ನಿಷ್ಪಾಪಿ ಸಸ್ಯಗಳು (ಭಾಗ ೬೧) - ಕೇಪಳ ಹೂವು

ನಿಷ್ಪಾಪಿ ಸಸ್ಯಗಳು (ಭಾಗ ೬೧) - ಕೇಪಳ ಹೂವು

ಮಳೆ ಗಾಳಿಯ ರಭಸಕ್ಕೆ ಕೈತೋಟದಲ್ಲಾಗಲೀ, ಉದ್ಯಾನವನದಲ್ಲಾಗಲೀ ಹೂಗಳೇ ಕಾಣಿಸುತ್ತಿಲ್ಲ. ಬಹಳಷ್ಟು ಜಾತಿಯ ಗಿಡ ಮರ ಬಳ್ಳಿಗಳು ಮಳೆಗಾಲದಲ್ಲಿ ಸಾಕಷ್ಟು ಬೆಳವಣಿಗೆ ಹೊಂದುವುದಕ್ಕೇ ಮೊದಲ ಪ್ರಾಶಸ್ತ್ಯ ನೀಡುತ್ತವೆಯಾದ್ದರಿಂದ ಹೂ ಕಾಯಿಯ ಗೋಜಿಗೆ ಇಳಿಯುವುದಿಲ್ಲ. ಆದರೂ ಮನುಷ್ಯರಿಗೆ ಹಬ್ಬ ಹರಿದಿನಗಳು ಇದ್ದೇ ಇರುತ್ತವೆ. ದೈವ ದೇವರ ಪೂಜೆ, ಪುರಸ್ಕಾರ ಗಳು ನಡೆಯುತ್ತಲೇ ಇರುತ್ತವೆ. ಇದಕ್ಕೆಲ್ಲ ಹೂವಿನ ಅಗತ್ಯ ಇದ್ದೇ ಇದೆ. ನಮ್ಮ ಜನಪದ ಬದುಕಿನಲ್ಲಾಗಲಿ, ಹಳ್ಳಿಗಳಲ್ಲಾಗಲಿ ಹೂವಿನ ಕೊರತೆ ಕಾಡುವುದಿಲ್ಲ. ಚಿಂತಿಸುವುದಿಲ್ಲ. ಏಕೆಂದರೆ ಸಾರ್ವಕಾಲಿಕವಾಗಿ ಸರ್ವ ಋತುಗಳಲ್ಲಿ ಮನೆಯಂಗಳ ಇಳಿದ ಕೂಡಲೇ ಕಾಣಸಿಗುವ ಶ್ರೇಷ್ಠ ಹೂವೊಂದಿದೆ. ಅದೇನೆಂದು ಬಲ್ಲಿರಾ..?

ನಿಮ್ಮ ಊಹೆ ಸರಿಯಾಗಿದೆ. ಗಾಢ ಹಸಿರು ಬಣ್ಣದ ಎಲೆಗಳ ನಡುವೆ ಹೊಳೆಯುವ ಕೆಂಪು ವರ್ಣದ ಪುಷ್ಪ ಜೋಡಣೆ ಕಣ್ಮನ ಸೆಳೆಯುವುದನ್ನು ನಿರಾಕರಿಸಲು ಸಾಧ್ಯವೇ..? ತುಳು ನಾಡಿನ ಎಲ್ಲ ದೈವಗಳಿಗೂ ಈ ಪುಷ್ಪವೆಂದರೆ ಬಲು ಪ್ರೀತಿ. ಪಾರಂಪರಿಕವಾಗಿ ಈ ಹೂವಿಗೆ ಬಹಳಷ್ಟು ಗೌರವಾದರವಿದೆ. ಎಲ್ಲ ದೇವರಿಗೂ ಅರ್ಪಿಸಲಾಗುತ್ತದೆಯಾದರೂ ದುರ್ಗಾಪೂಜೆ, ತ್ರಿಕಾಲ ಪೂಜೆಗಳಲ್ಲಿ ಈ ಹೂವೇ ಪ್ರಧಾನ ಪಾತ್ರವಹಿಸುತ್ತದೆ! ಅದೇ ಆಡುನುಡಿಯಾಗಿ ಬಳಕೆಯಲ್ಲಿರುವ ಕೇಪಳ ಹೂವು. ಕನ್ನಡದಲ್ಲಿ ಕಿಸ್ಕಾರ, ಹೊಳೆ ದಾಸವಾಳ, ಕುಸುಮಮಾಲೆ ಎಂದು ಕರೆಸಿಕೊಂಡರೆ ಸಂಸ್ಕೃತ ದಲ್ಲಿ ಪಾತಲಿ, ಬಂಧ ಜೀವಕ, ಬಿಂದುಕಾ ಎಂದು ಹೆಸರಿದೆ.

ರಣಬೇಸಗೆಯ ಬಿಸಿಲಾಗಲಿ, ಮೈ ನಡುಗುವ ಛಳಿಯಾಗಲಿ, ಮುಂಗಾರು ಹಿಂಗಾರೇ ಸುರಿಯಲಿ ಕಿಸ್ಕಾರ ಕಾಣದೆ ಹೋಗದು. ಆಟಿ ತಿಂಗಳಲ್ಲಿ ಹೂಗಳೆಲ್ಲ ತಮ್ಮ ತಮ್ಮ ತವರಿಗೆ ಹೋಗುತ್ತವೆ, ಆದ್ದರಿಂದ ಹೂಗಳು ಕಡಿಮೆ ಎಂದು ಹಿರಿಯರು ಹೇಳುವುದಿದೆ. ಕೇಪಳವೂ ವಿರಳವಾಗಿರುತ್ತದೆ. ಆದರೂ ಇದರ ಬಣ್ಣವೇ ದೂರದಿಂದ ಕರೆದು ತನ್ನಿರವನ್ನ ಸಾರುತ್ತದೆ. ನೀರಿಲ್ಲದ ಬೋರು ಗುಡ್ಡ, ಮುರಕಲ್ಲಿನ ಕೋರೆ, ಕುರುಚಲು ಕಾಡು, ಗದ್ದೆ ತೋಟಗಳ ಬದು, ಬೇಲಿ, ಕೈತೋಟಗಳಲ್ಲಿ ಈ ಕೇಪಳ ಹೂಗಿಡ ಇರದೆ ಇದ್ದರೆ ಅಪೂರ್ಣಕ್ಕೆ ಸರಿ. ನಿಸರ್ಗಕ್ಕೆ ರಂಗು, ಮನಸಿಗೆ ಮುದ ನೀಡುವ ಕೇಪಳ ಹೂವಿನ ಗಿಡ ಮೂರು ನಾಲ್ಕಡಿ ಎತ್ತರ ಬೆಳೆದರೆ ಹೊಸ ತಳಿಗಳು ಎಂಟು ಹತ್ತಡಿ ಬೆಳೆಯುವುದೂ ಇದೆ. ಪ್ರಮುಖ ಕಾಂಡದ ಮೇಲೆ ಹಲವಾರು ಶಾಖೆಗಳು ಹರಡಿ ಕೊಂಬೆಗಳ ಮೇಲೆಲ್ಲ ಗಾಳಿ, ಬೆಳಕನ್ನು ಸಮರ್ಪಕವಾಗಿ ಸ್ವೀಕರಿಸುವಂತಹ ಎಲೆಗಳ ಜೋಡಣೆ. ಎಳೆಯ ಕೊಂಬೆಗಳು ಹಸಿರಾಗಿದ್ದು ಬಲಿತ ಬಳಿಕ ಕಂದು ಬಣ್ಣಕ್ಕೆ ತಿರುಗುತ್ತವೆ. ತುದಿ ಮೊಗ್ಗುಗಳಾಗಿ ಅಥವಾ ಕಂಕುಳ ಮೊಗ್ಗುಗಳಾಗಿಯೂ ಬೆಳೆಯುವ ಹೂ ಗೊಂಚಲಿಗೆ ಸುತ್ತಲಿನ ಸಣ್ಣ ಪುಟ್ಟ ಎಲೆಗಳೇ ರಕ್ಷಾಕವಚ ! ಆರೇಳು ಇಂಚಿನವರೆಗೂ ಬೆಳೆಯುವ ಎಲೆಗಳ ನಡುವೆ ಚೆಂಡಿನಂತೆ ಕಡು ಕೆಂಪು, ಕುಂಕುಮ ಕೆಂಪು, ಹಾಲಿನ ಕೆನೆಯಂತೆ ಬಿಳಿ, ಗುಲಾಬಿ, ತಿಳಿ ನೇರಳೆ, ಕೇಸರಿ ಹೀಗೆ ನಾನಾ ರೀತಿಯ ಹೂಗಳು ಸಸ್ಯ ಪ್ರೇಮಿಗಳನ್ನು ಆಕರ್ಷಿಸುತ್ತವೆ. ಬೋನ್ಸಾಯ್ ಗಿಡಗಳೂ ಸುಂದರವಾದ ವಿನ್ಯಾಸ ಹಾಗೂ ಬಣ್ಣಗಳಲ್ಲಿ ಈಗ ಲಭ್ಯ ಇವೆ.

ಒಂದೇ ಆಕಾರದ ಹೂಗಳು ನಾಲ್ಕು ಹಾಗೂ ಅಪರೂಪಕ್ಕೆ ಐದೆಸಳನ್ನೂ ಹೊಂದಿರುತ್ತವೆ. ಉದ್ದನೆಯ ತೊಟ್ಟಿದ್ದು ತುದಿಯಲ್ಲಿ ಕೊಡೆಯಂತೆ ಎಸಳುಗಳು ಹರಡಿದ್ದು ಮಧ್ಯೆ ಕೇಸರಗಳಿರುತ್ತವೆ. ಹೂಗಳ ದಳಗಳಲ್ಲಿ ಹಲವು ವಿನ್ಯಾಸಗಳಿರುತ್ತವೆ. ಆದರೆ ಈ ಹೂವಿಗೆ ಯಾವುದೇ ಪರಿಮಳ ಇಲ್ಲವೆನ್ನುವುದು ವಿಶೇಷವಾದರೂ ಚಿಟ್ಟೆಗಳಿಗೆ ಮಧುವನ್ನು ಉಣಿಸುತ್ತವೆ. ಕಡ್ಲೆಯಷ್ಟು ಗಾತ್ರದ ಕೆಂಪಾದ ಹಣ್ಣಿನ ಗೊಂಚಲು ಪುಟ್ಟ ಪಕ್ಷಿ ಹಾಗೂ ಕೀಟಗಳಿಗೆ ತಿನಿಸಾಗುವ ಮೂಲಕ ಬೀಜ ಪ್ರಸಾರಗೊಳ್ಳುತ್ತವೆ.

ಕಾನನದ ಕುಸುಮವಾದ ಕಿಸ್ಕಾರ ವು ರುಬಿಯಾಸಿಯೇ (Rubiaceae) ಕುಟುಂಬಕ್ಕೆ ಸೇರಿದೆ. ಇಕ್ಸೋರ ಕೊಸಿನಿಯ (Ixora coccinea) ಸಸ್ಯ ಶಾಸ್ತ್ರೀಯ ಹೆಸರು. ರುಬಿಯಾಸಿಯೇ ಕುಟುಂಬದ ಹೂ ಬಿಡುವ ಸಸ್ಯ ಸಮೂಹದಲ್ಲಿ 500 ಕ್ಕಿಂತ ಹೆಚ್ಚು ಸಸ್ಯಗಳಿವೆ. ಇದು ಉಷ್ಣವಲಯದ ಸಸ್ಯವಾದರೂ ಸಮಶೀತೋಷ್ಣ ದಲ್ಲೂ ಜಗತ್ತಿನೆಲ್ಲೆಡೆ ಬೆಳೆಯುತ್ತವೆ. ನಿಷ್ಪಾಪಿ ಸಸ್ಯ ಕಿಸ್ಕಾರವು ಮಾನವನಿಗೆ ಆರಾಧನೆಯ ಜೊತೆ ತಳಕು ಹಾಕಿ ಕೊಂಡಿರುವುದೇ ಅಲ್ಲದೆ ಹಲವಾರು ರೋಗಗಳಿಗೂ ದಿವ್ಯೌಷಧಿಯಾಗಿದೆ. ಕೆಂಪು ಕಿಸ್ಕಾರದಂತೆ ಬಿಳಿ ಅಥವಾ ಕೆನೆ ಬಣ್ಣದ ಕಿಸ್ಕಾರವೂ ಪ್ರಕೃತಿಯಲ್ಲಿ ತಾನೇ ತಾನಾಗಿ ಬೆಳೆಯುತ್ತದಾದರೂ ಔಷಧೀಯ ಗುಣಗಳನ್ನು ಹೆಚ್ಚು ಹೊಂದಿದೆ ಎಂಬ ಕಾರಣಕ್ಕೆ ಬೇರು ಅಗೆದು ಗಿಡ ಬಿಸುಟಿ ನಿರ್ವಂಶದ ಹಂತದಲ್ಲಿದೆ. ಕೃಷಿಕರಿಗೆ ಅಕೇಶಿಯಾ ಗಿಡಗಳನ್ನು ಪರಿಚಯಿಸಿ ಅದರ ಪ್ರಭೇದಗಳನ್ನೂ ಕಡಿಮೆ ಬೆಲೆ ಅಥವಾ ಉಚಿತವಾಗಿ ನೀಡಿ ಗುಡ್ಡಗಳಲ್ಲಿ, ದಾರಿ , ಮಾರ್ಗದ ಬದಿಗಳಲ್ಲಿ ನೆಡಿಸಿ ಅಪಾರ ಪ್ರಮಾಣದ ಹಣಗಳಿಸುವ ಸಾಧನಗಳೆಂದು ಬಿಂಬಿಸಿ ಕುರುಚಲು ಕಾಡಿನ ನಾಶವೇ ಆಗಿ ಹೋದ ಪರಿಣಾಮವಾಗಿ ಇಂದು ಗುಡ್ಡದ ಕೇಪಳಕ್ಕೂ ದುರ್ಗತಿಯೊದಗಿದೆ ಎಂದರೆ ಮನುಷ್ಯ ಎಂತಹ ಪಾಪಿ ಎಂದು ತಿಳಿಯಬಹುದು.

ನಮ್ಮ ತಾಯಿ, ಅಜ್ಜಿ, ಮುತ್ತಜ್ಜಿಯರು ಮನೆಯಲ್ಲೇ ಮಕ್ಕಳಿಗೆ ಜನ್ಮ ನೀಡುತ್ತಿದ್ದುದೇ ಅಲ್ಲದೆ ಮಗುವಿಗೆ ಕೇಸರ ತೆಗೆದ ಕೇಪಳ ಹಣ್ಣಿನ ಹೂವಿನ ರಸದ ಜೊತೆ ತುಳಸಿ, ಪಂಚಪತ್ರೆ, ಪೇರಳೆ, ಕುಂಟಾಲ, ನೆಕ್ಕರೆ, ಎಂಜಿರ್, ಮಾದೆರ್ ಮೊದಲಾದ ಸಸ್ಯಗಳ ತುದಿಗಳನ್ನು ತೊಳೆದು, ನೀರನ್ನು ವರೆಸಿ, ಅರೆದು ಶುಭ್ರ ಬಟ್ಟೆಯಲ್ಲಿ ಹಾಕಿ ರಸವನ್ನು ಬಾಯಿಗೆ ಹಿಂಡುತ್ತಿದ್ದರು. ಈ ಎರಡು ಹನಿ ಈಗಿನ ಯಾವುದೇ ವಿಟಮಿನ್ ಗಳಿಗಿಂತ ಅದೆಷ್ಟೋ ಹೆಚ್ಚು ರಕ್ಷಣೆ ನೀಡುತ್ತಿತ್ತು. ಅಜ್ಜಿಯಂದಿರಿಗೆ ಇದೊಂದು ಪರಮಾನಂದದ ಹಾಗೂ ಸಾಹಸದ ಕೆಲಸವಾಗಿತ್ತು. ಕೇಪಳ ಹಣ್ಣಂತೂ ಮಕ್ಕಳ ಅಚ್ಚುಮೆಚ್ಚಿನ ತಿನಿಸಾಗಿತ್ತು. 

ಕಿಸ್ಕಾರವು ಮಧುಮೇಹ, ಮಲಬದ್ಧತೆ, ತುರಿಕೆ, ಋತುಸ್ರಾವದ ಏರುಪೇರು, ದಾಹಶಾಮಕ, ವಿಷ ನಿವಾರಕವೂ ಆಗಿದೆ. ಮಳೆಗಾಲದಲ್ಲಿ ಕಾಲ ಬೆರಳ ಸಂದಿಗಳಲ್ಲಿ ಉಂಟಾಗುವ ತುರಿಕೆಗೆ ಕೇಪಳ ಬೇರಿನ ಎಣ್ಣೆ ರಾಮಬಾಣವಾಗಿದೆ. ಕೇಪಳ ಬೇರು ಹಾಕಿದ ಎಣ್ಣೆಯನ್ನು ಶಿಶುಗಳಿಗೆ ಸ್ನಾನದ ಮೊದಲು ಹಚ್ಚುತ್ತಿದ್ದರು. ಕೇಪಳದಲ್ಲಿ ಕ್ಯಾನ್ಸರ್ ಪ್ರತಿಬಂಧಕ ಗುಣವಿದೆ ಹಾಗೂ ಆಂಟಿಸೆಫ್ಟಿಕ್ ಎಂದು ಸಂಶೋಧನೆಗಳು ದೃಢಪಡಿಸಿವೆ. ಕಸಿ ಗಿಡಗಳಿಗೆ ವೈದ್ಯಕೀಯ ಮಹತ್ವ ಕೊಡಲು ಕಷ್ಟವಾಗಬಹುದು. ಕೇಪಳ ಹೂವು ಎಷ್ಟೇ ಚಂದವಿದ್ದರೂ ತಲೆಗೆ ಮುಡಿಯುವ ಸಂಪ್ರದಾಯವಿಲ್ಲ.

ಒಗರು ರುಚಿಯ ಕೇಪಳ ಹೂವನ್ನು ಬಳಸಿ ಚಟ್ನಿ, ತಂಬುಳಿ, ಸಾರು ಮಾಡುತ್ತಾರೆ. ನೆರಳಲ್ಲಿ ಒಣಗಿಸಿಟ್ಟು ಬಳಸುವ ಕ್ರಮವೂ ಇತ್ತು. ಬೀಜ ಅಥವಾ ಶಾಖೆಗಳನ್ನು ಬಳಸಿ ಇದರ ಹೊಸ ಸಸ್ಯಗಳನ್ನು ಪಡೆಯಬಹುದು. ತೋಟ ಗದ್ದೆಗಳ ತಡೆಬೇಲಿಗಳಲ್ಲಿ, ಮನೆಯಂಗಳದಲ್ಲಿಯೂ ಬೆಳೆಸಬಹುದು. ಚಟ್ಟಿಗಳಿಗೂ ಸೀಮಿತವಾದ ಗಿಡಗಳಿವೆ. ವರ್ಣ ವೈವಿಧ್ಯ, ವೈಭವಗಳನ್ನು ಸೃಜಿಸುತ್ತಾ ಕಣ್ಸೆಳೆವ ಕೇಪಳ ಹೂವು ನಮ್ಮೆಲ್ಲರ ಅಚ್ಚುಮೆಚ್ಚಿನ ಹೂವಾಗಲಿ. ಅವೈಜ್ಞಾನಿಕ ವಾಗಿ ಅಕೇಶಿಯಾದಂತಹ ಗಿಡಗಳನ್ನು ಬೆಳೆಸಿ ಪರಿಸರ ನಾಶ ಮಾಡುವ ಪಿಡುಗು ನಿಲ್ಲಲೆಂದು ಹಾರೈಸೋಣ.

ಚಿತ್ರ - ಬರಹ : ವಿಜಯಾ ಬಿ ಶೆಟ್ಟಿ ಸಾಲೆತ್ತೂರು, ಬಂಟ್ವಾಳ