ನಿಷ್ಪಾಪಿ ಸಸ್ಯಗಳು (ಭಾಗ ೮೧) - ಇನ್ಸುಲಿನ್ ಗಿಡ

ನಿಷ್ಪಾಪಿ ಸಸ್ಯಗಳು (ಭಾಗ ೮೧) - ಇನ್ಸುಲಿನ್ ಗಿಡ

ಇಲ್ಲಿ ಹರಿಯುತ್ತಿರುವ ನೀರಿನ ಪ್ರವಾಹವನ್ನೊಮ್ಮೆ ನೋಡಿರಿ. ಉತ್ತರದಿಂದ ದಕ್ಷಿಣಕ್ಕೆ ಹರಿಯುತ್ತಿರುವ ಇದನ್ನು 'ಕಟ್ಟತ್ತಿಲ ಹೊಳೆ' ಎನ್ನುತ್ತಾರೆ. ಇದು ನಮಗಮ ಜಿಲ್ಲೆಯ ದಕ್ಷಿಣ ದಿಕ್ಕಿನಲ್ಲಿದೆ. ವಿಶೇಷವೇನೆಂದರೆ ಕರ್ನಾಟಕದ ಗಡಿ ದಾಟಿ ಸ್ವಲ್ಪವೇ ದೂರದಲ್ಲಿ ಕೇರಳ ಪ್ರವೇಶಿಸಿ ಪಯಸ್ವಿನಿ ನದಿಯ ಜೊತೆ ಐಕ್ಯಗೊಳ್ಳುತ್ತದೆ. ನದಿಗೆ ಹೋಲಿಸಿದರೆ ಇದೊಂದು ಸಣ್ಣ ನೀರಿನ ಹರಿವು. ಮಳೆಗಾಲದಲ್ಲಿ ಮಾತ್ರ ಭರ್ತಿಯಾಗಿ ಹರಿಯುತ್ತಿರುತ್ತದೆ. ಬೇಸಿಗೆ ಬಂತೆಂದರೆ ಒಣಗಲಾರಂಭಿಸುತ್ತದೆ. ಆದರೆ ಪೂರ್ತಿ ನೀರಿನ ಹರಿವು ನಿಲ್ಲುವ ಮೊದಲೇ ಇದಕ್ಕೆ ಅಲ್ಲಲ್ಲಿ ಮಣ್ಣು ಹಾಗೂ ಹಲಗೆಗಳ ಸಹಾಯದಿಂದ ತಡೆಗಳನ್ನು ನಿರ್ಮಾಣಮಾಡಿ ನೀರು ತುಂಬಿರುವಂತೆ ನೋಡಿಕೊಳ್ಳುತ್ತಾರೆ. ನಿಧಾನಕ್ಕೆ ಈ ನಿಂತ ನೀರು ಆರಿ ಹೋದರೂ ಇಕ್ಕೆಲಗಳಲ್ಲಿ ಹಸಿರು ಹೊದ್ದ ದಡಗಳು ಹಲವಾರು ಮೂಲಿಕೆ ಹಾಗೂ ಪೊದರು ಸಸ್ಯಗಳಿಗೆ ಆವಾಸವನ್ನೊದಗಿಸುತ್ತದೆ.

ಇಲ್ಲಿ ನೋಡಿ, ಇದು ಕಾಸರಗೋಡನ್ನು ಕರ್ನಾಟಕಕ್ಕೆ ಸೇರಿಸುವ ಪುಟ್ಟ ಸೇತುವೆ. ಇಲ್ಲಿಂದ ಮುಂದೆ. ಈ ಸೇತುವೆಯ ಪೂರ್ವದ ತುದಿಯಲ್ಲಿ ನಿಮಗೊಂದು ವಿಶೇಷ ವಾದ ಸಸ್ಯವೊಂದನ್ನು ಪರಿಚಯಿಸಲಿದ್ದೇನೆ ಬನ್ನಿ.. 

ಓ ಅಲ್ಲಿ ನೋಡಿ, ಹಳದಿ ಕೆಂಪು ಹೂಗಳ ರಾಶಿ ಕಾಣಿಸುತ್ತಿದೆಯೇ? ದೂರದಿಂದಲೇ ಬಣ್ಣಗಳು ಕಣ್ಮನ ಸೆಳೆಯುತ್ತಿವೆ ಅಲ್ಲವೇ? ಗಿಡದ ಹತ್ತಿರಕ್ಕೆ ಬನ್ನಿ, ಮಣ್ಣು ಮೆತ್ತಗಿದೆ, ಜಾರಬಹುದು. ಗಿಡಗಳ ತುದಿಗಳಲ್ಲಿ ಮೇಲ್ಮುಖವಾಗಿ ಬೆಳೆದ ಕುಂಡಿಗೆಯಲ್ಲಿ ಸುತ್ತಲೂ ಕಡು ಹಳದಿ ದೊಡ್ಡಗಾತ್ರದ ಪುಷ್ಪಪಾತ್ರೆಯೊಳಗೆ ಕಡು ಕೆಂಪು ಹಾಗೂ ಹಳದಿ ಬಣ್ಣಗಳ ಪಟ್ಟೆಗಳಿದ್ದು ವಕ್ರವಾಗಿ ಕಿರೀಟದಂತಿರುವ ಸಾಮಾನ್ಯ ಗಾತ್ರದ ಎರಡೆಸಳು ಹಾಗೂ ಜೇನು ಸುರಿವ ಚೆಲುವಿಕೆಯ ಹಸಿ ಹಳದಿಯ ಬಾಗಿದ ಪಕಳೆ ಇನ್ನೊಂದೆಡೆ!. ಎಷ್ಟು ಸುಂದರವಾಗಿವೆಯಲ್ಲವೇ? ಇದರ ಕುಂಡಿಗೆಗಳು ಹಸಿರಾಗಿಯೂ ಕೆಂಪಗಾಗಿಯೂ ಎರಡು ವಿಧವಿದೆ. ತುಂಬಾ ಆಕರ್ಷಕವಾಗಿರುವುದರಿಂದಲೇ ಜೇನು ನೊಣ, ದುಂಬಿ, ಹಕ್ಕಿಗಳಿಗೆ ಈ ಪುಷ್ಪರಾಶಿ ರಸದೌತಣ ನೀಡುತ್ತಿದೆ ಗಮನಿಸಿದಿರಾ? ನೈಜೀರಿಯಾದಲ್ಲಿ ಇದರ ಹೂವನ್ನು ಲಾಂಛನವಾಗಿ ಬಳಸುವರು. ಆದರೆ ಹಳದಿ ಬಣ್ಣದ ಬದಲು ಕೆಂಪು ಬಣ್ಣವನ್ನು ಪ್ರತಿನಿಧಿಸಲಾಗುತ್ತದೆಯಂತೆ. ಇದೇ ಸಸ್ಯವನ್ನು ನಮ್ಮಲ್ಲಿ ಇನ್ಸುಲಿನ್ ಗಿಡ ಎನ್ನುವರು. 1753 ರಲ್ಲಿ ಲಿನ್ನಿಯನ್ ನಿಂದ ಸ್ಥಾಪಿಸಲ್ಪಟ್ಟ ಕೋಸ್ಟೇಸಿ ಕುಟುಂಬದಲ್ಲಿ ಮೂಲಿಕೆಯು ದೀರ್ಘಕಾಲಿಕ ಸಸ್ಯಗಳ ಒಂದು ಕುಲ. ಕೋಸ್ಟಸನ್ನು ಸಾಮಾನ್ಯವಾಗಿ ಅದರ ಸುರುಳಿಯಾದ ಕಾಂಡ ಹಾಗೂ ಎಲೆಗಳಿಂದ ಗುರುತಿಸುತ್ತಾರೆ. ಕಾಸ್ಟಸ್ ಪಿಕ್ಚಸ್ (Costus Pictus ) ಎಂಬುದು ಈ ಇನ್ಸುಲಿನ್ ಗಿಡದ ಸಸ್ಯ ಶಾಸ್ತ್ರೀಯ ಹೆಸರು. ಇನ್ಸುಲಿನ್ ಪ್ಲಾಂಜ್ ಇದರ ಜನಪ್ರಿಯ ಹೆಸರು. ಉರಿಯುತ್ತಿರುವ ಕಾಸ್ಟಸ್, ಸುರುಳಿಯಾಕಾರದ ಧ್ವಜ, ಸ್ಟೆಪ್ ಲ್ಯಾಡರ್, ಮಧುನಾಶಿನಿ ಎಂಬ ಹೆಸರುಗಳೂ ಇವೆ. ಕೋನ್ ಆಕಾರದ ಪುಷ್ಪ ಮಂಜರಿಯಲ್ಲಿ ಹೂಗಳು ಒಣಗಿದ ಬಳಿಕ ಬಿಳಿ ತಿರುಳಿನ ಸೂಕ್ಷ್ಮವಾದ ಕಪ್ಪು ಬೀಜಗಳಾಗುತ್ತವೆ. ಆದರೆ ಇವುಗಳಿಗೆ ಪುನರುತ್ಪಾದನೆಯ ಸಾಮರ್ಥ್ಯ ಅತ್ಯಲ್ಪ.

ಈ ಗಿಡಗಳ ಎಲೆಗಳನ್ನು ಗಮನಿಸಿ. ಸರಳವಾದ ಸುರುಳಿಯಾಕಾರದ ಜೋಡಣೆ. ಎಷ್ಟು ಗಾಢವಾದ ಹಸಿರು ಬಣ್ಣದಲ್ಲಿದೆ! ಇದು ಶುಂಠಿ ಜಾತಿಯ ಸಸ್ಯ. ಇದರಂತೆಯೇ ನಾಯಿ ಕಬ್ಬು ಅಥವಾ ನರಿ ಕಬ್ಬು ಎಂಬ ಗಿಡವೂ ಒಂದಿದೆ, ನಿಮಗೊತ್ತಾ? ಈ ನರಿ ಕಬ್ಬು ಎಲೆಯ ರಸಕ್ಕೆ ರುಚಿ ಇಲ್ಲ ಆದರೆ ಈ ಗಿಡದ ಎಲೆಯನ್ನು ನೀವು ತಿಂದು ರುಚಿಯನ್ನು ಗಮನಿಸಿ. ಹ್ಹಾಂ.. ಹುಳಿ ರುಚಿಯಿದೆಯಲ್ಲವೇ? ಎಲೆಗಳ ಆಕಾರ, ಗಿಡದ ಬೆಳವಣಿಗೆ ಎರಡರಲ್ಲೂ ಸಾಮಾನ್ಯವಾಗಿದೆಯಾದರೂ ಗಿಡಗಳು ಬೇರೆಬೇರೆ. ಇನ್ಸುಲಿನ್ ಗಿಡದ ಎಲೆ 10 ರಿಂದ 25 cm ಉದ್ದವಿದ್ದು 3ರಿಂದ 6 cm ಅಗಲವಿರುತ್ತದೆ. ಇಲ್ಲಿ ನದೀ ಬದಿಯಾದುದರಿಂದ ಮಣ್ಣು ತೇವಾಂಶದಿಂದ ಕೂಡಿದೆ ಮಾತ್ರವಲ್ಲದೆ ದೊಡ್ಡ ಸಸ್ಯಗಳ ನೆರಳೂ ಇದೆ. ಆದ್ದರಿಂದಲೇ ಈ ಇನ್ಸುಲಿನ್ ಗಿಡಗಳು ಇಷ್ಟೊಂದು ಸೊಂಪಾಗಿ ಬೆಳೆದಿವೆ. ಇದು ಶುಂಠಿಯಂತಹ ಗಡ್ಡೆಗಳನ್ನು ಹೊಂದಿದ್ದು ಅದರ ಮೂಲಕವೇ ತನ್ನ ಸಂತತಿಯ ಅಭಿವೃದ್ಧಿಯನ್ನೂ ಮಾಡುತ್ತದೆ. 2 ವರ್ಷದಲ್ಲಿ ಸುಮಾರು 3 ಅಡಿಗಳಷ್ಟು ಉದ್ದಗಲಕ್ಕೆ ವೇಗದಿಂದ ವಿಸ್ತಾರವಾಗಿ ಹಬ್ಬುವುದರಿಂದ ಇದನ್ನು ಕಳೆಗಿಡವೆಂದೂ ಪರಿಗಣಿಸಲಾಗುತ್ತದೆ. ಕೆಲವೊಮ್ಮೆ ಎಷ್ಟು ಕಡಿದು ಬಿಸಾಡಿದರೂ ಮತ್ತೆ ಮತ್ತೆ ಮೊಳಕೆಯೊಡೆದು ತಾಳ್ಮೆಯ ಬಗ್ಗೆ ಪರೀಕ್ಷೆಯೊಡ್ಡುತ್ತದೆ!.

ಪ್ರಪಂಚದಾದ್ಯಂತ ಉಷ್ಣವಲಯದ ದೇಶಗಳಲ್ಲಿ ವಿತರಣೆ ಇರುವ ಇನ್ಸುಲಿನ್ ಗಿಡ ಭಾರತದಲ್ಲಿ ಹಿಮಾಲಯಶ್ರೇಣಿ, ಪಶ್ಚಿಮ ಘಟ್ಟಗಳಲ್ಲಿ ಹರಡಿದೆ. ಇತ್ತೀಚೆಗೆ ಈ ನಿಷ್ಪಾಪಿ ಸಸ್ಯವು ತನ್ನ ಹೂವಿನ ಚೆಲುವಿಕೆಗಾಗಿ ಹೂದೋಟಗಳಲ್ಲಿ ಸ್ಥಾನ ಪಡೆದಿರುವುದಲ್ಲದೇ ಮಧುಮೇಹ ವಿರೋಧಿಯೆಂದು ಗುರುತಿಸಿಕೊಂಡು ಚಿರಪರಿಚಿತವಾಗುವಷ್ಟು ಹರಡಿದೆ. ಸಾಂಪ್ರದಾಯಿಕ ಔಷಧಿಯಾಗಿ ಹಿಂದಿನಿದಲೂ ಬಳಕೆಯಾಗುತ್ತಿದ್ದ ಇನ್ಸುಲಿನ್ ಗಿಡವನ್ನು ಜಪಾನೀಯರು ಸಿಫಿಲಿಸ್ ಕಾಯಿಲೆಯ ಚಿಕಿತ್ಸೆಯಲ್ಲಿ , ಆಗ್ನೇಯ ಏಷ್ಯಾದಲ್ಲಿ ಅತಿಸಾರ, ತಲೆನೋವು, ವಾಂತಿ ನಿಯಂತ್ರಣಕ್ಕಾಗಿ, ಭಾರತದಲ್ಲಿ ನ್ಯುಮೋನಿಯ, ಸಂಧಿವಾತಕ್ಕೆ ಬಳಸುತ್ತಿದ್ದರು. ಮಧುಮೇಹ ವಿರೋಧಿ, ಉತ್ಕರ್ಷಣ ನಿರೋಧಕ, ಕ್ಯಾನ್ಸರ್ ವಿರೋಧಿ, ನಂಜುನಿರೋಧಕ, ಮೂತ್ರವರ್ಧಕವೆಂದು ಸಂಶೋಧನೆಗಳಿಂದಲೂ ಸಾಬೀತಾಗಿದೆ. ಆದರೂ ನಮಗೆ ನಾವೇ ಔಷಧಿಯಾಗಿ ಬಳಕೆ ಮಾಡಿಕೊಂಡರೆ ಅಪಾಯ ತಪ್ಪಿದ್ದಲ್ಲವೆಂಬುದನ್ನು ಗಮನಿಸಲೇಬೇಕಲ್ಲವೇ?... ಗರ್ಭಿಣಿಯರು, ಥೈರಾಯ್ಡ್ ಸಮಸ್ಯೆ ಇರುವವರು, ಏರು ರಕ್ತದೊತ್ತಡ ಇರುವವರು ಇಂತಹ ಸಸ್ಯಗಳ ಬಳಕೆಯ ಬಗ್ಗೆ ಜಾಗ್ರತೆ ವಹಿಸಲೇಬೇಕು. ವರ್ತಮಾನಕಾಲದಲ್ಲಿ ಕ್ಷಿಪ್ರವಾಗಿ ಗುಣಪಡಿಸುವ ಆಧುನಿಕ ಔಷಧಿಗಳಿದ್ದರೂ ದೀರ್ಘಕಾಲದ ಬಳಕೆಯಿಂದ ಅಡ್ಡ ಪರಿಣಾಮಗಳು ಹಾಗೂ ಹೆಚ್ಚಿನ ವೆಚ್ಚ ಕೂಡ ಮನುಕುಲಕ್ಕೆ ದೊಡ್ಡ ಅಪಾಯವನ್ನುಂಟುಮಾಡುತ್ತಿರುವುದರಿಂದ ಗಿಡಮೂಲಿಕೆಗಳತ್ತ ಇತ್ತೀಚೆಗೆ ಒಲವು ಹೆಚ್ಚಾಗಿದೆ. ಇದೀಗ ಕೃಷಿಕರಿಗೂ ಉತ್ಪಾದನೆಯ ಮೂಲವಾಗಿದೆ.

ಚಿತ್ರ - ಬರಹ : ವಿಜಯಾ ಬಿ ಶೆಟ್ಟಿ ಸಾಲೆತ್ತೂರು, ಬಂಟ್ವಾಳ