ನಿಷ್ಪಾಪಿ ಸಸ್ಯಗಳು (ಭಾಗ ೭೧) - ಹಸಿರು ಕನಕಾಂಬರ ಗಿಡ
ನವರಾತ್ರಿಯ ಸಡಗರ, ಸಂಭ್ರಮದಲ್ಲಿ ಖುಷಿ ಖುಷಿಯಾಗಿರಬೇಕಲ್ಲ! ನಮ್ಮ ಹಿರಿಯರು ಬದುಕಿನ ಏಕತಾನತೆ ಹೋಗಲಾಡಿಸಲು ಜೀವನಾವರ್ತ ಹಾಗೂ ಋತುಮಾನಗಳ ಹಬ್ಬಗಳ ಮೂಲಕ ಬದುಕಿಗೆ ಸಂತಸ, ಶಕ್ತಿ ತುಂಬಿದ್ದಾರೆ. ಈ ಮೂಲಕ ನಿಸರ್ಗವನ್ನು ಗುರುತಿಸುವ, ಪ್ರೀತಿಸುವ, ಗೌರವಿಸುವ ಕಾರ್ಯಗಳಿಗೆ ಪಂಚಾಂಗ ಹಾಕಿಕೊಟ್ಟ ಹಿರಿಯರಿಗೆ ವಂದಿಸುತ್ತಾ ಇಂದು ನಾವು ನಿಷ್ಪಾಪಿ ಸಸ್ಯವೊಂದರ ಪರಿಚಯವನ್ನು ಮಾಡಿಕೊಳ್ಳೋಣ.
ಈ ಸಸ್ಯವನ್ನು ಶಾಸ್ತ್ರೀಯವಾಗಿ ಅಕಾಂಥೇಸಿ (Acanthaceae) ಕುಟುಂಬದ ಎಕ್ಬೋಲಿಯಮ್ ವೈರಿಡ್ (Ecbolium viride) ಎಂದು ಗುರುತಿಸಲಾಗುತ್ತದೆ. Blue fox tail ಎಂದು ಆಂಗ್ಲ ಭಾಷೆಯಲ್ಲಿ, ಹಸಿರು ಕನಕಾಂಬರ, ನೀಲಾಂಬರಿ, ಕರೀಂಕುರುನ್ನಿ ಎಂದು ಕನ್ನಡದಲ್ಲಿ, ಕಪ್ಪು ಕರ್ನಿ ಎಂದು ತುಳುವಿನಲ್ಲಿ ಗುರುತಿಸುತ್ತಾರೆ.
ಕನಕಾಂಬರ ಎಂದರೆ ಯಾರಿಗೆ ಗೊತ್ತಿಲ್ಲ ಹೇಳಿ!. ಮನೆಮನೆಗಳಲ್ಲಿ ಗಿಡವಿದ್ದೇ ಇರುವುದು. ಆದರೆ ಈ ಹಸಿರು ಕನಕಾಂಬರ ಹಾಗಲ್ಲ. ಇದು ಕರಾವಳಿ, ಮಲೆನಾಡು, ಅರೆಮಲೆನಾಡಿನಲ್ಲಿ ಕಾಣಸಿಗುವ ಬಹುವಾರ್ಷಿಕ ಮೂಲಿಕೆ. ಇದೊಂದು ಪೊದೆ ಸಸ್ಯ. ಗಾಢವಾದ ಹಸಿರು ಬಣ್ಣದಿಂದ ದಟ್ಟವಾಗಿ ಬೆಳೆಯುವ ಗಿಡಗಳನ್ನು ನೀವು ಮಾರ್ಗದ ಬದಿಗಳಲ್ಲೂ ಕಾಣಬಹುದು. ಒಂದು ಮೀಟರಿನಷ್ಟು ಎತ್ತರ ಬೆಳೆದು ಒಟ್ಟು ಹಸಿರಾಗಿ ಕಾಣುವ ಈ ಗಿಡಗಳು ನಿಮಗೆ ವಿಶೇಷವೆಂದು ಅನಿಸದಷ್ಟು ನಿರ್ಲಿಪ್ತವಾಗಿರುತ್ತದೆ. ಅವುಗಳಿಗೆ ಯಾವುದೇ ಹೊಸ ಆಕಾಂಕ್ಷೆಗಳಿಲ್ಲ. ಜಾಗವಿದ್ದರೆ ಹರಡಿ ಬೆಳೆಯುತ್ತವೆ. ಇಲ್ಲವಾದರೆ ಇದ್ದಲ್ಲೇ ಸುಖ ಕಾಣುತ್ತವೆ. ಯಾವ ಹುಳ ಹುಪ್ಪಟೆಗಳೂ ಹತ್ತಿರ ಬರಲಾರವು. 8ರಿಂದ 10cm ಉದ್ದ ಬೆಳೆಯುವ ಎಲೆಗಳು ತುದಿ ಹಾಗೂ ತೊಟ್ಟಿನ ಸನಿಹ ಚೂಪಾಗಿರುತ್ತವೆ. ಎಲೆಗಳ ಮಧ್ಯಭಾಗ ನಾಲ್ಕೈದು ಸೆಂ.ಮೀ ಅಗಲವಿರುವುದು. ಸಾಮಾನ್ಯವಾಗಿ 10 _ 12 cm ದೂರದಲ್ಲಿ ಅಭಿಮುಖವಾಗಿ ಎರಡೆರಡು ಎಲೆಗಳಿರುತ್ತವೆ. ಕಾಂಡದಿಂದ ಹಲವು ಶಾಖೆಗಳು ಮೇಲಕ್ಕೆ ಎದ್ದು ನಿಲ್ಲತ್ತವೆ. ಶಾಖೆಗಳ ತುದಿಗಳಲ್ಲಿ ನಾಲ್ಕು ಬದಿಯ ಕದಿರಿನ ರಚನೆಯೊಳಗಿನ ಪುಷ್ಪ ಪಾತ್ರೆಯೊಳಗಿನಿಂದ ಮೊಗ್ಗು ಹೂಗಳು ಬೆಳೆಯುತ್ತವೆ. ಮಳೆಗಾಲ ಕಡಿಮೆಯಾಗುತ್ತಿದ್ದಂತೆ ಸೆಪ್ಟೆಂಬರ್ ಅಕ್ಟೋಬರ್ ತಿಂಗಳಲ್ಲಿ ಹೂವುಗಳು ಅರಳುತ್ತವೆ. ಈ ಹೂಗಳು ಗಿಡದಂತೆಯೇ ಹಸಿ ಹಸಿರು ಬಣ್ಣದಲ್ಲಿರುವುದು ಈ ಸಸ್ಯದ ವಿಶೇಷತೆ.
ಸಾಮಾನ್ಯವಾಗಿ ಸಸ್ಯಗಳಲ್ಲಿ ಸಂತಾನೋತ್ಪತ್ತಿ ಗಾಗಿ ಹೂಗಳು ಗಾಢವಾದ ಬಣ್ಣಗಳಿಂದ ಕಂಗೊಳಿಸುವುದೇ ಹೆಚ್ಚು. ಹೂಗಳು ದೂರದಿಂದಲೇ ಕೈಬೀಸಿ ದುಂಬಿ, ಪತಂಗ, ಚಿಟ್ಟೆ, ಪಕ್ಷಿ ಸಂಕುಲಗಳನ್ನಾಕರ್ಷಿಸುವುದೇ ಅಲ್ಲದೆ ನಿಸರ್ಗದ ರಮಣೀಯತೆಯನ್ನು ಹೆಚ್ಚಿಸುತ್ತವೆ. ಆದರೆ ಈ ಹಸಿರು ಗಿಡ ನಮ್ಮ ಹೆಂಗಳೆಯರಂತೆ ಮ್ಯಾಚಿಂಗ್ ಮ್ಯಾಚಿಂಗ್ ಮಾಡಿಕೊಂಡು ಹಸಿರಾದ ಹೂಗಳದ್ದೇ ಬಸಿರಾಗುತ್ತವೆ. ಹಡೆದರೂ ಕಾಣದಂತೆ !
ಕನಕಾಂಬರದಂತೆ ಉದ್ದನೆಯ ತೊಟ್ಟಿನ ತುದಿಗೆ ಒಂದೇ ದಿಕ್ಕಿಗೆ ಅಂಟಿಕೊಂಡ ಮೂರು ದಳಗಳು ನಡುವೆ ಕೇಸರಗಳಿದ್ದು ಮೌನವಾಗಿ ಧ್ಯಾನದೊಳಿರುವಂತೆ ಕಾಣಿಸುತ್ತದೆ. ಒಂದು ಕದಿರಲ್ಲಿ ಒಮ್ಮೆಗೆ ಒಂದು ಅಥವಾ ಎರಡು ಹೂಗಳು ಅರಳುತ್ತವೆ. ದ್ವಿಲಿಂಗಿಗಳಾದ ಹೂಗಳು ಪುಷ್ಪಪಾತ್ರೆಯ ಬುಡಭಾಗದಲ್ಲಿ ಜೋಡಿಸಲ್ಪಟ್ಟಿದ್ದು ಚೂಪು ತುದಿಯ ಬೀಜಗಳು ಅಂಡಕದಲ್ಲಿ ಬೆಳೆಯುತ್ತವೆ. ಒಣಗಿದ ಬಳಿಕ ಕಾಯಿಯಿಂದ ಬೀಜಗಳು ಹೊರ ಸಿಡಿಯುತ್ತವೆ.
ಉಷ್ಣವಲಯದ ಆಫ್ರಿಕಾದಿಂದ ಕೀನ್ಯಾ, ಅರೇಬಿಯನ್ ಪೆನಿನ್ಸುಲಾ, ಭಾರತದಲ್ಲಿ ಹರಡಿರುವ ಹಸಿರು ಕನಕಾಂಬರ ಆಫ್ರಿಕಾ ಹಾಗೂ ಏಷ್ಯಾ ಕ್ಕೆ ಸ್ಥಳೀಯವಾಗಿದೆ. ಇದು ಆಂಟಿಫಂಗಲ್ ಏಜೆಂಟಾಗಿ ವರ್ತಿಸುವ ಗುಣ ಹೊಂದಿದೆ. ಹೃದಯ ರಕ್ತನಾಳದ ಕಾಯಿಲೆ, ಉರುಯೂತ, ಗೌಟ್, ತಲೆನೋವು, ಕಾಮಾಲೆ, ಸಂಧಿವಾತ, ಅತಿಸರ, ಹಲ್ಲುನೋವು ಇತ್ಯಾದಿಗಳಿಗೆ ಔಷಧಿಯಾಗಿ ಬಳಕೆಯಲ್ಲಿದೆ. ಗಿಡದ ಬೇರು, ಎಲೆ, ಬೀಜಗಳು ಉಪಯುಕ್ತವಾಗಿವೆ. ಈ ಸಸ್ಯ ನಮ್ಮ ಊರಲ್ಲೇ ಇದೆ. ಮಾರ್ಗದ ಬದಿ, ಹಳ್ಳ ಕೊಳ್ಳಗಳ ಸನಿಹವಿದ್ದು ನಿಮಗೆ ಆಸಕ್ತಿಯಿದ್ದರೆ ಹಿತ್ತಲಲ್ಲೂ ಒಂದಿಷ್ಟು ಜಾಗ ನೀಡಬಹುದು. ಗಿಡವನ್ನು ಗುರುತಿಸಲು ಪ್ರಯತ್ನಿಸುವಿರಲ್ಲವೇ....?
ಚಿತ್ರ ಬರಹ : ವಿಜಯಾ ಬಿ ಶೆಟ್ಟಿ ಸಾಲೆತ್ತೂರು, ಬಂಟ್ವಾಳ