ನಿಷ್ಪಾಪಿ ಸಸ್ಯಗಳು (ಭಾಗ ೧೦೫) - ಈಶ್ವರ ಬಳ್ಳಿ

ನಿಷ್ಪಾಪಿ ಸಸ್ಯಗಳು (ಭಾಗ ೧೦೫) - ಈಶ್ವರ ಬಳ್ಳಿ

ಶಾಲಾರಂಭ ಖುಷಿ ನೀಡಿರಬೇಕಲ್ಲವೇ? ನನಗೂ ತುಂಬಾ ಖುಷಿ... ಯಾಕೆ ಗೊತ್ತಾ? ಸಮಯಕ್ಕೆ ಮೊದಲೇ ಮಳೆ ಬಂದು ನನ್ನೆಲ್ಲ ಒಣಗಿದ್ದ ಶಾಖೆಗಳು ಚಿಗುರಿ ನಲಿಯುತ್ತಿವೆ!. ಈಗ ನಿಮಗೆ ನಾನ್ಯಾರೆಂದು ಅರ್ಥವಾಗಬೇಕೆಂದರೆ ನನ್ನ ಬಗ್ಗೆ ಸ್ವಲ್ಪ ಹೇಳಲೇ ಬೇಕಲ್ಲವೇ? ನಾನು ಬಹಳ ತೆಳ್ಳಗಿನ ಆದರೆ ಸ್ವಲ್ಪ ಗಟ್ಟಿಯಾದ ಬಳ್ಳಿ. ನೀವು ಹುಡುಕಿದರೆ ನಿಮ್ಮೂರಿನ ಪಾಳು ಭೂಮಿ, ರಸ್ತೆ ಬದಿ, ನದೀದಂಡೆ, ಬೇಲಿ, ಸಣ್ಣ ಪುಟ್ಟ ಮರಗಿಡಗಳ ಮೇಲೆ ಆರಾಮವಾಗಿರುವ ನನ್ನನ್ನು ಕಾಣಬಲ್ಲಿರಿ. 

ಪತನಶೀಲ ಕಾಡು ನನ್ನ ನಿಜವಾದ ಆವಾಸವಾದರೂ ಕರಾವಳಿ, ಬಯಲು ಪ್ರದೇಶ, ಕುರುಚಲು ಕಾಡೆಂದರೆ ನನಗಿಷ್ಟ. ಕೆಲವರು ನನ್ನನ್ನು ಕುರುಚಲು ಸಸ್ಯವೆಂದು ಕರೆದರೂ ನಾನೊಂದು ಬಹುವಾರ್ಷಿಕ ಆರೋಹಿ ಮೂಲಿಕೆಯಾಗಿರುವೆ. ಮರಗಳ ಮೇಲೆ ಹಲವಾರು ಮೀಟರ್ ಗಳಷ್ಟೆತ್ತರ ಏರಬಲ್ಲೆ. ನನ್ನ ಎಲೆಗಳು ಬಹಳ ವಿಶಿಷ್ಟವಾಗಿವೆ ಗೊತ್ತಾ? ಅವು ಸ್ವಲ್ಪ ದೀರ್ಘ ಅಂಡಾಕಾರವಾಗಿದ್ದು ತುದಿ ಚೂಪಾಗಿರುತ್ತದೆ. ನನ್ನನ್ನು ಬಹಳ ಪ್ರಾಚೀನ ಕಾಲದಿಂದಲೂ ಜನಪದರು ಔಷಧಿಯಾಗಿ ಬಳಸುತ್ತಿದ್ದರು. ಹಾವು, ಚೇಳು, ವಿಷಜಂತುಗಳು ಕಡಿದಾಗ ಜನರಿಗೆ ಮೊದಲು ನೆನಪಾಗುತ್ತಿದ್ದುದೇ ನನ್ನ ಹೆಸರು! ಅದೇನೆಂದು ಈಗಲಾದರೂ ಹೇಳಬಲ್ಲಿರಾ? ನೀವು ನಿಮ್ಮ ಹಿರಿಯರನ್ನು ವಿಚಾರಿಸಿದರೆ ಖಂಡಿತವಾಗಿ ಅವರು ನಿಷ್ಪಾಪಿ ಸಸ್ಯವಾದ ನನ್ನ ಹೆಸರನ್ನು ಹೇಳಬಲ್ಲರು. ನಾನು ಈಶ್ವರ ಬಳ್ಳಿ ಅಥವಾ ಸ್ನೇಕ್ ರೂಟ್! ಅರಿಸ್ಟೊಲೋಚಿಯಾ ಇಂಡಿಕಾ (Aristolochia indica) ಎಂದು ನನ್ನ ನಿಜ ನಾಮಧೇಯ. ಕನ್ನಡದಲ್ಲಿ ಉರಿಕೊಡಿ, ಗರುಡಕೋಡಿ, ಬಾತುಕೋಳಿ ಹೂ, ರುದ್ರಜಾತ ಎಂಬೆಲ್ಲ ಹೆಸರುಗಳಿದ್ದರೆ ಸಾಮಾನ್ಯವಾಗಿ ಭಾರತೀಯ ಬರ್ತ್ ವರ್ಟ್ ಎಂದೇ ಗುರುತಿಸುತ್ತಾರೆ. ನನ್ನ ಕುಟುಂಬ ಅರಿಸ್ಟೊಲೋಚಿಯೇಸಿ.

ನಾನು ಬೀಜದ ಮೂಲಕ ಹಾಗೂ ಬೇರಿನ ಮೂಲಕವೂ ಹರಡಬಲ್ಲೆ. ನನ್ನ ಎಲೆ, ಹೂ, ಕಾಯಿ, ಕಾಂಡ, ನಬೇರು ಅಂದರೆ ಪಂಚಾಂಗಗಳೂ ಔಷಧಿಗೆ ಬಳಕೆಯಾಗುತ್ತವೆ. ನನ್ನಲ್ಲಿ ಕಪ್ಪು ಹಾಗೂ ಬಿಳಿ ಎಂಬೆರಡು ವಿಧಗಳಿದ್ದು ಜುಲೈ ತಿಂಗಳಲ್ಲಿ ಸುಂದರವಾದ ಹೂಗಳು ಅರಳತೊಡಗುತ್ತವೆ. ಸಿಲಿಂಡರಾಕಾರದ ಕೊಳವೆಯ ತುದಿಯಲ್ಲಿ ತುತ್ತೂರಿಯಾಕಾರಾದ ಪುಟ್ಟ ದಳಗಳು ಮೋಹಕವಾಗಿರುತ್ತವೆ. ಕೆಲವು ಜಾತಿಯ ಚಿಟ್ಟೆಗಳಿಗೆ ನಾನೆಂದರೆ ಪಂಚಪ್ರಾಣ!

ಗೋಳಾಕಾರದ ಬೀಜಗಳಂತೂ ಜಾತ್ರೆಯಲ್ಲಿ ಕಾಣಸಿಗುವ ಆಟದ ತೊಟ್ಟಿಲಿನಂತೆ ಗಾಳಿಯಲ್ಲಿ ಜೀಕುವುದನ್ನು ನೋಡುವುದೇ ಚಂದ! ಪ್ಯಾರಾಚೂಟ್ ನಂತಿರುವ ಗಟ್ಟಿ ಸಿಪ್ಪೆಯೊಳಗೆ ಚಪ್ಪಟೆಯಾಗಿ ಬಿಗಿದು ಕುಳಿತ ತೆಳು ಬೀಜಗಳು! ಈ ಕಿರು ಚಪ್ಪಟೆ ಬೀಜಗಳ ಸುತ್ತಲೂ ತೆಳ್ಳಗಿನ ರೆಕ್ಕೆಗಳಿವೆ. ಬಿರು ಬಿಸಿಲಿಗೆ ಬಿರಿದು ದೂರಕ್ಕೆಸೆಯಲ್ಪಡುವ ನನ್ನ ಕಂದಮ್ಮಗಳು ಹೊಸ ಗಿಡಗಳಾಗಿ ಮೊಳಕೆ ಬರುವ ಕನಸು ಹೊತ್ತಿರುತ್ತವೆ.

ನನ್ನನ್ನು ಎಲ್ಲರೂ ನೆನಪಿಸಿ ಕೊಳ್ಳುವುದು ಒಂದು ವಿಷನಾಶಕ ಸಸ್ಯವೆಂದು! ಮಾತ್ರವಲ್ಲದೆ ಅಧಿಕ ರಕ್ತದ ಒತ್ತಡ, ಚರ್ಮರೋಗ, ತಲೆನೋವು, ಮಧುಮೇಹ, ಹಳೆಯಗಾಯ, ಮುಟ್ಟಿನ ದೋಷ, ಮೂಲವ್ಯಾಧಿ, ಕೆಮ್ಮು ನೆಗಡಿ, ಕಾಲರಾ ಇತ್ಯಾದಿಗಳಿಗೂ ಬಳಸುತ್ತಾರೆ. ಆದರೆ ನನ್ನ ಬಗ್ಗೆ ಸಂಶೋಧನೆಗಳಾಗಿರುವುದು ಬಹಳ ಕಡಿಮೆ. ನನ್ನಲ್ಲಿರುವ ಅರಿಸ್ಟೊಲೊಜಿಕ್ ಆಮ್ಲವು ಮಾನವನ ಮೂತ್ರಪಿಂಡಗಳಿಗೆ ಅಪಾಯಕಾರಿ ಎನ್ನುತ್ತಾರೆ. ಮೂತ್ರನಾಳದ ಕ್ಯಾನ್ಸರ್ ಉಂಟುಮಾಡಬಹುದೆಂದೂ ಭಯಪಡುತ್ತಾರೆ. ಜಪಾನ್, ಬ್ರಿಟನ್, ಫ್ರಾನ್ಸ್ ಮೊದಲಾದ ಕೆಲವು ದೇಶಗಳಲ್ಲಿ ಅರಿಸ್ಟೊಲೊಜಿಕ್ ಆಮ್ಲ ಇದೆ ಎಂದು ಸಂಶಯವಿರಬಹುದಾದ ಯಾವುದೇ ಉತ್ಪನ್ನಗಳನ್ನು ನಿಷೇಧಿಸಿದ್ದೂ ಇದೆ. ಹಾಗಾಗಿ ನನ್ನ ಬಗ್ಗೆ ಇನ್ನೂ ಸಂಶೋಧನೆಗಳಾಗಲಿ, ಮಾನವನು ನನ್ನಿಂದ ಸೂಕ್ತ ರೀತಿಯಲ್ಲಿ ಸಹಕಾರ ಪಡೆಯಲಿ ಎಂಬ ಶುಭ ಹಾರೈಕೆ ಇದ್ದೇ ಇದೆ. ಪಾರಂಪರಿಕ ವಿಷ ನಿವಾರಕ ಮೂಲಿಕೆಯಾದ ನನ್ನನ್ನು ಮಾನವನು ಅಳಿವಿನಂಚಿಗೆ ತಳ್ಳದಿರಲು ನೀವೂ ಶ್ರಮಿಸುವಿರಲ್ಲವೇ? 

ಚಿತ್ರ - ಬರಹ : ವಿಜಯಾ ಬಿ ಶೆಟ್ಟಿ ಸಾಲೆತ್ತೂರು, ಬಂಟ್ವಾಳ