ನಿಷ್ಪಾಪಿ ಸಸ್ಯಗಳು (ಭಾಗ ೧೧೭) - ಅಗ್ರದ ಬೇರು

ನಿಷ್ಪಾಪಿ ಸಸ್ಯಗಳು (ಭಾಗ ೧೧೭) - ಅಗ್ರದ ಬೇರು

ಕಾಯಿ, ಕಡುಬು, ಮೋದಕ, ಚಕ್ಕುಲಿ ತಿನ್ನುವ ಗಣಪನಿಗೆ ತಾಯಿ ಒಂದು ದಿನ ಗರಿಕೆಯನ್ನೇ ತಿನಿಸಿದಳಂತೆ. ನಮ್ಮ ಗಣಪನಿಗೆ ತಿನಿಸಲ್ಲೇನು ಬೇಸರವಿಲ್ಲ. ಹುಲ್ಲಾಗಲಿ, ಹಣ್ಣಾಗಲಿ.. ತಿಂದು ಹರಸುವನು. ಆತ ಪ್ರಕೃತಿ ಪ್ರಿಯ. ಮಣ್ಣಿನಿಂದಲೆ ಜನನ.. ನೀರ ಜೊತೆಯೆ ಲೀನ! 

ಮಣ್ಣು ಎಂದಾಕ್ಷಣ ನೆನಪಾಗುವುದು ನಮ್ಮ ಸುತ್ತಲು ನಡೆಯುತ್ತಿರುವ ಭೂ ಕುಸಿತಗಳು! ಇಳಿಜಾರಾದ ಬೆಟ್ಟಗಳ ಬದಿಗಳಲ್ಲಿ, ದೊಡ್ಡ ದೊಡ್ಡ ಮರಗಳಡಿಯಲ್ಲಿ, ನೀರ ಹರಿವಿನ ಇಕ್ಕೆಲಗಳಲ್ಲಿ ಅಂದರೆ ತಂಪಾದ ಪ್ರದೇಶಗಳಲ್ಲಿಯೇ ತನ್ನ ಬದುಕನ್ನು ಕಟ್ಡಿಕೊಳುವ ಕೆಲವು ಸಸ್ಯಗಳಿವೆ ಗೊತ್ತಾ..? ಕರ್ನಾಟಕದ ಪಶ್ಚಿಮ ಘಟ್ಟ ಅಂದರೆ ನಮ್ಮ ಪೂರ್ವ ಘಟ್ಟಗಳಿಗೆ ಸ್ಥಳೀಯವೆನಿಸಿಕೊಂಡ ಒಂದು ಪುಟಾಣಿ ಸಸ್ಯವಿದೆ. ಇದು ನಿತ್ಯಹರಿದ್ವರ್ಣದ ಕಾಡುಗಳ ಕೂಸು. ಗಮನವಿಟ್ಟು ನೋಡಿದರೆ ನಮ್ಮ ಊರಲ್ಲೂ ಅಲ್ಲಲ್ಲಿ ಕಾಣಸಿಗುತ್ತದೆ. ಆದರೆ ಗುರುತಿಸಲು ಸ್ವಲ್ಪ ಕಷ್ಟವಾಗಲೂ ಬಹುದು! ಕಾರಣವೇನೆಂದರೆ ಇದು ಗುಡ್ಡದ ಇಳಿಜಾರಿನಲ್ಲಿರುವ ಮರ ಗಿಡ ಪೊದೆಗಳ ಅಡಿಭಾಗದಲ್ಲಿ ಅಡಗಿ ಇತರ ಸಸ್ಯಗಳ ನೆರಳಲ್ಲಿ, ಕಾಂಡವೇ ಇರದೆ ಬುವಿಯನ್ನಪ್ಪಿ ಕಣ್ಣುಮಿಟುಕಿಸುತ್ತಿರುತ್ತದೆ!. 7ಸೆ.ಮೀ ನಷ್ಟು ಉದ್ದದ, 4ಸೆ.ಮೀ ನಷ್ಟಗಲದ ಅಂಡಾಕಾರದ ದೊಡ್ಡ ಗಾತ್ರದ ಎಲೆಗಳಿದ್ದು ತುದಿ ಮೊಂಡಾಗಿರುತ್ತದೆ. ಮೂರ್ನಾಲ್ಕು ಜೋಡಿ ನರಗಳಿದ್ದು ಎಲೆಗಳ ಬಣ್ಣ ತಿಳಿ ಹಸಿರು ಮಿಶ್ರಿತ ಹಳದಿ ಅಥವಾ ನೇರಳೆ ಬಣ್ಣವಿರುತ್ತದೆ. ವಿರುದ್ಧ ದಿಕ್ಕುಗಳಲ್ಲಿ ಮೂಡುವ ಇದರ ಎಲೆಗಳ ಅಡಿಭಾಗದಲ್ಲಿ ರೋಮದಂತಹ ರಚನೆಯಿದೆ. ಮಕ್ಕಳೇ ಈ ನಿಷ್ಪಾಪಿ ಸಸ್ಯದ ಪರಿಚಯ ನಮಗಿಲ್ಲವೇ ಇಲ್ಲವೆಂದರೂ ನಮ್ಮ ಹಿರಿಯರಿಗಿದು ಚಿರಪರಿಚಿತವಾಗಿದೆ ಗೊತ್ತಾ..? ನಿಮ್ಮ ಅಜ್ಜ ಅಜ್ಜಿಯರಲ್ಲಿ ಈ ಗಿಡದ ಬಗ್ಗೆ ವಿಚಾರಿಸಿ ನೋಡಿ. ತುಳು ಭಾಷೆಯಲ್ಲಿದು ಅಗ್ರದ ಬೇರು ಎಂದು ಜನಜನಿತವಾಗಿದೆ. 

ಬೇರಿನ ರಸಕ್ಕೆ ನಿಂಬೆರಸ ಸೇರಿಸಿ ನಾಲಿಗೆಗೆ ಹಚ್ಚಿದರೆ ನಾಲಿಗೆಯ ರುಚಿ ಮೊಗ್ಗುಗಳು ಉಲ್ಲಾಸಗೊಂಡು ಆಹಾರದ ರುಚಿಯನ್ನು ಅಸ್ವಾದಿಸಿ, ಜೀರ್ಣಾಂಗದ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ ಎಂದು ಕಂಡುಕೊಂಡಿದ್ದರು. ಕನ್ನಡದಲ್ಲಿ ಚಿಟಿಕಿ ಗಡ್ಡೆ , ನಾರುಂಬೋಳಿ ಸೊಪ್ಪು , ನೆಲಮುಚ್ಚಳವೆಂದೂ ಕರೆಯುವರು. ಇದನ್ನೇ ಹೋಲುವ ನೆಲಮುಚ್ಚಳವೆಂಬ ಬೇರೆ ಸಸ್ಯವೂ ಇದೆ. ಅದು ಹಸಿರಾಗಿರುತ್ತದೆ ಮಾತ್ರವಲ್ಲದೇ ಸಮತಟ್ಟಿನ ನೆಲದಲ್ಲಿರುತ್ತದೆ. ಅಗ್ರದ ಬೇರು ಜ್ವರ ಇಳಿಸುವಲ್ಲಿ ಮಹತ್ವದ ಪಾತ್ರ ವಹಿಸುವುದರಿಂದ ಜ್ವರಹರ ಸೊಪ್ಪೆಂದೂ ಕರೆಯುವರು. ಅಕಾಂಥೇಸೀ ಕುಟುಂಬದ ಸದಸ್ಯ ಸಸ್ಯವಾದ ಈ ಅಗ್ರದ ಬೇರಿಗೆ ಸಸ್ಯ ಶಾಸ್ತ್ರೀಯ ಹೆಸರು ಜಿಮ್ನೋಸ್ಟಾಚಿಯಮ್ ಫೀಬ್ರಿಫಗಮ್ (Gymnostachyum febrifugum).

ಕಾಂಡವೇ ಇರದ ಈ ಗಿಡಮೂಲಿಕೆಗೆ ಒಂದು ವಿಶೇಷತೆಯಿದೆ ಗೊತ್ತಾ? ಅದೇನೆಂದರೆ ಹೂ ಬಿಡಲು ಸಸ್ಯ ಮಧ್ಯಭಾಗದಳ್ಲಿ ಒಂದಡಿಯಷ್ಟು ಉದ್ದದ ಕಾಂಡ ಬೆಳೆಯುತ್ತದೆ ! ಕಾಂಡದ ತುದಿಯಲ್ಲಿ ಒಂಟಿಯಾಗಿ ಅಥವಾ ಹಲವಾರು ಹೂಗಳು ಅರಳುತ್ತವೆ. ಗುಲಾಬಿ ಬಣ್ಣದ ಪುಟ್ಟ ಸಿಲಿಂಡರ್ ನಂತಿರುವ ಗುಲಾಬಿಬಣ್ಣದ ಹೂವಿಗೆ ಹಳದಿ ಬಣ್ಣದಲ್ಲಿ ಬಾಯಿಯೊಂದು ಮೂಡಿದಂತೆ ಹೊರ ಚಾಚಿದ ದಳವಿರುತ್ತದೆ. ಅಂಡಾಕಾರದ ಕಾಯಿಯೊಂದು 16 ರಿಂದ 24 ರಷ್ಟು ಅಂಡಾಕಾರದ ಬೀಜಗಳನ್ನು ಒಳಗೊಂಡಿರುತ್ತದೆ. ಅಕ್ಟೋಬರ್ ನಿಂದ ಜನವರಿ ನಡುವೆ ಹೂ ಕಾಯಿಗಳ ಕಾಲ. ದಕ್ಷಿಣ ಕನ್ನಡ, ಹಾಸನ, ಕೊಡಗು, ಉಡುಪಿ ಹಾಗೂ ಕೇರಳದಲ್ಲಿ ಹೆಚ್ಚಾಗಿ ಕಾಣಸಿಗುವ ಅಗ್ರದ ಬೇರು ಉರಿಯೂತ ನಿವಾರಕ, ಶ್ವಾಸಕೋಶದ ಕ್ಯಾನ್ಸರ್ ಕೋಶಗಳ ವಿರುದ್ಧ ಬೇರಿನ ಸಾರ ವರ್ತಿಸುತ್ತದೆ ಎನ್ನಲಾಗಿದೆ. ಕಫ, ತಲೆನೋವು, ಕಿವಿನೋವು ಹಲ್ಲುನೋವು ಇತ್ಯಾದಿಗಳಿಗೆ ಪರಿಣಾಮಕಾರಿ ಚಿಕಿತ್ಸೆಗೆ ಬಳಕೆಯಾಗುವ ಈ ಸಸ್ಯವೊಂದಕ್ಕೆ ಮಾರುಕಟ್ಟೆಯಲ್ಲಿ 250 ರುಪಾಯಿಗಳ ಮೌಲ್ಯವಿದೆ ಎಂದರೆ ನಂಬಲೇ ಬೇಕು! 

ಹಸಿರು ಸಸ್ಯಗಳ ಉಸಿರಡಗಿಸುತ್ತಿರುವ ಮಾನವನಿಗೆ ಇದರ ಬೆಲೆ ಅರ್ಥವಾಗುವುದಾದರೂ ಹೇಗೆ?. ಎಲ್ಲವನ್ನೂ ನಾಶಗೊಳಿಸಿದ ಬಳಿಕ ಮಾನವ ಪ್ರಕೃತಿಗೇ ಶರಣಾಗುವ ಕಾಲ ಬಂದೇ ಬರುವುದು. ಆಗ ಏನೂ ಉಳಿದಿರುವುದಿಲ್ಲ. ಸ್ವಾರ್ಥದ ದಾಹವನ್ನು ಅದುಮಿಟ್ಟು ಪ್ರಕೃತಿಯ ಜೊತೆ ಸ್ನೇಹ ಬೆಳೆಸೋಣ. ಗುರುತಿಸಿ ಕಷ್ಟ ಸುಖ ವಿಚಾರಿಸೋಣ. ನಮ್ಮಿಂದ ಯಾವುದೇ ಸಹಾಯ ಬಯಸದ ಹಸಿರು, ತಮ್ಮಷ್ಟಕ್ಕೇ ತಮ್ಮನ್ನು ಬದುಕಲು ಬಿಡುವಂತೆ ಕೇಳಬಹುದಷ್ಟೇ.

ಚಿತ್ರ - ಬರಹ : ವಿಜಯಾ ಬಿ ಶೆಟ್ಟಿ ಸಾಲೆತ್ತೂರು, ಬಂಟ್ವಾಳ