ನಿಷ್ಪಾಪಿ ಸಸ್ಯಗಳು (ಭಾಗ ೨೯) - ಆನೆ ತಗಚೆ ಗಿಡ
ಕ್ರಿಸ್ಮಸ್ ಹಬ್ಬ ಮುಗಿದು ಹೊಸ ವರ್ಷ, ಜಾತ್ರೋತ್ಸವಗಳ ಸಂಭ್ರಮಗಳು ನಮ್ಮೆದುರು ಗರಿಗೆದರಿ ನಿಂತಿವೆಯಲ್ಲವೇ...? ಜಾತ್ರೆಗಳಲ್ಲಿ ರಥವು ಉತ್ಸವದ ಕೇಂದ್ರಬಿಂದುವಾಗಿರುತ್ತದೆ ತಾನೇ? ಇದು ಮಾನವ ನಿರ್ಮಿತ ಕಲಾಕೃತಿಯಾದರೆ ನಿಸರ್ಗವೇ ಹಲವು ಪುಷ್ಪಗಳ ರಚನೆಯನ್ನು ರಥದಂತೆ ನಿರ್ಮಿಸಿಕೊಂಡಿರುವುದನ್ನು ನಾವು ಕಾಣಬಹುದು. ಈ ದಿನಗಳಲ್ಲಿ ನೀವು ಎಲ್ಲೆಡೆಯೂ ಕಾಣಬಹುದಾದ ಇಂತಹ ಒಂದು ಸಸ್ಯವೆಂದರೆ ದೊಡ್ಡತಗಚೆ ಅಥವಾ ಆನೆ ತಗಚೆ.
ಹೆಸರು ಕೇಳಿದ ಕೂಡಲೆ ನಿಮಗದರ ಚಿತ್ರ ಕಣ್ಣೆದುರು ಬಂದಿರಬಹುದಲ್ಲವೇ? ಹೌದು, ಅದೇ ಕೇಸರಿ ಬಣ್ಣದ ಮೊಗ್ಗುಗಳನ್ನು ಹಾಗೂ ಅರಳಿದ ಹಳದಿ ಹೂಗಳನ್ನು ಆಕಾಶಕ್ಕೆ ಅಭಿಮುಖವಾಗಿ ನಿಂತ ಗೊಂಚಲುಗಳ ರೂಪದಲ್ಲಿ ಕಾಣಿಸುತ್ತದೆ. ಅದಕ್ಕಾಗಿಯೇ ಇದನ್ನು ಚಕ್ರವರ್ತಿ ಕ್ಯಾಂಡಲ್, ಕ್ಯಾಂಡಲ್ ಬುಷ್ ಎಂದೂ ಕರೆಯುವರು.
ಮಳೆಗಾಲದ ಆರಂಭದ ಮಳೆಗೆ ಭೂಮಿ ಹಸಿಯಾದರೆ ಸಾಕು, ಇದರ ಗಿಡಗಳು ಕಾಣಿಸಿಕೊಳ್ಳುತ್ತವೆ. ನೀರು ನಿಲ್ಲುವ ಜೌಗು ಭೂಮಿ, ನೀರಿನ ಹರಿವಿರುವಲ್ಲಿ ಪೊದೆಗಳಾಗಿ ಬೆಳೆಯುತ್ತವೆ. ತಗಚೆಯನ್ನೇ ಹೋಲುವುದರಿಂದ ದೊಡ್ಡ ತಗಚೆ ಎನ್ನುವರು. ಇದರ ಎಲೆಗಳು 50 ರಿಂದ 80ಸೆಂ.ಮೀ ವರೆಗೂ ಬೆಳೆಯುವ ಸಂಯುಕ್ತ ರಚನೆಗಳಾಗಿದ್ದು ಎಲೆಗಳ ತುದಿಗಳು ಮೊಂಡಾಗಿರುತ್ತವೆ. ಗಟ್ಟಿಯಾದ ಕಾಂಡ ಹೊಂದಿದ ಈ ಸಸ್ಯವು ಮೂರು ನಾಲ್ಕು ಮೀಟರ್ ಎತ್ತರ ಬೆಳೆಯುತ್ತದೆ. ಬೇಸಿಗೆಯಲ್ಲಿ ಒಣಗಿ ಉರುವಲಾಗಿಯೂ ಬಳಸಲ್ಪಡುತ್ತದೆ. ಯಾವುದೇ ಪರಿಮಳವಿರದ ಇದರ ಬಂಗಾರದ ವರ್ಣದ ಪುಷ್ಪಗಳು ಐದು ಸುಂದರವಾದ ಎಸಳುಗಳಿಂದ ಅಲಂಕಾರಗೊಂಡು ಕುಸುಮಗಳು ಹಾಗೂ ಬೀಜವಾಗುವ ಮಿಡಿ ಕೋಡನ್ನೂ ಹೊಂದಿರುತ್ತವೆ. 20 - 25 ಸೆಂ.ಮೀ ಬೆಳೆಯುವ ಕೋಡುಗಳು ಬೆಳೆಯುತ್ತಾ ತೆಳ್ಳಗಿನ ಎರಡು ಎಲೆಗಳನ್ನು ಒಂದರ ಮೇಲೆ ಕವಚಿಹಾಕಿ ಜೋಡಿಸಿದಂತೆ ಕಾಣಿಸುವ ಚಲಿಸುವ ರೆಕ್ಕೆಗಳಂತಹ ರಚನೆಗಳಾಗಿ ರೂಪುಗೊಳ್ಳುತ್ತವೆ. ಇದರೊಳಗುದ್ದಕೂ ಸಮಾನ ಅಂತರದಲ್ಲಿ ಕೂತಿರುವ 50 - 60 ಬೀಜಗಳಿರುತ್ತವೆ. ಒಣಗಿದಾಗ ತಾಯಿಗಿಡದಿಂದ ದೂರಕ್ಕೆ ಬೀಜಗಳು ಹಾರಿ ಬೀಳುತ್ತವೆ. ಈ ಗಿಡದ ಹೂ ಅರಳುವ ಸಂದರ್ಭದಲ್ಲಿ ಹಲವು ಕೀಟಗಳನ್ನು ಆಕರ್ಷಿಸುತ್ತವೆ.
ಫಿಲಿಪೈನ್ಸ್, ಶ್ರೀಲಂಕಾ, ಭಾರತ, ಆಸ್ಟ್ರೇಲಿಯಾ, ಆಫ್ರಿಕಾ, ಅಮೇರಿಕಾ, ಮೆಕ್ಸಿಕೋ, ಪರಾಗ್ವೆ ಗಳಲ್ಲೂ ಹುಲುಸಾಗಿ ಬೆಳೆಯುವ ಈ ನಿಷ್ಪಾಪಿ ಸಸ್ಯವು ಸೌಂದರ್ಯಕ್ಕಾಗಿ ಹಾಗೂ ಔಷಧಿಗಾಗಿ ಬೆಳೆಸುವ ಮೂಲಕ ಆರ್ಥಿಕ ವ್ಯವಹಾರದಲ್ಲೂ ಪಾಲುಪಡೆದಿದೆ ಎಂದರೆ ಆಶ್ಚರ್ಯವೆನಿಸುವುದಿಲ್ಲವೇ? ನಾವು ನಮ್ಮ ಬಾಲ್ಯಕಾಲದಲ್ಲಿ ಹಲವಾರು ಮಕ್ಕಳು ಆಗಾಗ ಕೆಪ್ಪಟೆ ಎಂಬ ಕಾಯಿಲೆಗೆ ಒಳಗಾಗುತ್ತಿದ್ದುದನ್ನು ಕಂಡಿದ್ದೇವೆ. ಕೆನ್ನೆಗಳು ಊದಿಕೊಂಡು ಏನನ್ನೂ ತಿನ್ನಲಾಗದ ಪರಿಸ್ಥಿತಿಯಲ್ಲಿ ಈ ಆನೆ ತಗಚೆ ಸೊಪ್ಪಿನ ರಸಕ್ಕೆ ಸುಣ್ಣ ಸೇರಿಸಿ ಹಚ್ಚುತ್ತಿದ್ದರು. ಒಂದೆರಡು ದಿನದಲ್ಲೇ ಬಾವು ಮಾಯವಾಗುತ್ತಿತ್ತು. ಹುಳಕಜ್ಜಿ, ರಿಂಗ್ ವರ್ಮ್, ಚರ್ಮದಲ್ಲಿ ತುರಿಕೆಗಳಾದಾಗ ಇದರ ಎಲೆರಸವೇ ದಿವ್ಯೌಷಧಿ. ಅದಕ್ಕಾಗಿಯೇ ರಿಂಗ್ ವರ್ಮ್ ಬುಷ್ ಎನ್ನುತ್ತಾರೆ.
ಕನ್ನಡದಲ್ಲಿ ದಡ್ಡುಮರ್ದು, ದಹ್ವಲ, ಧವಳ ಗಿಡವೆಂದು ಕರೆಸಿ ಕೊಳ್ಳುವ ಈ ಸಸ್ಯವನ್ನು ತುಳುವಿನಲ್ಲಿ ಆನೆತಜಂಕ್ ಎನ್ನುತ್ತಾರೆ. ಮೈಸೂರು ಪಾಕಲ್ಲಿ ಮೈಸೂರು ಸೇರಿದಂತೆ ತಜಂಕ್ ನ ಜೊತೆ ಆನೆ ಸೇರಿಕೊಂಡಿದೆಯಲ್ಲವೇ! ಸೆನ್ನಾ ಅಲಾಟ / ಕ್ಯಾಸಿಯಾ ಅಲಾಟಗಳೆಂದು ವೈಜ್ಞಾನಿಕ ಹೆಸರಿರುವ ಈ ಸಸ್ಯವು ಪ್ಯಾಬೇಸಿ ಕುಟುಂಬಕ್ಕೆ ಸೇರಿದೆ. ಮಧುಮೇಹ, ಉರಿಯೂತ, ಗಾಯ ಬೇಗ ಗುಣಮುಖವಾಗಲು, ಮಲಬದ್ಧತೆ ನಿವಾರಣೆಗೆ ಬಳಸಲ್ಪಡುವ ದೊಡ್ಡ ತಗಚೆಯು ಶಿಲೀಂಧ್ರ ವಿರೋಧೀ, ಆಂಟಿಕ್ಯಾನ್ಸರ್, ಆಂಟಿಫಂಗಲ್, ಆಂಟಿಡಯಾಬಿಟಿಕ್, ಸಂಭಾವ್ಯ ವಿರೋಧಿ ಅಲರ್ಜಿ, ಉತ್ಕರ್ಷಣ ನಿರೋಧಕವಾಗಿ ವರ್ತಿಸುವ ಗುಣ ಹೊಂದಿದ್ದು ಸಾಂಪ್ರದಾಯಿಕ ವಾಗಿ ಎಲೆಯ ಬಳಕೆ ಹೆಚ್ಚಿದೆ. ಬೀಜ, ಹೂ ಹಾಗೂ ತೊಗಟೆಗಳೂ ಔಷಧೀಯ ಗುಣಗಳನ್ನು ಹೊಂದಿವೆ. ಔಷಧೀಯ ಗುಣಗಳ ಬಗ್ಗೆ ಬಹಳಷ್ಟು ಸಂಶೋಧನೆಗಳು ಪ್ರಗತಿಯ ಹಾದಿಯಲಿದ್ದು ಆಯುರ್ವೇದ ಔಷಧ ಪದ್ಧತಿಯಲ್ಲಿ ಬಹಳ ಪ್ರಯೋಜನಕಾರಿಯೆನಿಸಿರುವ ಈ ಸಸ್ಯವಿಂದು ಅತಿ ವಿರಳವಾಗಿದೆ. ವರ್ಷವೊಂದರಲ್ಲಿ ಸಹಸ್ರಾರು ಬೀಜಗಳನ್ನು ಒಂದು ಗಿಡ ಉತ್ಪಾದನೆ ಮಾಡಿದರೂ ಸೃಷ್ಟಿಯ ಚೌಕಟ್ಟಿನೊಳಗೆ ಎಲ್ಲವೂ ಮೊಳಕೆಯೊಡೆಯಲಾರವು. ಮೊಳಕೆಯೊಡೆದ ಗಿಡಗಳೆಲ್ಲ ಬದುಕಲಾರವು. ಎಲ್ಲೋ ಅಲ್ಲಿ ಇಲ್ಲಿ ಎಂಬಂತೆ ಕಾಣಿಸುವ ಈ ಸುಂದರ ಹೂಗುಚ್ಛಗಳಿರುವ ಗಿಡಗಳು ಉದ್ಯಾನಗಳಿಗೆ ಮೀಸಲಾಗುವ ದಿನಗಳು ಬಾರದಿರಲೆಂದು ಆಶಿಸೋಣವಲ್ಲವೇ?
ಚಿತ್ರ-ಬರಹ : ವಿಜಯಾ ಬಿ ಶೆಟ್ಟಿ ಸಾಲೆತ್ತೂರು, ಬಂಟ್ವಾಳ