ನಿಶ್ಯಕ್ತ ಲೋಕಾಯುಕ್ತ

ನಿಶ್ಯಕ್ತ ಲೋಕಾಯುಕ್ತ

ಲೋಕಾಯುಕ್ತಕ್ಕೆ ಹೆಚ್ಚು ಅಧಿಕಾರ ಬೇಕೆಂದು ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ ಇಂಗಿತ ವ್ಯಕ್ತಪಡಿಸಿದ್ದಾರೆ. ಲೋಕಾಯುಕ್ತರೂ ಆಗಿರುವ ಇವರು ಹೇಳಿರುವ ಮಾತುಗಳು ಗಂಭೀರ. ಕರ್ನಾಟಕ ಲೋಕಾಯುಕ್ತ ಗತದಿನಗಳ ಉತ್ತುಂಗವನ್ನು ನೆನೆಸಿಕೊಂಡಲ್ಲಿ ಇಂದಿನ ಲೋಕಾಯುಕ್ತವನ್ನು ದುರ್ಬಲಗೊಳಿಸಿದವರು ಯಾರು? ಈ ಸನ್ನಿವೇಶವೇಕೆ ನಿರ್ಮಾಣವಾಯಿತು ಎಂಬುದು ಪ್ರಶ್ನಾರ್ಹ.

ಅಸಲಿಗೆ ರಾಜ್ಯದಲ್ಲಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಎಂಬ ತನಿಖಾ ಸಂಸ್ಥೆ ಅಗತ್ಯವಿತ್ತೇ? ಲೋಕಾಯುಕ್ತ ಸುಪರ್ದಿಯಲ್ಲಿ ಕೆಲವೊಂದು ತನಿಖೆಗಳು ಪ್ರಗತಿಯಲ್ಲಿದ್ದಾಗ ಇದನ್ನು ನೇಪಥ್ಯಕ್ಕೆ ಸರಿಸಿ ಎಸಿಬಿ ಎಂಬ ರಾಜ್ಯ ಸರ್ಕಾರಿ ನಿರ್ದೇಶಿತ ತನಿಖಾ ಸಂಸ್ಥೆ ಸ್ಥಾಪನೆಗೆ ಹಿಂದಿನ ಸರ್ಕಾರ ಯಾಕೆ ಉತ್ತೇಜನ ನೀಡಿತು? ಸ್ವಾಯತ್ತ ಸಂಸ್ಥೆಯಾದ ಲೋಕಾಯುಕ್ತ ಕಾನೂನು ಪ್ರಕಾರ ತನಿಖೆ ನಡೆಸಲು ರಾಜ್ಯ ಸರಕಾರ ಸಂಪೂರ್ಣ ಅಧಿಕಾರವನ್ನು ನೀಡಲೇ ಇಲ್ಲ ! ಏಕೆಂದರೆ ರಾಜ್ಯ ಸರ್ಕಾರಕ್ಕೆ ಲೋಕಾಯುಕ್ತ ಅಂತಹ ಸಂಸ್ಥೆ ಬಲಗೊಳ್ಳುವುದು ಇಷ್ಟವಿಲ್ಲ. ಭ್ರಷ್ಟಾಚಾರ ನಿಗ್ರಹ ಎಂಬುದು ಅಧಿಕಾರದಲ್ಲಿರುವ ಎಲ್ಲ ಪಕ್ಷಗಳ ಒಣಘೋಷಣೆ! ಆದರೆ ಅನೇಕ ದಿನಗಳಿಂದ ಎಲ್ಲ ಇಲಾಖೆಗಳಲ್ಲಿ ಲಂಚಗುಳಿತನ ಮತ್ತು ಅಕ್ರಮಗಳು ಮುಂದುವರಿದಿರುವಾಗ ಇದನ್ನು ತಡೆಯಲು ಲೋಕಾಯುಕ್ತ ಅಂತಹ ಸ್ವಾಯತ್ತ ಸಂಸ್ಥೆ ಅನಿವಾರ್ಯ ಮತ್ತು ಅಗತ್ಯವೂ ಹೌದು. ವಿಪರ್ಯಾಸ ಎಂದರೆ ಸರ್ಕಾರಗಳು ಈ ದಿಸೆಯಲ್ಲಿ ಜನತೆಯ ಮುಂದೆ ಹೇಳುವುದೊಂದು ಮಾಡುವುದೇ ಮತ್ತೊಂದು. ಮೊದಲಿಗೆ ಎಸಿಬಿ ಎಂಬುದೇ ಲೋಕಾಯುಕ್ತದ ಮೊದಲ ಅಡ್ಡಿ. ಲೋಕಾಯುಕ್ತರಿಗೆ ಹೆಚ್ಚಿನ ಅಧಿಕಾರವನ್ನು ನೀಡುವುದು ಹಾಗಿರಲಿ.

೧೯೮೪ ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಜಾರಿಯಾದ ಲೋಕಾಯುಕ್ತ ಕಾಯಿದೆ ಪ್ರಕಾರ, ಈ ಕಾಯಿದೆಯಲ್ಲಿ ಅಡಕವಾಗಿರುವ ಅಧಿಕಾರವನ್ನು ಸರ್ಕಾರ ಪುನಶ್ಚೇತನಗೊಳಿಸಿದರೆ ಸಾಕು. ಇಷ್ಟಾದರೂ ಸರ್ಕಾರದಿಂದಾದರೆ ಲೋಕಾಯುಕ್ತ ತುಸು ಬಲಗೊಳ್ಳುವುದು ಖಂಡಿತ. ಎಸಿಬಿ ರಚನೆಯಾದ ನಂತರ ರಾಜ್ಯದಲ್ಲಿ ಲೋಕಾಯುಕ್ತಕ್ಕೆ ದೊಡ್ಡ ಹಿನ್ನಡೆಯಾಯಿತು. ಲೋಕಾಯುಕ್ತ ಕಾಯಿದೆಯಡಿ ಬರುವಂತಹ ಕೆಲವೇ ಪ್ರಕರಣಗಳ ತನಿಖೆಯಾದರೂ ಅವುಗಳ ಅಂತಿಮ ವಿಚಾರಣೆ ಮತ್ತು ತನಿಖೆಗೆ ಸರ್ಕಾರದಿಂದಲೇ ಅಡ್ಡಿ ಎಂಬುದೀಗ ಸ್ಪಷ್ಟ. ಪ್ರಕರಣಗಳ ಪೂರ್ವಭಾವಿ ತನಿಖೆಯ ನಂತರ ಅಂತಿಮ ತನಿಖೆಗೆ ಅನುಮತಿ ಕೋರಿ ಲೋಕಾಯುಕ್ತರು ಸರ್ಕಾರಕ್ಕೆ ಪತ್ರ ಬರೆದರೂ ಉತ್ತರವಿಲ್ಲವೆಂದಾದರೆ ಲೋಕಾಯುಕ್ತರ ಕೈಯನ್ನು ದುರ್ಬಲ ಗೊಳಿಸುವ ಕೆಲಸವೇ. ಒಂದು ಕಾಲದಲ್ಲಿ ಎನ್. ವೆಂಕಟಾಚಲ ಮತ್ತು ಸಂತೋಷ್ ಹೆಗ್ಡೆ ಈ ಹುದ್ದೆಯಲ್ಲಿದ್ದುಕೊಂಡು ಕಾಯಿದೆಯಡಿ ಅದೆಷ್ಟು ಕಾರ್ಯ ನಿರ್ವಹಣೆ ಮಾಡಲು ಸಾಧ್ಯ ಎಂಬುದನ್ನು ಅಕ್ಷರಶಃ ಮಾಡಿ ತೋರಿಸಿದವರು. ರಾಜ್ಯದ ಜನತೆಯಲ್ಲಿ ಭರವಸೆ ಮೂಡಿಸಿದವರು. ಈ ಲೋಕಾಯುಕ್ತರು ಸ್ವಲ್ಪ ಮಟ್ಟಿಗಾದರೂ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಶಕ್ತರು ಎಂಬುದನ್ನು ಲೋಕಕ್ಕೆ ಸಾಬೀತು ಪಡಿಸಿದವರು. ೨೦೦೨ರಿಂದ ೨೦೧೩ರವರೆಗೆ ಇಡೀ ದೇಶದಲ್ಲಿಯೇ ಗಟ್ಟಿಯಾದ ಬೇರುಗಳನ್ನು ಹೊಂದಿದ್ದ ಕರ್ನಾಟಕ ಲೋಕಾಯುಕ್ತದ ಕೆಚ್ಚೆದೆಯ ಮತ್ತು ನಿರ್ಭೀತ ಕಾರ್ಯನಿರ್ವಹಣೆಗೆ ಹಲವು ಅಡ್ಡಿಗಳು ನಿರ್ಮಾಣವಾಗಿರುವುದು ಶೋಚನೀಯ.

ಕೃಪೆ: ಹೊಸ ದಿಗಂತ ಪತ್ರಿಕೆ, ದಿ. ೨೬-೦೧-೨೦೨೨, ಸಂಪಾದಕೀಯ