ನಿಲ್ಲಿ, ಇನ್ನೂ ವನಿಲ್ಲಾ ಆಟ ಮುಗಿದಿಲ್ಲ !
ಯಾವುದೇ ಬೆಳೆಯ ಬೆಲೆ- ಬೇಡಿಕೆ ನೆಲಕಚ್ಚಿದೆ ಎಂದಾಕ್ಷಣ ಅದನ್ನು ನಿರ್ಲಕ್ಷ್ಯ ಮಾಡುವುದು ಪ್ರತೀಯೊಬ್ಬ ಕೃಷಿಕನ ಸಹಜ ಮನೋಬಾವನೆ. ಅದು ವೆನಿಲ್ಲ ಬೆಳೆಯಲ್ಲೂ ಆಗಿದೆ. ಇದು ಕೃಷಿಕರಿಗೆ ಒಂದು ಪಾಠ. ಯಾವಾಗಲೂ ಬೆಳೆಯೊಂದು ಈ ರೀತಿ ಆದಾಗ ಅದನ್ನು ಪೂರ್ತಿ ನಿರ್ಲಕ್ಷ ಮಾಡಬೇಡಿ. ಯಾವಾಗಲಾದರೂ ಅದಕ್ಕೆ ಮತ್ತೆ ಒಳ್ಳೆ ದಿನಗಳು ಬಂದೇ ಬರುತ್ತವೆ. ಈಗ ವನಿಲ್ಲಾಕ್ಕೆ ಅಂತಹ ದಿನ ಬಂದಿದೆ.
ಈಗ ಉತ್ತಮ ಗುಣಮಟ್ಟದ ಸಂಸ್ಕರಿತ ವನಿಲ್ಲಾ ಕೋಡುಗಳನ್ನು ಕಿಲೋ ೧೫,೦೦೦ ದ ಆಸು ಪಾಸಿನಲ್ಲೂ, ಸಾಧಾರಣ ಕೋಡುಗಳನ್ನು ೧೦,೦೦೦ ಸುಮಾರಿನಲ್ಲೂ, ಹಸಿ ಕೋಡುಗಳನ್ನು ಕಿಲೋ ೨೫೦೦ ರೂ ತನಕವೂ ಖರೀದಿ ಮಾಡುತ್ತಿದ್ದಾರೆ. ಈ ವ್ಯಾಪಾರಿಗಳ ಪ್ರಕಾರ ವನಿಲ್ಲಾ ಬೆಳೆಸುವ ಎಲ್ಲಾ ಕಡೆಗಳಲ್ಲಿ ಸೊರಗು ರೋಗದಿಂದ ಬಳ್ಳಿ ಒಣಗಿ ನಾಶವಾಗಿದ್ದು, ಮತ್ತೆ ಸ್ವಾಭಾವಿಕ ವನಿಲ್ಲಾದ ಕೊರತೆ ಉಂಟಾಗಿದೆಯಂತೆ.
ಆದರೆ ಈಗ ಯಾರ ಬಳಿಯಲ್ಲೂ ನೆಡಲು ಸರಿಯಾದ ವನಿಲಾ ಬಳ್ಳಿಗಳು ಇಲ್ಲ. ಹಾಗೆಂದು ಪೂರ್ತಿಯಾಗಿ ವನಿಲ್ಲಾ ಬಳ್ಳಿ ನಿರ್ನಾಮವಾಗಿಲ್ಲ. ಅಲ್ಲಲ್ಲಿ ಅಲ್ಪ ಸ್ವಲ್ಪ ಬಳ್ಳಿಗಳು ಉಳಿದಿವೆ. ಕೆಲವು ರೈತರು ಇಂದು ಬೆಳೆ ಸೋತಿದ್ದರೂ ಮುಂದೊಂದು ದಿನ ಇದಕ್ಕೆ ಭವಿಷ್ಯ ಇಲ್ಲದಿಲ್ಲ ಎಂದು ಅಲ್ಪ ಸ್ವಲ್ಪ ಬೆಳೆ ಉಳಿಸಿಕೊಂಡಿದ್ದಾರೆ.
ರೈತರು ಏನು ಮಾಡಬಹುದು: ಈಗಾಗಲೇ ವನಿಲ್ಲಾ ಬಳ್ಳಿ ಇದ್ದರೆ ಅದನ್ನು ಮತ್ತೆ ನಾಟಿ ಮಾಡುವುದು ಉತ್ತಮ. ನೇರವಾಗಿ ನಾಟಿ ಮಾಡುವ ಬದಲಿಗೆ ಅದನ್ನು ಬೆಳೆಸಿ ಸ್ವಲ್ಪ ದೊಡ್ದ ಬಳ್ಳಿಯಾಗಿ ಮಾಡಿ ನಂತರ ನಾಟಿ ಮಾಡಿ. ಗರಿಷ್ಟ ಪ್ರಮಾಣದ ಬೆಳೆ ವಿಸ್ತರಣೆಗೆ ಹೋಗುವುದು ಸೂಕ್ತವಲ್ಲ. ಅವರವರ ಸಾಮರ್ಥ್ಯದಲ್ಲಿ ಎಷ್ಟು ಹೂವು ಪರಾಗ ಸ್ಪರ್ಷ ಮಾಡಲು ಸಾಧ್ಯವೋ ಅಷ್ಟು ಮಾತ್ರ ನಾಟಿ ಮಾಡುವುದು ಸೂಕ್ತ. ಹಿಂದೆ ಜನ ನೇಮಿಸಿ ಪರಾಗ ಸ್ಪರ್ಷ ಮಾಡಿಸಿರಬಹುದು. ಆದರೆ ಇನ್ನು ಅಂತಹಃ ಜನ ಸಿಗುವ ಸಾಧ್ಯತೆ ಕಡಿಮೆ. ಅದ ಕಾರಣ ನಿರ್ವಹಣೆಗೆ ಅನುಕೂಲ ಇರುವಷ್ಟೇ ಬೆಳೆಸುವುದು ಸೂಕ್ತ.
ಸೊರಗು ರೋಗ- ನಿವಾರಣೆ: ಈಗಾಗಲೇ ವನಿಲ್ಲಾ ಬಳ್ಳಿಗೆ ತೀವ್ರ ತರದಲ್ಲಿ ಸೊರಗು ರೋಗ ಬಂದಿದ್ದು, ಕೆಲವೆಡೆ ಸಂಪೂರ್ಣ ನಾಶವಾಗಿದೆ. ಮತ್ತೆ ಕೆಲವೆಡೆ ಒಣಗುತ್ತಿರುವ ಸ್ಥಿತಿಯಲ್ಲಿ ಅಲ್ಪ ಸ್ವಲ್ಪ ಇದೆ. ವನಿಲ್ಲಾ ಬಳ್ಳಿಗೆ ಬಾಧಿಸಲಾದ ಈ ಸೊರಗು ರೋಗಕ್ಕೆ ಕಾರಣವಾದ ಶಿಲೀಂದ್ರ Fusarium Oxysporum . ಇದು ವನಿಲ್ಲಾದ ಅತೀ ದೊಡ್ಡ ರೋಗವಾಗಿದ್ದು ಜಗತ್ತಿನಾದ್ಯಂತ ಇದೆ. ಇದರಿಂದ ಬಳ್ಳಿ ಚುರುಟಿಕೊಂಡು ಎಲೆ ಒಣಗುತ್ತದೆ. ಈಗ ಆದದ್ದೂ ಅದೇ. ಅದಕ್ಕೆ ಕಾರಣ ಆರೈಕೆಯ ಕೊರತೆ. ವನಿಲ್ಲಾ ಬಳ್ಳಿಯಲ್ಲಿ ಬೇರುಗಳು ನೆಲದ ಮೇಲುಸ್ಥರದ ಮಣ್ಣಿನಲ್ಲೇ ಹರಿಯುವಂತದ್ದು. ಇದಕ್ಕೆ ಸಾಕಷ್ಟು ಪೊಷಕಾಂಶಗಳು ಅಗತ್ಯವಾಗಿ ಬೇಕಾಗುತ್ತದೆ. ವನಿಲ್ಲಾಕ್ಕೆ ಬೆಲೆ ಕುಸಿದಾಗ ಎಸೆದ ಜಾಗದಲ್ಲಿ ಯಾವುದೇ ಪೋಷಕಾಂಶಗಳು ದೊರೆಯದ ಕಾರಣ ಬಳ್ಳಿ ಸೊರಗು ರೋಗ ಹೆಚ್ಚಾಗಿದೆ. ರೋಗ ಬಂದು ಒಂದು ಎರಡು ವರ್ಷ ತನಕವೂ ಬಳ್ಳಿಯಲ್ಲಿ ಜೀವ ಇರುತ್ತದೆ. ಎಲೆ ಪೇಲವವಾಗಿದ್ದು ಬಳ್ಳಿಯಲ್ಲಿ ಜೀವ ಇರುತ್ತದೆ. ಕ್ರಮೇಣ ಎಲೆ ಒಣಗಿ ಬಳ್ಳಿ ಸಾಯಲಾರಂಭಿಸುತ್ತದೆ.
ಪುನರುಜ್ಜೀವನ ಹೇಗೆ?: ರೋಗ ಬಂದ ಅಥವಾ ಬಾರದೇ ಇರುವ ವನಿಲ್ಲಾ ಬಳ್ಳಿಯನ್ನು ರಾಸಾಯನಿಕ ಉಪಚಾರದ ಮೂಲಕ ಪುನರುಜ್ಜೀವನ ಮಾಡಬಹುದು. ಈ ಶಿಲೀಂದ್ರ ಬಾಧೆಯನ್ನು ನಿವಾರಿಸಲು ತೋಟದ ನೈರ್ಮಲ್ಯಕ್ಕೆ ಪ್ರಾಧಾನ್ಯತೆ ಕೊಡಬೇಕು. ಹರಡುವ ರೋಗವಾದ ಕಾರಣ ರೋಗ ರಹಿತ ಬಳ್ಳಿಯಾಗಿದ್ದರೂ ಅದಕ್ಕೆ ಸೋಂಕು ತಗಲಿರಬಹುದು. ಇದರ ನಿವಾರಣೆಗೆ ಶೇ.೦.೧ ರ ಬಾವಿಸ್ಟಿನ್ ದ್ರಾವಣದ ಸಿಂಪರಣೆ ಮತ್ತು ಬುಡಕ್ಕೆ ೧/೨ ಲೀ ಎರೆಯುವುದು ಪರಿಣಾಮಕಾರಿ. ಇದಲ್ಲದೆ ಸೆಕ್ಟಿನ್ ಶಿಲೀಂದ್ರ ನಾಶಕದ ಸಿಂಪರಣೆ ಮತ್ತು ಡ್ರೆಂಚಿಂಗ್ ಸಹ ಉಪಯುಕ್ತ. ಯಾವ ರೈತರಿಗೆ ಪ್ರಬಲ ಶಿಲೀಂದ್ರ ನಾಶಕದ ಬಳಕೆ ವರ್ಜ್ಯವಿಲ್ಲವೋ ಅವರು ಮೆಟಲಕ್ಸಿಲ್ ಶಿಲೀಂದ್ರ ನಾಶಕದ ಉಪಚಾರ ಮಾಡಬಹುದು. ಇದರಲ್ಲಿ ಶಿಲೀಂದ್ರ ಸಾಯುತ್ತದೆ. ಸಾವಯವ ವಿಧಾನದಲ್ಲಿ ಆದರೆ ಟ್ರೈಕೋ ಡರ್ಮಾ, ಸುಡೋಮೋನಸ್ ಮತ್ತು ಮೈಕೋರೈಜಾ ಶಿಲೀಂದ್ರ ನಾಶಕದಲ್ಲಿ ಬಳ್ಳಿಯನ್ನು ಉಪಚರಿಸಿ ಸಸ್ಯೋತ್ಪಾದನೆ ಮಾಡುವುದರಿಂದ ಫಲಿತಾಂಶ ಪಡೆಯಬಹುದು. ಇವು ಬಹು ಬಗೆಯ ಶಿಲೀಂದ್ರಗಳಿಂದ ಬೆಳೆಗೆ ರಕ್ಷಣೆ ಕೊಡಬಲ್ಲವು.
ಬೆಲೆ ಬಂದಿದೆ ಎಂದು ದುಂಬಾಲು ಬಿದ್ದು ಎಲ್ಲೆಲ್ಲಿಂದಲೋ ಹೆಚ್ಚು ದರ ನೀಡಿ ಖರೀದಿ ಮಾಡುವ ಸಾಹಸಕ್ಕೆ ಹೋಗದೆ ಅವರವರ ಮನೆಯಲ್ಲಿ ಲಭ್ಯವಿದ್ದರೆ ಅಥವಾ ನೆರೆಹೊರೆಯವರಲ್ಲಿ ಲಭ್ಯವಿದ್ದರೆ ಅಲ್ಲಿಂದ ನೆಡು ಸಾಮಾಗ್ರಿಗಳನ್ನು ತಂದು ಉಪಚಾರ ಮಾಡಿ, ಪಾಲಿಥೀನ್ ಕೊಟ್ಟೆಯಲ್ಲಿ ಒಂದು ಗಣ್ಣಿನ ಸಸಿ ಮಾಡಿ ನಂತರ ನಾಟಿ ಮಾಡುವುದು ಸೂಕ್ತ.
ಯಾವ ರೀತಿ ಬೆಳೆಸಿದರೆ ಉತ್ತಮ: ವನಿಲ್ಲಾವನ್ನು ಅಡಿಕೆ ತೋಟದಲ್ಲಿ ಬೆಳೆಸುವುದಕ್ಕಿಂತ ಅದನ್ನು ಪ್ರತ್ಯೇಕವಾಗಿ ಬೆಳೆಸುವುದು ಉತ್ತಮ. ವನಿಲ್ಲಾ ಬಳ್ಳಿಯು ಆರ್ಕಿಡ್ ಜಾತಿಯ ಬಳ್ಳಿಯಾದರೂ ಸಹ ಅದಕ್ಕೆ ಬೇರುಗಳ ಮೂಲಕವೂ ಆಹಾರ ಸರಬರಾಜು ಬೇಕಾಗುತ್ತದೆ. ಇದರ ಬೇರು ಮೇಲು ಸ್ಥರದಲ್ಲಿ ಹಬ್ಬಿ ಸುಮಾರು ೧/೨ ಅಡಿಯಿಂದ ೩/೪ ಅಡಿ ಆಳದ ತನಕ, ೧ ಮೀಟರು ವಿಸ್ತಾರದ ತನಕವೂ ಪಸರಿಸುತ್ತದೆ. ಅಧಿಕ ಪ್ರಮಾಣದ ಬೇರು, ಬೇರಿನಲ್ಲಿ ಕವಲು ಬೇರುಗಳೂ ಇರುತ್ತವೆ. ನೆಲದ ಮೇಲು ಸ್ಥರದಲ್ಲಿ ಲಭ್ಯವಾಗುವ ಎಲ್ಲಾ ಪೋಷಕಾಂಶಗಳನ್ನೂ ತಕ್ಷಣವೇ ಬಳಕೆ ಮಾಡಿಕೊಳ್ಳುವ ಕಾರಣ, ಅಡಿಕೆಗೆ ನಾವು ಕೊಡುವ ಪೋಷಕಗಳೆಲ್ಲವೂ ವನಿಲ್ಲಾ ಬಳ್ಳಿಗೇ ಮೊದಲು ಲಭ್ಯವಾಗುತ್ತದೆ. ಆದುದರಿಂದ ಇದನ್ನು ಪ್ರತ್ಯೇಕವಾಗಿ ಜೀವಂತ ಆಧಾರವಾದ ಗ್ಲೆರಿಸೀಡಿಯಾ ಗೆಲ್ಲು ನೆಟ್ಟು ಇಲ್ಲವೇ ಇನ್ನೇನಾದರೂ ಬಳ್ಳಿ ಆಸರೆಗೆ ಆಧಾರ ಕೊಟ್ಟು ನೆರಳು ಬಲೆ, ಇಲ್ಲವೇ ಪಾಲೀ ಹೌಸ್ ಒಳಗೆ ಬೆಳೆಸಬಹುದು.
ಚಿತ್ರ ವಿವರ: ೧. ವನಿಲ್ಲಾ ಕೋಡುಗಳು ೨. ವನಿಲ್ಲಾ ಹೂವು ೩. ವನಿಲ್ಲಾ ತೋಟ
ಮಾಹಿತಿ ಮತ್ತು ಚಿತ್ರ ಕೃಪೆ: ರಾಧಾಕೃಷ್ಣ ಹೊಳ್ಳ.
Comments
ಇಪ್ಪತ್ತು ವರುಷಗಳ ಮುಂಚೆ ಹಲವು…
ಇಪ್ಪತ್ತು ವರುಷಗಳ ಮುಂಚೆ ಹಲವು ರೈತರು ವೆನಿಲ್ಲಾ ಬಳ್ಳಿ ನೆಟ್ಟು ಬಂಗಾರದ ಬೆಳೆಯ ಕನಸು ಕಂಡರು. ಅವರಿಂದ ಬಳ್ಳಿಗಳಿಗೆ ರಾಜೋಪಚಾರ: ಏರುಮಡಿಗಳು, ನೆರಳಿಗಾಗಿ ಅಗ್ರೋನೆಟ್, ನೀರೆರಚಲು ಮಿಸ್ಟರ್, ಕಾವಲಿಗಾಗಿ ನಾಯಿಗಳು, ಸೆಕ್ಯುರಿಟಿ ಆಳುಗಳು! ಆ ಕಾಡುಬಳ್ಳಿಗೆ ಇವೆಲ್ಲ ಬೇಡವಾಗಿತ್ತು. ಕೊನೆಗೆ, ನಷ್ಟವಾಯಿತೆಂದು ಬಳ್ಳಿಗಳನ್ನೆಲ್ಲ ಕಿತ್ತೆಸೆದರು.