ನಿಷ್ಪಾಪಿ ಸಸ್ಯಗಳು (ಭಾಗ ೧೫) - ಜಂಗಮ ಸೊಪ್ಪು
ಮತ್ತಷ್ಟು ಮಳೆಹನಿಗಳು ಬಾನಿಂದ ಬುವಿಯ ಒಡಲನ್ನು ಸೇರುತ್ತಾ ವಾತಾವರಣವನ್ನು ಒಂದಿಷ್ಟು ತಂಪು ಗೊಳಿಸುತ್ತಿವೆಯಲ್ಲವೇ...? ಕೊಟ್ಟೆ ಹಣ್ಣಿನ ಪರಿಚಯವನ್ನು ಮಾಡಿಕೊಂಡಿರಾ? ನಾವೆಲ್ಲ ಸಣ್ಣವರಿದ್ದಾಗ ಆಗಾಗ ಮೈ ತುರಿಸಿಕೊಂಡು ಚರ್ಮದಲ್ಲಿ ದಪ್ಪ ದಪ್ಪ ದಡಿಕೆಗಳು ಬೀಳುತ್ತಿದ್ದವು. ಹೆಚ್ಚಾಗಿ ಸಂಜೆ ಹೊತ್ತಿಗೇ ಹಾಗೆ ಬೀಳುತ್ತಿದ್ದಂತೆ ಅನಿಸುತ್ತಿತ್ತು. ಆಗ ಅಮ್ಮ ಅಂಗಳ ಗುಡಿಸಿ ಗುಡಿಸಿ ಗಿಡ್ಡವಾಗಿದ್ದ ಹಿಡಿಸೂಡಿಯೊಂದನ್ನು ತಂದು ಮನೆಯೆದುರು ನಮ್ಮನ್ನು ನಿಲ್ಲಿಸಿ ಮೂರು ಸಲ ಹಣೆಯಿಂದ ಕಾಲಿನ ಹೆಬ್ಬೆರಳ ತನಕ ಹಿಡಿಸೂಡಿ ಯಿಂದ ನಿವಾಳಿಸಿ ಮಾಡಿನ ಆಚೆ ಬದಿಗೆ ಎಸೆಯುತ್ತಿದ್ದರು. ಅಷ್ಟಕ್ಕೇ ಕೆಲವೊಮ್ಮೆ ತುರಿಕೆ ಕಡಿಮೆಯಾಗಿದೆ ಅಂತ ಅನಿಸುತ್ತಿತ್ತು. ಕೆಲವೊಮ್ಮೆ ಅಮ್ಮ ದುಷ್ಟಶಕ್ತಿಗಳು ಹೊಯಿಗೆ (ಮರಳು) ಎಸೆದಿವೆ ಅಂತಂದುಕೊಂಡು ಕಂಚಿನ ಬಟ್ಟಲು ಹುಡುಕಿ ತಂದು ಅದಕ್ಕೆ ಸ್ವಲ್ಪ ನೀರು ಹಾಕಿ ತೊಂಡೆಕಾಯಿ ಸೊಪ್ಪು, ಕೇಪಳ ಅಥವಾ ಕಿಸ್ಕಾರದ ಹೂ ಹಾಗೂ ಗುಡ್ಡದಿಂದ ಹುಡುಕಿ ತಂದ ಪುಚ್ಚೆಹಣ್ಣಿನ ಎಲೆಗಳನ್ನು ಆ ನೀರಿಗೆ ಹಾಕುತ್ತಿದ್ದರು. ಮಾಡಿನ ನೀರು ಇಳಿಯುವ ಜಾಗದಲ್ಲಿ ಅಂಗಳದಲ್ಲಿ ಮಣೆಯ ಮೇಲೆ ನಮ್ಮನ್ನು ಕುಳ್ಳಿರಿಸಿ ಎದುರಿಗೆ ಅಡ್ಡಕ್ಕೊಂದು ಹಿಡಿಸೂಡಿಯಿಟ್ಟು ಇನ್ನೊಂದು ಮಣೆಯ ಮೇಲೆ ಈ ಬಟ್ಟಲನ್ನು ಇಡುತ್ತಿದ್ದರು ಹಾಗೂ ಅದರಲ್ಲಿರುವ ಸೊಪ್ಪನ್ನು ಎರಡೂ ಕೈಗಳಿಂದ ಹಿಸುಕುತ್ತಾ ಅದನ್ನೇ ನೋಡುತ್ತಾ ಕಣ್ಣು ಮುಖಕ್ಕೆ ಹಚ್ಚಿಕೊಳ್ಳುತ್ತಾ ಹಿರಿಯರು ಸೂಚಿಸುವಷ್ಟು ಹೊತ್ತು ಕುಳಿತಿರಬೇಕಿತ್ತು.
ಬಳಿಕ ಆ ನೀರನ್ನು, ಸೊಪ್ಪನ್ನು ತೆಂಗಿನ ಮರದ ಬುಡಕ್ಕೆ ನಿಧಾನವಾಗಿ ಸುರಿಯುತ್ತಾ ನೀರಿನಡಿಯಲ್ಲಿ ಮರಳು ಸಿಗುವುದೋ ಎಂದು ಹುಡುಕುತ್ತಿದ್ದರು. ಹೀಗೆ ಮಕ್ಕಳ ದೃಷ್ಟಿ ನಿವಾರಣೆಗೂ ಈ ಕ್ರಮ ಬಳಸುತ್ತಿದ್ದರು. ಇದರಲ್ಲಿ ಬಳಸುತ್ತಿದ್ದ ಪುಚ್ಚೆ ಹಣ್ಣಿನ ಗಿಡ ಅಥವಾ ಕನ್ನಡದಲ್ಲಿ ಜಂಗಮ ಸೊಪ್ಪು ಎಂದು ಕರೆಯಲ್ಪಡುವ ಈ ಸೊಪ್ಪಿನ ಹಣ್ಣು ನೋಡಲು ಬಹು ಸೊಗಸು ಮಾತ್ರವಲ್ಲ ತಿನ್ನಲೂ ಬಲು ರುಚಿ. ಹುಳಿ ಸಿಹಿ ಮಿಶ್ರಿತ ರುಚಿ ನೀಡುವ ಈ ಹಣ್ಣು ಸಿಪ್ಪೆ ಬಿಡಿಸಿದಾಗ ದೊಡ್ಡ ಬೀಜ ಇರುವ ಬಿಳೀ ತಿರುಳು ಬೆಕ್ಕಿನ ಕಣ್ಣಿನಂತೆ ಕಾಣಿಸುವುದರಿಂದ ಪುಚ್ಚೆ (ಬೆಕ್ಕಿನ) ಹಣ್ಣು ಎಂದು ಹೆಸರು ಬಂದಿರಬಹುದು.
ಶಾಲೆಯ ದಾರಿಯಲ್ಲಿ, ಗುಡ್ಡಕ್ಕೆ ಸೊಪ್ಪು, ಕಟ್ಟಿಗೆ ತರಲು ಹೋಗುವಾಗ ಹಾದಿಯಲ್ಲಿ ಬೇಸರ ಕಳೆಯಲು, ಹೊಟ್ಟೆ ತಣಿಸಲು ಈ ಹಣ್ಣು ಜೊತೆಯಾಗುತ್ತಿತ್ತು. ಕಾಡು ನಾಡಾಗಿ ಮಾರ್ಪಾಡಾಗುತ್ತಿದ್ದಂತೆ ಈ ಗಿಡ ಈಗ ಅಪರೂಪವಾಗುತ್ತಿದೆ. ಮೂರ್ನಾಲ್ಕು ಅಡಿಗಳೆತ್ತರ ಬೆಳೆಯುವ ಈ ಪೊದರು ಸಸ್ಯವು ಬಹಳ ಪಾಪ ದ ಸಸ್ಯವಾಗಿದೆ. ಎಲ್ಲೂ ಯಾವ ಗಿಡಗಳಿಗೂ ತೊಂದರೆ ಕೊಟ್ಟು ಇರುವುದನ್ನು ಕಾಣಲಾರೆವು. ಕಾಡು ಮೇಡುಗಳ ಬಯಲ ಬದಿಗಳಲ್ಲಿ ಒಂದಿಷ್ಟು ಸಣ್ಣ ಪುಟ್ಟ ರೆಂಬೆಗಳು, ಯಾವುದೋ ಹುಳಗಳಿಗೆ ಶಹಾರವಾದ ಗಾಢ ಹಸಿರಿನ ಅರ್ದರ್ದ ಎಲೆಗಳು ಕಂಕುಳಲ್ಲಿ ನಸು ಹಳದಿಯ ಕಾಯಿ ಹಣ್ಣುಗಳನ್ನಿರಿಸಿಕೊಂಡು ಮೌನವಾಗಿ ಧ್ಯಾನಸ್ಥ ವಾಗಿ ಕುಳಿತಂತೆ ಕಾಣುವ ಈ ನಿಷ್ಪಾಪಿ ಸಸ್ಯವು ತುಳುನಾಡ ದೇವಸ್ಥಾನ ಗಳಲ್ಲಿ ವಿಶೇಷವಾದ ಸ್ಥಾನವನ್ನು ಪಡೆದಿದೆ ಎಂದರೆ ಆಶ್ಚರ್ಯವಾಗದಿರದು. ಅಲ್ಲಿ ಉತ್ಸವಾದಿಗಳಿಗೆ ಬಲಿಪೂಜೆಗೆ ಇದರ ಎಲೆಗಳನ್ನು ಬಳಸುತ್ತಾರೆ.
ಸಾಂಪ್ರದಾಯಿಕವಾಗಿ ಬಣ್ಣಗಳನ್ನು ಬಳಸಲ್ಪಡುವ ಕೆಲವು ವಿಶೇಷ ಆಚರಣೆಗಳಲ್ಲಿ, ಮಂಡಲ ಬರೆಯುವಲ್ಲಿ, ಧಾರ್ಮಿಕ ಕಾರ್ಯದಲ್ಲಿ ಬಳಸುವ ರಂಗೋಲಿಗಳಲ್ಲಿ, ನಾಗಮಂಡಲದಲ್ಲಿ ಈ ಸಸ್ಯದ ಎಲೆಗಳನ್ನು ಒಣಗಿಸಿ ಪುಡಿ ಮಾಡಿ ಹಸಿರುಪುಡಿಯಾಗಿ ಬಳಸುತ್ತಾರೆ. ಎಲೆಯನ್ನು ಕುಟ್ಟಿ ಎಷ್ಟು ಪುಡಿಮಾಡಿದರೂ ಒಂದು ಹನಿ ರಸ ಬರದು!. ಬಲೀಂದ್ರ ಪೂಜೆ, ಗದ್ದೆಗಳಿಗೆ ದೀಪ ಇಡುವಾಗಲೂ ಈ ಗಿಡದ ಎಲೆಗಳ ಬಳಕೆ ಇದೆ.
ಹೃದ್ರೋಗಿಗಳಿಗೆ ಉಪಯುಕ್ತ ಔಷಧೀಯ ಸಸ್ಯವಾಗಿಯೂ ಬಳಕೆಯಾಗುವ ಈ ಸಸ್ಯ ಚರ್ಮ ರೋಗಗಳಿಗೂ, ನಂಜು ನಿವಾರಕವಾಗಿಯೂ ಉಪಶಮನ ನೀಡಬಲ್ಲ ಸಸ್ಯವಾಗಿದೆ. ಈ ಸಸ್ಯವನ್ನು ನಾವು ಅಂಗಳದಲ್ಲಿ, ಚಟ್ಟಿಯಲ್ಲಿ ನೆಟ್ಟರೂ ಬದುಕಿಸಲು ಸುಲಭಸಾಧ್ಯವಿಲ್ಲ. ಹೀಗಿರುವಾಗ ಪ್ರಕೃತಿಯಲ್ಲಿ ಸಹಜವಾಗಿ ಬದುಕುವ ವಾತಾವರಣ ನೀಡುವುದು ನಮ್ಮ ಕರ್ತವ್ಯವಲ್ಲವೇ? ಅದಿಲ್ಲವಾದರೆ ನಮ್ಮ ದೃಷ್ಟಿ ದೂರದ ಸಸ್ಯಗಳು ಕಾಗದದೊಳಗೆ ಸಂಕೇತಗಳಾಗಿ ಮಾತ್ರ ಕಾಣಲಿವೆ ಎಂಬ ಎಚ್ಚರ ನಮ್ಮಲ್ಲಿ ಸದಾ ಜಾಗೃತವಾಗಿರಬೇಕು, ಅಲ್ಲವೇ?
-ವಿಜಯಾ ಬಿ ಶೆಟ್ಟಿ ಸಾಲೆತ್ತೂರು, ಬಂಟ್ವಾಳ