ನಿಷ್ಪಾಪಿ ಸಸ್ಯಗಳು (ಭಾಗ ೫೯) - ನಂದಿ ಬಟ್ಟಲು
ವರ್ಷಧಾರೆಯ ಹೊಡೆತಕ್ಕೆ ನಮ್ಮ ಆಟಪಾಠಗಳೂ ನಲುಗುತ್ತಿವೆ. ಈ ನಡುವೆ ತುಳುನಾಡಿನ ವಿಶಿಷ್ಟ ತಿಂಗಳಾದ ಆಟಿಯೂ ಪ್ರವೇಶವಾಗಿದೆ. ಮಳೆ ಆರಂಭವಾದರೆ ಸಾಕು, ಹೆಣ್ಣು ಮಕ್ಕಳಿಗೆ ಹೂಗಿಡಗಳನ್ನು ತರುವ, ನೆಡುವ, ಕೊಡುವ ಸಂಭ್ರಮ. ಎಲ್ಲರ ಕೈತೋಟದಲ್ಲೂ ಹಾಜರಾತಿ ಪಡೆವ ಹೂವೊಂದಿದೆ! ಅದೇನೆಂದು ಹೇಳಬಲ್ಲಿರಾ...? ಅದರ ಬಣ್ಣ ಶುಭ್ರವಾದ ಬಿಳಿ, ಮಾದಕ ಪರಿಮಳ, ಎಲೆಗಳು ಗಾಢವಾದ ಹಸಿರು. ಕೊಂಬೆಯನ್ನೋ, ಎಲೆಯನ್ನೋ ಮುರಿದಿರೆಂದಾದರೆ ಬಿಳಿ ಬಣ್ಣದ ಹಾಲು ಒಸರುವುದು. ಇದರ ಮೊಗ್ಗನ್ನು ಕೊಯ್ದು ಕಲಾತ್ಮಕವಾಗಿ ಕಟ್ಟಿ ಮುಡಿಗೋ, ದೇವರಿಗೋ ಅಲಂಕರಿಸಿ ಖುಷಿ ಪಡುತ್ತಾರೆ. ಈಗ ಇಷ್ಟೆಲ್ಲಾ ಸುಳಿವು ಪಡೆದ ಬಳಿಕ ಈಗ ಅದ್ಯಾವ ಹೂವೆಂದು ಹೇಳಬಲ್ಲಿರಾ?
ಅದೇ ಎಲ್ಲರಿಗೂ ಚಿರಪರಿಚಿತವಾದ ನಂದಿ ಬಟ್ಟಲು, ನಂದಿವರ್ಧನ, ಹಾಲು ಹೂ, ಕ್ರೇಪ್ ಜಾಸ್ಮಿನ್, ಪಿನ್ ವೀಲ್ ಹೂವೆಂದೂ ಕರೆಯಲ್ಪಡುವ ಸಸ್ಯ. ಮನೆಯಂಗಳ, ಉದ್ಯಾನವನ, ತೋಟ ಗದ್ದೆಗಳ ಬೇಲಿ, ಮಲೆನಾಡಿನ ಕುರುಚಲು ಗಿಡಮರಗಳ ನಡುವೆ ರಾರಾಜಿಸುವ ಗೊಂಚಲು ಗೊಂಚಲಾದ ಬಿಳಿ ಪುಷ್ಪಗಳ ಲೋಕ ಆಹ್ಲಾದಕರ ವಾತಾವರಣವನ್ನೇ ನಿರ್ಮಿಸುತ್ತದೆ. ಆರರಿಂದ ಹತ್ತು ಅಡಿಗಳೆತ್ತರ ಬೆಳೆಯುವ ಈ ನಂದಿಬಟ್ಟಲು ಹೂಗಿಡ ವನ್ನು ನಮ್ಮ ಹಳ್ಳಿಯ ಹಳೆಯ ಮನೆಗಳಲ್ಲಿ ಖಂಡಿತಾ ಕಾಣಬಹುದು. ನಮ್ಮ ಹಿರಿಯರು ತುಳಸಿ, ಗರುಡ ಪಾತಾಳ, ಬಜೆ, ನಂದಿಬಟ್ಟಲನ್ನು ಔಷಧಿಗಾಗಿ ಕಾಪಾಡಿಕೊಳ್ಳುತ್ತಿದ್ದರು. ವಿಷದ ಹಾವು ಕಚ್ಚಿದ ಸಂದರ್ಭದಲ್ಲಿ ನಂದಿಬಟ್ಟಲಿನ ಬೇರು, ಗರುಡಪಾತಾಳ ಹಾಗೂ ಈಶ್ವರ ಬೇರಿನ ಜೊತೆ ಔಷಧಿಗೆ ಬಳಕೆಯಾಗುತ್ತಿತ್ತು. ನಂದಿಬಟ್ಟಲು ಸಸ್ಯದ ಎಲೆಗಳು ಗಾಢ ಹಸಿರಾಗಿದ್ದು ವಿರುದ್ಧವಾಗಿರುತ್ತವೆ. ಶಾಖೆಗಳು ದ್ವಿಮುಖವಾಗಿ ಬೆಳೆಯುತ್ತ ಸಣ್ಣ ಮರದಂತೆ, ಚಪ್ಪರದಂತೆ ಮೂರರಿಂದ ಆರು ಅಡಿಗಳಷ್ಟು ವ್ಯಾಸದಲ್ಲಿ ಕಾಣಿಸುತ್ತದೆ. ಪೂರ್ಣ ಬಿಸಿಲು ಇದ್ದರೂ ಅರೆನೆರಳಾದರೂ ಸೊಂಪಾಗಿ ಬೆಳೆವ ಈ ಸಸ್ಯ ಸಾಮಾನ್ಯ ನೀರಿನಿಂದಲೇ ನಗಬಲ್ಲದು.
ವಸಂತಕಾಲದ ಇರುಳಿನಲ್ಲಿ ಹಸಿರು ಗಿಡದಲ್ಲಿ ಮೊಸರು ಚೆಲ್ಲಿದಂತೆ ಕಾಣಿಸಿಕೊಳ್ಳುವ ಹೂ ರಾಶಿ ವಿರಳವಾಗಿಯಾದರೂ ವರ್ಷವಿಡೀ ಅರಳುತ್ತಿರುತ್ತದೆ. ಮೇಲ್ನೋಟಕ್ಕೆ ಗಿಡ ಒಂದೇ ರೀತಿಯಾಗಿ ಕಂಡರೂ, ಹೂಗಳ ಬಣ್ಣ ಬಿಳಿಯೇ ಆಗಿದ್ದರೂ ಅವುಗಳ ರಚನೆಯಲ್ಲಿ ವ್ಯತ್ಯಾಸವಿದೆ. ಟರ್ಬೈನ್ ನಂತೆ ಬಾಗಿದ ಐದು ಎಸಳಿನ ಪೆನ್ ವ್ಹೀಲ್ ಹೂಗಳ ಮಧ್ಯಭಾಗದಲ್ಲಿ ತಿಳಿ ಹಳದಿ ಬಣ್ಣವಿದ್ದು ಉದ್ದನೆಯ ತೊಟ್ಟು ಹೊಂದಿದೆ. ಈ ಐದೆಸಳಿನ ಮಲ್ಲಿಗೆಯಂತಹ ಗೊಂಚಲುಗಳು ಸಾಮಾನ್ಯವಾಗಿ ಎಲ್ಲೆಡೆ ಕಾಣಿಸುತ್ತದೆ ಯಾದರೂ ಓರೆಕೋರೆಯಾದ ಅಂಚುಳ್ಳ ಹಲವಾರು ಎಸಳುಗಳ ದಪ್ಪ ತೊಟ್ಟಿರುವ ಹೂಗಳ ಗಿಡ ಈಗ ವಿರಳವಾಗಿದೆ. ವೃತ್ತಾಕಾರದ ಸುಂದರ ಎಸಳುಗಳು ಎರಡು ಸುತ್ತಿನಲ್ಲಿ ಶಂಕುವಿನಂತೆ ಸುತ್ತಿಕೊಂಡು ಅರಳುವ ಪುಷ್ಪ ಬಹಳ ಸುಂದರವಾಗಿದ್ದರೆ ವೃತ್ತಾಕಾರದ ಐದೆಸಳಿನ ಪುಷ್ಪಜಾತಿಯೂ ಇದೆ. ಇದೀಗ ಉದ್ಯಾನವನಗಳಲ್ಲಿ ಪುಟಾಣಿ ಚುಕ್ಕಿಗಳಂತೆ.. ಕಾಂಡದ ತುದಿಗಳಲ್ಲಿ ಬಿಳಿ ಬಿಂದುಗಳಂತೆ ಗೋಚರವಾಗುವ ಹೊಸ ತಳಿಗಳೂ ಇವೆ. ಮೊಗ್ಗುಗಳು ಮುಂಜಾವ ಅರಳುತ್ತಲೇ ಹದವಾದ ಸುವಾಸನೆಯನ್ನು ತಂಗಾಳಿಗೆ ಬೆರೆಸುತ್ತಾ ಬೆಳಗಿನ ಬೆರಗನ್ನು ಹೆಚ್ಚಿಸುತ್ತದೆ. ಈ ಹೂಗಳಿಂದ ತಯಾರಿಸಿದ ಕಾಡಿಗೆ ಕಣ್ಣಿಗೆ ತಂಪೆನ್ನುತ್ತಾರೆ. ಇದರ ಮೊಗ್ಗನ್ನು ಬಹಳ ನಾಜೂಕಾಗಿ ಬಣ್ಣದ ನೂಲಿನೊಂದಿಗೆ ಕಟ್ಟುವ ಜಾಣ್ಮೆ ಕೆಲವರಿಗಿರುತ್ತದೆ. ಶಿವಪೂಜೆಯಲ್ಲಿ ನಂದಿಬಟ್ಟಲು ವಿಶೇಷ ಸ್ಥಾನ ಪಡೆಯುವುದರಿಂದ ದೇಗುಲಗಳ ಹೂ ತೋಟಗಳಲ್ಲೂ ಸ್ಥಾನ ಪಡೆದಿದೆ. ಕೀಟಗಳು, ಚಿಟ್ಟೆಗಳು ಈ ದ್ವಿಲಿಂಗಿ ಹೂಗಳ ಪರಾಗಸ್ಪರ್ಶ ಕ್ಕೆ ನೆರವಾಗುತ್ತವೆ. ಇದರ ಹಣ್ಣುಗಳಲ್ಲಿ ಮೂರರಿಂದ ಆರು ಬೀಜಗಳಿದ್ದು ಕೆಂಪು ತಿರುಳನ್ನು ಹೊಂದಿದೆ. ಈ ಕೆಂಪು ತಿರುಳನ್ನು ಬಟ್ಟೆಗೆ ಬಣ್ಣ ಹಾಕಲು ಬಳಸುವರು.
ಎಲೆ, ಗೆಲ್ಲುಗಳನ್ನು ಮುರಿದರೆ ಹಾಲೊಸರುವುದರಿಂದ ಮಿಲ್ಕ್ ವುಡ್ ಎಂಬ ಅನ್ವರ್ಥನಾಮವನ್ನೂ ನಂದಿಬಟ್ಟಲು ಪಡೆದಿದೆ. ಟ್ಯಾಬರ್ನೆಮೊಂಟಾನಾ ದಿವಾರಿಕಾಟಾ (Tabernaemontana divaricata) ಎಂಬ ಶಾಸ್ತ್ರೀಯ ಹೆಸರುಳ್ಳ ಈ ನಿಷ್ಪಾಪಿ ಸಸ್ಯ ಅಪೊಸಿನೇಸಿ (Apocynaceae) ಕುಟುಂಬಕ್ಕೆ ಸೇರಿದೆ. ಏಷ್ಯಾ, ಆಫ್ರಿಕಾ, ಆಸ್ಟ್ರೇಲಿಯಾ, ಅಮೆರಿಕ ಹಾಗೂ ಸಾಗರ ದ್ವೀಪಗಳಲ್ಲಿ ನಿತ್ಯಹರಿದ್ವರ್ಣ ಪೊದೆಗಳಾಗಿ ಬೆಳೆಯುವ ನಂದಿವರ್ದನ 66 ಕ್ಕೂ ಹೆಚ್ಚು ಆಲ್ಕಲಾಯ್ಡ್ ಗಳನ್ನು ಹೊಂದಿದೆ. ಕಾಂಡ ಮತ್ತು ಬೇರಿನ ತೊಗಟೆಯಲ್ಲಿ ಟ್ಯಾಬರ್ನಮಾಂಟನೀಸ್ ಹಾಗೂ ಕಾರೊನೇರಿನ್ ಎಂಬ ಎರಡು ಪ್ರಕಾರದ ಸಸ್ಯ ಕ್ಷಾರಗಳನ್ನು ಹೊಂದಿದೆ. ಕಾಂಡ, ಕೊಂಬೆಗಳು ಬಹಳ ಮೃದುವಾಗಿದ್ದು ಧೂಪ, ಸುಗಂಧ ದ್ರವ್ಯ ತಯಾರಿಗೆ ಬಳಸುವರು.
ವೃಣ, ಕಜ್ಜಿ, ಜ್ವರ, ಸರ್ಪದ ವಿಷ, ಕಣ್ಣುರಿ, ಏರು ರಕ್ತದೊತ್ತಡ, ಮೂತ್ರ ಕೋಶದ ಸಮಸ್ಯೆಗಳಿಗೆ, ನೋವು ನಿವಾರಕ, ರಕ್ತ ಭೇದಿ, ಜಂತುಹುಳ, ವಯಸ್ಸಾದವರ ಬುದ್ಧಿಮಾಂದ್ಯತೆ ಇತ್ತಾದಿ ಸಮಸ್ಯೆಗಳಲ್ಲಿ ನಂದಿಬಟ್ಟಲನ್ನು ಬಳಸಲಾಗುತ್ತದೆ.
ನಮ್ಮ ಮನೆಯಂಗಳದಲ್ಲಿ ಜಾಗ ಪಡೆದಿರುವ, ಉದ್ಯಾನಗಳಲ್ಲಿ ನಮ್ಮನ್ನು ನಿಂತಲ್ಲೇ ನಿಲ್ಲುವಂತೆ ಮಾಡುವ, ಹಸಿರುಬೇಲಿಯಾಗಿ ಬಿಳಿಯುಡುಗೆಯಲ್ಲಿ ಕಾಣಿಸುವ ಈ ಸಸ್ಯವನ್ನು ಕಂಡಾಗ ಪರಿಚಯವಾಗಿರುವ ಬಗ್ಗೆ ಗಿಡಗಳಿಗೆ ತಿಳಿಸುತ್ತಾ ನಿಮ್ಮ ಪರಿಚಯವನ್ನೂ ಮಾಡಿಕೊಳ್ಳಲು ಕಲಿಯಿರಿ. ಗಿಡಗಳ ಮಾತನ್ನು ಆಲಿಸಲು ಪ್ರಯತ್ನಿಸಿರಿ. ಆಗುತ್ತಿರುವ ಪ್ರಯೋಜನಗಳಿಗೆ ಕೃತಜ್ಞತೆ ಸಲ್ಲಿಸಿರಿ. ಹೂಗಳ ನಡುವಿನ ವ್ಯತ್ಯಾಸಗಳನ್ನು ಕೂಡ ಗಮನಿಸಿ ಗುರುತಿಸಿಕೊಳ್ಳುವಿರಲ್ಲವೇ?
ಚಿತ್ರ - ಕೃಪೆ: ವಿಜಯಾ ಬಿ ಶೆಟ್ಟಿ ಸಾಲೆತ್ತೂರು, ಬಂಟ್ವಾಳ