ನಿಷ್ಪಾಪಿ ಸಸ್ಯಗಳು (ಭಾಗ ೪೦) - ಹಾಡೆ ಬಳ್ಳಿ

ನಾವು ಸಣ್ಣವರಿದ್ದಾಗ ಒಂದು ಜಾತಿಯ ಬಳ್ಳಿಯಿಂದ ಎಲೆಗಳನ್ನು ತಂದು ಸ್ವಲ್ಪ ನೀರು ಹಾಕಿ ಕಿವುಚಿ ಸಣ್ಣ ಸಣ್ಣ ಗೆರಟೆಗಳಿಗೆ ಹೊಯ್ದು ಇಡ್ಲಿ ಮಾಡುವ ಆಟವನ್ನಾಡುತ್ತಿದ್ದೆವು. ಈ ಸೊಪ್ಪಿನ ರಸವು ಸ್ವಲ್ಪವೇ ಹೊತ್ತಿನೊಳಗೆ ಗೆರಟೆಯಲ್ಲಿ ಗಟ್ಟಿಯಾಗಿ ಇಡ್ಲಿಯಂತೆಯೇ ಕೈಗೆ ಸಿಗುತ್ತಿತ್ತು. ಮೆತ್ತಗೆ ಮೆತ್ತಗೆ ಇರುತ್ತಿದ್ದ ಇಡ್ಲಿಯಂತಹ ಈ ವಸ್ತುವನ್ನು ಮುಟ್ಟುವುದೇ ಸೊಗಸೆನಿಸುತ್ತಿತ್ತು. ಕಣ್ಣುರಿ, ತಲೆನೋವು ಬಂದಾಗ ನಮ್ಮಮ್ಮ ಈ ಬಳ್ಳಿಯ ಎಲೆಯ ರಸವನ್ನು ಮರದ ಮಣೆಯ ಮೇಲೆ ಬಿಲ್ಲೆಯಂತೆ ಸಣ್ಣದಾಗಿ ಅಥವಾ ದೋಸೆಯಂತೆ ಹೊಯ್ದು ಬಿಡುತ್ತಿದ್ದರು. ಸ್ವಲ್ಪ ಹೊತ್ತಿನ ಮೇಲೆ ರಸವು ಗಟ್ಟಿಯಾಗುತ್ತಿತ್ತು. ಇದು ಈ ಸಸ್ಯದ ವಿಶೇಷತೆಯಾಗಿದೆ. ಬಿಲ್ಲೆಗಳನ್ನು ಕಣ್ಣಿನ ಮೇಲೆ, ದೋಸೆಯಂತದ್ದನ್ನು ತಲೆಯ ಮೇಲೆ ಇಟ್ಟುಕೊಳ್ಳುತ್ತಿದ್ದರು. ಗುಣವನ್ನೂ ಕಾಣುತ್ತಿದ್ದರು.
ನೇಜಿಯ ಕೆಲಸಕ್ಕಾಗಿ ಮಳೆಗಾಲದಲ್ಲಿ ಗದ್ದೆಗೆ ಹೋಗಿ ಬರುತ್ತಿದ್ದ ಅಜ್ಜಿ, ಅಮ್ಮನವರ ಕಾಲ ಬೆರಳುಗಳ ಸಂದಿಗಳಲ್ಲಿ ಚರ್ಮವೇ ಹೋಗಿ ನಂಜಿನ ಗಾಯ ಕೆಂಪಾಗಿ ಕಾಣಿಸುತ್ತಿತ್ತು. ಅದು ವಿಪರೀತ ತುರಿಕೆಯೂ ಇದ್ದು 'ಹುಳ ತಿನ್ನುವುದು' ಎನ್ನುತ್ತಿದ್ದರು. ಆಗೆಲ್ಲ ಇದೇ ಬಳ್ಳಿಯ ಬೇರನ್ನು ಜಜ್ಜಿಹಾಕಿದ ತೆಂಗಿನೆಣ್ಣೆಯನ್ನು ಹಚ್ಚಿ ಉಪಶಮನ ಕಾಣುತ್ತಿದ್ದರು.
ನಿಮಗೆ ಈ ವಿಶೇಷ ಬಳ್ಳಿ ಅದ್ಯಾವುದೆಂದು ತಿಳಿಯಿತೇ? ಅದನ್ನು ಕನ್ನಡದಲ್ಲಿ ಹಾಡೆ ಬಳ್ಳಿ ಅಂತಾರೆ. ತುಳುವಿನಲ್ಲಿ ತಾಳಿ ತಪ್ಪು, ಪಾದಲಪ್ಪು ಅಂತಾರೆ. ವೈಜ್ಞಾನಿಕ ಹೆಸರು ಸೈಕ್ಲಿಯಾ ಪೆಲ್ಟೇಟಾ (Cyclea peltata) ಆಗಿದ್ದು Cissampelos pareira Lim ಇದರ ಶಾಸ್ತ್ರೀಯ ಹೆಸರು. ನಿಮಗಿದು ನಮ್ಮ ಜಿಲ್ಲೆಯ ಯಾವುದೇ ಊರಲ್ಲೂ ಕಾಣಿಸಬಹುದು. ಬಹಳ ಸುಂದರವಾದ ನಿರುಪದ್ರವಿ ಬಳ್ಳಿ. ಸಣ್ಣ ಪೊದರು, ಚಿಕ್ಕ ಪುಟ್ಟ ಮರ, ಗುಡ್ಡದ ಇಳಿಜಾರು, ಗದ್ದೆ ತೋಟಗಳ ಬೇಲಿಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಈ ಬಳ್ಳಿಯ ಎಲೆಗಳು ಹೃದಯದಾಕಾರದಲ್ಲಿರುತ್ತವೆ. ಒಂದರ ನಂತರ ಒಂದರಂತೆ ಇಕ್ಕೆಲಗಳಲ್ಲಿರುವ ಎಲೆಗಳು ಗಿಡವನ್ನು ವಿಶಿಷ್ಟವಾಗಿಸುತ್ತವೆ. ಹೂಗಳು ನಸುಹಳದಿ ಬಣ್ಣವಿದ್ದು ಏಕಲಿಂಗಿಗಳಾಗಿವೆ. ದ್ರಾಕ್ಷಿ ಗೊಂಚಲಂತೆ ದುಂಡಗೆ ಹಸಿರು ಕಾಯಿಗಳ ಗೊಂಚಲು ಹಣ್ಣಾದಾಗ ಬಿಳಿಯಾಗುತ್ತವೆ. ಇದರ ಬೇರು ಸ್ವಲ್ಪ ದಪ್ಪವಾಗಿದ್ದು ಭೂಮಿಯಾಳಕ್ಕೆ ಇಳಿದಿರುತ್ತದೆ.
ಹಾಡೇ ಬಳ್ಳಿ ಎಂಬ ನಿಷ್ಪಾಪಿ ಸಸ್ಯವಿಂದು ಕ್ಯಾನ್ಸರ್ ನಿವಾರಕ ಔಷಧವೆಂದು ಮನ್ನಣೆ ಪಡೆದಿದ್ದು ಕರ್ನಾಟಕದ ಸಸ್ಯ ವಿಜ್ಞಾನಿಯೇ ಪೇಟೆಂಟ್ ಪಡೆದಿದ್ದಾರೆಂದರೆ ನಮ್ಮ ಹಿತ್ತಲ ಗಿಡದ ಮಹತ್ವ ತಿಳಿಯಬಹುದು. ಸ್ತನ ಹಾಗೂ ಮೇದೋಜೀರಕ ಕ್ಯಾನ್ಸರ್ ಗೆ ಇದು ಶಮನಕಾರಿಯಾಗಿದೆ ಎನ್ನಲಾಗಿದೆ.
ಪರಂಪರಾಗತ ಔಷಧಿಯಾಗಿ ಮುಟ್ಟಿನ ಸಂದರ್ಭದ ಹೊಟ್ಟೆನೋವು, ಕಣ್ಣುರಿ, ಚರ್ಮ ವ್ಯಾಧಿ, ಮೂಲವ್ಯಾಧಿ, ಕಾಲು ಸೆಳೆತ, ಉರಿಮೂತ್ರ, ತಲೆನೋವು, ಹೊಟ್ಟೆ ಹುಳದ ತೊಂದರೆ ಗಳಿಗೆ ಬಳಸಲಾಗುತ್ತದೆ. ಇದರ ಎಲೆಗಳನ್ನು ಸ್ವಲ್ಪ ನೀರಿನಲ್ಲಿ ಕಿವುಚಿ ಸೋಸಿದ ಬಳಿಕ ಒಂದಿಷ್ಟು ಜೀರಿಗೆ ಜಜ್ಜಿ ಹಾಕಿ ರುಚಿಗೆ ಸ್ವಲ್ಪ ಬೆಲ್ಲ ಸೇರಿಸಿ ಕುಡಿದರೆ ಬೇಸಗೆಯ ದೇಹಾಯಾಸ ಮಾಯವಾಗುವುದು. ಹಾಡೇ ಬಳ್ಳಿಯ ರಸವನ್ನು ಹಾಗೇ ಇಟ್ಟರೆ ಬೇಗನೆ ಗಟ್ಟಿಯಾಗುವುದರಿಂದ ಬೇಗನೇ ಸೋಸಿಕೊಳ್ಳಬೇಕು. ಎಳನೀರಿನ ಜೊತೆ ಇದರ ರಸ ಸೇರಿಸಿ ಕುಡಿದರೆ ಬಹಳ ಉತ್ತಮ ಪರಿಣಾಮ ಬೀರುತ್ತದೆ. ಎಲೆಯ ರಸ ಶಾಂಪೂ ವಿನಂತೆಯೂ ವರ್ತಿಸಿ ಕೂದಲಿಗೆ ಹೊಳಪನ್ನು ನೀಡುತ್ತದೆ. ತಲೆಹೊಟ್ಟನ್ನೂ ನಿವಾರಿಸುತ್ತದೆ. ಬಹುಶಃ ಹಿಂದೆ ನಮ್ಮಲ್ಲಿ ಈ ಬಳ್ಳಿಯನ್ನು ಬಳಸದ ಮನೆಗಳೇ ಇರಲಿಕ್ಕಿಲ್ಲವೆಂದರೂ ಸರಿ. ಬಿಸಿಲ ಧಗೆಗೆ ಕಣ್ಣು ಕಾಣಿಸದಂತಾದಾಗ, ಸರ್ಪಸುತ್ತು, ವಾಯುವಿನಿಂದ ಬರುವ 'ಕೊಲ್ಪು' ಕೂಡ ಈ ಬಳ್ಳಿಯ ಬೇರು, ಎಲೆಗಳ ಸಹಾಯದಿಂದ ಗುಣವಾಗುತ್ತದೆ.
ಹಾಡೇ ಬಳ್ಳಿಯ ಎಲೆಗಳ ರಸ ಮುಖಕ್ಕೂ ಸೌಂದರ್ಯಕಾರಕವಾಗಿದೆ. ದೋಸೆ, ಮಜ್ಜಿಗೆ ಸಾರು, ಜ್ಯೂಸ್, ಮಣ್ಣಿ, ತಂಬಳಿ ಮಾಡಿಯೂ ಬಳಸುತ್ತಾರೆ. ಮನುಜನಿಗೆ ಪರಿಸರದ ಪ್ರತಿ ಸಸ್ಯ ಒಂದಿಲ್ಲೊಂದು ರೀತಿಯಲ್ಲಿ ಉಪಕಾರಿ. ಪ್ರಸ್ತುತ ಎಲ್ಲೆಡೆಯೂ ಜೆಸಿಬಿ ಎಂಬ ರಕ್ಕಸ ಯಂತ್ರವು ಗುಡ್ಡ ಬೆಟ್ಟಗಳನ್ನೇ ನೆಲಸಮ ಮಾಡುವ ಮೂಲಕ ಸಸ್ಯ ಸಂಪತ್ತು ವಿನಾಶದಂಚಿನಲ್ಲಿದೆ. ಅದಕ್ಕೆ ಹಾಡೇ ಬಳ್ಳಿಯೂ ಹೊರತಾಗಿಲ್ಲ. ಮುಂದಿನ ಜನಾಂಗಕ್ಕೆ ಪರಿಚಯವೇ ಇಲ್ಲವೆಂದಾಗುವ ಮೊದಲು ನಾವು ಎಚ್ಚೆತ್ತುಕೊಳ್ಳಬೇಡವೇ?
ಚಿತ್ರ - ಬರಹ : ವಿಜಯಾ ಬಿ ಶೆಟ್ಟಿ ಸಾಲೆತ್ತೂರು, ಬಂಟ್ವಾಳ