ನಿಷ್ಪಾಪಿ ಸಸ್ಯಗಳು (ಭಾಗ ೫೭) - ಕಾಡು ಶುಂಠಿ ಗಿಡ

ನಿಷ್ಪಾಪಿ ಸಸ್ಯಗಳು (ಭಾಗ ೫೭) - ಕಾಡು ಶುಂಠಿ ಗಿಡ

ಮಳೆರಾಯನ ಬಿರುಸಿನ ನಡಿಗೆಗೆ ಧರಣಿ ದೇವಿ ಹಸಿ ಹಸಿರಾದ ಜರತಾರಿ ಸೀರೆ ನೆರಿಗೆ ಚಿಮ್ಮಿಸುತ್ತಾ ಜೂನ್ ನಡಿಗೆ ಪೂರ್ಣಗೊಳಿಸಿದಳು! ಬೇಸಿಗೆಯಲ್ಲಿ ಭೂಮಿಯ ಮೇಲೆ ಕಾಣಿಸಿಕೊಳ್ಳದೇ ಅಡಗಿದ್ದ ಕೆಲವು ಸಸ್ಯಗಳು ಧುತ್ತನೆ ಪ್ರತ್ಯಕ್ಷವಾಗಿವೆ. ಅವುಗಳಲ್ಲಿ ಲಾವಣ್ಯದಿಂದ ಓರೆಯೋರೆಯಾಗಿ ಕ್ಯಾಟ್ ವಾಕ್ ನಡೆಸುವ ಬೆಡಗಿಯಂತೆ ಕಾಣಿಸಿಕೊಳ್ಳುವ ಗಿಡವೊಂದಿದೆ..! ಇದು ಕನ್ನಡದಲ್ಲಿ ಕಾಡು ಶುಂಠಿ, ಮಲಯ ಶುಂಠಿ, ನರಿ ಕಬ್ಬು, ನಾಯಿ ಕಬ್ಬು , ನೀರಜ, ಪದ್ಮಪತ್ರ ಎಂದು ಕರೆಯಲ್ಪಟ್ಟರೆ ತುಳುವಿನಲ್ಲಿ ನೈಕರ್ಂಬು, ನಾಯಿ ಕರ್ಂಬು ಎನಿಸಿಕೊಳ್ಳುತ್ತದೆ. ಅರೆ ನೆರಳು ಪ್ರದೇಶ ಅಥವಾ ಸಾಕಷ್ಟು ನೀರು ಇರುವಲ್ಲಿ ವೇಗವಾಗಿ ಬೆಳೆಯುವ ಈ ಸಸ್ಯ ಕ್ರೇಪ್ ಜಿಂಜರ್ ಎಂದು ಖ್ಯಾತಿ ಪಡೆದಿದೆ.

ಭಾರತ, ಶ್ರೀಲಂಕಾ, ಚೀನಾ, ಮಲೇಷ್ಯಾ, ನೇಪಾಳ, ಆಸ್ಟ್ರೇಲಿಯಾ, ನ್ಯೂಗಿನಿಗಳಲ್ಲಿ ಕಾಣಸಿಗುವ ಈ ಕ್ರೇಪ್ ಶುಂಠಿ ಆಗ್ನೇಯ ಏಷ್ಯಾ ಕ್ಕೆ ಸ್ಥಳೀಯ ಸಸ್ಯವಾಗಿದೆ. ಸುಮಾರು ಹತ್ತು ಅಡಿಗಳೆತ್ತರವೂ ಬೆಳೆಯಬಲ್ಲ ಕ್ರೇಪ್ ಶುಂಠಿ ಚಳಿಗಾಲದಲ್ಲಿ ಒಣಗುತ್ತದೆ. ಇದರ ಗಡ್ಡೆ ಸ್ವಲ್ಪ ಮಟ್ಟಿಗೆ ಶುಂಠಿ ಯಂತೆ ಸುವಾಸನೆ ಹೊಂದಿರುತ್ತದೆಯಾದ್ದರಿಂದ ಹೆಸರಿನ ತುದಿಗೆ ಶುಂಠಿ ಯನ್ನು ಸೇರಿಸಿಕೊಂಡಿದೆ.

ಮಳೆಗಾಲದಲ್ಲಿ ಕೆರೆ, ಗದ್ದೆ, ತೋಟ, ಬೇಲಿ ಬದಿಗಳಲ್ಲಿ ಗುಡ್ಡ ಬೆಟ್ಟಗಳ ಅಂಚಿನಲ್ಲಿ ಸದ್ದಿರದೆ ಸುರುಳಿಯಾಕಾರದಲ್ಲಿ ಎಲೆಗಳನ್ನು ಅರಳಿಸುತ್ತಾ ಎದ್ದು ನಿಲ್ಲುವ ಈ ನಿಷ್ಪಾಪಿ ಸಸ್ಯ ತನ್ನ ಹೂಗಳ ಮೂಲಕ ಗಮನ ಸೆಳೆಯುತ್ತದೆ. ಕಡು ಹಸಿರಾದ ಎಲೆಗಳು ಮಧ್ಯಭಾಗದಲ್ಲಿ ಅಗಲವಾಗಿದ್ದು ಎರಡು ತುದಿಗಳಲ್ಲಿ ಚೂಪಾಗಿದ್ದು ತುದಿ ಬಾಗಿರುತ್ತದೆ. ಕಡು ಕೆಂಪು ದಂಡಿನುದ್ದಕ್ಕೂ ಕೋನ್ ಆಕಾರದಲ್ಲಿ ವಿಶೇಷವಾದ ಹೂಗಳು ಅರಳುತ್ತಾ ಮೇಲೆ ಮೇಲೆ ಏರುತ್ತವೆ. ಇದರ ದಳಗಳು ಬಿಳಿಯದಾಗಿದ್ದು ಕ್ರೇಪ್ ಪೇಪರ್ ನಂತೆ ಕಾಣಿಸುವುದರಿಂದ ಅನ್ವರ್ಥಕವಾಗಿ ಕ್ರೇಪ್ ಶುಂಠಿ ಎಂದೂ ಹೆಸರು ಪಡೆದಿದೆ. ಪ್ರತೀ ಹೂದಳಗಳು ಒಳಭಾಗದಲ್ಲಿ ಹಳದಿ ಬಣ್ಣದಲ್ಲಿದ್ದು ತೊಟ್ಟುಗಳಿಗೆ ಕೊಳವೆಯಂತೆ ಜೋಡಣೆಯಾಗಿದೆ. ಹೂಗಳು ತೆಳ್ಳಗಿನ ಕಾಂಡದ ತುದಿಯಲ್ಲಿರುವ ಶಂಖುವಿನಾಕಾರದ ರಚನೆಗಳಿಗೆ ಜೋಡಣೆಯಾಗಿದ್ದು ಗೊಂಚಲಿನಂತೆ ಮೇಲ್ನೋಟಕ್ಕೆ ಕಾಣಿಸುತ್ತದೆ. ಹೂಗಳು ಚಿಟ್ಟೆಗಳನ್ನು ಸಣ್ಣ ಕೀಟಗಳನ್ನು ಆಕರ್ಷಿಸುತ್ತವೆ. ಹೂ ಮುಗಿದ ಬಳಿಕ ಕೆಂಪು ಕೋನ್ ಆಕಾರದ ತೊಟ್ಟುಗಳಲ್ಲಿ ಬಿಳಿ ತಿರುಳು ಹಾಗೂ ಕಪ್ಪು ಬೀಜಗಳಿರುವ ಕೆಂಪು ಬಣ್ಣದ ಹಣ್ಣುಗಳಾಗುತ್ತವೆ. ಇದು ಪಕ್ಷಿಗಳಿಗೆ ಆಹಾರವಾಗಿ ತನ್ನ ಸಂತಾನ ಹರಡುವಿಕೆಗೆ ಕಾರಣವಾಗುತ್ತದೆ.

ಕೋಸ್ಟೇಸಿಯೆ (Costaceae) ಕುಟುಂಬಕ್ಕೆ ಸೇರಿದ ಕ್ರೇಪ್ ಜಿಂಜರ್ ಹೆಲೆನಿಯಾ ಸ್ಪೆಸಿಯೇಸಸ್ (Hellenia Speciosus) ಎಂಬ ಸಸ್ಯ ಶಾಸ್ತ್ರೀಯ ಹೆಸರನ್ನು ಪಡೆದಿದೆ. ಇದರ ಬೇರು, ಕಾಂಡಗಳು ಜ್ವರ, ಅಸ್ತಮಾ, ಶ್ವಾಸನಾಳದ ಉರಿಯೂತ, ಕರುಳಿನ ಹುಳಗಳಿಗೆ ಮಾತ್ರವಲ್ಲದೆ ಸಂಧಿವಾತ, ಸಿಡುಬು, ರಕ್ತಹೀನತೆಗೆ ಔಷಧಿಯಾಗಿ ಯುನಾನಿ, ಆಯುರ್ವೇದ, ಜನಪದದಲ್ಲಿ ಬಳಕೆಯಲ್ಲಿದೆ. ಸ್ಟಿರಾಯ್ಡ್ ಗಳ ವಾಣಿಜ್ಯ ಉತ್ಪಾದನೆಗೆ ಬಳಸುವ ಸಂಯುಕ್ತ ವಾಗಿಯೂ ಕ್ರೇಪ್ ಜಿಂಜರ್ ಉಪಯುಕ್ತವಾಗಿದೆ. ಇದು ಸೌಂದರ್ಯ ವರ್ಧಕವಾಗಿ, ದುಷ್ಟ ಶಕ್ತಿಗಳು ದೇಹ ಹೊಕ್ಕಿವೆ ಎಂಬ ನಂಬಿಕೆಯಲ್ಲಿ ಸಾಂಪ್ರದಾಯಿಕ ವಾಗಿ ಬಳಕೆಯಲ್ಲಿದೆ. ಮಾತ್ರವಲ್ಲದೆ ಜಿಂಜರ್ ಶಾಂಪೂ ಎಂದೂ ಮಾರುಕಟ್ಟೆಯಲ್ಲಿದೆ. ಗ್ರಾಮೀಣ ಪ್ರದೇಶಗಳಲ್ಲಿ ಮಿಂಚಿನಿಂದ ರಕ್ಷಣೆಗೆಂದು ಈ ಗಿಡವನ್ನು ಮನೆಯ ಬಳಿ ಬೆಳೆಸುವ ಪರಿಪಾಠವಿದೆ. ಸಸ್ಯ ಶಾಸ್ತ್ರಜ್ಞರು 20 ಕ್ಕಿಂತಲೂ ಹೆಚ್ಚು ಜಾತಿಗಳಿರುವ ಈ ಸಸ್ಯ ವರ್ಗದ ಕುಲವನ್ನು ಆದ್ಯತೆ ನೀಡಿ ಉಳಿಸಲು ಪ್ರಯತ್ನಿಸುತ್ತಿದ್ದಾರೆ.

ನಮ್ಮ ಗ್ರಾಮೀಣ ಭಾಗದಲ್ಲಿ ಕಣ್ಣು ನೋವು, ಕಣ್ಣು ಕೆಂಪು ಆದಾಗಲೆಲ್ಲ ಈ ಗಿಡವನ್ನು ಹುಡುಕಿ ಕಾಂಡದ ರಸ ಹಿಂಡಿ ಕಣ್ಣಿಗೆ ಬಿಡುತ್ತಿದ್ದರು. ಪ್ರಕೃತಿಯ ಶಿಶುವಾಗಿ ಮಾನವನಿದ್ದಷ್ಟು ಕಾಲ ಎಲ್ಲ ಸಸ್ಯಗಳೂ ಸಂಜೀವಿನಿಯಾಗಿಯೇ ಇರುತ್ತದೆ ಎಂಬುವುದಕ್ಕೆ ಸಂಶಯವಿಲ್ಲ ಅಲ್ಲವೇ? ಈ ಗಿಡ ನಿಮ್ಮ ಹಿತ್ತಲು, ತೋಡು, ದಿಣ್ಣೆಗಳ ಸಮೀಪ ಖಂಡಿತವಾಗಿಯೂ ಇದ್ದೇ ಇದೆ. ಜುಲೈನಿಂದ ಅಕ್ಟೋಬರ್ ವರೆಗೂ ಹೂಗಳು ಕಾಣಸಿಗುವುದರಿಂದ ನೀವು ನಿಮ್ಮನ್ನು ಗಿಡದ ಜೊತೆ ಪರಿಚಯಿಸಿಕೊಳ್ಳಲು ಸುಲಭ!

ಚಿತ್ರ ಮತ್ತು ಬರಹ : ವಿಜಯಾ ಬಿ ಶೆಟ್ಟಿ ಸಾಲೆತ್ತೂರು, ಬಂಟ್ವಾಳ