ನಿಷ್ಕಳಂಕ ಮಹಾದೇವ
ಕವನ
ಪಾಂಡು ಪುತ್ರರು ಸಮರಕಣದಲಿ
ತೋರಿ ತಮ್ಮಯ ಶೌರ್ಯವ
ಗೆದ್ದು ಯುದ್ಧವ ಕಾರ್ಯ ಮುಗಿಸಲು
ನೆರವನಿತ್ತನು ಕೇಶವ
ಬಂಧು ಬಾಂಧವರೊಡನೆ ಗುರುಗಳು
ಅಳಿದು ಹೋದರು ಸಮರದಿ
ಪಾಂಡು ಪುತ್ರರ ಬೆನ್ನಿಗಂಟಿತು
ಕೊಂದ ದೋಷದ ಬೇಗುದಿ
ಪಾಪ ಕಳೆಯಲು ಹರಿಯ ಬೇಡಲು
ದೇವನಿತ್ತನು ಗೋವನು
ಕಪ್ಪು ಬಣ್ಣದ ಗೋವನೊಯ್ಯಲು
ಮಾತನೊಂದನು ನುಡಿದನು
ಹಸುವು ಬೆಳ್ಳಗೆ ಬದಲಲಿರುವುದು
ಸ್ಥಳವ ಮರೆಯದೆ ಗುರುತಿಸಿ
ಭಕ್ತಿಯಿಂದಲಿ ಲಿಂಗ ಸ್ಥಾಪಿಸಿ
ನಿಷ್ಠೆಯಿಂದಲೆ ಪೂಜಿಸಿ
ಭಾವ ನಗರದ ಕಡಲ ತಡಿಯಲಿ
ದನದ ಬಣ್ಣವು ಬದಲಿತು
ಲಿಂಗ ಸ್ಥಾಪಿಸಿ ಪೂಜೆ ಮಾಡಲು
ಪಾಪವವರದು ಕಳೆಯಿತು
ನಿತ್ಯ ಕಡಲಲಿ ಮುಳುಗಿ ಇರುವುದು
ಪುಣ್ಯ ಪಾವನ ದೇಗುಲ
ಪೂಜೆಗಾಗಿಯೆ ದಿವಸಕೆರಡ್ಸಲ
ಹಿಂದೆ ಸರಿಯುವ ಸಾಗರ
ಪಾಂಡು ಪುತ್ರರ ಪಾಪ ಕಳೆದಿಹ
ಜಗದ ಒಡೆಯನ ಸ್ಥಳವಿದು
ನಿಷ್ಕಳಂಕ ಮಹಾದೇವ
ಎಂದು ಕ್ಷೇತ್ರದ ಹೆಸರಿದು||
-ಪೆರ್ಮುಖ ಸುಬ್ರಹ್ಮಣ್ಯ ಭಟ್
(ಮಾಹಿತಿ ಅಂತರ್ಜಾಲ ದಿಂದ)
ಚಿತ್ರ್