ನಿಶಾಚರ ಪಕ್ಷಿಗಳ ನಿಗೂಢ ಲೋಕ…

ನಿಶಾಚರ ಪಕ್ಷಿಗಳ ನಿಗೂಢ ಲೋಕ…

ಪ್ರಪಂಚದಲ್ಲಿ ಸಾವಿರಾರು ಬಗೆಯ ಪಕ್ಷಿಗಳಿವೆ. ಹಾರಾಡುವ ಪಕ್ಷಿಗಳು, ಹಾರಲಾರದ ಪಕ್ಷಿಗಳು, ನೀರಿನಲ್ಲಿ ಈಜಾಡುವ ಹಕ್ಕಿಗಳು, ಬೆಟ್ಟದ ತುದಿಯಲ್ಲಿ ಗೂಡು ಕಟ್ಟಿಕೊಳ್ಳುವ ಪಕ್ಷಿಗಳು, ಗೂಡನ್ನೇ ಕಟ್ಟದೇ ಬೇರೆ ಪಕ್ಷಿಯ ಗೂಡಲ್ಲಿ ಮೊಟ್ಟೆ ಇಡುವ ಹಕ್ಕಿ, ಪುಟ್ಟ ಹಕ್ಕಿ, ಬೃಹತ್ ಗಾತ್ರದ ಹಕ್ಕಿ, ಹಿಮದಲ್ಲಿ ವಾಸಿಸುವ ಹಕ್ಕಿ ಹೀಗೆಲ್ಲಾ ವಿಧದ ಹಕ್ಕಿಗಳು ನಮ್ಮ ಸುತ್ತಮುತ್ತಲಿನಲ್ಲೇ ಇವೆ. ಕೆಲವು ಹಕ್ಕಿಗಳನ್ನು ನಾವು ಪ್ರಾಣಿ ಸಂಗ್ರಹಾಲಯದಲ್ಲೋ ಹಾಗೂ ಕೆಲವನ್ನು ದೂರದರ್ಶನದಲ್ಲೋ, ಚಿತ್ರದಲ್ಲೋ ನೋಡಿ ಖುಷಿ ಪಡಬೇಕು. 

ನಮ್ಮ ಸುತ್ತಮುತ್ತಲಿರುವ ಹಲವಾರು ಪಕ್ಷಿಗಳನ್ನು ನಾವು ಗುರುತಿಸುವುದೇ ಇಲ್ಲ. ಕೆಲವು ದಿನಗಳ ಹಿಂದೆ ಮಂಗಳೂರು ವಿಶ್ವ ವಿದ್ಯಾನಿಲಯದ ವಿದ್ಯಾರ್ಥಿಗಳು ತಮ್ಮ ಕ್ಯಾಂಪಸ್ ನಲ್ಲಿ ಹಕ್ಕಿ ಹುಡುಕಲು ಹೋಗಿದ್ದರು. ಅವರ ಕಣ್ಣಿಗೆ ನೂರಾರು ಅಪರೂಪದ ಹಕ್ಕಿಗಳು ಸಿಕ್ಕವಂತೆ. ಹುಡುಕಿದರೆ ನಮ್ಮ ಮನೆಯ ಸುತ್ತಲೂ ಹಲವಾರು ಹಕ್ಕಿಗಳು ಸಿಕ್ಕೇ ಸಿಗುತ್ತವೆ. ಗುಬ್ಬಚ್ಚಿಯಿಂದ ಹಿಡಿದು ಈಗ ನವಿಲೂ ಮನೆಯ ಅಂಗಣಕ್ಕೆ ಬಂದು ಕುಳಿತಿದೆ. ಅರಣ್ಯ ನಾಶದಿಂದ, ಹಣ್ಣು ಬಿಡುವ ಮರಗಳು ಕಮ್ಮಿಯಾಗಿವೆ. ಹಣ್ಣು ತಿನ್ನುವ ಹಕ್ಕಿಗಳು ನಾಶವಾಗುತ್ತಿವೆ. ಕೆಲವು ಹಕ್ಕಿಗಳು ಕಾಡಿನಿಂದ ನಾಡಿಗೆ ಬರುತ್ತಿವೆ. ಇದೇ ಕಾರಣದಿಂದ ನಗರದಲ್ಲಿ ನವಿಲುಗಳು ಕಾಣ ಸಿಗುತ್ತಿವೆ. ಅವುಗಳಿಗೆ ಕಾಡು ಇಲ್ಲವಾಗಿದೆ. ಆಹಾರ ಕಮ್ಮಿಯಾಗಿದೆ. ಅದಕ್ಕೇ ಊರಿಗೆ ಬಂದಿದೆ. ಒಂದೆರಡು ಇದ್ದರೆ ಚಂದ ಸುಂದರ. ಆದರೆ ಹಲವಾರು ನವಿಲುಗಳು ಬಂದರೆ ನಿಮ್ಮ ಬೆಳೆ ಮಂಗಮಾಯ.  

ನಾವು ರಾತ್ರಿಯಲ್ಲಿ ಸಂಚಾರ ಮಾಡುವ ನಿಶಾಚರ ಹಕ್ಕಿಗಳ ಬಗ್ಗೆ ಒಂದಿಷ್ಟು ತಿಳಿದುಕೊಳ್ಳುವ. ರಾತ್ರಿಯ ಹೊತ್ತು ಸಕ್ರಿಯವಾಗಿದ್ದು, ಆಹಾರವನ್ನು ಅರಸುವ ಹಕ್ಕಿಗಳನ್ನು ನಿಶಾಚರ ಹಕ್ಕಿಗಳು ಎನ್ನುತ್ತೇವೆ. ಇವು ಹಗಲು ವೇಳೆ ಸೊಗಸಾಗಿ ನಿದ್ರೆ ಮಾಡುತ್ತವೆ. ಕತ್ತಲಿನಲ್ಲಿ ಕೆಲವು ಹಕ್ಕಿಗಳು ಉತ್ತಮ ದೃಷ್ಟಿಯನ್ನು ಹೊಂದಿದ್ದರೂ ಹಗಲಿನಲ್ಲಿ ಇದರ ದೃಷ್ಟಿ ಮಂದವಾಗಿರುತ್ತದೆ. ಈ ಹಕ್ಕಿಗಳಲ್ಲಿ ಪ್ರಮುಖವಾದ ಹಕ್ಕಿಗಳೆಂದರೆ ಗೂಬೆ ಮತ್ತು ಬಾವಲಿ. 

ಬಾವಲಿ ಒಂದು ವಿಶಿಷ್ಟ ಹಕ್ಕಿ. ಇದು ಸಸ್ತನಿ. ಅಂದರೆ ಮೊಟ್ಟೆಯಿಡದೇ ನೇರವಾಗಿ ಮರಿ ಹಾಕುತ್ತದೆ. ಹಾರಾಡುವ ಸಸ್ತನಿ ಎಂದೂ ಇದನ್ನು ಕರೆಯುತ್ತಾರೆ. ಬಾವಲಿಗಳ ದೃಷ್ಟಿ ಮಂದವೇ. ಕಣ್ಣು ಸರಿಯಾಗಿ ಕಾಣಿಸುವುದಿಲ್ಲ. ಆ ಕಾರಣದಿಂದ ಅವುಗಳು ತಮ್ಮ ಬಾಯಿಯ ಮೂಲಕ ಶಬ್ದವನ್ನು ಹೊರಡಿಸಿ ಅದರ ಮೂಲಕ ತಮ್ಮ ಬೇಟೆಯನ್ನು ಹುಡುಕುತ್ತವೆ. ಶ್ರವಣಾತೀತ ಶಬ್ದ ತರಂಗಗಳನ್ನು ಹೊರಡಿಸಿ ಆ ಮೂಲಕ ತಾವು ಹಾರ ಬೇಕಾದ ದೂರ, ದಾರಿಯನ್ನು ಅಂದಾಜು ಮಾಡಿಕೊಳ್ಳುತ್ತದೆ. ಈ ಶಬ್ದ ಕಂಪನಗಳು ಬಾವಲಿಯ ಆಹಾರಕ್ಕೆ ತಗುಲಿ, ಮತ್ತೆ ಮರಳಿ ಪ್ರತಿಸ್ಪಂದನೆಯಾಗುವುದನ್ನು ಗಮನಿಸಿ ಆ ಮೂಲಕ ಬೇಟೆಯಾಡುತ್ತವೆ. ಬಾವಲಿಗಳು ಈ ಮೂಲಕ ಸಣ್ಣ ಸಣ್ಣ ಜೀವಿಗಳು, ಕೀಟಗಳನ್ನು ತಿನ್ನುತ್ತವೆ. ಬಾವಲಿಗಳ ಈ ತಂತ್ರಜ್ಞಾನವನ್ನೇ ಬಳಸಿ ನಾವು ‘ರಾಡಾರ್' ಸಂಶೋಧನೆ ಮಾಡಿದ್ದು.

ಬಾವಲಿಗಳು ಹಗಲಿನಲ್ಲಿ ದೊಡ್ಡ ದೊಡ್ಡ ಮರಗಳಲ್ಲಿ ತಲೆ ಕೆಳಗಾಗಿ ಮಲಗುತ್ತವೆ. ಬಾವಲಿಯ ರೆಕ್ಕೆಗಳಲ್ಲಿ ಗರಿಗಳಿಲ್ಲ, ಒಂದು ರೀತಿಯ ಹಾಳೆಯಂತಹ ವ್ಯವಸ್ಥೆ ಇರುತ್ತದೆ. ಇದಕ್ಕೆ ಏನಾದರೂ ತಗುಲಿ ತೂತಾದರೆ ಮತ್ತೆ ಬಾವಲಿಗೆ ಹಾರಾಟ ಸಾಧ್ಯವಾಗುವುದಿಲ್ಲ. ಬಾವಲಿಗಳಲ್ಲಿ ಕೆಲವು ರಕ್ತ ಹೀರುವ ಜಾತಿಯವೂ ಇರುತ್ತದೆ. ಬಾವಲಿಗಳಿಗೆ ಬಾಯಿಯಲ್ಲಿ ಹಲ್ಲಿನಂತಹ ರಚನೆ ಇರುತ್ತದೆ. ಕೆಲವು ಮಂದಿ ಬಾವಲಿಗಳನ್ನು ಬೇಟೆಯಾಡಿ ಕೊಂಡು ತಿನ್ನುತ್ತಾರೆ. 

ಗೂಬೆ ನಿಜಕ್ಕೂ ಬಹಳ ಸುಂದರ ಪಕ್ಷಿ. ಆದರೆ ಈ ಪಕ್ಷಿಯ ದೇಹ ರಚನೆಯನ್ನು ಗಮನಿಸಿದಾಗ ಹೆದರಿಕೆಯಾಗುತ್ತದೆ. ಮಾನವರಂತೆಯೇ ಎದುರು ಬದಿಯಲ್ಲೇ ಇದರ ದೊಡ್ಡದಾದ ತೀಕ್ಷ್ಣ ಕಣ್ಣುಗಳು ಇರುತ್ತವೆ. ರಾತ್ರಿಯ ವೇಳೆ ಗೂಬೆಯ ಕಣ್ಣುಗಳು ತುಂಬಾ ಚುರುಕಾಗಿ ಕೆಲಸ ಮಾಡುತ್ತವೆ. ಗೂಬೆಯನ್ನು ಬಹಳಷ್ಟು ಮಂದಿ ಅಪಶಕುನ ಹಕ್ಕಿ ಎನ್ನುತ್ತಾರೆ. ಆದರೆ ಅದು ನಮ್ಮ ಬೆಳೆಗೆ ಹಾನಿ ಮಾಡುವ ಇಲಿ, ಹೆಗ್ಗಣ ಮುಂತಾದ ಪುಟ್ಟ ಪುಟ್ಟ ಜೀವಿಗಳನ್ನು ತಿನ್ನುತ್ತವೆ. ಇದು ಒಂದು ರೀತಿಯಲ್ಲಿ ರೈತ ಮಿತ್ರ. ಗೂಬೆಯ ಕತ್ತಿನ ವಿಶೇಷವೆಂದರೆ ಅದರ ಕತ್ತು ಸುಮಾರು ೨೭೦ ಡಿಗ್ರಿಯವರೆಗೂ ತಿರುಗುತ್ತದೆ. ಅಂದರೆ ಗೂಬೆಯು ಕುಳಿತಲ್ಲಿಂದಲೇ ತನ್ನ ಕತ್ತನ್ನು ಹಿಂದಿನ ಭಾಗಕ್ಕೆ ತಿರುಗಿಸಬಲ್ಲುದು. ಗೂಬೆಯ ಶರೀರದ ರಚನೆಯೂ ರಾತ್ರಿ ಸಂಚಾರಕ್ಕೆ ಅನುಕೂಲಕರವಾಗಿದೆ. ಗೂಬೆ ಅಪಶಕುನವೆಂದು ಅದನ್ನು ಕೊಂದು ಹಾಕುತ್ತಾರೆ. ಇದು ತಪ್ಪು. ಗೂಬೆಯ ಸಂತತಿಯು ಕಮ್ಮಿಯಾದರೆ ಇಲಿ ಮತ್ತು ಹೆಗ್ಗಣಗಳ ಸಂಖ್ಯೆ ಹೆಚ್ಚಾಗುತ್ತದೆ. ಆ ಕಾರಣದಿಂದ ಗೂಬೆಯನ್ನು ವಿನಾ ಕಾರಣ ಕೊಲ್ಲುವುದನ್ನು ಬಿಡಬೇಕು.

ಈ ಎರಡು ಹಕ್ಕಿಗಳನ್ನು ಹೊರತು ಪಡಿಸಿ ಇನ್ನೂ ಕೆಲವು ಹಕ್ಕಿಗಳು ರಾತ್ರಿ ಜಾಗರಣೆ ಮಾಡುವುದಿದೆ. ಕಕಾಪೊ ಎಂಬ ಜಾತಿಯ ಗಿಳಿಗಳು ರಾತ್ರಿಹೊತ್ತು ಎಚ್ಚರದಲ್ಲಿರುತ್ತವೆ. ಈ ಗಿಳಿಯ ವಾಸ ನೆಲದಲ್ಲೇ. ಕಲ್ಲುಗಳ, ಬಂಡೆಗಳ ಸಂದಿಗಳಲ್ಲಿರುವ ಬಿಲದಲ್ಲಿ ವಾಸಮಾಡುತ್ತವೆ. ಹಗಲು ಹೊತ್ತು ನಿದ್ರಿಸಿ ರಾತ್ರಿ ಹೊತ್ತು ಹೊರ ಬಂದು ತಮ್ಮ ಆಹಾರವನ್ನು ಅರಸುತ್ತವೆ. ಬೇರೆ ಎಲ್ಲಾ ಗಿಳಿಗಳು ಹಗಲು ಹೊತ್ತಿನಲ್ಲಿ ಮಾತ್ರ ಸಂಚಾರ ನಡೆಸುತ್ತವೆ. ಕಕಾಪೊ ಗಿಳಿ ನ್ಯೂಜಿಲ್ಯಾಂಡ್ ನಲ್ಲಿ ಕಂಡು ಬರುತ್ತದೆ. ಇದು ಗಿಡದ ಎಲೆ, ಚಿಗುರು, ಹಣ್ಣುಗಳನ್ನು ತಿನ್ನುತ್ತದೆ.

ಇನ್ನೊಂದು ರಾತ್ರಿ ಸಂಚಾರಿ ಹಕ್ಕಿಯೆಂದರೆ ಪೂರ್ವಿಲ್ (Poorwill). ಈ ಹಕ್ಕಿಯೂ ಹಗಲಲ್ಲಿ ಸೊಗಸಾಗಿ ನಿದ್ರಿಸಿ ರಾತ್ರಿ ಹೊತ್ತು ಸಂಚಾರ ಮಾಡುತ್ತದೆ. ಇದರ ವೈಶಿಷ್ಟ್ಯವೆಂದರೆ ಹಾರಾಡುವ ಸಮಯದಲ್ಲೇ ಅದು ಕೀಟವನ್ನು ಬಾಯಿಯ ಒಳಗೆ ಎಳೆದುಕೊಳ್ಳುತ್ತದೆ. ಹಾಗೆಯೇ ಅಮೇರಿಕಾದ ಆಯಿಲ್ ಬರ್ಡ್ ಸಹಾ ನಿಶಾಚರ ಪಕ್ಷಿ. ಈ ಪಕ್ಷಿಯೂ ಬಾವಲಿಯಂತೆ ಶಬ್ದ ತರಂಗಗಳನ್ನು ಹೊರಡಿಸಿ ಬೇಟೆಯಾಡುತ್ತದೆ. ನ್ಯೂಜಿಲ್ಯಾಂಡಿನಲ್ಲಿರುವ ಹಾರಲಾಗದ ಹಕ್ಕಿ ಕಿವಿ (Kiwi Bird)ಯೂ ರಾತ್ರಿ ವೇಳೆ ಮಣ್ಣಿನಲ್ಲಿ ಹುದುಗಿರುವ ಹುಳುಗಳನ್ನು ತಿನ್ನುತ್ತವೆ. ಈ ಹಕ್ಕಿಗಳಿಗೆ ವಾಸನೆ ಗ್ರಹಣ ಶಕ್ತಿ ಚೆನ್ನಾಗಿರುತ್ತದೆ.

ನೋಡಿದಿರಲ್ಲವೇ? ಎಷ್ಟೊಂದು ನಿಶಾಚರ ಹಕ್ಕಿಗಳಿವೆ. ನಿಸರ್ಗದ ಸಮತೋಲನವನ್ನು ಕಾಪಾಡಲು ಈ ರೀತಿಯ ಹಕ್ಕಿಗಳು ಬಹಳ ಉಪಕಾರಿ. ಇಲ್ಲವಾದಲ್ಲಿ ನಮಗೆ ಬಹಳ ತೊಂದರೆ ಕೊಡುವ ಇಲಿ, ಹೆಗ್ಗಣಗಳಂತಹ ಜೀವಿಗಳ ಸಂಖ್ಯೆ ವಿಪರೀತವಾಗುತ್ತಿತ್ತು. ನಿಶಾಚರ ಪಕ್ಷಿಗಳು ರಾತ್ರಿ ವೇಳೆ ಚುರುಕಾಗಿದ್ದು, ಬೇಟೆಯಾಡುವುದರಿಂದ ಹಲವಾರು ಉಪದ್ರಕಾರಿ ಜೀವಿಗಳ ಸಂಖ್ಯೆ ನಿಯಂತ್ರಣದಲ್ಲಿ ಇರುತ್ತದೆ.   

ಚಿತ್ರಗಳ ವಿವರ: ೧. ಗೂಬೆ ೨. ಬಾವಲಿ ೩. ಕಕಾಪೊ ಗಿಳಿ ೪. ಪೂರ್ವಿಲ್ ಹಕ್ಕಿ 

ಚಿತ್ರ ಕೃಪೆ: ಅಂತರ್ಜಾಲ ತಾಣ