಚಿಕ್ಕ ಚಿಕ್ಕ ವಿಚಾರಕ್ಕೆ ನಮ್ಮ ಜೀವನವನ್ನು ವ್ಯರ್ಥ ಮಾಡಿಕೊಳ್ಳುತ್ತೀವಲ್ಲವೇ? ಏನಂತೀರಾ?