ನಿಷ್ಪಾಪಿ ಸಸ್ಯಗಳು (ಭಾಗ ೬೭) - ಸುಗಂಧಿ ಹೂವು

ನಿಷ್ಪಾಪಿ ಸಸ್ಯಗಳು (ಭಾಗ ೬೭) - ಸುಗಂಧಿ ಹೂವು

ಮಳೆಗಾಲ ಬಂತೆಂದರೆ ಸಾಕು, ಹಲವಾರು ತರಹದ ಹೂಗಳು ಘಮಿಸತೊಡಗುತ್ತವೆ. ಹೂಗಳಿಗೆ ಇಷ್ಟೊಂದು ಅಂದ ಚಂದ, ಬೆಡಗು ಬಿನ್ನಾಣ, ಲಾಲಿತ್ಯ, ಒನಪು ವೈಯ್ಯಾರವನ್ನು ಸೃಷ್ಟಿ ಏಕೆ ಕೊಟ್ಟಿರಬಹುದೆಂಬ ಪ್ರಶ್ನೆ ನನ್ನನ್ನು ಯಾವಾಗಲೂ ಕಾಡುತ್ತದೆ. ಕೆಲವು ಹೂಗಳು ಬೆಳಗ್ಗೆ ಅರಳಿದರೆ ಕೆಲವು ಸಂಜೆ ಅರಳುತ್ತವೆ. ಕೆಲವು ಒಂಭತ್ತು ಹತ್ತು ಗಂಟೆ ರಾತ್ರಿಗೆ! ಅಂದರೆ ಈ ಜಗತ್ತಿನಲ್ಲಿ ಸಸ್ಯಗಳಿಗೆ ನಮ್ಮ ಅಮ್ಮಂದಿರ ಹಾಗೆ ವಿರಾಮವೇ ಇಲ್ಲ. ಎಷ್ಟು ಹೊತ್ತಿಗೂ ಮುಂದಿನ ಕ್ಷಣದ ಯೋಚನೆ ಹಾಗೂ ಯೋಜನೆ!

ಇರಲಿ, ಇವನ್ನೆಲ್ಲ ಪಕ್ಕಕ್ಕಿಟ್ಟು ಯೋಚನೆ ಮಾಡಿದರೆ ಇನ್ನೊಂದು ಅಂಶ ಕಾಡುವುದುಂಟು. ಅದೇನೆಂದರೆ ಹೂಗಳಿಗೇಕೆ ಇಷ್ಟೊಂದು ಸುವಾಸನೆ? ಅದೂ ಭಿನ್ನ ಭಿನ್ನ ಪರಿಮಳ! ಕೆಲವಂತೂ ವಾಸನೆ ಎಂದರೂ ಸರಿ. ಬಾಲ್ಯದಲ್ಲಿ ಸೌಗಂಧಿಕಾ ಪುಷ್ಪಾಪಹರಣ ಅಂತ ಒಂದು ಪಾಠವಿತ್ತು. ಎಲ್ಲಿಂದಲೋ ಸಲಿಲದ ಜೊತೆ ಹೊಸೆದು ಬಂದು ಮೂಗಿಗೆ ಅಡರಿದ ಸು ವಾಸನೆ ದ್ರೌಪದಿಯ ಚಿತ್ತವನ್ನೆತ್ತಲೋ ಒಯ್ಯುತ್ತದೆ. ಸ್ತ್ರೀ ಸಹಜವಾಗಿ ತನಗದು ಬೇಕನಿಸಿ ಭೀಮನಲ್ಲಿ ಬೇಡಿಕೆಯಿಡುತ್ತಾಳೆ. "ಸಾಹಸಿ ಭೀಮನೇ ಇದನ್ನು ತರಬೇಕಷ್ಟೆ" ಎಂದು ನಿರ್ಧರಿಸಿ ಒತ್ತಾಯಿಸುತ್ತಾಳೆ. "ಒಂದು ಹೂ ತಂದುಕೊಡಲು ಸಾಧ್ಯವಿಲ್ಲವೇ, ಅದೇನು ಮಹಾ ಕಾರ್ಯ" ಎಂದು ಹೊರಟ ಭೀಮ ಪ್ರಯಾಸದಿಂದ ಈ ಸೌಗಂಧಿಕಾ ಪುಷ್ಪವನ್ನು ತರಬೇಕಾಯಿತು! ಅಂದಿನಿಂದ ನನಗೆ ಈ ಪುಷ್ಪರತ್ನ ಯಾವುದೆಂಬ ಕುತೂಹಲವಿತ್ತು. ಆ ಕುತೂಹಲಕ್ಕೀಗ ಉತ್ತರ ಸಿಕ್ಕಿ "ಅಯ್ಯೊ.. ಇದೇನಾ?" ಅಂತ ಅಂದುಕೊಂಡೆ ಗೊತ್ತಾ?

ಈ ಸೌಗಂಧಿಕಾ ಪುಷ್ಪವೇ ನಮ್ಮ ನಿಮ್ಮ ಮನೆಯಲ್ಲಿ, ಅಡಿಕೆ ತೋಟದ ನಡುವಲ್ಲಿ ಕಾಣಸಿಗುವ ಸುಗಂಧಿ ಅಥವಾ ಸುರುಳಿ ಹೂ!ಆದರೆ ಸ ಈ ಸುಗಂಧಿ ಹೂವು ಸೌಗಂಧಿಕಾ ಪುಷ್ಪವಲ್ಲ, ಅದು ಕುಬೇರನ ಆಡಳಿತದೊಳಗಿದ್ದ ಸರೋವರದಲ್ಲಿದ್ದ ವಿಶಿಷ್ಟ ಹೂ, ಇಂತಹ 'ಕೇವಲ' ಪುಷ್ಪವಲ್ಲ ಎನ್ನುವ ವಾದವೂ ಇದೆ. ಆದರೆ ಯಾರೂ ಸೌಗಂಧಿಕಾ ಪುಷ್ಪ ಬೇರೆ ಇದೆಯೆಂದು ತೋರಿಸಿ ಸಂಶಯ ನಿವಾರಿಸಲು ಸಾಧ್ಯವಾಗಿಲ್ಲ . ಮೈಸೂರಿನ ಕಡೆ ಸಾಮಾನ್ಯವಾಗಿ ಇದೇ ಸುಗಂಧಿ ಯನ್ನು ಸೌಗಂಧಿಕಾ ಎಂದೇ ಕರೆಯುತ್ತಾರಂತೆ. ಸ್ವರ್ಗದ ಹೂವೆಂದು ಖ್ಯಾತಿ ಪಡೆದ ಪಾರಿಜಾತ ಇಂದು ಎಲ್ಲೆಡೆ ಇರುವಂತೆ ಮಹಾಭಾರತದ ಅರಣ್ಯ ಪರ್ವದಲ್ಲಿ ಬರುವ ಸೌಗಂಧಿಕಾ ಪುಷ್ಪವೂ ಇದೇ ಆಗಿರಲೆಂಬ ಹಾರೈಕೆ ನನ್ನದು ಕೂಡ. ಏಕೆಂದರೆ ಇದಕ್ಕೆ ಪುಷ್ಟಿ ನೀಡುವುದು ಈ ಹೂವಿನ ಸುವಾಸನೆ!

ದೇವರ ಹಾಗೂ ಭಕ್ತರ ನಡುವಿನ ಸಂವಹನ ಪ್ರಸಾದ ರೂಪವೇ ಹೂವು. ಶ್ವೇತವರ್ಣದ ಈ ಸುಗಂಧಿಯನ್ನು ದೈವೀ ಪುಷ್ಪವೆಂದೇ ಪರಿಗಣಿಸಲಾಗುತ್ತದೆ. ಇದರ ಸೌಂದರ್ಯವೂ ಅನುಪಮವಾದುದು. ನೀರಿನ ಆಸರೆ ಇರುವಲ್ಲಿ, ಕೆರೆಯ ಬದಿ, ಅಡಿಕೆ ತೋಟ, ಗದ್ದೆ ಬದಿ ಜೌಗು ಪ್ರದೇಶಗಳಿದ್ದಲ್ಲೆಲ್ಲ ಹಾಯಾಗಿ ಬೆಳೆಯುವ ಸುಗಂಧಿಗೆ ಫಲವತ್ತಾದ, ಶೀತಲ, ತೇವಾಂಶದ ಮಣ್ಣೆಂದರೆ ಇಷ್ಟ. ಭಾಗಶ: ಸೂರ್ಯನ ಬೆಳಕು ಬಿದ್ದರೆ ಸಾಕು. ಬಹಳ ವೇಗವಾಗಿ ಬೆಳೆಯುತ್ತದೆ. ಗಡ್ಡೆಯ ಮೂಲಕ ಸಣ್ಣ ಮರಿಗಿಡಗಳು ಜನಿಸುತ್ತಾ ಶೀಘ್ರವಾಗಿ ಹಿಂಡಾಗಿ ರೂಪುಗೊಳ್ಳುತ್ತದೆ. ಸಣ್ಣ ಪುಟ್ಟ ಸಸ್ಯಗಳೇನಾದರೂ ಹತ್ತಿರವಿದ್ದರೆ ಮಾಯವಾಗುತ್ತವೆ. ಅದಕ್ಕಾಗಿ ಕೆಲವೊಮ್ಮೆ ಇದನ್ನು ಆಕ್ರಮಣ ಶೀಲ ಗಿಡವೆಂದೇ ಪರಿಗಣಿಸಲಾಗುತ್ತದೆ. ಸ್ಥಳೀಯ ಸಸ್ಯಗಳ ಪುನರುತ್ಪಾದನೆಗೆ ತಡೆ ನೀಡುವುದರಿಂದ ದಕ್ಷಿಣ ಆಫ್ರಿಕಾದಲ್ಲಿ ಇದನ್ನು ಹಾನಿಕಾರಕ ಕಳೆಯೆಂದೇ ಭಾವಿಸಲಾಗಿದೆ.

ಸುಗಂಧಿಗೆ ಇತರ ಹೂಗಳಿಗಿಂತ ವಿಶೇಷವಾದ ಶುಭ್ರ ಬಿಳಿ ಬಣ್ಣವಿದೆ. ಬಿಳಿ, ಹಳದಿ ಹೂಗಿಡಗಳು ವ್ಯಾಪಕವಾಗಿದ್ದರೂ ಈಗ ನಾನಾ ವರ್ಣದ ಸುಗಂಧಿ ಹೂಗಳ ಗಿಡಗಳು ಸಿಗುತ್ತವೆ. ಅಕ್ಕಪಕ್ಕ ಎಲೆಗಳನ್ನು ಚಾಮರದಂತೆ ಮೂಡಿಸುತ್ತಾ ಬೆಳೆವ ಸಸ್ಯದ ತುದಿಯಲ್ಲಿ ಹೂ ಗೊಂಚಲಿನ ಸಂಕೀರ್ಣ ರಚನೆ ಕಾಣಿಸುತ್ತದೆ. ಎಲೆಗಳ ತುದಿಗಳು ಚೂಪಾಗಿದ್ದು 8 ರಿಂದ 24 cm ಉದ್ದವಿರುತ್ತವೆ. 2ರಿಂದ 5 cm ಅಗಲವಿರುತ್ತವೆ. ಎಲೆಗಳು ಹಣ್ಣಾಗಿ ಉದುರುವುದು ಬಹು ನಿಧಾನ. ಹೂ ಅರಳುವವರೆಗೂ ಅಂದರೆ ಗಿಡದ ಜೀವಿತಾವಧಿಯುದ್ದಕ್ಕೂ ಬುಡದಿಂದ ಆರಂಭವಾಗಿ ಸಾಮಾನ್ಯ ಎಲ್ಲಾ ಎಲೆಗಳೂ ಹಸಿರಾಗಿರುತ್ತವೆ. ಹೂವಿನ ಮೊಗ್ಗು ಗಳು ಕುಂಡಿಕೆಗಳಂತಹ ರಚನೆಯಿಂದ ಹೊರಬರುತ್ತವೆ. ಮೂರು ನಾಲ್ಕು ದಿನಗಳಾಗುತ್ತಲೇ ಒಂದು ಶುಭ ಮಧ್ಯಾಹ್ನ ಬಿರಿಯಲಾರಂಭಿಸುತ್ತದೆ. ಉದ್ದನೆಯ ಬಿಳಿ ತೊಟ್ಟಿಗೆ ನಾಜೂಕಾದ ಪುಷ್ಪಪಾತ್ರೆಗೆ ತಾಗಿಕೊಂಡು ಚಿಟ್ಟೆಯಂತೆ ಅತ್ತಿತ್ತ ಕಿರಿದಾದ ಎರಡೆಸಳು ನಡುವೆ ಕೆಳಚಾಚಿದ ಅಗಲವಾದ ಮತ್ತೊಂದೆರಡೆಸಳಿನ ನಡುವೆ ಸುಕೋಮಲ ಶಲಾಕೆಗಳು ಚಾಚಿರುತ್ತವೆ. ನೇಸರನು ನೆತ್ತಿ ಜಾರಿ ತಂಪಾಗುತ್ತಿದ್ದಂತೆ ಹೂವು ಸಂಪೂರ್ಣ ಅರಳಿ ತನ್ನ ಸುತ್ತ ಗಂಧ ಹರಡಿರುತ್ತದೆ. ಮಧ್ಯಾಹ್ನ ವಾಗುತ್ತಲೇ ಮೊಗ್ಗು ಕೊಯ್ದು ಕಟ್ಟಿದರೆ ದಳಗಳು ಸ್ವಲ್ಪವೇ ಬಿರಿದು ಇಮ್ಮಡಿ ಸೌಂದರ್ಯದಿಂದ ಕಂಗೊಳಿಸುತ್ತದೆ. ಮುಡಿಯಲು ಅನುಕೂಲ. ಮಾರುಕಟ್ಟೆಯಲ್ಲೂ ಹಲವು ವಿನ್ಯಾಸಗಳಲ್ಲಿ ನೇಯ್ದ ಸುಗಂಧಿ ಮಾಲೆಗಳು ಸಿಗುತ್ತವೆ. ಹಿಂದೆ ಮಹತ್ವದ ಸಂದೇಶಗಳನ್ನು ಈ ಸುಗಂಧಿಯ ಮೊಗ್ಗುಗಳ ಮೂಲದೊಳಗೆ ಗುಪ್ತವಾಗಿಟ್ಟು ರವಾನಿಸುತ್ತಿದ್ದರಂತೆ! ಇದರಲ್ಲಿ ಕೆಂಪನಿನ ಪುಟ್ಟ ಕಾಯಿಗಳಾದರೂ ಬೀಜ ಮೊಳಕೆ ಬರಬೇಕೆಂದರೆ ಬಿಸಿನೀರಲ್ಲಿ ಎರಡು ತಾಸು ನೆನೆಸಬೇಕಂತೆ. ಮೊಳಕೆ ಬರಲು ಹಲವು ದಿನಗಳೇ ಬೇಕಾದುದರಿಂದ ಇದರ ಗಡ್ಡೆಯನ್ನು ನೆಡುವ ಮೂಲಕವೇ ಹೊಸ ಸಸ್ಯಗಳನ್ನು ಪಡೆಯುವುದು ಬಹು ಸುಲಭ. ಜನಪದೀಯರ ಪ್ರಕಾರ ಇದರ ಗಿಡವನ್ನು ಯಾರಲ್ಲೂ ಕೇಳಿ ತರಬಾರದು, ಬದಲಿಗೆ ಕದ್ದೇ ತಂದು ನೆಡಬೇಕೆನ್ನುತ್ತಾರೆ.

ಸುಗಂಧಿ ಎಂಬ ನಿಷ್ಪಾಪಿ ಸಸ್ಯವು ಭಾರತದ ಸಾಂಪ್ರದಾಯಿಕ ಔಷಧೀಯ ಸಸ್ಯ. ಹೂ, ಬೇರು ಹಲವಾರು ಚಿಕಿತ್ಸೆಗೆ ಉಪಯುಕ್ತವಾಗಿದೆ. ಕಿಡ್ನಿ ಸ್ಟೋನ್, ಉರಿಮೂತ್ರ, ರಕ್ತಶುದ್ಧಿ, ಜ್ವರ, ವಾಂತಿ, ಆನೆಕಾಲು, ಚರ್ಮದ ತುರಿಕೆ, ಭೇದಿ, ಕಫ, ನೆಗಡಿ, ಕೆಮ್ಮು, ಗಾಯ, ತಲೆನೋವು, ಸಕ್ಕರೆ ಕಾಯಿಲೆ, ಸಂಧಿವಾತ ಇತ್ಯಾದಿಗಳಿಗೆ ಪ್ರಯೋಜನಕಾರಿಯಾಗಿದೆ. ಕಣ್ಣಿಗೆ ಬಲವರ್ಧಕ. ಬೇರಿನಿಂದ ಎಣ್ಣೆ ತಯಾರಿಸಿ ಸುಗಂಧ ದ್ರವ್ಯ ಹಾಗೂ ಔಷಧಕ್ಕೆ ಬಳಸುವರು. ಹೂವಿನ ಸಾರದಿಂದ ಗುರುತು ಹಾಕುವ ಶಾಯಿಗೆ ಬಳಸುತ್ತಾರೆ. 

ಸಂಸ್ಕೃತ ದಲ್ಲಿ ಅನಂಥ, ಗೋಪಕನ್ಯ, ಗೋಪಸುತ ಎಂದು ಕರೆಯಲ್ಪಡುವ ಸುಗಂಧಿ ಆಂಗ್ಲ ಭಾಷೆಯಲ್ಲಿ Butterfly ginger. ಸಸ್ಯಶಾಸ್ತ್ರೀಯವಾಗಿ (Hedychium coronarium). Zingiberaceae ಕುಟುಂಬಕ್ಕೆ ಸೇರಿದೆ. ಗಂಗಾ ನದೀ ಬಯಲು, ಅಸ್ಸಾಂ ನ ಗುಡ್ಡಗಾಡು, ಹಿಮಾಲಯ ಪರ್ವತ ಶ್ರೇಣಿ ಗಳಲ್ಲಿ ಕಾಣಸಿಗುವ ಸುಗಂಧಿ ದಕ್ಷಿಣ ಭಾರತದಾದ್ಯಂತ ಕಾಣಸಿಗುತ್ತದೆ. ಕ್ಯೂಬಾ ದೇಶದ ರಾಷ್ಟ್ರೀಯ ಹೂವು ! ಇಲ್ಲಿ ಈ ಹೂವನ್ನು 'ಮರಿಪೊಸ' ಅಂದರೆ 'ಚಿಟ್ಟೆ' ಎನ್ನುವರು. ಹೀಗನ್ನಲು ಅದರ ವಿಶಿಷ್ಟ ಸ್ವರೂಪವೇ ಕಾರಣ. ಬ್ರೆಜಿಲ್ ದೇಶದಲ್ಲಿ ದಾಸ್ಯ ಪದ್ದತಿಯಿದ್ದ ಕಾಲದಲ್ಲಿ ಈ ಸುಗಂಧಿ ಯ ಎಲೆಗಳನ್ನು ಹಾಸಿಗೆಯಂತೆ ಬಳಸುತ್ತಿದ್ದರೆ ಸ್ಪಾನಿಷ್ ಮಹಿಳೆಯರು ಈ ಹೂವನ್ನು ಮುಡಿದು ತಮ್ಮನ್ನು ತಾವು ಸಿಂಗರಿಸಿಕೊಳ್ಳುತ್ತಿದ್ದರಂತೆ.

ವಿಶಿಷ್ಟ ಸುಗಂಧದ ಜೊತೆ ಅನುಪಮ ಸೌಂದರ್ಯದ ಮೂಲಕ ಗಮನ ಸೆಳೆವ ಸುಗಂಧಿಯನ್ನು ನಮ್ಮ ಹಿರಿಯರು ಅಗತ್ಯವಿರಲಿ, ಇಲ್ಲದಿರಲಿ ನೆಡದವರು ಕಡಿಮೆ. ಈಗಿನವರಂತೆ ಹೂ ಮುಡಿಯುವಲ್ಲಿ ಶಿಷ್ಟಾಚಾರಗಳಿರದೆ ಸಂಪ್ರದಾಯ ಮಾತ್ರ ಆಚರಣೆಯಲ್ಲಿತ್ತು. ಈಗ ಇಂತಹ ಪುಷ್ಪಗಳಿಗೆ ಕವಡೆ ಕಾಸಿನ ಬೆಲೆ ಇಲ್ಲ. ಮುಡಿದವರನ್ನು ಸುಸಂಸ್ಕೃತ ರಲ್ಲವೆಂದು ನೋಡುವ ಭಾವ ಬೆಳೆದಿದೆ. ಆದರೆ ಸುಗಂಧಿ ಇದಾವುದನ್ನೂ ಗಮನಿಸದೆ ತನ್ನ ಸೌಗಂಧವನ್ನು ಚೆಲ್ಲುತ್ತಲೇ ಗಾಳಿಯ ಜೊತೆ ರಮಿಸುತ್ತದೆ. ನೀವೂ ಈ ಪುಷ್ಪವನ್ನು ಕಂಡರೆ ಆಘ್ರಾಣಿಸಿ, ಅದರ ಚೆಲುವಿಕೆಯನ್ನು ಗಮನಿಸಿ. ಸಾಧ್ಯವಾದರೆ ಒಂದು ಪಿಳ್ಳೆ ಬೆಳೆಸಲು ಪ್ರಯತ್ನಿಸಿ.

ಚಿತ್ರ - ಬರಹ : ವಿಜಯಾ ಬಿ ಶೆಟ್ಟಿ ಸಾಲೆತ್ತೂರು, ಬಂಟ್ವಾಳ