ನಿಲ್ಲು ನಿಲ್ಲೆ ಪತಂಗ
ಕಥೆಗಾರ್ತಿ ಶೈಲಜಾ ಹಾಸನ ಇವರು ಬರೆದ ‘ನಿಲ್ಲು ನಿಲ್ಲೆ ಪತಂಗ' ಕಥಾ ಸಂಕಲನವು ಬಿಡುಗಡೆಯಾಗಿದೆ. ಈ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಬರಹಗಾರರಾದ ಸಂತೋಷ್ ಕುಮಾರ್ ಮೆಹೆಂದಳೆ ಇವರು. ಇವರು ತಮ್ಮ ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವನೆಗಳ ಆಯ್ದ ಭಾಗ ನಿಮ್ಮ ಓದಿಗಾಗಿ...
“ಸಂಜೆ ಸಾಹಿತ್ಯ ಪ್ರಶಸ್ತಿ ಪಡೆದ ಕಥಾ ಸಂಕಲನ "ನಿಲ್ಲುನಿಲ್ಲೆ ಪತಂಗ.." ದೊಡ್ಡ ಮಟ್ಟದ ಸ್ಪರ್ಧೆಯನ್ನು ಎದುರಿಸಿ ಗೆದ್ದ ಕೃತಿ. ಮೊಟ್ಟ ಮೊದಲ ಸಂಜೆ ಸಾಹಿತ್ಯ ಪ್ರಶಸ್ತಿ 2022 ನ್ನು ಮುಡಿಗೇರಿಸಿಕೊಂಡ ಹೆಮ್ಮೆಯೂ ಹೌದು. ಸಂಚಾಲಕ ಮತ್ತು ನಿರ್ಣಾಯಕನಾಗಿ ಎರಡೂ ಸ್ಥಳದಲ್ಲಿ ನಿಂತು ಕಾರ್ಯ ನಿರ್ವಹಿಸುವಾಗ ನಾನು ಎದುರಿಸಿದ ಸವಾಲು ನಿಜಕ್ಕೂ ದೊಡ್ಡದು. ಆದರೆ ಅಂತಿಮವಾಗಿ ಗೆದ್ದ ಕೃತಿಯ ಬಗ್ಗೆ ಕನ್ನಡ ಕಥಾಲೋಕಕ್ಕೆ ಅತ್ಯಂತ ನ್ಯಾಯಯುತ ಮತ್ತು ಜವಾಬ್ದಾರಿಯುತ ನಿರ್ಣಯವನ್ನು ನೀಡಿದ ತೃಪ್ತಿ ನನಗೂ, ನಮ್ಮ ನಿರ್ಣಾಯಕರಿಗೂ ಇದೆ.
"ನಿಲ್ಲು ನಿಲ್ಲೆ ಪಂತಂಗ" ಕೇವಲ ಕಥಾ ಸಂಕಲನವಾಗಿ ನಮ್ಮನ್ನು ತಾಕುವುದಿಲ್ಲ. ಅದರಲ್ಲೊಂದು ಜತೆಜತೆಗೆ ಕರೆದೊಯ್ಯುವ ಮತ್ತು ಚಿತ್ರಣವನ್ನು ಚಿತ್ರವಾಗಿ ಬದಲಾಯಿಸುವ ಆಸ್ಥೆಯ ಕುಸುರಿ ಕೆಲಸದ, ಮನಸ್ಸಿಗೆ ಸರಕ್ಕನೆ ಒಮ್ಮೆ ತಾಕಿ ನಿಲ್ಲುವ ಗಟ್ಟಿ ಗುಣವಿದೆ.
ಕತೆಗಳೆಂದರೆ ಸಂಗತಿಗಳನ್ನು ಜೀವಂತವಾಗಿ ನಮ್ಮೆದುರಿಗೆ ತೆರೆದಿಡುತ್ತಾ ಹಸಿ ಬಿಸಿ ಸತ್ಯಗಳನ್ನು ಬೆತ್ತಲು ಮಾಡುತ್ತಾ, ಇದೆಲ್ಲ ನಮಗೂ ಎಲ್ಲೊ ಕನೆಕ್ಟ್ ಆಗುವ ಗಾಢ ಪ್ರಕ್ರಿಯೆ. ಆ ನಿಟ್ಟಿನಲ್ಲಿ ಶೈಲಜಾ ಹಾಸನ ಗೆಲ್ಲುತ್ತಾರೆ. ಓದುಗನಾಗಿ ಕತೆಯಾಳಕ್ಕೆ ಒಯ್ಯುತ್ತಾ ನಮ್ಮ ನಿರೀಕ್ಷೆಗಳನ್ನು ಮತ್ತೊಂದು ದಿಕ್ಕಿಗೆ ತಿರುಗಿಸಿ ಸುಳ್ಳಾಗಿಸುವ, ಕೆಲವೊಮ್ಮೆ ಅದಕ್ಕೂ ಮಿರಿದ ತಿರುವು ಮತ್ತು ಫಲಿತಾಂಶ ನೀಡುವ ಕತೆಗಳನ್ನು ನಾಜೂಕಾಗಿ ಕಟ್ಟಿದ ಶೈಲಜಾ ಅವರು ಪಾತ್ರಗಳ ತಲ್ಲಣ, ವಿಷಾದ, ಅನುಸರಿಸುವಿಕೆ, ಮೌನ, ಆಂದೋಳನ, ಅವ್ಯಕ್ತ ನಿಜಾಯಿತಿಗಳನ್ನು ಬಿಚ್ಚಿಡುತ್ತಾ ವಾಸ್ತವ ಸತ್ಯಗಳಿಗೆ ಹತ್ತಿರವಾಗಿಸುತ್ತಾ ಸಾಗುವ ದಾರಿಯಲ್ಲಿ, ಪಾತ್ರಗಳು ಬಹುಶ: ಕತೆಗಾರ್ತಿಯ ಹಿಡಿತ ಮೀರಿ ಬೆಳೆದು ನಿಂತಿರುವ ಹೆಗ್ಗಳಿಕೆಯೂ ಇದೆ ಎನ್ನಿಸಿದೆ.
ಅಷ್ಟರ ಮಟ್ಟಿಗೆ ಪಾತ್ರಗಳನ್ನು ದುಡಿಸಿಕೊಳ್ಳುವ ಪರಿ ಅನನ್ಯ. ಹೆಚ್ಚಿನ ಕತೆಗಳು ಅನಿರೀಕ್ಷಿತತೆ ಮತ್ತು ತಲ್ಲಣಗಳ ಸಂಗಮವಾಗಿದ್ದರೆ, ಊಹೆಗೂ ಮೀರಿದ ವಿಷಯ ವಸ್ತುವನ್ನು ಆಯ್ಕೆ ಮಾಡಿಕೊಂಡು ಸೃಷ್ಠಿಸಿದ ಸಂಗತಿಗಳನ್ನು ಓದುವಾಗ ಸಾಮಾನ್ಯ ಓದುಗನಿಗೆ ಮತ್ತು ಸಾಹಿತ್ಯಿಕ ವಿದ್ಯಾರ್ಥಿಗೂ ಸಮತೋಲಿತ ಅಕ್ಷರ ಸಾಂಗತ್ಯ ಏರ್ಪಡಿಸುವಂತೆ ಹೆಣೆದ ಪರಿ ಆಪ್ತವಾಗುತ್ತದೆ. ತಲೆ ಬರಹಗಳ ಮಟ್ಟಿಗೆ ಇನ್ನಿಷ್ಟು ಆಳವಾದ ವಿಶ್ಲೇಷಣ ಚಿಂತನೆ ಬೇಕೆನ್ನುವುದು ನನ್ನ ಅನಿಸಿಕೆ.
ಕಾರಣ, ಕತೆಗಳ ಹಿಡಿದು ನಿಲ್ಲಿಸುವ ಓದಿಸಿಕೊಳ್ಳುವ ಗುಣ ಎಂದರೆ ಮೊದಲಿಗೆ ಅದರ ತಲೆ ಬರಹಗಳೇ. ಹಾಗಾಗಿ ಕತೆಗೆ ಪೂರಕವಾದ ಅದರ ತಿರುಳನ್ನು ಮೈಗೂಡಿಸಿಕೊಂಡ, ಆದರೆ ಮೊದಲ ಓದಿಗೇ ಕ್ಯಾಚಿ ಎನ್ನಿಸುವ ಟೈಟಲ್ ಕೊಡುವಲ್ಲಿ ಇನ್ನಿಷ್ಟು ಕಸುಬುದಾರಿಕೆ ಖಂಡಿತ ಬೇಕು. ಅಕಸ್ಮಾತ ಟೈಟಲ್ ಓದಿಕೊಂಡು ಏನೋ ನಾರ್ಮಲ್ ಕತೆಗಳಿರಬಹುದು ಎಂದು ಬಿಟ್ಟು ಹೋಗುವ ಅಪಾಯಕ್ಕೂ ಕತೆಗಳು ಸಿಲುಕುವ ಸಾಧ್ಯತೆ ಇದೆ. ಹಾಗಾದಲ್ಲಿ ಓದುಗನಿಗೆ ಆಗುವ ಲುಕ್ಸಾನು ಇತ್ತ ಕತೆಗಾರ್ತಿಗೆ ಆಗುವ ಸಾಹಿತ್ಯಿಕ ನಷ್ಟವೂ ಹೌದು. ಆ ನಿಟ್ಟಿನಲ್ಲಿ ಪಾತ್ರಗಳ ಆಯ್ಕೆ ಹೇಗೆ ಜಾಗರೂಕತೆಯಿಂದ ಹೆಣೆಯುತ್ತಿರೋ, ಅದೇ ರೀತಿ ತಲೆ ಬರಹಕ್ಕೂ ಆದೇ ಆಸ್ಥೆ ವಹಿಸಬೇಕಾದ ಜರೂರತ್ತಿದೆ ಎನ್ನುವುದು ಕತೆಗಾರ ಓದುಗನಾಗಿ ಅನಿಸಿಕೆ.
ಉಳಿದಂತೆ ಕತೆಗಳು ಎಲ್ಲ ಅತ್ಯುತ್ತಮವಾದವು ಎಂದೇನಲ್ಲ. ಆದರೆ ವಿಭಿನ್ನ ಕಥಾ ವಸ್ತುವಿನ ಮೂಲಕ ಮತ್ತು ಸರಳ ಮಾಹಿತಿಯ ಕತೆಗಳನ್ನೂ ತಮ್ಮ ಶೈಲಿಯ ಮೂಲಕ, ಕೆಲವೊಮ್ಮೆ ಕತೆ ಹೇಳುವಿಕೆ ಮೂಲಕ, ಭಾವಗಳು ಧ್ವನಿಸುವ ಬರಹದಲ್ಲಿ ಹಿಡಿದಿಟ್ಟುಕೊಳ್ಳುವಿಕೆಯ ಹಿಡಿತ ಗಮನೀಯ ಕಾರಣಕ್ಕಾಗಿ ಆ ಋಣಾತ್ಮಕತೆಯನ್ನು ಮೀರಿ ಓದುಗನನ್ನು ಹಿಡಿದುಕೊಳ್ಳುತ್ತದೆ. ಹಾಗಾಗಿ ಸಾಧಾರಣ ವಿಷಯ ವಸ್ತುಗಳೂ ಕೂಡಾ ಇಲ್ಲಿ ಮಿಂಚಿವೆ. ಅದು ನಿರ್ಣಾಯಕರ ಮನಗೆದ್ದ ತಾಂತ್ರಿಕ ಅಂಶವೂ ಹೌದು.
ಪ್ರಜ್ಞಾ ಮತ್ತಿಹಳ್ಳಿ. ಧಾರವಾಡ, ಶ್ರೀದೇವಿ ಕೆರೆಮನೆ, ಶ್ರೀ ಬಸವಣ್ಣೆಪ್ಪ ಕುಂಬಾರ ಹಾಗು ಅನಾಮಧೇಯ ಓದುಗ, ಲೇಖಕಿಯೊಬ್ಬರು ಈ ಸಂಕಲನಗಳ ಮೊದಲ ಸುತ್ತಿನ ಭಾರಿ ಸವಾಲನ್ನು ಎದುರಿಸಿ ನಮ್ಮ ಹಾದಿ ಸುಗಮಗೊಳಿಸಿದವರು.
ನಂತರದಲ್ಲಿ ಅಂತಿಮ ಸ್ಪರ್ಧೆಯಲ್ಲಿ ಉಳಿದವರ ಕತೆಯನ್ನು ಹರಡಿಕೊಂಡು ಕೂತದ್ದು ಹಿರಿಯ ಪತ್ರಕರ್ತೆ ಮತ್ತು ಮಾಜಿ ಸಂಪಾದಕರಾದ ಶ್ರೀಮತಿ ಕೆ.ಹೆಚ್. ಸಾವಿತ್ರಿ ಅವರ ಜೊತೆ. ಅಂತೂ ಅಂತಿಮ ಸಂಕಲನ ಆಯ್ದುಕೊಳ್ಳುವ ನಿಟ್ಟಿನಲ್ಲಿ ಹೆಣಗಾಡಿದ್ದೂ ಹೌದು.
ಪ್ರಸ್ತುತ ಪ್ರಶಸ್ತಿಗಳೆಲ್ಲ ರಾಜಕೀಯಕ್ಕೆ ತುತ್ತಾಗುವಾಗ ಸೂಕ್ತವಾದ ಆಯ್ಕೆ ಮಾಡಿದ್ದೇವೆ ಎಂಬ ಹೆಮ್ಮೆಯೊಂದಿಗೆ, ಸ್ಪರ್ಧೆಗೆ ಬಂದ ಕನ್ನಡದ ಪ್ರಮುಖ ಕತೆಗಾರರ ಸಂಕಲನದ ಸ್ಪರ್ಧೆಯಲ್ಲಿ ಆಯ್ಕೆಯಾಗಿ ಅದರಲ್ಲೂ ಸಂಜೆ ಸಾಹಿತ್ಯ-2022 ರ ಪ್ರಥಮ ಪುರಸ್ಕಾರಕ್ಕೆ ಆಯ್ಕೆಯಾಗಿರುವ ಎನ್. ಶೈಲಜಾ ಹಾಸನ ಅವರನ್ನು ಹೃದಯಪೂರ್ವಕವಾಗಿ ಅಭಿನಂದಿಸುತ್ತಾ, ಬರಲಿರುವ ದಿನಗಳಲ್ಲಿ ಹೆಚ್ಚಿನ ಮುತುವರ್ಜಿಯ ಬರಹಗಳನ್ನು ಅವರಿಂದ ನಿರೀಕ್ಷಿಸುತ್ತಾ, ಶುಭ ಕೋರುವೆ” ೧೨೬ ಪುಟಗಳ ಈ ಕಥಾ ಸಂಕಲನದ ಕಥೆಗಳು ಸರಾಗವಾಗಿ ಓದಿಸಿಕೊಂಡು ಹೋಗುವಂತಿದೆ.