ನಿಶಾಗೀತ (ಸರೂದ್-ಎ-ಶಬಾನಾ)
ಬರಹ
ನಡು ರಾತ್ರಿಯ ಅನಾಥ ಚಂದ್ರ, ಅನಾಸಕ್ತಿ ಮರೆವು
ಇರುವುದೆಲ್ಲದರ ಮೊತ್ತ ಶೂನ್ಯ.
ವಿಶ್ರಮಿಸಿಹ ಬಯಕೆ-ಬುಗ್ಗೆ, ಮತ್ತೆ
ದಿಕ್ಕು ದೆಸೆಯಿರದ ತಾರಾ ಮೇಳ.
ಹರಿಯುತಿಹ ನಿಶ್ಶಬ್ದದ ಒಂಟಿಝರಿ,
ಸುತ್ತಲೂ ನಿರಾಸಕ್ತಿ ಯೋಗ.
ಬದುಕು, ಕನಸಿನ ಚೂರು-
ಭೂಮಿ, ನೆರಳು-ಬೆಳಕಿನಾ ಆಟ.
ದಟ್ಟಡವಿ ಹಾಸಿನಲಿ ವಿರಮಿಸಿವೆ
ಸೋತಿರುವ ಚಂದ್ರಕಿರಣ ಗಾನ.
ಸ್ವಯವ ನೀಗಿಹ ಸರ್ವಪ್ರೇಮವ
ನೊಂಟಿದನಿ ಉಸುರುತಿದೆ
ಅರೆನಿಮೀಲಿತ ವ್ಯೋಮ.
ಹೃದಯವೀಣೆಯ ಮೀಟದ ತಂತುಗಳಿಂದ
ಹರಿಯುತಿವೆ ಉನ್ಮಾದ ನಾದ -
ಬಯಕೆ, ಕನಸು, ಕನವರಿಕೆಗಳು ಮತ್ತೆ
ನಿನ್ನ ಆ ಅಸ್ಖಲಿತ ಸ್ನಿಗ್ಧ ಮೊಗವು.
Original : Faiz Ahmed Faiz (Sarood-E-Shabaana)