ನಿವೇಶನಗಳ ನಕಲಿ ಮಾರಾಟ!

ನಿವೇಶನಗಳ ನಕಲಿ ಮಾರಾಟ!

ರಾಜಧಾನಿ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳೂ ಸೇರಿದಂತೆ ಕೆಲವು ಕಡೆ ನಿವೇಶನಗಳ ನಕಲಿ ದಾಖಲೆಗಳ ಸೃಷ್ಟಿ ಮತ್ತು ದಂಧೆ ಶುರುವಾಗಿರುವುದು ಗಂಭೀರ ಸಂಗತಿ. ನಿವೇಶನದ ಮೂಲ ವಾರಸುದಾರ ಅಥವಾ ಖಾತಾದಾರನಿಗೆ ಯಾವುದೇ ಒಂದು ಸಣ್ಣ ಸುಳಿವೂ ದೊರೆಯದ ಹಾಗೆ ವ್ಯವಸ್ಥಿತ ರೀತಿಯಲ್ಲಿ ಇಂತಹ ದಂಧೆ ನಡೆಯುವುದೆಂದರೆ ಇದರ ಬಗ್ಗೆ ಸಮಾಜ ಎಚ್ಚರದಿಂದರಬೇಕು.

ರಾಜಧಾನಿ ಸುತ್ತಲೂ ಇಂದು ಕೃಷಿ ಭೂಮಿ ಕೂಡಾ ನಿವೇಶನಗಳಾಗಿ ಪರಿವರ್ತಿತವಾಗಿದೆ. ಇದರಿಂದ ರಿಯಲ್ ಎಸ್ಟೇಟ್ ಉದ್ಯಮ ಇಡೀ ಏಷ್ಯಾ ಖಂಡದಲ್ಲೇ ಮುಂಚೂಣಿಯಲ್ಲಿದೆ. ಹೀಗಾಗಿ ಭೂ ದಂಧೆಕೋರರು ಅಮಾಯಕರ ಜಮೀನು ಕಬಳಿಸುವ ದಿಶೆಯಲ್ಲಿ ಹಣೆಯುವ ವಂಚನೆಯ ಜಾಲದ ಸ್ವರೂಪಗಳೂ ಭಯಂಕರ ! ಖಾತಾದಾರನ ಹೆಸರಿನಲ್ಲಿರುವ ಮೂಲ ಕ್ರಯ ಪತ್ರಗಳ ವಿವರಗಳನ್ನು ನಕಲು ಮಾಡುವುದಲ್ಲದೆ ಜಮೀನಿನ ಮೇಲೆ ಕೋರ್ಟ್ ವಿವಾದಗಳನ್ನೂ ಕೃತಕವಾಗಿ ಹುಟ್ಟುಹಾಕಿ ಅದನ್ನು ತದನಂತರ ತಮಗೆ ಬೇಕಾದ ರೀತಿಯಲ್ಲಿ ಜಮೀನನ್ನು ಹೊಂದುವಂತಹ ವಂಚಕರ ಜಾಲವಿದೆ ಎಂದಾಗ ಕೆಲವರಿಗೆ ಆಘಾತ ಮತ್ತು ಆತಂಕವಾಗುವುದು ಸಹಜ. ಏಕೆಂದರೆ ಇಂದು ಸಾಮಾನ್ಯ ಗಾತ್ರದ ನಿವೇಶನವೊಂದನ್ನು ಹೊಂದಿರುವ ಸಾಮಾನ್ಯ ಪ್ರಜೆ. ತಾನು ಸೈಟು ಖರೀದಿಸಿದ ಜಾಗದಲ್ಲಿಯೇ ಸ್ವಂತ ಮನೆಯನ್ನು ಕಟ್ಟಿಕೊಂಡು ವಾಸ ಮಾಡುವ ಸ್ಥಿತಿಯಲ್ಲಿಲ್ಲ. ತಮ್ಮ ಊರಿನ ಬಳಿ ಸೈಟು ಖರೀದಿಸಿದರೂ ತಾನು ನೌಕರಿ ಮಾಡುವ ಪಟ್ಟಣ ಅಥವಾ ನಗರದಲ್ಲಿ ಬಾಡಿಗೆ ಮನೆಯಲ್ಲಿದ್ದುಕೊಂಡು ಜೀವನ ಮಾಡುವಂತಾಗಿರುವುದು ಇಂದಿನ ಎಲ್ಲರ ಸ್ಥಿತಿಯಾಗಿದೆ.

ಹೀಗಾಗಿ ತಾವು ಜೀವನದಲ್ಲಿ ಕಷ್ಟಪಟ್ಟು ಸಂಪಾದಿಸಿ ಖರೀದಿಸಿದ ಸೈಟಿನಲ್ಲಿ ಒಂದಲ್ಲ ಒಂದು ದಿನ ಮನೆ ಕಟ್ಟಬಹುದೆಂಬ ಭರವಸೆಯಲ್ಲಿರುತ್ತಾನೆ. ಆದರೆ ತನ್ನ ಭರವಸೆಗಳನ್ನೇ ಬುಡಮೇಲು ಮಾಡುವಂತಹ ಮೋಸದ ಪ್ರಕರಣಗಳು ನಡೆದಾಗ ನಿಜವಾದ ವಾರಸುದಾರ ಅಥವಾ ನಿವೇಶನದ ಮಾಲಿಕ ಹೌಹಾರುವುದು ಖಂಡಿತ. ತನ್ನ ಹೆಸರಿನಲ್ಲಿರುವ ಖಾತೆಯೇ ಬೇರೆಯವರ ಹೆಸರಿನಲ್ಲಿರುವುದನ್ನು ಕಂಡಾಗ ನಿವೇಶನದ ಅಸಲಿ ವ್ಯಕ್ತಿಯ ಪರಿಸ್ಥಿತಿ ಹೇಗಿರುತ್ತೆ ಎಂಬುವುದನ್ನು ಊಹಿಸುವುದೂ ಕಷ್ಟ. ಪೌತಿ ಖಾತೆಯ ಹೆಸರಿನಲ್ಲಿ ಕೆಲ ವ್ಯಕ್ತಿಗಳು ವಂಚನೆಯ ಬಲೆ ಬೀಸಿದ್ದಾರೆ. ಮಿಗಿಲಾಗಿ ವ್ಯಾಜ್ಯವೇ ಇಲ್ಲದಂತಹ ನಿವೇಶನದ ಹೆಸರಿನಲ್ಲಿ ಇಲ್ಲಸಲ್ಲದ ವ್ಯಾಜ್ಯಗಳನ್ನು ಹುಟ್ಟುಹಾಕಿ ಕೊನೆಗೆ ಕೋರ್ಟ್ ಮುಂದೆ ರಾಜಿಯಾಗುವುದಲ್ಲದೆ ಕೋರ್ಟಿನಿಂದ ತೀರ್ಪುಗಳನ್ನೂ ಪಡೆದು ಜಮೀನು ಕಬಳಿಸಲು ಮುಂದಾಗಿರುವುದು ಅಪಾಯಕಾರಿ ವಿದ್ಯಮಾನ. ಎಲ್ಲಿಯೇ ಆಗಲಿ, ನಿವೇಶನಗಳನ್ನು ಖರೀದಿಸಿದ ಮೇಲೆ ಬಹಳ ದಿನಗಳ ಕಾಲ ಅವುಗಳನ್ನು ಖಾಲಿ ಬಿಡುವಂತಿಲ್ಲ. ಆದರೆ ಇಲ್ಲಿ ನಿವೇಶನ ಖರೀದಿಸಿ ಬೇರೆ ರಾಜ್ಯ ಅಥವಾ ಬೇರೆ ದೇಶಗಳಲ್ಲಿ ವಾಸ ಮಾಡುತ್ತಿರುವವರು ಮನೆ ಕಟ್ಟಲು ಸಾಧ್ಯವಾಗಬಹುದೇನೋ. ಒಂದು ವೇಳೆ ನಿವೇಶನವನ್ನು ಖಾಲಿ ಬಿಟ್ಟರೂ ನಿವೇಶನದ ಸುತ್ತಲೂ ಸೂಕ್ತ ಬೇಲಿ ನಿರ್ಮಿಸಿ ಅಲ್ಲಿ ನಿವೇಶನದಾರರ ಹೆಸರಿನ ಬೋರ್ಡ್ ಅಂಟಿಸಿ ಸೂಕ್ತ ಬಂದೋಬಸ್ತ್ ಮಾಡಿರಬೇಕು. ಒಟ್ಟಿನಲ್ಲಿ ಸಮಾಜದಲ್ಲಿಂದು ಎಲ್ಲ ಬಗೆಯ ಕ್ರಿಮಿನಲ್ ಚಟುವಟಿಕೆಗಳಲ್ಲಿ ಇದು ಕೂಡಾ ಒಂದು ಇದರ ಬಗ್ಗೆ ಸರ್ಕಾರಗಳು ಕೈಗೊಳ್ಳುವ ಕ್ರಮಗಳಿಗಿಂತ ಜನತೆ ಕೂಡಾ ಎಚ್ಚರದಿಂದಿರುವುದು ಲೇಸು.

ಕೃಪೆ: ಹೊಸ ದಿಗಂತ ಪತ್ರಿಕೆ, ಸಂಪಾದಕೀಯ, ದಿ. ೦೯-೦೨-೨೦೨೨ 

ಚಿತ್ರ ಕೃಪೆ: ಅಂತರ್ಜಾಲ ತಾಣ