ನಿಷ್ಪಾಪಿ ಸಸ್ಯಗಳು (ಭಾಗ ೧೦೪) - ಹಾಲು ಗಿಡ

ನಿಷ್ಪಾಪಿ ಸಸ್ಯಗಳು (ಭಾಗ ೧೦೪) - ಹಾಲು ಗಿಡ

ಮಳೆಗಾಲ ಕಾಲಿರಿಸುವ ಮೊದಲೇ ಸಮುದ್ರದ ಮೇಲಿನ ಗಾಳಿಯ ಒತ್ತಡದ ಏರುಪೇರಿನ ಪರಿಣಾಮವಾಗಿ ಎಲ್ಲೆಡೆಯೂ ಸಾಕಷ್ಟು ಮಳೆ ಸುರಿದಾಗಿದೆ. ನನ್ನಂತಹ ಸಾವಿರಾರು ಸಸ್ಯಗಳು ಜೀವ ಕೈಯಲ್ಲಿ ಹಿಡಿದು ಬೇಸಗೆಯ ಬಿಸಿಲಲ್ಲಿ ಬೇಯುವಾಗ ತಂಪೆರೆದ ಮಳೆ ಜೀವ ತುಂಬಿದೆ. ನಾನು ಒಂದು ಪುಟಾಣಿ ಮೂಲಿಕೆ ಜಾತಿಯ ಸಸ್ಯ. ನೆಲದ ಮೇಲೆ ಒಂದಿಷ್ಟೇ ಜಾಗದಲ್ಲಿ ಏರಿ ಅಥವಾ ಹರಡಿಕೊಂಡು ಬೆಳೆಯುತ್ತೇನೆ.

ಬೇಸಿಗೆಯೇ ಆದರೂ ಈಗ ನನ್ನ ಅಂಡಾಕಾರದ ಎಲೆಗಳ ಕಂಕುಳಲ್ಲಿ ನಸು ಬಿಳಿ, ಗುಲಾಬಿ, ಹಸಿರು ಮಿಶ್ರ ವರ್ಣದ ಗೋಳಾಕಾರದ ಹೂಗುಚ್ಛಗಳಿರುತ್ತವೆ. ಗುಲಾಬಿ ದಳಗಳನ್ನು ಹೋಲುವ ಪುಟಾಣಿ ದಳಗಳ ಸಮೂಹಗಳಿಗೆ ಚಿತ್ತಾಕರ್ಷಕ ಸೊಬಗಿದೆ. ಮೂರು ಕವಾಟ ಹೊಂದಿದ‌ ಪುಟಾಣಿ ಹಣ್ಣುಗಳು ಸೂಕ್ಷ್ಮ ಜೀವಿಗಳಿಗೆ ಆಧಾರವಾಗಿರುತ್ತದೆ. ಗಟ್ಡಿ ಕಾಂಡದ ಉದ್ದಕ್ಕೂ ವಿರುದ್ಧ ಜೋಡಿ ಎಲೆಗಳಿದ್ದು ಅವುಗಳ ಮೇಲೆ ನಸು ಹಳದಿ ಅಥವಾ ನಸು ಕೆಂಪು ಬಣ್ಣದ ಒರಟು ಕೂದಲ ರಚನೆಯಿದೆ. ವಾರ್ಷಿಕ ಗಿಡ ಮೂಲಿಕೆಯಾದ ನಾನು 60 cm ಉದ್ದ ಬೆಳೆಯಬಲ್ಲೆ. ದಂಟು ಅಥವಾ ಎಲೆ ಕತ್ತರಿಸಿದರೆ ಹಾಲಿನಂತಹ ರಸ ಒಸರುವುದರಿಂದ ಹಾಲು ಗಿಡವೆಂಬ ಹೆಸರು ನನಗಿದೆ.

ನಾಗಾರ್ಜುನಿ, ಅಚ್ಚೆ ಗಿಡ, ಪೇರ್ ಕೊಡಿ ಎಂದೆಲ್ಲಾ ಕರೆಯಲ್ಪಡುವ ನನಗೆ ಸಸ್ಯಶಾಸ್ತ್ರೀಯವಾಗಿ ಯುಪೋರ್ಬಿಯಾ ಹಿರ್ತಾ (Euphorbia hirta) ಎಂಬ ಹೆಸರಿದೆ. Asthma plant ಎಂದೂ ಕರೆಯುವರು. ನಾನು ಯುಪೋರ್ಬಿಯೇಸಿ ಕುಟುಂಬದ ಸದಸ್ಯತನ ಪಡೆದಿದ್ದು ಅಮೆರಿಕದ ಉಷ್ಣವಲಯದ ಆವಾಸ ನನ್ನದು. ನಿಷ್ಪಾಪಿ ಸಸ್ಯವಾದ ನನ್ನನ್ನು ಸರ್ವವ್ಯಾಪಿ, ವ್ಯಾಪಕ, ಸಾಮಾನ್ಯಕಳೆ ಎಂದೇ ದೂರುತ್ತಾರೆ. ಆದರೆ ದೂರುವವರ ಮಾತುಗಳನ್ನು ಆಲಿಸದೇ ಇದ್ದು ಮಾನವರಿಗೆ ಹಲವು ರೀತಿಯ ಸಹಾಯಗಳನ್ನು ಮಾಡುತ್ತಲೇ ಬಂದಿರುವೆ.

ನಾನೊಂದು ವಿಶೇಷ ಔಷಧೀಯ ಗಿಡವಾಗಿದ್ದು ಹಲವಾರು ರೋಗಗಳನ್ನು ಪರಿಹರಿಸಬಲ್ಲೆ. ಶ್ವಾಸಕೋಶದ ಸಮಸ್ಯೆಗಳಲ್ಲಿ ನಾನೆಷ್ಟರಮಟ್ಟಿಗೆ ಸಹಕಾರಿಯಾಗಿದ್ದೇನೆಂದರೆ ನನ್ನ ಹೆಸರನ್ನೇ 'ಅಸ್ತಮಾ ಗಿಡ' ಎಂದು ಬದಲಾಯಿಸುವಷ್ಟು! ಶೀತ, ಕೆಮ್ಮು, ಅಸ್ತಮಾ, ಅಧಿಕ ರಕ್ತದೊತ್ತಡ, ಚರ್ಮ ರೋಗ, ಚೇಳು ಕಡಿತ, ಚರ್ಮದಲ್ಲಿ ಮೂಡುವ‌ 'ಕೆಡು' ವಿನ ನಿವಾರಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಬಲ್ಲೆ. ಫಿಲಿಫೈನ್ಸ್ ನಲ್ಲಿ ಜ್ವರಗಳಿಗೆ ಹೆಚ್ಚು ಬಳಸುವರು.. ಡೆಂಗ್ಯೂ, ಮಲೇರಿಯಾಗಳಲ್ಲೂ ಜನಪದರು ನನ್ನ ಸಮೂಹವನ್ನು ಬಳಸಿ ಪ್ರಯೋಜನ ಪಡೆಯುತ್ತಾರೆ.

ನನ್ನಷ್ಟಕ್ಕೇ ನಾನು ಎಲ್ಲಾದರೂ ಬಿಸಿಲ ಜಾಗ ಸಿಕ್ಕಲ್ಲಿ ಸದ್ದಿರದೆ ಬೆಳೆದರೂ ನನ್ನನ್ನು ಕಿತ್ತೆಸೆವ ಮಾನವ, ನನ್ನ ಬದುಕನ್ನೇ ಒಣಗಿಸಿ ಬಿಡುತ್ತಿದ್ದಾನೆ. ನೀವಾದರೂ ನನ್ನ ಬಗ್ಗೆ ಕರುಣೆತೋರಿ ನನಗೆ ಸಹಕರಿಸಬಲ್ಲಿರಾ? ಅಳಿವಿನಂಚಿನಲ್ಲಿ ಗುರುತಿಸಲ್ಪಟ್ಟ ನನ್ನನ್ನು ಕಾಯಬಲ್ಲಿರಾ...?

ಚಿತ್ರ - ಬರಹ : ವಿಜಯಾ ಬಿ ಶೆಟ್ಟಿ ಸಾಲೆತ್ತೂರು, ಬಂಟ್ವಾಳ