ನಿಷ್ಪಾಪಿ ಸಸ್ಯಗಳು (ಭಾಗ ೬೨) - ನಿಲಾಚಾರಿ ಸಸ್ಯ
ಧಾರಾಕಾರ ಸುರಿದ ಮಳೆ ಒಂದಿಷ್ಟು ವಿಶ್ರಾಂತಿ ಪಡೆಯುತ್ತಿದೆ. ಈ ನಡುವೆ ನಮ್ಮ ಆಟ ಪಾಠಗಳು, ಪ್ರತಿಭಾಕಾರಂಜಿ ಇತ್ಯಾದಿಗಳು ಥಕಥಕ ಕುಣಿಯಲಾರಂಭಿಸಿವೆ. ಮಳೆಗಾಲ ಬಂತೆಂದರೆ ಸಾಕು, ನಮ್ಮ ಸುತ್ತಲಿನ ಪರಿಸರದಲ್ಲಿ ಶೂನ್ಯವಿದ್ದಲ್ಲೆಲ್ಲ ಹಸಿರು ಮೂಡಿ ತುಂಬಿಕೊಳ್ಳುತ್ತದೆ. ಅವೆಲ್ಲಾ ತರಹಾವರಿ ಸಸ್ಯಗಳು ಅಥವಾ ನಮ್ಮ ಕಣ್ಣಿಗೆ ಬರಿಯ ಕಳೆ ಸಸ್ಯಗಳು..!
ಇವು ಯಾವುವು ಕೂಡ ಕಳೆ ಸಸ್ಯಗಳಲ್ಲ ಎಂಬುವುದನ್ನು ನಾವು ನೆನಪಿಡಬೇಕು. ಸಕಲ ಜೀವರಾಶಿಗಳೂ ಈ ಭೂಮಾತೆಯ ಸಮಾನ ಹಕ್ಕುದಾರರು. ಪ್ರಕೃತಿ ಮುನಿದರೆ ಎದುರಿಸುವ ತಾಕತ್ತು ಯಾರಿಗೂ ಇಲ್ಲವೆನ್ನುವುದಕ್ಕೆ ಇತ್ತೀಚಿನ ಪ್ರಕೃತಿ ವಿಕೋಪಗಳೇ ಉದಾಹರಣೆಗಳಲ್ಲವೇ? ಮಳೆ ಸುರಿಯಲಾರಂಭಿಸಿದರೆ ನಮ್ಮ ಪಕ್ಕದ ಗುಡ್ಡಗಳಲ್ಲಿ, ಗೇರು ಮಾವು ಮರದಡಿಯಲ್ಲಿ ಪುಟ್ಟ ಹಸುರಾದ ಪುಟಾಣಿ ಸಸ್ಯಗಳು ಒಂಟಿಯಾಗಿ ಅಥವಾ ಗುಂಪಾಗಿ ಕಾಣಿಸಿಕೊಳ್ಳುತ್ತವೆ. ಮೇಲ್ನೋಟಕ್ಕೇ ಇವುಗಳ ಹೊಳೆಯುವ ಹಸಿರು ಬಣ್ಣ ಹಾಗೂ ಪರ್ಯಾಯ ರೆಕ್ಕೆಯ ತೊಟ್ಟಿಗೆ ಮೂರು ಚಿಗುರೆಲೆಗಳ ವಿಂಗಡಣೆಯ ರಚನೆಗಳು ನಿಮ್ಮಲ್ಲಿ ವಿಸ್ಮಯವನ್ನುಂಟು ಮಾಡುತ್ತವೆ. ಥಟ್ಟನೆ ಎಷ್ಟು ಸುಂದರವಾಗಿಯಲ್ಲವೇ... ಅಂತನಿಸದಿರದು!
ಈ ಸಸ್ಯದ ಎಲ್ಲಾ ಭಾಗವೂ ಆಯುರ್ವೇದದಲ್ಲಿ ಬಳಸಲ್ಪಡುತ್ತದೆ. ಇದೊಂದು ಮೂಲಿಕೆ ಸಸ್ಯ. ತುಳು ಭಾಷೆಯಲ್ಲಿ ಇದನ್ನು ನಿಲಾಚಾರಿ ಎಂದು ಕರೆಯುವರು. ಕನ್ನಡದಲ್ಲಿ ನೆಲಕಂಚಿ, ನೆಲಹೆರಿಳೆ, ನೆಲಬೇವು, ನೆಲ ಸಂಪಿಗೆ ಎಂದು ಕರೆಯಲ್ಪಟ್ಟರೆ ಸಂಸ್ಕೃತ ದಲ್ಲಿ ತ್ರಿಪರ್ಣಿ, ಅಮಲವಲ್ಲಿ. ಈ ಸಸ್ಯವು ಮೆಲಿಯೇಸಿ (Meliaceae) ಕುಟುಂಬಕ್ಕೆ ಸೇರಿದ್ದು ನರ್ಗಾಮಿಯ ಅಲಾಟಾ (Nargemia alata) ಎಂಬ ಶಾಸ್ತ್ರೀಯ ಹೆಸರು ಹೊಂದಿದೆ. ಇದು ಮಹೋಗನಿ ಅಥವಾ ಬೇವಿನ ಕುಟುಂಬಕ್ಕೆ ಸೇರಿದ ಸಸ್ಯ. ಆಂದ್ರ, ಕರ್ನಾಟಕ, ತಮಿಳುನಾಡು, ಕೇರಳದಲ್ಲಿ ಕಂಡುಬರುವ ಅಳಿವಿನಂಚಿನಲ್ಲಿರುವ ಸಸ್ಯ. ಕಾರವಾರದ ಬೆಟ್ಟಗಳಲ್ಲಿ , ಕೈಗಾ ಪ್ರದೇಶದಲ್ಲಿ ರಸ್ತೆಬದಿ ಬಹುಪಾಲು ಕಾಣಸಿಗುವ ಈ ಸಸ್ಯ ಪಶ್ಚಿಮ ಭಾರತಕ್ಕೆ ಸ್ಥಳೀಯವಾಗಿದೆ.
ಆಗಸ್ಟ್ ನಿಂದ ಡಿಸೆಂಬರ್ ವರೆಗೆ ಕಾಣಿಸುವ ಇದರ ಹೂಗಳು ವಿಲಕ್ಷಣವಾಗಿವೆ. ಶ್ವೇತವರ್ಣದ ಐದು ಪುಟಾಣಿ ದಳಗಳ ನಡುವೆ ಒಂದು ಗದೆಯಂತಹ ರಚನೆಯಿರುತ್ತದೆ. ಈ ರಚನೆಯ ಉಬ್ಬಿದ ತುದಿ ಭಾಗ ಹಳದಿಯಾಗಿದ್ದು ಹಲ್ಲುಗಳಂತೆ ಜೋಡಿಸಲ್ಪಟ್ಟಿದೆ. ಹೂವು ದ್ವಿಲಿಂಗಿಯಾಗಿದೆ. ಈ ಗಿಡವನ್ನು ಜನಪದ ಹಾಗೂ ಆಯುರ್ವೇದ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಯಕೃತ್ತಿನ ಕಾಯಿಲೆ, ಮಧುಮೇಹ, ಸೋರಿಯಾಸಿಸ್, ರಕ್ತಹೀನತೆ, ಅಸ್ತಮಾ, ಬ್ರಾಂಕೈಟಿಸ್, ಸಂಧಿವಾತ ಮೊದಲಾದ ಅನಾರೋಗ್ಯದ ಸಮಸ್ಯೆಗಳಿಗೆ ಉಪಯುಕ್ತವಾಗಿದೆ.
ಡೆಂಗ್ಯೂ, ಮಲೇರಿಯಾ, ಝಿಂಕಾ ವೈರಸ್ ಮೊದಲಾದ ಸೊಳ್ಳೆ ವಾಹಕಗಳ ವಿರುದ್ಧದ ಪರಿಸರ ಸ್ನೇಹಿ ನಿಯಂತ್ರಣ ಸಾಧನ. ಡೆಂಗ್ಯೂ ಸೋಂಕು ನಿಯಂತ್ರಿಸಲು ಸಸ್ಯದ ಎಲೆಗಳು ಪರಿಣಾಮಕಾರಿ ಎನ್ನಲಾಗಿದೆ. ಕೀಟಗಳ ವಿರುದ್ಧ ಜೈವಿಕ ಕೀಟನಾಶಕವಾಗಿಯೂ ಬಳಕೆಯಲ್ಲಿದೆ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತೆ ಈ ಪುಟ್ಟ ಸಸ್ಯ ಎಲ್ಲರಿಗೂ ಚಿರಪರಿಚಿತವಾದ ಮೂಲಿಕೆಯಾಗಿತ್ತು. ಆದರೆ ಇಂದು ಮಾನವನ ಧನ ದಾಹಕ್ಕೆ ಮಿತಿಯೇ ಇಲ್ಲದೆ ನಿಷ್ಪಾಪಿ ಸಸ್ಯಗಳು ವಿನಾಶದ ಹಾದಿಯಲ್ಲಿದೆ ಎಂದು ಹೇಳಲು ಸಂಕಟವಾಗುತ್ತದೆ. ನಾವು ಈಗಲಾದರೂ ಯೋಚಿಸದಿದ್ದರೆ ಮುಂದೆ ಚಿತ್ರಕ್ಕಷ್ಟೇ ಸೀಮಿತವಾಗುವ ಅಪಾಯವಿದೆಯಲ್ಲವೇ?
ಚಿತ್ರ - ಬರಹ: ವಿಜಯಾ ಬಿ ಶೆಟ್ಟಿ ಸಾಲೆತ್ತೂರು, ಬಂಟ್ವಾಳ