ನಿಷ್ಪಾಪಿ ಸಸ್ಯಗಳು (ಭಾಗ ೫೩) - ಪೊನ್ನೊಲಿಗೆ ಸೊಪ್ಪು
ನಾನು ರಜೆಯಲ್ಲಿ ನೆಂಟರ ಮನೆಗೆ ಹೋಗಿದ್ದೆ. ಅಲ್ಲಿಗೆ ಹೋಗುವಾಗ ದಾರಿ ಬದಿಯಲ್ಲಿ ಅಪರೂಪದ ಗಿಡವೊಂದನ್ನು ನೋಡಿದೆ. "ಅದರ ಎಲೆಗಳನ್ನು ಆಚೀಚೆ ಹೋಗುವವರು ಕಿತ್ತುಕೊಂಡು ಹೋಗ್ತಾರೆ, ಬಾರೀ ಒಳ್ಳೇದಂತೆ ಜೀವಕ್ಕೆ" ಅಂತ ಅಲ್ಲೇ ಸಮೀಪದ ಮನೆಯ ಮಹಿಳೆಯೊಬ್ರು ಹೇಳಿದ್ರು. ಅದನ್ನವರು ಬಳಸಿಲ್ಲ ಆದರೆ ಅವರಿಗೆ ತುಳು ಭಾಷೆಯಲ್ಲಿ ''ಪೊನ್ನೊಲಿಗೆ ಸೊಪ್ಪು' ಅಂತ ಹೆಸರು ಗೊತ್ತಿತ್ತು. ಇದು ನಮ್ಮ ಜನಪದರ ಶ್ರೇಷ್ಠತನ. ಅವರಿಗೆ ಸಾಮಾನ್ಯವಾಗಿ ಎಲ್ಲಾ ಸಸ್ಯಗಳ ಪರಿಚಯವಿತ್ತು. ನಾವು ಪರಿಸರದಿಂದ ವಿಮುಖರಾಗಿ ಅಂಗಳದ ಸಸ್ಯಗಳನ್ನೂ ಗುರುತಿಸಲಾರೆವು. ಈ ಪೊನ್ನೊಲಿಗೆ ಸೊಪ್ಪಿನ ಗಿಡ ಗದ್ದೆ ಅಂಚು, ಬೇಲಿ, ಗುಡ್ಡ ಬೆಟ್ಟಗಳ ತಪ್ಪಲಿನ ಸಾಮಾನ್ಯ ಕೂಸು. ಇದನ್ನು ಕನ್ನಡದಲ್ಲಿ ಅಖೋರ್ ಮೊರನು, ಮಿತಲಾ, ಮಿಟ್ಲಿ , ಮರಳು ಕಾಗದ ಮರ ಎಂದೆಲ್ಲಾ ಕರೆಯುತ್ತಾರೆ. ಇದು ಪೊದೆಯಾಗಿಯೂ ಸಣ್ಣ ಗಾತ್ರದ ಮರವಾಗಿಯೂ ಕಾಣಸಿಗುತ್ತದೆ. ಮೃದುವಾದ ತಿಳಿ ಬೂದು, ಕಂದು ಬಣ್ಣದ ತೊಗಟೆ ಇರುವ ಗಿಡದಲ್ಲಿ ಎಡೆಬಿಡದ ಶಾಖೆಗಳಿದ್ದು ಇಳಿಮುಖವಾಗಿರುತ್ತವೆ. ಕಾಂಡದ ಕಿರು ಕೊಂಬೆಗಳು ಮುಳ್ಳಿನಂತಿರುತ್ತವೆ. ಎಲೆಗಳು ಪರ್ಯಾಯವಾಗಿದ್ದು ಅಂಚು ಅನಿಯಮಿತ ವಕ್ರತೆ (ಗರಗಸದ ಹಲ್ಲಿನಂತೆ) ಹೊಂದಿರುತ್ತವೆ. ಹೊಳಪುಳ್ಳ ಗಾಢ ಹಸಿರು ಎಲೆಗಳು ಅಂಡಾಕಾರವಾಗಿದ್ದು ನಮ್ಮನ್ನು ಗಮನ ಸೆಳೆಯುವಂತೆ ಮಾಡುತ್ತವೆ.
ಇಂಡೋನೇಷ್ಯಾ, ಕಾಂಬೋಡಿಯ, ಥೈಲ್ಯಾಂಡ್, ಶ್ರೀಲಂಕಾ, ಭಾರತ, ಮಲೇಷ್ಯಾ, ವಿಯಟ್ನಾಂ ಗಳಿಗೆ ಇದು ಸ್ಥಳೀಯ ಸಸ್ಯ. ಭಾರತದಲ್ಲಿ ಸಾಮಾನ್ಯವಾಗಿ ಎಲ್ಲೆಡೆಗೂ ಕಾಣಿಸುತ್ತದೆ. ಸ್ಟ್ರೆಬ್ಲಸ್ ಆಸ್ಪರ್ (Streblus Asper) ಎಂಬ ಸಸ್ಯ ಶಾಸ್ತ್ರೀಯ ಹೆಸರುಳ್ಳ ಈ ಸಸ್ಯ ಮೊರೇಸಿ ಕುಟುಂಬಕ್ಕೆ ಸೇರಿದೆ.
ಈ ನಿಷ್ಪಾಪಿ ಸಸ್ಯ ನಾವು ಮೇಲ್ನೋಟಕ್ಕೆ ನೋಡಿದಂತಲ್ಲ. ಇದಕ್ಕೆ ಬಹಳ ದೊಡ್ಡ ಹಿನ್ನೆಲೆ ಇದೆ ಗೊತ್ತಾ? ಕಳೆದ 700 ವರ್ಷಗಳಿಂದ ಥೈಲ್ಯಾಂಡ್ ನಲ್ಲಿ ಕಾಗದ ತಯಾರಿಗಾಗಿ ಈ ಸಸ್ಯವನ್ನು ಬಳಸುತ್ತಿದ್ದಾರೆ..! ಎಲ್ಲಾ ಥಾಯ್ ದಾಖಲೆಗಳನ್ನು ಈ ಮರದ ತೊಗಟೆಯ ಮೇಲೆ ಬರೆಯಲಾಗಿದೆ. ಇಲ್ಲಿ 20ನೇ ಶತಮಾನಕ್ಕಿಂತ ಹಿಂದಿನ ಬೌದ್ಧ ಗ್ರಂಥಗಳು, ಅಧಿಕೃತ ದಾಖಲೆಗಳನ್ನು ಇದರಲ್ಲಿ ಬರೆದಿದ್ದು ಅವನ್ನು ಖೋಯ್ ಪುಸ್ತಕಗಳು ಎನ್ನುತ್ತಾರೆ. ಇದರ ಕಾಗದ ಬಾಳಿಕೆ ಬರುವುದಷ್ಟೇ ಅಲ್ಲದೆ ಬೇಗನೆ ಸುಟ್ಟು ಹೋಗದು, ಕೀಟಗಳು ಹಾನಿ ಮಾಡಲಾರವು!
‘ಸ್ಯಾಂಡ್ ಪೇಪರ್ ಟ್ರೀ’ ಎಂದು ಆಂಗ್ಲ ಭಾಷೆಯಲ್ಲಿ ಕರೆಯಲ್ಪಡುವ ಈ ಸಸ್ಯವು ಥೈಲ್ಯಾಂಡ್ ನ ಜನಪ್ರಿಯ ಬ್ರಾಂಡ್ ನ ಗಿಡಮೂಲಿಕೆಯಾಗಿದೆ. ಇದನ್ನು ಟೂತ್ ಬ್ರಷ್ ಟ್ರೀ ಎಂದೂ ಕರೀತಾರೆ. ಯಾಕೆ ಗೊತ್ತಾ? ಇದರ ಕೋಲನ್ನು ತುದಿ ಜಜ್ಜಿ ಹಲ್ಲುಜ್ಜಲು ಬಳಸುತ್ತಾರೆ. ದಂತ ಕ್ಷಯ, ಬಾಯಿಯ ದುರ್ಗಂಧ ನಾಶಮಾಡಿ ಒಸಡಿನ ರಕ್ಷಣೆ ಮಾಡುತ್ತದೆ. ಆಗ್ನೇಯ ಏಷ್ಯಾದಲ್ಲಿ ಇದರ ಹೊಗೆಯನ್ನು ಸೇವಿಸುವ ಮೂಲಕ ಗಂಟಲ ಕಿರಿಕಿರಿ, ಮೂಗಿನ ಪಾಲಿಪ್ಸ್ ಚಿಕಿತ್ಸೆಗೆ ಫಲಕಾರಿ ಎಂದು ಕಂಡು ಕೊಳ್ಳಲಾಗಿದೆ. ಇದೊಂದು ಸಾಂಪ್ರದಾಯಿಕ ಔಷಧೀಯ ಸಸ್ಯವಾಗಿದೆ. ಇದರ ಪ್ರಯೋಜನ ಪಡೆಯಲು ನೂರಾರು ಪ್ರಯೋಗಗಳನ್ನು ಮಾಡಿದ್ದು ಈಗಲೂ ಸಸ್ಯ ವಿಜ್ಞಾನಿಗಳಿಗೆ ಆಸಕ್ತಿಯ ನಿಧಿಯಾಗಿದೆ.
ಒಸಡಿನ ಆರೋಗ್ಯ, ಫೈಲೇರಿಯ, ಮಲೇರಿಯ, ಕುಷ್ಠ, ಪೈಲ್ಸ್, ಅತಿಸಾರ, ಭೇದಿ, ಹಾವಿನ ಕಡಿತಕ್ಕೆ ಪ್ರತಿವಿಷ, ಅಪಸ್ಮಾರ, ಬೊಜ್ಜು,ಸೈನಸ್, ಮೂತ್ರದ ತೊಂದರೆ ಹೊಟ್ಟೆನೋವು, ನಂಜು ನಿರೋದಕ, ನ್ಯುಮೋನಿಯಾ, ಕಾಲರಾ, ಏರು ರಕ್ತದೊತ್ತಡ ಇತ್ಯಾದಿಗಳಿಗೆ ಔಷಧವೆಂದು ಕಂಡುಕೊಂಡಿದ್ದು ನಿರಂತರ ಸಂಶೋಧನೆಗಳಾಗುತ್ತಿವೆ. ಮಾತ್ರವಲ್ಲದೆ ಎಲೆಗಳ ಭಾಷ್ಪಶೀಲ ತೈಲ ಕ್ಯಾನ್ಸರ್ ವಿರೋಧೀ ಗುಣ ಹೊಂದಿದೆ ಎನ್ನಲಾಗುತ್ತದೆ. ಎಲೆಗಳ ಸಾರ ಬ್ಯಾಕ್ಟೀರಿಯಾ ನಾಶಕ. ಡಿಪ್ತೀರಿಯಾ ಕ್ಕೆ ಬೇರು ಶಮನಕಾರಿ. ಬೀಜವು ಹಸಿವನ್ನು ವೃದ್ಧಿಸುವ ಗುಣ ಹೊಂದಿದೆ. ಆನೆಕಾಲು ರೋಗಕ್ಕೆ ಇದು ವಿಶೇಷ ಔಷಧಿಯಾಗಿ ಆಯುರ್ವೇದದಲ್ಲಿ ಗುರುತಿಸಲ್ಪಟ್ಟಿದೆ.
ಮರ, ದಂತದ ವಸ್ತುಗಳನ್ನು ನಯಗೊಳಿಸಲು, ಹೊಳಪುಗೊಳಿಸಲು, ಅಡುಗೆ ಪಾತ್ರೆಗಳನ್ನು ಸ್ವಚ್ಛಗೊಳಿಸಲು ಎಲೆಯನ್ನು ಬಳಸುತ್ತಾರೆ. ದನಕರುಗಳು ಮೇವಾಗಿಯೂ ಬಳಸುತ್ತವೆ. ಮಾತ್ರವಲ್ಲದೇ ಪ್ರವಾಹಗಳನ್ನು ನಿಯಂತ್ರಿಸುವ ನಿರೋಧಕವಾಗಿದೆ. ಕೃಷಿ ಉಪಕರಣ ಗಳಿಗೂ ಈ ಗಿಡವನ್ನು ಬಳಸಲಾಗುತ್ತದೆ.
ಫೆಬ್ರುವರಿ ಯಿಂದ ಎಪ್ರಿಲ್ ತನಕ ಹೂ ಬಿಡುವ ಈ ಮಿಟ್ಲಿ ಮರ ಮೇ ಯಿಂದ ಜೂನ್ ವರೆಗೂ ಹಣ್ಣುಗಳನ್ನು ನೀಡುತ್ತದೆ. ಹಸಿರು ಮಿಶ್ರಿತ ಹಳದಿ ಗಂಡು ಮತ್ತು ಹೆಣ್ಣು ಎರಡೂ ಹೂಗಳು ಒಂದೇ ಮರದಲ್ಲಿರುತ್ತವೆ. ಹಣ್ಣುಗಳು ಹಳದಿಯಾಗಿದ್ದು ರುಚಿಕರವಾಗಿದೆ. ಪ್ರಾಣಿಗಳು, ಪಕ್ಷಿಗಳು ಹಣ್ಣುಗಳನ್ನು ತಿಂದು ಹಾಕಿ ಹಿಕ್ಕೆಗಳ ಮೂಲಕ ಬೀಜಪ್ರಸಾರವನ್ನು ನಡೆಸುತ್ತವೆ. ಈ ಗಿಡವನ್ನು ಬೇಕೆಂದು ನಾವು ಬೆಳೆಸುವುದು ಕಷ್ಟ. ಆದರೆ ಪ್ರಾಕೃತಿಕವಾಗಿ ಇದ್ದ ಮರಗಳನ್ನು , ಗಿಡಗಳನ್ನು ರಕ್ಷಿಸಬಹುದಲ್ಲವೇ? ಭವಿಷ್ಯದಲ್ಲಿ ಮಾನವನಿಗೆ ಈ ಗಿಡ ಕಲ್ಪವೃಕ್ಷವಾಗಿ ಕೈಹಿಡಿಯಬಹುದು.... ಏನಂತೀರಾ?
ಚಿತ್ರ - ಬರಹ : ವಿಜಯಾ ಬಿ ಶೆಟ್ಟಿ ಸಾಲೆತ್ತೂರು, ಬಂಟ್ವಾಳ