ನಿವೃತ್ತ ಬ್ಯಾಂಕ್ ಅಧಿಕಾರಿಗಳು ನ್ಯಾಯಕ್ಕಾಗಿ ಧ್ವನಿ ಎತ್ತಬೇಕಾಗಿದೆ

ನಿವೃತ್ತ ಬ್ಯಾಂಕ್ ಅಧಿಕಾರಿಗಳು ನ್ಯಾಯಕ್ಕಾಗಿ ಧ್ವನಿ ಎತ್ತಬೇಕಾಗಿದೆ

"ನಿವೃತ್ತ ಬ್ಯಾಂಕ್ ಅಧಿಕಾರಿಗಳು ಪೆನ್-ಷನ್ ಮತ್ತು ಉಳಿತಾಯದ ಹಣದಿಂದಲೇ ಜೀವನ ಸಾಗಿಸಬೇಕಾಗಿದೆ. ಆದರೆ, ಠೇವಣಿಗಳ ಬಡ್ಡಿದರದಲ್ಲಿ ಅರ್ಧಕ್ಕರ್ಧ ಕಡಿತವಾಗಿದೆ ಮತ್ತು ವಸ್ತುಗಳ ಬೆಲೆಗಳಲ್ಲಿ ಭಾರೀ ಹೆಚ್ಚಳವಾಗಿದೆ. ಇದರಿಂದಾಗಿ ಅವರಿಗೆ ಬದುಕು ಸಾಗಿಸುವುದೇ ದುಸ್ತರವಾಗಿದೆ. ಇಂತಹ ಸನ್ನಿವೇಶದಲ್ಲಿ, ಸರಕಾರ ಮತ್ತು ಬ್ಯಾಂಕ್ ಉದ್ಯೋಗಿಗಳ ವೇತನ ಪರಿಷ್ಕರಣೆ ಮಾಡುವಂತೆ ನಿವೃತ್ತ ಬ್ಯಾಂಕ್ ಅಧಿಕಾರಿಗಳ ಪೆನ್-ಷನ್ ಅನ್ನೂ ಮೂರ್ನಾಲ್ಕು ವರುಷಗಳಿಗೊಮ್ಮೆ ಸರಕಾರ ಪರಿಷ್ಕರಿಸ ಬೇಕಾಗಿದೆ” ಎಂದು ಸುಪ್ರಿತ ಸರ್ಕಾರ್, ಪ್ರಧಾನ ಕಾರ್ಯದರ್ಶಿ, ಅಖಿಲ ಭಾರತ ಬ್ಯಾಂಕ್ ಪಿಂಚಣಿದಾರರು ಮತ್ತು ನಿವೃತ್ತರ ಒಕ್ಕೂಟ ಅವರು ಕಾರ್ಪೊರೇಷನ್ ಬ್ಯಾಂಕ್ ನಿವೃತ್ತ ಅಧಿಕಾರಿಗಳ ಅಸೋಸಿಯೇಷನಿನ 9ನೇ ತ್ರೈವಾರ್ಷಿಕ ಸಮ್ಮೇಳನದ ಮುಖ್ಯ ಅತಿಥಿಯಾಗಿ ಮಾತನಾಡುತ್ತಾ ತಿಳಿಸಿದರು.

ಮಂಗಳೂರಿನ ಸಂಘನಿಕೇತನದ ಸಭಾಭವನದಲ್ಲಿ 27-7-2022ರ ಪೂರ್ವಾಹ್ನ ಜರಗಿದ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ನೆರೆದಿದ್ದ ಸುಮಾರು ಒಂದು ಸಾವಿರ ಸದಸ್ಯರನ್ನು ಉದ್ದೇಶಿಸಿ ತಮ್ಮ ಮಾತನ್ನು ಮುಂದುವರಿಸಿದ ಅವರು, ತಮ್ಮ ನ್ಯಾಯಬದ್ಧ ಹಕ್ಕುಗಳಿಗಾಗಿ ನಿವೃತ್ತ ಬ್ಯಾಂಕ್ ಅಧಿಕಾರಿಗಳು ಕಳೆದ ಒಂದು ದಶಕದಿಂದ ಹೋರಾಡುತ್ತಿದ್ದರೂ ಸರಕಾರವು ಸ್ಪಂದಿಸಿಲ್ಲ. ಆದ್ದರಿಂದ, ಹೋರಾಟವನ್ನು ತೀವ್ರಗೊಳಿಸಬೇಕಾಗಿದೆ. ಮೊದಲ ಹಂತದಲ್ಲಿ, ಡಿಜಿಟಲ್ ಪ್ರತಿಭಟನೆಯನ್ನು ಯೋಜಿಸಲಾಗಿದೆ. ಪ್ರತಿಯೊಬ್ಬ ನಿವೃತ್ತ ಬ್ಯಾಂಕ್ ಅಧಿಕಾರಿಯೂ ನ್ಯಾಯಕ್ಕಾಗಿ ಆಗ್ರಹಿಸುವ ಪತ್ರವನ್ನು ಸರಕಾರಕ್ಕೆ ಇ-ಮೆಯಿಲ್ ಮೂಲಕ ಆಗಸ್ಟ್ 1ರಿಂದ ಆಗಸ್ಟ್ 15ರ ಅವಧಿಯಲ್ಲಿ ಕಳಿಸಬೇಕೆಂದು ಕರೆಯಿತ್ತರು. ವಯಸ್ಸು ಹೆಚ್ಚಾದಂತೆ ನಿವೃತ್ತರ ವೈದ್ಯಕೀಯ ವೆಚ್ಚವೂ ಹೆಚ್ಚಾಗುತ್ತಿದೆ. ಆದರೆ ವೈದ್ಯಕೀಯ ವಿಮೆಯ ಕಂತುಗಳನ್ನು ಕಳೆದ 7 ವರುಷಗಳಲ್ಲಿ 7 ಪಟ್ಟು ಏರಿಸಲಾಗಿದ್ದು, ಇದರಿಂದಾಗಿ ಬ್ಯಾಂಕುಗಳಲ್ಲಿ ದಶಕಗಳ ಕಾಲ ದುಡಿದಿರುವ ನಿವೃತ್ತರಿಗೆ ಇಳಿವಯಸ್ಸಿನಲ್ಲಿ ಹೇಗೆ ಅನ್ಯಾಯವಾಗಿದೆ ಎಂಬುದನ್ನು ವಿವರಿಸಿದ ಅವರು ಇದರಲ್ಲಿಯೂ ಸರಕಾರ ನ್ಯಾಯ ಒದಗಿಸಬೇಕಾಗಿದೆ ಎಂದರು.

ಅನಂತರ, ಅಖಿಲ ಭಾರತ ಬ್ಯಾಂಕ್ ಪಿಂಚಣಿದಾರರು ಮತ್ತು ನಿವೃತ್ತರ ಒಕ್ಕೂಟದ ಅಧ್ಯಕ್ಷರಾದ ಕೆ.ವಿ. ಆಚಾರ್ಯ ಅವರು ಸಮ್ಮೇಳನದಲ್ಲಿ ಉಪನ್ಯಾಸ ನೀಡಿದರು. ಒಂದು ಸಾವಿರ ನಿವೃತ್ತ ಅಧಿಕಾರಿಗಳು ಭಾಗವಹಿಸುತ್ತಿರುವ ಈ ಸಮ್ಮೇಳನವು ಚಾರಿತ್ರಿಕ ಎಂದವರು ಘೋಷಿಸಿದರು. ನಿವೃತ್ತ ಬ್ಯಾಂಕ್ ಅಧಿಕಾರಿಗಳ ಪಿಂಚಣಿಯ ಪರಿಷ್ಕರಣೆಯನ್ನು ಪ್ರಸ್ತಾಪಿಸಿದಾಗೆಲ್ಲ ಭಾರತೀಯ ಬ್ಯಾಂಕ್‌ಗಳ ಅಸೋಸಿಯೇಷನ್ ವಿವಿಧ ಬ್ಯಾಂಕುಗಳ ಅನುತ್ಪಾದಕ ಸಾಲ (ಎನ್.ಪಿ.ಎ.)ದಿಂದಾಗಿ ಪರಿಷ್ಕರಣೆ ಸಾಧ್ಯವಿಲ್ಲ ಎನ್ನುತ್ತಿದೆ. ಈ ಅನುತ್ಪಾದಕ ಸಾಲಗಳಿಗೆ ನಿವೃತ್ತ ಬ್ಯಾಂಕ್ ಅಧಿಕಾರಿಗಳು ಕಾರಣರಲ್ಲ. ಅದಕ್ಕೆ ಬ್ಯಾಂಕಿನ ಉನ್ನತ ಅಧಿಕಾರಿಗಳು ಮತ್ತು ಆಡಳಿತ ಮಂಡಲಿಗಳೇ ಹೊಣೆಗಾರರು. ಆದ್ದರಿಂದ ಆ ನೆವನವನ್ನು ಮುಂದಿಟ್ಟುಕೊಂಡು, ಪಿಂಚಣಿ ಪರಿಷ್ಕರಣೆಯನ್ನು ಮಾಡದಿರುವುದು ಸರಿಯಲ್ಲವೆಂದು ಅವರು ವಿವರಿಸಿದರು.

ಸಮ್ಮೇಳನದಲ್ಲಿ ಎಂಭತ್ತು ವರುಷ ದಾಟಿದ ಹತ್ತು ನಿವೃತ್ತ ಅಧಿಕಾರಿಗಳನ್ನು ಸನ್ಮಾನಿಸಲಾಯಿತು (ಫೋಟೋ 1 ನೋಡಿ) ಹಾಗೆಯೇ, ಕಾರ್ಪೊರೇಷನ್ ಬ್ಯಾಂಕ್ ನಿವೃತ್ತ ಅಧಿಕಾರಿಗಳ ಅಸೋಸಿಯೇಷನಿಗೆ 25 ವರುಷ ತುಂಬಿರುವ ಈ ಸಂದರ್ಭದಲ್ಲಿ, ಅಸೋಸಿಯೇಷನನ್ನು ಮುನ್ನಡೆಸಿದ್ದ ಮುಂಚಿನ ಅಧ್ಯಕ್ಷರುಗಳನ್ನೂ ಪ್ರಧಾನ ಕಾರ್ಯದರ್ಶಿಗಳನ್ನೂ ಗೌರವಿಸಲಾಯಿತು.

ಅಪರಾಹ್ನದ ಕಾರ್ಯಕಲಾಪದಲ್ಲಿ ಪ್ರಧಾನ ಕಾರ್ಯದರ್ಶಿಯ ವರದಿ ಮಂಡನೆಯ ಬಳಿಕ, ಕಳೆದ ನಾಲ್ಕು ವರುಷಗಳ ಲೆಕ್ಕಪತ್ರ ಮಂಡನೆ ಹಾಗೂ ಅನುಮೋದನೆ ಮತ್ತು ಮುಂದಿನ ಸಾಲಿಗೆ ಕಾರ್ಪೊರೇಷನ್ ಬ್ಯಾಂಕ್ ನಿವೃತ್ತ ಅಧಿಕಾರಿಗಳ ಅಸೋಸಿಯೇಷನಿನ ಪದಾಧಿಕಾರಿಗಳ ಚುನಾವಣೆ ಜರಗಿತು.

ಆರಂಭದಲ್ಲಿ, ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾದ ವಿ. ಭಾಸ್ಕರ ಪೈ ಸ್ವಾಗತಿಸಿದರು. ಕಾರ್ಪೊರೇಷನ್ ಬ್ಯಾಂಕ್ ನಿವೃತ್ತ ಅಧಿಕಾರಿಗಳ ಅಸೋಸಿಯೇಷನಿನ ಪ್ರಧಾನ ಕಾರ್ಯದರ್ಶಿ ಡಿ.ಎನ್. ಪ್ರಕಾಶ್ ಪ್ರಸ್ತಾವನೆಗೈದರು. ಸ್ವಾಗತ ಸಮಿತಿಯ ಕಾರ್ಯದರ್ಶಿ ಕೆ. ಗೋಪಾಲಕೃಷ್ಣ ಮಯ್ಯರು ಧನ್ಯವಾದ ಸಮರ್ಪಿಸಿದರು.

ಫೋಟೋ 2: ಮಂಗಳೂರಿನಲ್ಲಿ ಕಾರ್ಪೋರೇಷನ್ ಬ್ಯಾಂಕ್ ನಿವೃತ್ತ ಅಧಿಕಾರಿಗಳ ಅಸೋಸಿಯೇಷನಿನ 9ನೇ ತ್ರೈವಾರ್ಷಿಕ ಸಮ್ಮೇಳನದ ಉದ್ಘಾಟನೆ