ನಿಷ್ಪಾಪಿ ಸಸ್ಯಗಳು (ಭಾಗ ೪೫) - ಗೋರಂಟಿ ಸಸ್ಯ

ನಿಷ್ಪಾಪಿ ಸಸ್ಯಗಳು (ಭಾಗ ೪೫) - ಗೋರಂಟಿ ಸಸ್ಯ

ಈ ನಡುವೆ ಹಬ್ಬ, ಹರಿದಿನಗಳು, ಮದುವೆ, ಔತಣಗಳು ನಡೆಯುತ್ತಲೇ ಇವೆ. ಮನೆ ಅಥವಾ ಬಂಧು ಬಳಗದಲ್ಲಿ ಹಬ್ಬಗಳು ಬಂದಾಗ, ಮದುವೆಗಳು ನಡೆದಾಗ ಅಥವಾ ಊರ ಜಾತ್ರೆಯೇ ಬಂದರೂ ಹೆಣ್ಣು ಮಕ್ಕಳ ಸಂಭ್ರಮ ರಂಗೇರುವುದು ಮದರಂಗಿ ಯ ಬಣ್ಣದ ಮೂಲಕವೇ ಎಂದರೆ ತಪ್ಪಾಗದು. ತುಳು ಭಾಷೆಯಲ್ಲಿ ಮದ್ರೆಂಗಿ, ಕನ್ನಡದಲ್ಲಿ ಗೋರಂಟಿ, ಆಂಗ್ಲ ಭಾಷೆಯಲ್ಲಿ ಹೆನ್ನಾ ಎಂದೂ ಹೆಸರು ಪಡೆದ ಸಸ್ಯವು ಇಂದು ಮೆಹಂದಿ ಕಾರ್ಯಕ್ರಮದೊಳಗೆ ಮಿಂಚುತ್ತಿದೆ.

ಸಮಾರಂಭದ ಎರಡು ದಿನ ಮುಂಚಿತವಾಗಿಯೇ ಯಾವ ಗಿಡದಲ್ಲಿ ಉತ್ತಮ ಬಣ್ಣದ ಸೊಪ್ಪಿದೆ ? ಎಂದು ಆರಿಸಿಕೊಂಡು ಹಿಂದಿನ ದಿನ ಸೊಪ್ಪನ್ನು ಆರಿಸಿ ತಂದು ಅಮ್ಮನಲ್ಲೋ, ಅಜ್ಜಿಯಲ್ಲೋ ಕೊಟ್ಟು ನಯವಾಗಿ ರುಬ್ಬಿಸಿಕೊಳ್ಳುವಾಗ ಒಂದಿಷ್ಟು ಬೈಗಳು ಇದ್ದದ್ದೇ. ರುಬ್ಬುವಾಗ ಕೈಯೆಲ್ಲಾ ಕೆಂಪಾಗುವುದರಿಂದ ಆ ಕೆಲಸ ಬೈದಾದರೂ ಹಿರಿಯರೇ ಮಾಡಿಕೊಡಬೇಕೆಂದು ಕಾಯುವುದು ಏಕೆಂದರೆ ಈ ಮದರೆಂಗಿಯ ಮೇಲಿನ ಮೋಹದಿಂದಲೇ. ಕೈ ಕಾಲಿನ ಉಗುರುಗಳಿಗೆ ಈ ಗೋರಂಟಿ ಸೊಪ್ಪಿನ ಪೇಸ್ಟನ್ನು ಟೊಪ್ಪಿಯಂತೆ ಜೋಡಿಸಿ ಅದರ ಮೇಲೆ ವೀಳ್ಯದೆಲೆ ಇಟ್ಟು ಬಾಳೆನಾರಿನಲ್ಲಿ ಕಟ್ಟಿ ಮಲಗಿದರೆ ಮರುದಿನ ಬೆರಳ ತುದಿಗಳು ಕೇಪಳ ಹಣ್ಣಿನಂತೆ ಕೆಂಪು ಕೆಂಪಾಗಿ ಮಿಂಚುತ್ತಿದ್ದವು. ದಿನ ಕಳೆದಂತೆ ಉಗುರು ಬೆಳೆಯುತ್ತಾ ಉಗುರಿಗೆ ಅಂಟಿದ ಬಣ್ಣವೂ ಮುಂದಕ್ಕೆ ಸಾಗುವುದನ್ನು ನೋಡುವುದೇ ಒಂದು ಸೊಗಸು!

ಇಂದು ಸೊಪ್ಪು ಅರೆಯುವ ಕಲ್ಲು ಮಾಯವಾಗಿದೆ. ಬೇಲಿ, ಹಿತ್ತಲುಗದ್ದೆಯ ಬದುಗಳಲ್ಲಿ ಪೊದೆಗಳಾಗಿ ಬೆಳೆಯುತ್ತಿದ್ದ ಮದರೆಂಗಿ ಗಿಡಗಳೂ ಮಾಯವಾಗಿವೆ. ಹಿಂದೆ ಅಲ್ಪಸ್ವಲ್ಪ ನೀರಿಗೂ ಯಾವ ಮಣ್ಣಲ್ಲೂ ಸೊಂಪಾಗಿ ಬೆಳೆಯಬಲ್ಲ ಮದರೆಂಗಿ ಅಥವಾ ಗೋರಂಟಿ ಇರದ ಮನೆಗಳೇ ಇರಲಿಲ್ಲವೇನೊ. ಮದುಮಕ್ಕಳಿಂದ ಬಂಧುಗಳ ವರೆಗೆ ಎಲ್ಲರೂ ಇಷ್ಟಪಡುತ್ತಿದ್ದರು. ಹಬ್ಬ ಹರಿದಿನಗಳಲ್ಲಿ ಮೆಹಂದಿ ಬಳಕೆಯನ್ನು ಮಂಗಳಕರವೆಂದು ಸಾಂಪ್ರದಾಯಿಕವಾಗಿ ಭಾವಿಸಲಾಗುತ್ತದೆ.

ಬೀಜ ಅಥವಾ ಗೆಲ್ಲುಗಳ ಮೂಲಕ ವಂಶಾಭಿವೃದ್ಧಿ ನಡೆಸುವ ಈ ನಿಷ್ಪಾಪಿ ಸಸ್ಯವು ಲಿತ್ರೇಸೀ (Lythraceae) ಕುಟುಂಬಕ್ಕೆ ಸೇರಿದೆ. ಲಾಸೋನಿಯಾ ಇನರ್ಮಿಸ್ (Lawsonia Inermis) ಸಸ್ಯ ಶಾಸ್ತ್ರೀಯ ಹೆಸರು. ಅದರಲ್ಲಿನ ಲಾಸೋನ್ (Lawsone) ಎಂಬ ಅಂಶ ಬಣ್ಣ ನೀಡುವ ವಸ್ತುವಾಗಿದೆ. ಭಾರತ, ಈಜಿಪ್ಟ್, ಮಡಗಾಸ್ಕರ್, ಸೂಡಾನ್, ಪರ್ಶಿಯ ಮೊದಲಾದ ದೇಶಗಳಲ್ಲಿ ಖ್ಯಾತಿ ಪಡೆದ ಗೋರಂಟಿ ಉತ್ತರ ಆಫ್ರಿಕಾ ಮೂಲದ ಸಸ್ಯವಾಗಿದೆ. ಗುಜರಾತ್, ರಾಜಸ್ಥಾನ, ಉತ್ತರ ಪ್ರದೇಶ, ಮಧ್ಯಪ್ರದೇಶ ಗಳಲ್ಲಿ ಹೆಚ್ಚು ಬೆಳೆಯುವ ಗೋರಂಟಿ ಪಂಜಾಬ್ ನ ಫರೀದಾಬಾದ್, ಗುಜರಾತ್ ನ ಬಾರ್ದೋಲಿಯಲ್ಲಿ ಪ್ರಮುಖ ಕೇಂದ್ರಗಳನ್ನು ಹೊಂದಿದೆ. ವಾಣಿಜ್ಯ ದೃಷ್ಠಿಯಿಂದ ದೆಹಲಿ, ಗುಜರಾತ್, ಮಾಲ್ವ ಎಂಬ ಮೂರು ಬಗೆಗಳಾಗಿ ವಿಂಗಡಿಸಿದ್ದರೂ ದೆಹಲಿ ಗೋರಂಟಿಯನ್ನು ಅತ್ಯತ್ತಮವೆಂದು ಪರಿಗಣಿಸಲಾಗುತ್ತದೆ. 

ಕಂದು ಬಣ್ಣದ ಗೋರಂಟಿ ಗಿಡ ಮೂಲದಿಂದಲೇ ಹಲವಾರು ಶಾಖೆಗಳಾಗಿ ಬೆಳೆಯುತ್ತದೆ. ಎಲೆಗಳು ಕಾಂಡದುದ್ದಕೂ ಅಭಿಮುಖವಾಗಿ ಜೋಡಣೆಗೊಂಡಿರುತ್ತದೆ. ಗಿಡದಲ್ಲಿ ವಿರಳವಾಗಿ ಮುಳ್ಳುಗಳೂ ಇರುತ್ತವೆ. ಬಿಳಿ, ತಿಳಿಗುಲಾಬಿ, ನೀಲಿ, ಕೆಂಪು ಹೂಗಳ ಜಾತಿಗಳಿದ್ದರೂ ಔಷಧೀಯ ಗುಣ ಒಂದೇ ಆಗಿರುತ್ತದೆ. ಬಿಳಿ ಹಾಗೂ ತಿಳಿ ಗುಲಾಬಿ ಬಣ್ಣದ ಹೂಗಳಿಗೆ ಸುವಾಸನೆಯಿರುತ್ತದೆ. ಇದರಿಂದ ಸುಗಂಧ ತೈಲವನ್ನು ಪಡೆಯಲಾಗುತ್ತದೆ. ಹೂಗಳು ಗೊಂಚಲುಗಳಾಗಿದ್ದು ಹಸಿರು ಪುಟ್ಟ ಕಾಯಿಗಳೂ ಗೊಂಚಲಲ್ಲೇ ಬೆಳೆಯುತ್ತವೆ. ಸ್ತ್ರೀಯರಿಗೆ ಪ್ರಿಯ ವಸ್ತುವಾಗಿ ಸೌಂದರ್ಯ ಸಾಧನವಾಗಿ ಪುರಾತನ ಕಾಲದಿಂದಲೂ ಬಳಕೆಯಲ್ಲಿದೆ. ಮಾನವ ಕುಲದ ಮೊದಲ ಸೌಂದರ್ಯವರ್ಧಕ ಈ ಗೋರಂಟಿ ಯಾಗಿರಬಹುದೇನೊ! ಎಲೆಗಳನ್ನು ಒಣಗಿಸಿ ಪುಡಿಮಾಡಿಟ್ಟುಕೊಂಡು ಲಿಂಬೆರಸ ಸೇರಿಸಿ ಕಲಸಿ ಕೈಗಳಿಗೆ ಚಿತ್ತಾರಗಳನ್ನು ಬಿಡಿಸಬಹುದಾದರೂ ಇಂದು ಮದರಂಗಿ ಕೋನ್, ಟ್ಯಾಟೋ, ಮದರೆಂಗಿ ಸ್ಟಿಕ್ಕರ್ ಗಳು ಅನೇಕ ಬಣ್ಣ, ಅನೇಕ ವಿನ್ಯಾಸದಲ್ಲಿ ಲಭ್ಯವಿದ್ದು ಮೂಲ ಬಣ್ಣವನ್ನು ಕೇಳುವವರಿಲ್ಲವಾಗಿದೆ.

ಗೋರಂಟಿ ಯ ಎಳೆಯ ಕಡ್ಡಿಯಿಂದ ಇಂಡೋನೇಷ್ಯಾ ದ ಜನ ಹಲ್ಲುಜ್ಜುತ್ತಾರಂತೆ. ಹಿಂದೆ ರೇಷ್ಮೆ ಮತ್ತು ಉಣ್ಣೆಗೆ ಬಣ್ಣ ಕೊಡಲೂ ಬಳಸುತ್ತಿದ್ದರಂತೆ. ಇದೀಗ ಭಾರತದಿಂದ ವಿದೇಶಗಳಿಗೂ ರಫ್ತಾಗುತ್ತಿದೆ. ಬರೇ ಬಣ್ಣಕ್ಕಾಗಿ ಮಾತ್ರವೇ ಈ ಗೋರಂಟಿ ಯನ್ನು ಬಳಸಲಾಗುತ್ತಿಲ್ಲ. ಈ ಸಸ್ಯ ಅಪಾರವಾದ ಔಷಧೀಯ ಗುಣವನ್ನೂ ಹೊಂದಿದ್ದು ಆಯುರ್ವೇದದಲ್ಲಿ ಮಹತ್ತರ ಸ್ಥಾನ ಪಡೆದಿದೆ. ಉಗುರು ಸುತ್ತು, ಕೀವು, ಮೊಡವೆ, ಕುಷ್ಠ, ತೊನ್ನುಗಂಟಲು ನೋವು, ರಕ್ತನಾಳಗಳಲ್ಲಿ ಶೇಖರವಾದ ಕೊಬ್ಬು ಕರಗಿಸಲೂ ಸಹಕಾರಿಯಾಗಿದೆ. ಎದೆ ಉರಿ, ಹೊಟ್ಟೆ ಉರಿ, ಬಾಯಿ ಹುಣ್ಣುಜ್ವರ, ಜಂತುನಾಶಕ, ಉರಿಮೂತ್ರ ನಿವಾರಕ. ಪಿತ್ತ ಮತ್ತು ಉಷ್ಣವನ್ನು ಹತೋಟಿಯಲ್ಲಿಡುತ್ತದೆ. ತಲೆ ಕೂದಲಿಗೆ ನೈಸರ್ಗಿಕ ಕಾಂತಿ ಹಾಗೂ ರಕ್ಷಣೆ ನೀಡುವುದಲ್ಲದೆ ಬಿಳಿ ಕೂದಲಿಗೆ ಬಣ್ಣವನ್ನೂ ನೀಡುತ್ತದೆ. ತಲೆಹೊಟ್ಟು, ಕೂದಲ ತುದಿ ಸೀಳುವಿಕೆ, ಕೂದಲುದುರುವಿಕೆ ಗಳಗೆ ಪಾರಂಪರಿಕ ಔಷಧಿಯಾಗಿದೆ. ಹೇನು ನಿವಾರಕವಾಗಿಯೂ ಬಳಸಲ್ಪಡುತ್ತದೆ. ತಿಂಗಳಿಗೆ ಒಂದೆರಡು ಬಾರಿ ತಲೆಗೆ ಹಚ್ಚಿಕೊಂಡು ಸ್ನಾನ ಮಾಡಿದರೆ ಯಾರಿಗೂ ಉತ್ತಮ ಪರಿಣಾಮವಾಗುವುದು ಅನುಭವಕ್ಕೆ ಬರುತ್ತದೆ. ಇದರ ಹೂ, ಬೀಜ, ಎಲೆ, ಕಾಂಡ, ಬೇರು ಎಲ್ಲವೂ ಬಳಕೆಯಲ್ಲಿದೆ. ಗರ್ಭಿಣಿ, ಬಾಣಂತಿಯರು ಬಳಸದಿದ್ದರೆ ಉತ್ತಮ. ತಲೆಸುತ್ತು, ಹಲ್ಲುನೋವು, ಬೆವರು ಸಾಲೆ, ರಕ್ತಶುದ್ಧಿ, ಸುಟ್ಟಗಾಯ, ತರಚುಗಾಯ, ಚರ್ಮರೋಗಗಳಿಗೆ ಈಗಲೂ ಜನಸಾಮಾನ್ಯರು ಬಳಸುತ್ತಾರೆ. ಅಂಗೈ ಅಂಗಾಲು ಉರಿ ಇದ್ದಾಗ ಇದರ ಸೊಪ್ಪಿನ ಲೇಪನವೇ ಶಮನಗೊಳಿಸುತ್ತದೆ. ಇದರ ಹೂಗೊಂಚಲನ್ನು ದಿಂಬಿನ ಬಳಿ ಇರಿಸಿದರೆ ನಿದ್ದೆಯೇ ಬಾರದವರಿಗೆ ನಿದ್ದೆ ಬರಿಸುವುದು. ಮಳೆಗಾಲದಲ್ಲಿ ಕಾಲು ಬೆರಳ ಸಂದಿಯಲಿ ಬರುವ ಚರ್ಮರೋಗಕ್ಕಿದು ದಿವ್ಯೌಷಧಿ.

ಯಾರಿಗೂ ಬೇಡವಾದ, ಬೇಲಿಯಿಂದಲೂ ದೂರ ಸರಿದ ಈ ಗೋರಂಟಿ ಸಸ್ಯ ತನ್ನಿಂತಾನಾಗಿ ಸಂತಾನ ಬೆಳೆಸುವುದೂ ಅಪರೂಪ. ಮುಂದಿನ ಪೀಳಿಗೆಗೂ ರಾಸಾಯನಿಕ ಮುಕ್ತವಾದ ಉತ್ಪನ್ನಗಳು ದೊರೆಯಲಾರವು. ಹೀಗಿದ್ದರೂ ನಾವು ಒಂದು ಗಿಡ ನೆಟ್ಟು ಬದುಕಿಸಿ ಕೊಳ್ಳಬಾರದೇಕೆ?

ಚಿತ್ರ-ಬರಹ : ವಿಜಯಾ ಬಿ ಶೆಟ್ಟಿ ಸಾಲೆತ್ತೂರು, ಬಂಟ್ವಾಳ