ನಿಷ್ಪಾಪಿ ಸಸ್ಯಗಳು (ಭಾಗ ೬೩) - ತಾವರೆ
ಭಾರತದ ಮೂಲೆಮೂಲೆಗಳಲ್ಲಿ ಬಾನೆತ್ತರ ತ್ರಿವರ್ಣ ಧ್ವಜ ರಾರಾಜಿಸುತ್ತಿದೆಯಲ್ವೇ.. ನಾವೆಲ್ಲರೂ ಈ ತಿಂಗಳು ಸ್ವಾತಂತ್ರ್ಯದ ಸವಿ ಉಣಿಸಿದ ಮಹಾತ್ಮರನ್ನು ನೆನೆಯುವ ಪುಣ್ಯಕಾಲದಲ್ಲಿದ್ದೇವೆ. ಕೇಸರಿ, ಬಿಳಿ, ಹಸಿರು ಬಣ್ಣಗಳ ನಡುವೆ ನೀಲಿ ಬಣ್ಣದ ಚಕ್ರ ಇರುವ ಧ್ವಜ ಭಾರತ ದೇಶವನ್ನು ಪ್ರತಿನಿಧಿಸುವ ಸಂಕೇತವೆಂದು ನಿಮಗೆಲ್ಲ ತಿಳಿದಿದೆ. ಹಾಗೆಯೇ ನಮ್ಮ ದೇಶಕ್ಕೊಂದು ರಾಷ್ಟ್ರೀಯ ಪುಷ್ಪವಿದೆ ! ಯಾವುದು ಗೊತ್ತಾ? ಹ್ಹಾಂ.. ಹೌದು, ಅದುವೇ ತಾವರೆ ಅಥವಾ ಕಮಲ ಪುಷ್ಪ.
ಭಾರತದ ಉಪನಿಷತ್ತು, ಪುರಾಣ, ಕಾವ್ಯ, ಶಿಲ್ಪ, ವರ್ಣಚಿತ್ರಗಳಲ್ಲಿ ಕಮಲಪುಷ್ಪದ ಹೆಸರು ಹಾಸು ಹೊಕ್ಕಾಗಿದೆ. ಗೀತೆ ಕಮಲ ಪುಷ್ಪದ ನಿರ್ಲಿಪ್ತತೆಯನ್ನು ರೂಪಕವಾಗಿ ಬಳಸಿಕೊಂಡಿದೆ. ಭಾರತೀಯ ಸಂಸ್ಕೃತಿಯಲ್ಲಿ ಈ ಹೂವಿಗೆ ಅಪಾರ ಗೌರವ, ಮನ್ನಣೆ ಇದ್ದು ಇದು ಜ್ಞಾನ, ಸೌಂದರ್ಯದ ಪ್ರತೀಕವಾಗಿದೆ. ಬುದ್ಧಿವಂತಿಕೆಯ ಸಂಕೇತವಾದ ಸರಸ್ವತಿ ಕಮಲದ ಮೇಲೆ ಕುಳಿತಿರುವುದು ಹೂವಿನ ಘನತೆಯನ್ನು ತೋರುವಂತಿದೆ.
ಕಮಲ ಪುಷ್ಪ ಇಂದು ಅಲಂಕಾರಿಕ ಸಸ್ಯವಾಗಿದೆ. ಎಲ್ಲಿ ಜೌಗು ನೆಲವಿದೆಯೋ, ಎಲ್ಲಿ ನೀರು ನಿಂತ ಕೊಳ, ಕೆರೆಗಳಿವೆಯೋ ಅಲ್ಲೆಲ್ಲಾ ಬಿಳಿ, ಕೆಂಪು ವರ್ಣದ ಹೂಗಳನ್ನು ಕಾಣಬಹುದಿತ್ತು. ಬಸ್ಸಿನಲ್ಲಿ ದೂರದೂರುಗಳಿಗೆ ಹೋಗುವಾಗ ನೀರು ನಿಂತ ಜಾಗಗಳಲ್ಲಿ ಹೂಗಳನ್ನು ನೋಡಿ ಆಸೆ ಪಡುವುದಿತ್ತು. ನೋಡುವಾಗ ಮೇಲ್ನೋಟಕ್ಕೆ ಬಸ್ಸಿಳಿದರೆ ನಾಲ್ಕು ಹೂ ಕೊಯ್ಯಬಹುದಿತ್ತು ಅಂತೆನಿಸುತ್ತಿತ್ತು. ಆಮೇಲೆ ಕೊಯ್ಯಲು ಇಳಿಯುವುದು ಸುಲಭವಲ್ಲ ಎಂದರಿವಾಗತೊಡಗಿತು. ಏಕೆಂದರೆ ತಾವರೆ ಬೆಳೆಯುವುದು ಕೆಸರಿನಲ್ಲಿ. ಕೆಸರಿನ ಆಳ ಅಗಲದ ಪರಿಚಯವಿರದೆ ಹೂ ಕೊಯ್ಯಲು ಇಳಿಯಲಾಗದು. ಇಂತಹ ಕೆಸರಲ್ಲಿ ಅರಳಿದ ಹೂವು ದೇವರ ಪಾದಕ್ಕೆ ಸಮರ್ಪಣೆಗೊಳ್ಳುವುದೇ ಈ ನಿಷ್ಪಾಪಿ ಸಸ್ಯದ ವಿಶೇಷತೆ! ಇದರ ಗಡ್ಡೆಗಳು ಕೆಸರಲ್ಲಿ ಆರಾಮವಾಗಿದ್ದು ಹಲವು ಕವಲುಗಳೊಡೆದು ನೀರ ಮೇಲೆ ಅಗಲಗಲವಾದ 60 ರಿಂದ 90 ಸೆಂ.ಮೀ ಗಾತ್ರದ ಎಲೆಗಳನ್ನು ಹರಡಿಸಿಕೊಳ್ಳುತ್ತದೆ. ವೃತ್ತಾಕಾರದ ತಟ್ಟೆಯಂತೆ ಹರಡಿದ ಎಲೆಯ ತಳಭಾಗದ ನಡುವಲ್ಲಿ ಉದ್ದನೆಯ ತೊಟ್ಟಿದೆ. ಅಲಗಿನ ಬಣ್ಣ ಮಾಸಲು ಹಸಿರು. ಅಂಚು ನಯವಾಗಿರುತ್ತದೆ. ಉದ್ದನೆಯ ದಂಟಿನಲ್ಲಿ ಮೂಡಿ ಬರುವ ಮೊಗ್ಗು ಹತ್ತು ದಿನಗಳ ಬಳಿಕ ಸುಕೋಮಲ ದಳಗಳನ್ನು ಅರಳಿಸಿ ನವಿರಾದ ಸುವಾಸನೆ ಚೆಲ್ಲುತ್ತದೆ. ಬೆಳಗ್ಗಿನ ಸೂರ್ಯರಶ್ಮಿಗೆ ತೆರೆದು ಕೊಂಡ ಹೂವು ಸಂಜೆ ನಾಲ್ಕೂವರೆ ಐದು ಘಂಟೆಗೆ ಮುಚ್ಚಿಕೊಳ್ಳುತ್ತದೆ. ಮತ್ತೆ ಯಥಾಪ್ರಕಾರ ಮರುದಿನವೂ ಅರಳುತ್ತದೆ. ಸಂಜೆಗೆ ದಳಗಳು ಮುಚ್ಚಿಕೊಳ್ಳುತ್ತವೆ. ಒಂದು ಹೂವು ನಿರಂತರ ಮೂರು ದಿನ ಅರಳಿ ನಾಲ್ಕನೆಯ ದಿನ ಎಸಳುಗಳನ್ನುದುರಿಸಿ ಕಾಯಿಯ ಬೆಳವಣಿಗೆಯಾಗುತ್ತದೆ.
ಬಟ್ಟಲಿನಾಕಾರದ ಪುಷ್ಪಪೀಠದ ಮೇಲೆ ಅನಿರ್ದಿಷ್ಟ ಹೂದಳಗಳು ಇರುತ್ತವೆ. ಕಮಲ ಪುಷ್ಪವು ತನ್ನ ದಳಗಳ ಚೆಲುವಿಕೆಯಿಂದಲೇ ಸರ್ವರ ಗಮನ ಸೆಳೆದು ಶ್ರೇಷ್ಠತೆಗೇರಿದೆ. ಕೆಂಪು, ಬಿಳಿ, ಗುಲಾಬಿ, ನೇರಳೆ ಇತ್ಯಾದಿ ವರ್ಣಗಳಿಂದ ಕಾಣಸಿಗುತ್ತದೆ. ಪುರಾಣ ಕಾಲದಿಂದಲೂ ಕವಿಗಳು ಕಣ್ಣು, ಮುಖ, ಪಾದಗಳಿಗೆ ಕಮಲದ ಹೂವನ್ನು, ಬಣ್ಣವನ್ನು ಹೋಲಿಕೆ ಮಾಡುವುದು ಸಾಮಾನ್ಯವಾಗಿದೆ. ಗಿಡವು ಲೌಕಿಕ ಪರಿಸರದಲ್ಲಿ ವಾಸಿಸುವ ಯೋಗಿಯನ್ನು ಪ್ರತಿನಿಧಿಸುತ್ತದೆ. ಅವ್ಯವಸ್ಥೆಯ ನಡುವೆ ನೀರ ಮೇಲೇರಿ ನಗುವ ಕಮಲ ಪುಷ್ಪವು ಸಮ್ಮಿತೀಯವಾಗಿ ಜೋಡಿಸಲಾದ ದಳಗಳಲ್ಲಿ ಪ್ರಶಾಂತತೆಯ ಸೊಬಗು ಹೊಂದಿ ವಿಶೇಷ ಪ್ರಭಾವ ಬೀರುತ್ತದೆ. ಪುಷ್ಪಪೀಠದಲ್ಲಿ ಅನೇಕ ಅಂಡಕೋಶಗಳು ಹುದುಗಿದ್ದು ಅವುಗಳ ಶಲಾಕಾಗ್ರ ಮಾತ್ರ ಸಮತಳದ ಮೇಲೆ ಕಾಣಿಸಿಕೊಳ್ಳುತ್ತದೆ. ದಳಗಳಿಗೂ ಪೀಠದ ಸಮತಳಕ್ಕೂ ನಡುವೆ ಕೇಸರಗಳ ಗುಚ್ಛವಿರುತ್ತದೆ. ಹೂಗಳ ಮಧುರ ಜೇನಿಗೆ ದುಂಬಿಗಳು ಆಕರ್ಷಣೆಗೊಳ್ಳುತ್ತವೆ. ಇದು ಶಕ್ತಿವರ್ಧಕವಾಗಿ ಮಾನವರಿಗೂ ಪ್ರಯೋಜನಕಾರಿಯಾಗಿದೆ. ಹೂಗಳ, ಎಲೆಗಳ ದಂಟುಗಳು ಟೊಳ್ಳಾಗಿದ್ದು ಗಾಳಿ ತುಂಬಿಕೊಂಡಿರುವ ಕಾರಣ ನೀರಿನಲ್ಲಿ ತೇಲಾಡಲು ಅನುಕೂಲವಾಗಿದೆ. ಇದರ ಗಡ್ಡೆಯಲ್ಲಿ ಪಿಷ್ಟ, ಪ್ರೊಟೀನ್, ಕೊಬ್ಬು, ಸಕ್ಕರೆ, ಬಿ, ಸಿ ಜೀವಸತ್ವಗಳಿದ್ದು ಉತ್ತಮ ತರಕಾರಿಯಂತೆ ಬಳಕೆಯಲ್ಲಿದೆ. ಕಮಲದ ಬೀಜಗಳು, ಎಲೆ, ದಂಟುಗಳು ಕೂಡ ಆಹಾರವಾಗಿ ಬಳಸಲ್ಪಡುತ್ತವೆ.
ನೆಲುಂಬೊನ್ಯುಸಿಫೆರ ಗ್ಯುರ್ಟನ್ (Nelumbo Nucifera Gaertn) ಎಂಬ ವೈಜ್ಞಾನಿಕ ಹೆಸರುಳ್ಳ ಕಮಲ ಪುಷ್ಪ ನಿಂಫೆಯಾಸಿ (Nymphaeaceae) ಕುಟುಂಬಕ್ಕೆ ಸೇರಿದೆ. ಲೋಟಸ್, ವಾಟರ್ ಲಿಲಿ ಎಂದು ಕರೆಯಲ್ಪಡುವ ಈ ನಿಷ್ಪಾಪಿ ಸಸ್ಯವು ಕಮಲ, ರಾಜೀವ, ಕುಶೇಶಯ, ಸರೋಜ, ಪದ್ಮ, ಪಂಕಜ, ಸರಸಿಜ, ಶಾರದ, ನೀಲೋತ್ಪಲ, ಅರವಿಂದ, ಕುಮುದಾ, ಜಲಜಾ, ನಳಿನಿ, ಪುಷ್ಕರ, ಪದ್ಮಿನಿ ಎಂಬಿತ್ಯಾದಿ ಕನ್ನಡ, ಸಂಸ್ಕೃತ ಹೆಸರುಗಳಿಂದ ನಮ್ಮ ಸಂಸ್ಕೃತಿಯೊಳಗೆ ಹಬ್ಬಿ ಹಿಂದಿನಿಂದಲೂ ಅದೆಷ್ಡೋ ಹೆಣ್ಣು ಮಕ್ಕಳ ಹೆಸರುಗಳಾಗಿ ಬಳಕೆಯಲ್ಲಿವೆ ಎಂದರೆ ಈ ಹೂವಿಗಿರುವ ಆಕರ್ಷಣೆಯ ಬಗೆ ಅರಿವಾಗದಿರದು.
ಚೀನಾ, ಜಪಾನ್, ಆಸ್ಟ್ರೇಲಿಯಾ, ವಿಯೆಟ್ನಾಂ, ಈಜಿಪ್ಟ್, ಅಮೇರಿಕಾ ಮೊದಲಾದ ದೇಶಗಳಲ್ಲಿ ಕಮಲ ಪುಷ್ಡ ವಿದೆ. ಭಾರತ ಮಾತ್ರವಲ್ಲದೆ ವಿಯೆಟ್ನಾಂ ದೇಶಕ್ಕೂ ಕಮಲ ರಾಷ್ಟ್ರೀಯ ಪುಷ್ಪವಾಗಿದೆ. ಈಜಿಫ್ಡ್ ನಲ್ಲಿ ಕಮಲ ಪುಷ್ಪ ಮಂಗಳಕರ, ಸೂರ್ಯದೇವರ ಸಂಕೇತವೆಂದು ಗೌರವಿಸಿದರೆ ಬೌದ್ಧಧರ್ಮ ದಲ್ಲಿ ಬುದ್ಧನ ಇತಿಹಾಸ, ಐತಿಹಾಸಿಕ ದಂತಕಥೆಗಳನ್ನು ಗುಲಾಬಿ ಕಮಲದ ಹೂವಿನಿಂದ ಸಂಕೇತಿಸಲಾಗುತ್ತದೆ. ಬುದ್ಧನ ಧರ್ಮದಲ್ಲಿ ಚಿನ್ನದ ಕಮಲದ ಹೂ ಜ್ಞಾನೋದಯದ ಎಲ್ಲ ಸಾಧನೆಯ ಸಂಕೇತ. ಸಂಪೂರ್ಣ ಅರಳಿದ ಹೂವು ಸ್ವಯಂ ಜಾಗೃತಿಯ ಸಂಕೇತವೆಂದು ಗೌರವದಿಂದ ಪೂಜಿಸಲಾಗುತ್ತದೆ.
ತಾವರೆ ಮತ್ತು ಕಮಲ ಎಂಬ ಪದಗಳು ಸಮಾನಾರ್ಥ ನೀಡಿದರೂ ಇದರ ಕೃಷಿ ಮಾಡುವವರು ಇದನ್ನು ಬೇರೆ ಬೇರೆ ಎಂದು ಗುರುತಿಸುತ್ತಾರೆ. ತಾವರೆ ಎಲೆಗಳು ನೀರ ಮೇಲೆಯೇ ಇದ್ದು ಬೇರುಗಳು ನೇರವಾಗಿ ಕೆಳಮುಖವಾಗಿರುತ್ತವೆ. ಎಸಳುಗಳು ವಿರಳವಾಗಿ ಜೋಡಣೆಗೊಂಡು ಅಗಲವಾಗಿ ಅರಳುತ್ತವೆ. ಹೂಗಳು ನೀರಿಗೆ ಹತ್ತಿರದಲ್ಲಿರುತ್ತವೆ. ಚಿಕ್ಕ ಮಡಿಕೆಯೊಳಗೂ ಬೆಳೆಯಬಹುದು. ಕಮಲದ ಎಲೆಗಳು ನೀರಿನಿಂದ ಎತ್ತರದಲ್ಲಿದ್ದು ಎಲೆಗಳಲ್ಲಿ ನೀರು ನಿಲ್ಲುವುದಿಲ್ಲ ಜಾರುತ್ತದೆ. ಬೇರುಗಳು ನೇರವಾಗಿ ಬೆಳೆಯದೆ ವಕ್ರವಾಗಿ ಹರಡಿಕೊಳ್ಳುತ್ತದೆ. ಬೆಳೆಸಲು ಸ್ಥಳಾವಕಾಶ ಹೆಚ್ಚು ಬೇಕು. ಎಸಳುಗಳು ಬಿಡಿಬಿಡಿಯಾಗಿರದೆ ಗುಚ್ಛದ ರೀತಿಯಿದ್ದು ತುಂಬಾ ಎಸಳುಗಳಿರುತ್ತವೆ. ತಾವರೆ ಹಾಗೂ ಕಮಲ ಪುಷ್ಪವೆರಡೂ ಸಂಸ್ಕೃತಿಯಲ್ಲಿ ಸಮಾನ ಗುಣ ರೂಪಕ್ಕೆ ಪಾತ್ರವಾಗಿವೆ. ಇದರ ಕೃಷಿ ಮಾಡುವುದು ಈಗ ಲಾಭದಾಯಕ ಉದ್ಯಮವಾಗಿದೆ. ಸಣ್ಣ ಪುಟ್ಟ ಸ್ಥಳದಲ್ಲೂ ಇದನ್ನು ಬೆಳೆಸಬಹುದು.
ಕಮಲದ ಎಲೆ, ಹೂವುಗಳು ಚರ್ಮ ಮತ್ತು ಕೂದಲಿನ ಸೌಂದರ್ಯವರ್ಧಕ ಗಳಾಗಿವೆ. ಗಡ್ಡೆಯ ಹಿಟ್ಟಿನಿಂದ ಅತಿಸಾರ, ಆಮಶಂಕೆಗಳಿಗೆ ಪರಿಹಾರವಿದೆ. ಗಜಕರ್ಣದಂತಹ ಚರ್ಮರೋಗಕ್ಕೂ ಔಷಧಿಯಾಗಿದೆ. ತಾವರೆ ಬೀಜಗಳು ನಮ್ಮೂರಿನ ಅಂಗಡಿಗಳಲ್ಲೂ ದೊರೆತು ಆಹಾರಕ್ಕಾಗಿ ಬಳಕೆಯಲ್ಲಿದೆ. ಪ್ರಶಾಂತತೆಯ ಪ್ರತಿರೂಪವಾದ ಕಮಲದ ಗಿಡವನ್ನು ಗಡ್ಡೆ ಮತ್ತು ಬೀಜಗಳ ಮೂಲಕ ನಾವೂ ಬೆಳೆಸಲು ಪ್ರಯತ್ನಿಸಬಹುದು. ನೀವೂ ಪ್ರಯತ್ನಿಸುವಿರಾ?
ಚಿತ್ರ ಮತ್ತು ಬರಹ: ವಿಜಯಾ ಬಿ ಶೆಟ್ಟಿ ಸಾಲೆತ್ತೂರು, ಬಂಟ್ವಾಳ