ನಿಷ್ಪಾಪಿ ಸಸ್ಯಗಳು (ಭಾಗ ೮೪) ಕ್ರೋಟನ್ ಸಸ್ಯಗಳು

ನಿಷ್ಪಾಪಿ ಸಸ್ಯಗಳು (ಭಾಗ ೮೪) ಕ್ರೋಟನ್ ಸಸ್ಯಗಳು

ನಾವು ಈ ಬಾರಿ ಒಂದು ನರ್ಸರಿ ಗೆ ಭೇಟಿ ನೀಡೋಣವೇ? ನರ್ಸರಿ ಎಂದರೆ ನೆಡಲು ಸಿದ್ಧಗೊಳಿಸಿದ ಗಿಡಗಳನ್ನು ಪೋಷಿಸಿ ಮಾರುವ‌ ಸ್ಥಳ. ನಾವೀಗ ಹೋಗುತ್ತಿರುವ ನರ್ಸರಿ ಬಂಟ್ವಾಳ ತಾಲೂಕಿನ ಮುಡಿಪು ಎಂಬಲ್ಲಿ ಮುಖ್ಯರಸ್ತೆಗೆ ತಾಗಿಕೊಂಡಿದೆ. ಬನ್ನಿ , ನರ್ಸರಿಯ ಒಳಗೆ ಹೋಗೋಣ. ಕಣ್ಣಿಗೆ ತಂಪು ನೀಡುವ, ಮನಸನ್ನು ಮುದಗೊಳಿಸುವ, ನಮ್ಮನ್ನೇ ನಾವು ಮರೆಯುವಂತೆ ಮಾಡುವ ಈ ಗಿಡಗಳನ್ನೊಮ್ಮೆ ನೋಡಿರಿ. ಇದೊಂದು ಪುಟಾಣಿ ಉದ್ಯಾನವನ! ತರಹಾವರಿ ಹೂಗಳಿಂದ ಅಲಂಕರಿಸಲ್ಪಟ್ಟ ದಾಸವಾಳ, ಗುಲಾಬಿಗಳೇ ಬಹುಪಾಲು ತುಂಬಿದೆಯಲ್ಲವೇ? ಇನ್ನು ಸ್ವಲ್ಪ ಹೆಚ್ಚು ಆಕರ್ಷಕವಾಗಿ ಯಾವ ಗಿಡಗಳು ಕಾಣಿಸುತ್ತಿವೆ ನೋಡಿ. ಹ್ಹಾಂ.. ಹೌದು. ಅವು ಕ್ರೋಟನ್‌ ಗಿಡಗಳು!

ಇಂದು ನಾವು ಪರಿಚಯ ಮಾಡಿಕೊಳ್ಳಲಿರುವ ಗಿಡಗಳೇ ಕ್ರೋಟನ್. ಅದ್ಭುತ ಬಣ್ಣಗಳ ಸಂಯೋಜನೆ, ಎಲೆಗಳ ಹೊಳಪು, ತರಹಾವರಿ ಸ್ವರೂಪದ ವಿಲಕ್ಷಣ ಎಲೆಗಳು ಎಂತಹ ಹೃದಯವನ್ನೂ ಸೂಜಿಗಲ್ಲಿನಂತೆ ಸೆಳೆಯಬಲ್ಲದು. ಇಲ್ಲಿ ನೋಡಿ.. ಎಷ್ಟೊಂದು ವಿಧದ ಪುಟಾಣಿ ಕ್ರೋಟನ್ ಗಿಡಗಳಿವೆ! ಎಲ್ಲವೂ ಸಣ್ಣ ಪುಟ್ಟ ಚಟ್ಟಿಗಳಲ್ಲೇ ಇವೆ. ಏಕೆಂದರೆ ಇವು ಆರೆಂಟು ಅಡಿ ಬೆಳೆಯಬಲ್ಲ ಗಟ್ಟಿ ಸಸ್ಯಗಳು. ಚಟ್ಟಿಯಲ್ಲಿಯೂ ಬೆಳೆಸಬಹುದು. ಬೇಲಿ, ಉದ್ಯಾನ, ಮನೆಯ ಹೂದೋಟದಲ್ಲಿ ಭೂದೃಶ್ಯದ ಸೌಂದರ್ಯ ವೃದ್ಧಿಗೂ ಬೆಳಸಬಹುದು.

ಶಾಸ್ತ್ರೀಯವಾಗಿ ಕೋಡಿಯಮ್ ಪೆರಿಗಾಟಮ್ ಎಂಬ ಹೆಸರುಳ್ಳ ಕ್ರೋಟನ್ ಗಿಡಗಳು ಯೂಫೋರ್ಬಿಯೇಸಿ ಕುಟುಂಬದ ಸದಸ್ಯ ಸಸ್ಯಗಳು. ಇದು ಉಷ್ಣವಲಯದ ಪೊದೆ ಸಸ್ಯ. ಆಗ್ನೇಯ ಏಷ್ಯಾ, ಫೆಸಿಫಿಕ್ ದ್ವೀಪಗಳಿಗಿದು ಸ್ಥಳೀಯವಾಗಿದೆ. ಕಳೆದ ಶತಮಾನದಲ್ಲಿ ಯುರೋಪನ್ನು ಪ್ರವೇಶಿಸಿ ಬ್ರಿಟಿಷರ ಆಳ್ವಿಕೆಯಲ್ಲಿ ಭಾರತವನ್ನು ಪ್ರವೇಶಿಸಿ ನಲ್ವತ್ತು ಐವತ್ತು ವರ್ಷಗಳಿಂದೀಚೆಗೆ ಮನೆಮನೆಯಲ್ಲೂ ಕಾಣಿಸತೊಡಗಿತು.

ಆರ್ದ್ರ ವಾತಾವರಣ ಇಷ್ಟಪಡುವ ಈ ಬಣ್ಣದ ಗಿಡಗಳಲ್ಲಿ ಹಲವು ಪ್ರಭೇದಗಳಿವೆ. ಗಾಢ ಹಳದಿ, ನಸು ಹಳದಿ, ಬಿಳಿ, ಕಿತ್ತಳೆ, ಗುಲಾಬಿ, ಕೆಂಪು, ನಸುಗೆಂಪು, ಕಡುಗೆಂಪು, ನೇರಳೆಯವರೆಗೆ ಬಣ್ಣಗಳ ಸಂಯೋಜನೆ ಯಲ್ಲಿ ಉಜ್ವಲ ಬಣ್ಣದ ಎಲೆಗಳು ಎಲ್ಲೆಡೆಯೂ ಸ್ಥಾನಮಾನ ಗಳಿಸಲು ಕಾರಣವಾಗಿವೆ. ಈ ಅದ್ಭುತ ಬಣ್ಣಗಳಿಗೆ ಕಾರಣವಾಗುವುದು ಎಲೆಗಳಲ್ಲಿರುವ ಅಂಥೋಸಯಾನಿನ್ ಎಂಬ ರಾಸಾಯನಿಕ ವಸ್ತು. ಇತರ ಸಸ್ಯಗಳಂತೆಯೇ ಉಸಿರಾಟ ಹಾಗೂ ಆಹಾರ ತಯಾರಿಯನ್ನು ನಡೆಸುತ್ತವೆ.

ಎಲೆಗಳ ವರ್ಣವಿನ್ಯಾಸವನ್ನು ಗಮನಿಸಿ. ಗಿಡದ ಬುಡದಲ್ಲಿ ಎರಡು ಮೂರು ಮುಖ್ಯ ಕಾಂಡಗಳಿದ್ದು ಮೇಲೇರಿದಂತೆ ಮಿತವಾಗಿ ಕವಲುಗಳೊಡೆದು ಆಕರ್ಷಕ ಬಣ್ಣ ಹಾಗೂ ವಿನ್ಯಾಸದ ಸರಳ ಪರ್ಯಾಯ ಎಲೆಗಳು ಹರಡಿಕೊಳ್ಳುತ್ತವೆ. ಸಣ್ಣ ತೊಟ್ಟನ್ನು ಹೊಂದಿದ ಎಲೆಗಳು ಅಂಡಾಕಾರವಾಗಿರಬಹುದು, ತೆಳ್ಳಗಿನ , ದಪ್ಪಗಿನ, ತುದಿ ಮೊನಚಾದ, ತುದಿ ಮೊಂಡಾದ, ಅಂಚುಗಳು ವಕ್ರವಾದ, ಅಲೆಗಳಂತಿರುವ, ಉದ್ದುದ್ದದ, ಕಿರುಬೆರಳ ಗಾತ್ರದ ಎಲೆಗಳು ಒಟ್ಟಿನಲ್ಲಿ ಆಕರ್ಷಕ ಬಣ್ಣಗಳೊಂದಿಗೆ ಕಣ್ಣಿಗೆ ಹಬ್ಬ ನೀಡುತ್ತವೆ.

ಇಷ್ಟು ಸುಂದರವಾದ ಎಲೆಗಳನ್ನು ಹೊಂದಿರುವ ಕ್ರೋಟನ್ ಗಿಡಗಳಿಗೆ ಸಪ್ಪೆ ಎನಿಸುವ ಹೂಗೊಂಚಲುಗಳು ಮೂಡುತ್ತವೆ. ಅನಾಕರ್ಷಕವಾದ ಈ ಪುಷ್ಪಮಂಜರಿಗಳು ಎಲೆಗಳ ಕಂಕುಳಲ್ಲಿ ಹುಟ್ಟುತ್ತವೆ. ಒಂದೇ ಹೂಗೊಂಚಲಲ್ಲಿ ಗಂಡುಹೂಗಳು ಹಾಗೂ ಹೆಣ್ಣು ಹೂಗಳಿರುತ್ತವೆ. ಪುಟಾಣಿ ಕಾಯಿಗಳು ಹಣ್ಣಾಗಿ ಹೊಸ ಸಸ್ಯವಾಗಬಹುದಾರೂ ತಾಯ್ತಂದೆಯರ ಗುಣಲಕ್ಷಣ ಹೊಂದುವುದು ವಿರಳ. ಎರಡರಿಂದ ಐದು ಎಲೆಗಳಿರುವ ಸಣ್ಣ ತುಂಡೊಂದನ್ನು ಮರಳು ಮಿಶ್ರಿತ ಮಣ್ಣಿನಲ್ಲಿ ನೆಟ್ಟು ನೀರೆರೆದರೆ ಕೆಲವೇ ದಿನಗಳಲ್ಲಿ ಚಿಗುರಿ ಕಣ್ಣುಮಿಟುಕಿಸುತ್ತವೆ. ಇಲ್ಲೆಲ್ಲಾ ಕಾಣಿಸುವ ಗಿಡಗಳನ್ನು ಹಾಗೆಯೇ ತಯಾರಿಸಿದ್ದಾರೆ. ಗಿಡದ ರಸ ಹೀರುವ ಬಿಳಿ ತಿಗಣೆ, ಕೆಂಪು ಜೇಡದಂತಹ ಕೀಟಗಳ ಹಾವಳಿ ಇದಕ್ಕಿದ್ದು ಗಿಡ ಸಾಯುವ ಸಾಧ್ಯತೆಯೂ ಇದೆ. ಮನುಷ್ಯರಿಗೂ ಈ ಗಿಡಗಳು ಅಲರ್ಜಿ ಉಂಟುಮಾಡಬಹುದು.‌ ಆದರೆ ಮೂತ್ರ ವ್ಯಾಧಿ, ಮಲವಿಸರ್ಜನೆಗೆ ಸಹಾಯಕ. ಫೆಸಿಫಿಕ್ ಸಾಗರ ದ್ವೀಪದಲ್ಲಿ ಕ್ರೋಟನ್ ಎಲೆಗಳ ಗುಚ್ಛವನ್ನು ನೀಡುವುದು ಗೌರವ ಸೂಚಕವಾಗಿದೆ. ಕ್ರೋಟನ್ ಗಿಡಗಳಿಗೆಲ್ಲಾ ಕೇವಲ ಕ್ರೋಟನ್ ಅನ್ನೋದೇ ಹೆಸರಲ್ಲ. 

ಪ್ರಕಾಶಮಾನವಾದ ಹಳದಿ ಚುಕ್ಕೆಗಳ ದುಂಡಗಿನ ಎಲೆಗಳ ಗಿಡವನ್ನು ಗೋಲ್ಡ್ ಡಸ್ಟ್ , ಹಸಿರು ವರ್ಣದ ಗುಲಾಬಿ ವರ್ಣದ ಅಗಲವಾದ ಎಲೆಗಳಿರುವ ಗಿಡ ಐಸ್ಟಾನ್, ಕೆಂಪು ಹಳದಿ ಚುಕ್ಕೆಯ ತೆಳುವಾದ ಉದ್ದ ಎಲೆಯ ಗಿಡ ಜಿಂಜಿಬಾರ್, ಹಸಿರು ಕೆಂಪು ಹಳದಿ ಗೆರೆಗಳಿರುವ ಅಗಲ ಎಲೆಗಳ ಗಿಡ ನಾರ್ಮಾ, ಹಸಿರು ಹಳದಿ ಕೆಂಪು ಮಿಶ್ರ ಬಣ್ಣದ ವಕ್ರ ವಕ್ರವಾದ ಉದ್ದ ಎಲೆಯ ಗಿಡ ಮಮ್ಮಿ , ಎಲೆಯ ತುದಿಯಲ್ಲಿ ಮತ್ತೊಂದು ಸಣ್ಣ‌ ಎಲೆ ಇದ್ದರೆ ತಾಯಿಮಗಳು ಹೀಗೆ ಎಲ್ಲಾ ಬಗೆಯ ಗಿಡಗಳಿಗೂ ಪ್ರತ್ಯೇಕ ಪ್ರತ್ಯೇಕ ವಾದ ಹೆಸರುಗಳಿವೆ. ಹೆಸರುಗಳು ಅವುಗಳ ವಿಶೇಷತೆಗಳಿಗೆ ಅನುಗುಣವಾಗಿದೆ!

ಸುಂದರ, ಸುಪ್ರಸಿದ್ದ, ಸಸ್ಯಲೋಕದ ಕಿನ್ನರ ಕಿಂಪುರುಷರೆಂದರೆ ಈ ಕ್ರೋಟನ್ ಗಿಡಗಳು. ಆಗಾಗ ಸವರುತ್ತಿದ್ದರೆ ಬೇಕಾದ ಗಾತ್ರ, ಆಕಾರ ನೀಡಬಹುದು. ಕಛೇರಿ, ಸಭಾಂಗಣ, ಕಾರ್ಯಸ್ಥಳ, ಹಬ್ಬಗಳು, ವಿವಾಹದಂತಹ ಸಮಾರಂಭಗಳು, ವ್ಯಾಪಾರೀ ಸ್ಥಳಗಳು, ಗಣ್ಯರ ಮಾತುಕತೆಯ ಒಳಾಂಗಣಗಳ ಶೋಭೆ ಹೆಚ್ಚಿಸಲು ನಿಷ್ಪಾಪಿ ಕ್ರೋಟನ್ ಗಳ ಬಳಕೆಯೇ ಅಧಿಕ. 

ಚಿತ್ರ - ಬರಹ : ವಿಜಯಾ ಬಿ ಶೆಟ್ಟಿ ಸಾಲೆತ್ತೂರು, ಬಂಟ್ವಾಳ