ನಿಷ್ಪಾಪಿ ಸಸ್ಯಗಳು (ಭಾಗ ೮೩) - ಕೈರಾಟಿಯ ಬಳ್ಳಿ

ನಿಷ್ಪಾಪಿ ಸಸ್ಯಗಳು (ಭಾಗ ೮೩) - ಕೈರಾಟಿಯ ಬಳ್ಳಿ

ನಾವು ಕಳೆದ ವಾರ ಪಾಶಾಣ ಭೇದವೆಂಬ ಬಲು ಉಪಕಾರಿಯಾದ ಸಸ್ಯವನ್ನು ಪರಿಚಯಿಸಿಕೊಂಡೆವು. ಇಂದು ನಿಮ್ಮನ್ನು ಒಂದು ಬಸ್ ನಿಲ್ದಾಣದ ಬಳಿಗೆ ಕರೆದೊಯ್ಯುತ್ತಿದ್ದೇನೆ. ನನ್ನ ಜೊತೆಗೆ ಬನ್ನಿ. ಇದು ವಿಟ್ಲದಿಂದ ಮುಡಿಪು ಕಡೆಗೆ ಹೋಗುವ ರಸ್ತೆ. ನಾವು ನಿಂತಿರುವ ಸ್ಥಳ ಸಾಲೆತ್ತೂರಿನ ಸಮೀಪದ ಕೊಡಂಗೆ ಎಂಬ ಸ್ಥಳದಲ್ಲಿರುವ ಬಸ್ ನಿಲ್ದಾಣ. ಇದೀಗ ಮಧ್ಯಾಹ್ನದ ಹೊತ್ತಾಗಿದ್ದರೂ ಈ ಬಸ್ ನಿಲ್ದಾಣವು ತುಂಬಾ ತಂಪಾಗಿರುವುದನ್ನು ಗಮನಿಸಿ. ಬಿಸಿಲಿನ ಝಳ ಯಾಕೆ ಹೊಡೆಯುತ್ತಿಲ್ಲ ಬಲ್ಲಿರಾ? ಹ್ಹಾಂ.. ಹೌದು, ಹತ್ತಿರದಲ್ಲಿ ಮರಗಳಿವೆ. ಅಷ್ಟು ಮಾತ್ರವಲ್ಲ, ಈ ಬಸ್ ನಿಲ್ದಾಣದ ಮೇಲ್ಗಡೆ ಹಾಕಿರುವ ತಗಡಿನ ಮಾಡನ್ನು ಒಂದು ನಿಷ್ಪಾಪಿ ಸಸ್ಯವಾಗಿರುವ ಬಳ್ಳಿಯೊಂದು ಆವರಿಸಿ ಬಿಟ್ಟಿದೆ! ನೀವು ಚಂದಕ್ಕೆಂದು ಹಬ್ಬಿಸಿದ ಬಳ್ಳಿಯ ತೆರನಾಗಿ ಮೇಲಿನಿಂದ ಕೆಳಕ್ಕೆ ಇಳಿಬಿದ್ದ ಚೆಲುವನ್ನು ನೋಡಿ. ಬಳ್ಳಿಯೂ ಕೂಡ ಅತ್ಯಂತ ವಿಶಿಷ್ಟವಾದುದು. ಬಳ್ಳಿ ನೆಲದಲ್ಲೆ ಇರುತ್ತಿದ್ದರೆ ಹಬ್ಬಿಕೊಳ್ಳಲು ಸ್ಥಳಾವಕಾಶ ಸಾಕಾಗುತ್ತಿರಲಿಲ್ಲವೋ ಏನೋ.. ಅದಕ್ಕಾಗಿ ಬಳ್ಳಿಯೂ ಉಪಾಯದಿಂದ ಮಾಡನ್ನೇರಿ ಸುತ್ತಲೂ ಬಿಳಲುಗಳನ್ನು ಚಾಚಿ ಕುಳಿತು ಪ್ರಯಾಣಿಸುವವರಿಗೆ ಟಾಟಾ ಮಾಡುತ್ತದೆಯೇನೊ ಅಂತನಿಸುತ್ತಿದೆ. 

ಈ ನಿಷ್ಪಾಪಿ ಸಸ್ಯವೇ ಕೈರಾಟಿಯ. ತುಳುವಿನಲ್ಲಿ ಕಂದಡಿ ಬೂರು, ಕನ್ನಡದಲ್ಲಿ ಕಾಮಾಪತಿಗೆ ಬಳ್ಳಿ ಎನ್ನುವರು. ಸಿಸ್ಸಸ್ ಪೆಡಾಟಾ ಇದರ ಮೂಲ ಹೆಸರು. ಇದು ವಿಟೇಸಿ ಕುಟುಂಬಕ್ಕೆ ಸೇರಿದೆ. Cayratia pedata ಇದರ ಜಾತಿಯ ಹೆಸರು. ಏಷ್ಯಾ, ಆಫ್ರಿಕಾ, ಆಸ್ಟ್ರೇಲಿಯಾ, ಫೆಸಿಫಿಕ್ ಸಾಗರದ ದ್ವೀಪಗಳ ಉಷ್ಣವಲಯ, ಉಪೋಷ್ಣವಲಯದ ಪ್ರದೇಶಗಳಲ್ಲಿ ಈ ಸಸ್ಯವು ಕಂಡುಬರುವುದಾದರೂ ನಮ್ಮ ಸನಿಹದ ಪಶ್ಚಿಮ ಘಟ್ಟಗಳಿಗೆ ಸ್ಥಳೀಯವಾಗಿದೆ. ಹಾಗಂತ ನಾವು ಸಂತಸ ಪಡುವ ಹಾಗೂ ಇಲ್ಲ. ಏಕೆಂದರೆ ಇದು ನಮ್ಮಲ್ಲಿ ತೀವ್ರವಾಗಿ ಅಳಿವಿನಂಚಿನಲ್ಲಿರುವ ಸಸ್ಯವೆಂದು ಗುರುತಿಸಿಕೊಂಡಾಗಿದೆ. ಪ್ರಕೃತಿಯನ್ನು ನಾಶಪಡಿಸುವ ಪ್ರಕ್ರಿಯೆಯಲ್ಲಿ ನಾವು ಮುಂಚೂಣಿಯಲ್ಲಿರುವುದರಿಂದ ಇಂತಹ ನಿಷ್ಪಾಪಿ ಸಸ್ಯಗಳೆಲ್ಲ ಕಣ್ಮರೆಯಾಗುತ್ತಾ ನಮ್ಮ ಭವಿಷ್ಯಕ್ಕೂ ಭಾಷ್ಯ ಬರೆಯುತ್ತಿವೆ ಎಂದನಿಸುತ್ತಿಲ್ಲವೇ?

ಈ ಕೈರಾಟಿಯ ಬಳ್ಳಿಯ ಲಾವಣ್ಯವನ್ನೊಮ್ಮೆ ಕಣ್ತುಂಬಿಕೊಳ್ಳುವ. 12ಮೀಟರ್ ನಷ್ಟು ಎತ್ತರ ಏರಬಲ್ಲ ಬಳ್ಳಿಯೇ ಆಗಿದ್ದರೂ ಪೊದೆ ಸಸ್ಯವೆಂದೇ ಗುರುತಿಸಲ್ಪಡುತ್ತದೆ. ನಮ್ಮಲ್ಲಿ ಬಯಲು ಪ್ರದೇಶ, ಕುರುಚಲು ಕಾಡು, ಕಲ್ಲಿನ ಪ್ರದೇಶ, ರಸ್ತೆ ಬದಿ, ತೇವಾಂಶ ಇರುವ ಕಾಡಿನಲ್ಲಿ ಕಾಣಿಸುತ್ತದೆ. 7 ಸೆಂ.ಮೀ ನಿಂದ 13 ಸೆಂ.ಮೀ ನಷ್ಟು ಉದ್ದದ ತೊಟ್ಟು ಹೊಂದಿರುವ ಮೂರೆಲೆ, ಐದೆಲೆಗಳ ಸಂಯುಕ್ತ ಸುಂದರ ಜೋಡಣೆ ಸರಳವಾಗಿದ್ದು ಬಳ್ಳಿಯುದ್ದಕ್ಕೂ ಪರ್ಯಾಯವಾಗಿರುತ್ತದೆ. ಎಲೆಗಳಿಗೆ ವಿಶೇಷವಾದ ವಾಸನೆ ಹಾಗೂ ಕಹಿ ರುಚಿಯಿದೆ. ಕಂಕುಳಲ್ಲಿ ಪುಷ್ಪಮಂಜರಿಯ ಸೊಬಗನ್ನೊಮ್ಮೆ ನೋಡಿ!. ಹಸಿರು ಮೊಗ್ಗುಗಳ ಗುಚ್ಛ!. ಅದರೊಳಗೆ ಅಲ್ಲಲ್ಲಿ ಹಸಿರಾದ ಪುಷ್ಪಪಾತ್ರೆಯೊಳಗೆ ಶಿಶುಗಳಂತೆ ಮೂರ್ನಾಲ್ಕು ಮಿ.ಮೀ ನಷ್ಟು ದೊಡ್ಡದಾಗಿ ಅರಳಿದ ಪುಟಾಣಿ ಹೂಗಳು ಇರುವೆ ಹಾಗೂ ಸಣ್ಣ ಪುಟ್ಟ ಕೀಟ ಪ್ರಪಂಚಕ್ಕೆ ಬದುಕಿನ ಆಧಾರವಾಗುತ್ತವೆ. ಆ ಬಳಿಕ ಉದಯಿಸುವ ಗೋಳಾಕಾರದ ಪುಟ್ಟ ಪುಟ್ಟ ಕಾಯಿಯೊಳಗೆ ಎರಡು ನಾಲ್ಕು ಬೀಜಗಳಿದ್ದು ಹಣ್ಣಾದಾಗ ಪಕ್ಷಿಗಳಿಗೆ ಔತಣವಾಗುತ್ತವೆ. ಅಡ್ಡಾದಿಡ್ಡಿ ಬೆಳೆಯುತ್ತಾ ಹಂದರವಾಗಿ ಈ ತಗಡಿನ ಮಾಡನ್ನೇ ಆಶ್ರಯಿಸಿಕೊಂಡು ಮತ್ತೆ ಮುಂದುವರಿಯಲು ಆಧಾರ ಹುಡುಕುತ್ತಾ ಜೋತು ಬಿದ್ದು ತೊನೆದಾಡುತ್ತಾ ಜೀಕುತ್ತಿರುವ ಈ ಬಳ್ಳಿಗೆ ಪ್ರಕೃತಿ ಎಷ್ಟು ಸುಂದರವಾದ ಬದುಕನ್ನು ನೀಡಿದೆಯಲ್ಲವೇ!.

ನಮ್ಮ ಪುರಾತನ ಬುಡಕಟ್ಟುಗಳ ಜನರು ತಮ್ಮ ಹಲವಾರು ಔಷಧೀಯ ಉದ್ದೇಶಗಳಿಗೆ ಈ ಕೈರಾಟಿಯ ಬಳ್ಳಿಯ ಕಾಂಡ, ಎಲೆಗಳನ್ನು ಬಳಸುತ್ತಿದ್ದರೆನ್ನಲಾಗುತ್ತದೆ. ಏಕೆಂದರೆ ಈಗಲೂ ಪಾರಂಪರಿಕವಾಗಿ ಈ ಸಸ್ಯದ ಔಷಧೀಯ ಬಳಕೆಯಿದೆ. ಅತಿಸಾರ, ಸಂಕೋಚಕ, ಶೀತಕ, ಹಿಸ್ಟೀರಿಯಾ, ಗಾಯ ಗುಣಪಡಿಸುವಿಕೆ, ಉರಿಯೂತ, ರಕ್ತಸ್ರಾವ, ಯಕೃತ್ತಿನ ಕಾಯಿಲೆಗಳಿಗೆ ಬಳಕೆ ಮಾತ್ರವಲ್ಲದೆ ಈ ಸಸ್ಯದ ಸಾರ ಕ್ಯಾನ್ಸರ್ ವಿರೋಧಿ, ಸಂಧಿವಾತ ವಿರೋಧಿ, ಬ್ಯಾಕ್ಟೀರಿಯಾ ವಿರೋಧಿ, ನಂಜು ನಿರೋಧಕ ಗುಣಗಳನ್ನು ಹೊಂದಿದೆ ಎಂದು ಸಂಶೋಧನೆಗಳಾಗಿವೆ. ಜಾನವಾರುಗಳ ಆರೋಗ್ಯ ಸಮಸ್ಯೆಗಳಿಗೂ ಪರಿಹಾರವಾಗಿ ಈ ಬಳ್ಳಿಯನ್ನು ಬಳಸುತ್ತಾರೆ. ಸರಿ ಸುಮಾರು ಪ್ರಪಂಚದ ಜನಸಂಖ್ಯೆಯ 60% ಜನರು ಇನ್ನೂ ತಮ್ಮ ಪ್ರಾಥಮಿಕ ಆರೋಗ್ಯ ರಕ್ಷಣೆಗಾಗಿ ಔಷಧೀಯ ಸಸ್ಯಗಳನ್ನು ಅವಲಂಬಿಸಿದ್ದಾರೆಂದು ಅಂಕಿ ಅಂಶಗಳು ಹೇಳುತ್ತಿರುವುದನ್ನು ಗಮನಿಸಿದರೆ ಈ ಗಿಡಮೂಲಿಕೆಗಳ ಮಹತ್ವದ ಅರಿವಾಗದಿರದು. ನಾವು ಈ ಸಸ್ಯಗಳನ್ನು ರಕ್ಷಿಸಿಕೊಂಡು ಅವುಗಳ ಬದುಕುವ ಹಕ್ಕನ್ನು ಕಾಯ್ದುಕೊಂಡು ನಮಗಾಗಿ ಸುರಕ್ಷಿತ ಔಷಧಿ ಪಡೆಯುವ ಬಗ್ಗೆ ಸಂಶೋಧನೆಗಳಾಗುವಂತೆ ಪ್ರಯತ್ನಿಸಬೇಕಾಗಿದೆ ಎಂದನಿಸುತ್ತಿಲ್ಲವೇ?

ಚಿತ್ರ - ಬರಹ : ವಿಜಯಾ ಬಿ ಶೆಟ್ಟಿ ಸಾಲೆತ್ತೂರು, ಬಂಟ್ವಾಳ