ನಿಷ್ಪಾಪಿ ಸಸ್ಯಗಳು (ಭಾಗ ೮೫) - ನಾಚಿಗೆ ಮುಳ್ಳು

ನಿಷ್ಪಾಪಿ ಸಸ್ಯಗಳು (ಭಾಗ ೮೫) - ನಾಚಿಗೆ ಮುಳ್ಳು

ಇಂದು ನಾವು ರೈತರೊಬ್ಬರನ್ನು ಭೇಟಿಯಾಗೋಣ ಬನ್ನಿ. ಇವರು ನಾಟಿ ವೈದ್ಯರೂ ಹಾಗೂ ಕೃಷಿಕರು. ಇವರ ಹೆಸರು ಸೋಮಪ್ಪ. ಇವರ ಮನೆ ಹಲಸು, ಗೇರು ಮರಗಳ ನಡುವೆ ಕಲೆಂಜಿಮಲೆ ಎಂಬ ಕಾಡಿನ ಅಂಚಿನಲ್ಲಿದೆ. ಬನ್ನಿ, ಇಂದು ಅವರನ್ನೇ ಮಾತನಾಡಿಸುತ್ತಾ ಹೊಸ ಸಸ್ಯವೊಂದರ ಪರಿಚಯ ಮಾಡಿಕೊಳ್ಳೋಣ. ಅಂಗಳದಲ್ಲಿ ಕುಳಿತ ಅವರೇನು ಮಾಡುತ್ತಿದ್ದಾರೆ ನೋಡಿ. ನಾಚಿಗೆ ಮುಳ್ಳಿನ ಬಳ್ಳಿಗಳನ್ನು ಮುಷ್ಟಿ ತುಂಬಾ ಹಿಡಿದು ಮರದ ತುಂಡೊಂದರ ಮೇಲಿಟ್ಟು ಕತ್ತಿಯಿಂದ ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡುತ್ತಿದ್ದಾರೆ. ನಾಚಿಗೆ ಮುಳ್ಳು ಅಂದರೆ ಮೈಮೇಲೆ ಇಡೀ ಮುಳ್ಳುಗಳಿರುವ ಗಿಡ. ಕೈ ಕಾಲಿಗೆ ಚುಚ್ಚಿದರೆ ಬಹಳ ನೋವು ಮತ್ತು ನಂಜಿನಿಂದ ಕೂಡಿರುತ್ತದೆ. ಆದರೂ ಅದನ್ನು ಜಾಗರೂಕತೆಯಿಂದ ಹಿಡಿದು ಸಣ್ಣದಾಗಿ ತುಂಡರಿಸುತ್ತಿದ್ದಾರೆ ! ಏಕಿರಬಹುದು? ಅವರಲ್ಲೇ ಕೇಳಿ ತಿಳಿಯೋಣ..

ಸಜ್ಜಾದ್ : ಸರ್ ನಮಸ್ತೆ. ನಾವು ಇಲ್ಲೇ ಹತ್ತಿರದ ಮಲಾರು ಶಾಲೆಯ ಮಕ್ಕಳು. ಈ ನಾಚಿಗೆ ಮುಳ್ಳಿನ ಗಿಡವನ್ನು ಯಾಕಾಗಿ ಹೀಗೆ ಕತ್ತರಿಸುತ್ತಿದ್ದೀರಿ? ನಮಗೆ ಈ ಗಿಡವನ್ನು ಮುಟ್ಟಲಿಕ್ಕೇ ಭಯ!

ಸೋಮಪ್ಪ: ನಮಸ್ತೆ ಮಕ್ಕಳೇ. ನೀವು ಈ ಗಿಡದ ಮುಳ್ಳಿಗೆ ಹೆದರೋದು ಸಹಜವೇ. ನಮಗಿದು ಅಭ್ಯಾಸವಾಗಿದೆ.

ರವಿ: ಅಬ್ಬಾ! ನೀವಿದನ್ನು ಹೀಗೆ ತುಂಡುಮಾಡಿ ಏನು ಮಾಡುವಿರಿ?

ಸೋಮಪ್ಪ: ಮಕ್ಕಳೇ, ಇದು ಜಾನುವಾರುಗಳಿಗೆ ಉತ್ತಮ ಆಹಾರ. ನಮ್ಮ ಕೊಯ್ಲು ಮುಗಿದ ಗದ್ದೆ, ಅಡಿಕೆ ತೋಟ, ಗದ್ದೆಯ ಬದುಗಳು, ಬೆಟ್ಟು ಗದ್ದೆಗಳಲ್ಲಿ ಈ ನಾಚಿಕೆ ಮುಳ್ಳಿನದ್ದೇ ಕಾರುಬಾರು. ಅವುಗಳನ್ನು ಬೇರು ಸಮೇತ ತಂದು ಹೀಗೆ ತುಂಡು ಮಾಡಿ ಅಕ್ಕಿ ತೌಡಿನ ಜೊತೆ ಬೇಯಿಸಿ ಕೊಟ್ಟರೆ ದನಕರುಗಳು ತಿನ್ನುತ್ತವೆ. ನಾಚಿಕೆ ಮುಳ್ಳಿನ ಗಿಡವನ್ನು ಅಡಿಕೆ, ತೆಂಗಿನ ಗಿಡಗಳ ಬುಡಕ್ಕೆ ಹಸಿರು ಗೊಬ್ಬರವಾಗಿಯೂ ಬಳಸಬಹುದು.

ಆಶಾ: ನಾಚಿಕೆ ಮುಳ್ಳು ನಮ್ಮ ಆಡು ಭಾಷೆಯ ಹೆಸರಲ್ವೇ. ಇದಕ್ಕೆ ಬೇರೆ ಯಾವ ಹೆಸರುಗಳಿವೆ ಟೀಚರ್?

ಶಿಕ್ಷಕಿ: ಆಶಾ.. ಇದು ಫೆಬಾಸಿಯೇ ಕುಟುಂಬದ ಮಿಮೋಸ ಕುಲಕ್ಕೆ ಸೇರಿದ ಸಸ್ಯ. ಮಿಮೋಸಾ ಪುಡಿಕಾ (Mimosa Pudica) ಸಸ್ಯ ಶಾಸ್ತ್ರೀಯ ಹೆಸರು. ಕನ್ನಡದಲ್ಲಿ ಮುಡುಗುದಾವರೆ, ಮುಟ್ಟಿಲಮುರುಕ, ಗಂಡಸಾಲೆ, ನಮಸ್ಕಾರಿ, ಪತಿವೃತೆ, ಲಜ್ಜಾವತಿ ಎಂಬೆಲ್ಲಾ ಹೆಸರುಗಳಿವೆ. ಇಂಗ್ಲಿಷ್ ನಲ್ಲಿ ಟಚ್ ಮಿ ನಾಟ್, ಹಿಂದಿಯಲ್ಲಿ ಚುಯ್ ಮುಯ್ ಎನ್ನುವರು.

ಸ್ವಾಫಿಯ: ಹೋ...ಸುಂದರವಾದ ಹೆಸರುಗಳು ! .. ಅಂಜಲೀ ಅಂತಲೂ ಹೇಳುತ್ತಾರಲ್ಲಾ ಟೀಚರ್?

ಶಿಕ್ಷಕಿ: ಹೌದು ಸ್ವಾಫಿಯ. ಇದರ ಎಲೆಗಳು ಬೊಗಸೆಯನ್ನು ಹೋಲುವ ಕಾರಣ ಅಂಜಲೀಕಾರಿಕೆ ಎನ್ನುವರು. ಕೈ ಮುಗಿದ ಭಂಗಿಯ ವಿಗ್ರಹಕ್ಕೆ ಶಿಲ್ಪಶಾಸ್ತ್ರ ದಲ್ಲಿ ಅಂಜಲಿಕಾರಿಕೆ ಎನ್ನುವರು. ಇದರ ಎಲೆಗಳು ಹಾಗೆಯೇ ಕಾಣಿಸುತ್ತದೆ ಎಂಬ ಕಾರಣಕ್ಕೆ ಈ ಹೆಸರು ಬಂದಿದೆ.

ಸೋಮಪ್ಪ: ಮಕ್ಕಳೇ ಈ ಕಡೆಗೆ ಬನ್ನಿ. ಇದು ಗೋಬರ್ ಗ್ಯಾಸ್ ಇರುವ ಸ್ಥಳ. ಇಲ್ಲಿ ವಿಶಾಲವಾಗಿ ಹರಡಿರುವ ಹಸಿರು ಹಸಿರಾದ ನಾಚಿಕೆಮುಳ್ಳಿನ ಗಿಡಗಳನ್ನು ನೋಡಿರಿ. ಎಲೆ, ಚಿಗುರುಹೂ, ಮುಳ್ಳು, ಕಾಯಿಗಳನ್ನು ಗಮನಿಸಿರಿ. ಅವುಗಳನ್ನು ಮುಟ್ಟಿದಾಗ ಗಿಡದಲ್ಲಾಗುವ ವ್ಯತ್ಯಾಸ ಗಮನಿಸಿ.

ಸಜ್ಜಾದ್: ಪ್ರತೀ ಎಲೆ 2, 4 ವರ್ಣಕಗಳಲ್ಲಿ ಹತ್ತಿಪ್ಪತ್ತು ಕಿರು ಎಲೆಗಳಿವೆ. ಮೈತುಂಬಾ ಇರುವ ಚೂಪಾದ ಮುಳ್ಳುಗಳ ತುದಿಗಳು ಬಾಗಿವೆ.

ಶಶಿಕಲಾ: ಟೀಚರ್, ನಾನು ಈ ಎಲೆಗಳನ್ನು ಸ್ವಲ್ಪ ಮುಟ್ಟಿದೆ. ತಕ್ಷಣ ಮುದುಡಿಕೊಂಡಿತು. ಅದೇಕೆ?

ಟೀಚರ್: ಮಕ್ಕಳೇ, ಇದೇ ಈ ಸಸ್ಯದ ವೈಶಿಷ್ಟ್ಯ. ಇದರ ಎಲೆಗಳು ಬೆಳಕು, ಕಂಪನ, ಸ್ಪರ್ಶಗಳಿಗೆ ಸಂವೇದನೆ, ಪ್ರತಿಕ್ರಿಯೆ ವ್ಯಕ್ತಪಡಿಸುತ್ತವೆ. ಚೋದಕಗಳಿಗೆ ಒಡ್ಡಿದಾಗ ಮೊದಲ ಈ ಕಿರಿ ಎಲೆಗಳು ಮೇಲ್ಮುಖವಾಗಿ ಮುದುಡಿಕೊಂಡು ಒಂದನ್ನೊಂದು ಕೂಡಿಕೊಳ್ಳುತ್ತವೆ. ಈ ಚಲನೆ ಕೇಂದ್ರಾಭಿಮುಖವಾಗಿ ಮುಂದುವರಿದು ಎಲೆಯ ತೊಟ್ಟು ಕೊಂಬೆಗಳಿಗೆ ತಲುಪಿ ಅವೂ ಶೀಘ್ರವಾಗಿ ಮುಚ್ಚಿಕೊಳ್ಳುತ್ತವೆ.

ರವಿ: ನಾವು ಸ್ವಲ್ಪ ಮೆಲ್ಲ ಮುಟ್ಟಿದರೆ ಮುದುಡುವಿಕೆಯೂ ಕಡಿಮೆಯೇ ಇರುತ್ತದೆ ಅಲ್ಲವೇ?

ಟೀಚರ್: ಹೌದು ಹೌದು. ಈ ಮುದುಡುವಿಕೆಯ ತೀವ್ರತೆ ಕ್ರಿಯೆಗೆ ತಕ್ಕುದಾದ ಪ್ರತಿಕ್ರಿಯೆಯಾಗಿರುತ್ತದೆ. ತೀವ್ರ ಕ್ರಿಯೆ ನಡೆದಾಗ ಪ್ರತಿಕ್ರಿಯೆಯೂ ಕ್ಷಿಪ್ರವಾಗಿರುತ್ತದೆ. ಈ ಎಲೆಗಳು ಮೊದಲಿನಂತಾಗಲು ಎಂಟು ಹತ್ತು ನಿಮಿಷಗಳೇ ಬೇಕು.

ಸ್ವಾಫಿಯ: ಟೀಚರ್.. ಅದೇಕೆ ಹಾಗೆ ಮುದುರಿಕೊಳ್ಳುತ್ತವೆ? ನಾವೇಕೆ ಹಾಗೆ ಮಾಡುತ್ತಿಲ್ಲ?

ಟೀಚರ್: ಸರಿಯಾದ ಪ್ರಶ್ನೆಯನ್ನೇ ಕೇಳಿದೆ ಸ್ವಾಫಿಯ. ಎಲೆಗಳ ತೊಟ್ಟಿನ ಉಬ್ಬಿದ ಬುಡದಲ್ಲಿ ಇರುವ ಜೀವಕೋಶಗಳ ಆರ್ದ್ರತಾ ಸಂವೇದನಾ ಶೀಲತೆ ಇದಕ್ಕೆ ಕಾರಣವಾಗಿದೆ. ಇದನ್ನು ಸ್ಪರ್ಶಾನುಕುಂಚನ ಅಥವಾ ಕಂಪನಾನುಕುಂಚನ ಎನ್ನುವರು. ಒತ್ತಡ ಬಿದ್ದಾಗ ಎಲೆಯ ಕೋಶಗಳು ತಮ್ಮಲ್ಲಿರುವ ಪೊಟಾಷಿಯಂ ಅಯಾನುಗಳನ್ನು ಕಳೆದುಕೊಳ್ಳುತ್ತವೆ. ಒಸ್ಮಾಸಿಸ್ ಎಂಬ ರಾಸಾಯನಿಕ ಕ್ರಿಯೆಯ ಮೂಲಕ ಕೋಶಗಳಿಂದ ನೀರಿನ ಅಂಶ ಹೊರ ಹೋಗುತ್ತದೆ. ಇದರಿಂದ ಎಲೆಗಳು ಮುದುಡುತ್ತವೆ. ಇದನ್ನು ಟರ್ಜಿಡಿಟಿ ಎಂದೂ ಕರೆಯುವರು. ಸಸ್ಯದೊಳಗಿನ ಈ ವಿದ್ಯುತ್ ಸಂಕೇತಗಳು ಒಂದಕ್ಕೊಂದು ತಗಲುತ್ತಾ ಇಡೀ ಸಸ್ಯಕ್ಕೆ ಸಂಪೂರ್ಣವಗಿ ಹರಡಿಕೊಳ್ಳುತ್ತಾ ಗಿಡವಿಡೀ ಮುದುಡಿ ನಿಲ್ಲುತ್ತದೆ.

ಸೋಮಪ್ಪ: ಮಕ್ಕಳೇ, ಇದರಿಂದ ಗಿಡಕ್ಕೊಂದು ಪ್ರಯೋಜನವಿದೆ ಗೊತ್ತಾ ನಿಮಗೆ? ಇದು ತುಂಬಾ ಸೂಕ್ಷ್ಮವಾದ ಸಸ್ಯ. ಹುಳ ಹುಪ್ಪಟೆ, ಮೊಲ, ಜಿಂಕೆ, ಆಡು, ಕುರಿಗಳಿಗೆ ಇದರ ಎಲೆಗಳು ಬಹಳ ಇಷ್ಟ. ಆದರೆ ಈ ಮುದುಡುವ ಪ್ರಕ್ರಿಯೆಯಿಂದಾಗಿ ಅವುಗಳಿಗೆ ಮೇಯಲು ಎಲೆಗಳು ಸಿಗದೆ ಕೇವಲ ಮುಳ್ಳುಗಳಿಂದ ಚುಚ್ಚಿಸಿಕೊಳ್ಳಬೇಕಾಗುತ್ತದೆ!. ಹೀಗೆ ಸಸ್ಯವು ತನ್ನ ರಕ್ಷಣೆಯನ್ನೂ ಮಾಡಿಕೊಳುತ್ತದೆ.

ರವಿ: ಟೀಚರ್, ನಮ್ಮ ಕಾಲುಗಳಿಗಿಂತ ಇದರ ಎಲೆಗಳು ಹೇಗೆ ಭಿನ್ನವಾಗಿವೆ?

ಟೀಚರ್: ರವಿ.. ಸ್ನಾಯುಗಳಲ್ಲಿ ಎರಡು ವಿಧ. ಐಚ್ಛಿಕ ಮತ್ತು ಅನೈಚ್ಛಿಕ. ಇದು ನಿನಗೆ ಗೊತ್ತಿದೆಯಲ್ಲಾ? ಮಾನವನ ಕಾಲುಗಳಲ್ಲಿ ಮಾಹಿತಿ ರವಾನಿಸಲು ಸಂಪೂರ್ಣ ನರವ್ಯೂಹವಿದೆ. ಗಿಡದಲ್ಲಿ ಈ ವಿಶೇಷ ಅಂಗಾಂಶವಿಲ್ಲ. ನಮ್ಮಲ್ಲಿ ಸ್ನಾಯುಗಳ ಸಂಕೋಚನಕ್ಕೆ ನೆರವಾಗುವ ಪ್ರೊಟೀನ್ ಗಳಿವೆ. ಸಸ್ಯದಲ್ಲಿ ಚಲನೆಗಾಗಿ ವಿಶೇಷ ಪ್ರೊಟೀನ್ ಇಲ್ಲ.

ಶಶಿಕಲಾ: ಅಮ್ಮ ಹೇಳುತ್ತಿದ್ದರು.. ನಾಚಿಕ ಮುಳ್ಳಿನ ಗಿಡ ಒಂದು ಕಳೆ ಸಸ್ಯವಂತೆ. ಒಣಗಿದಾಗ ನಮ್ಮಲ್ಲಿ ಅವನ್ನು ಸವರಿ ರಾಶಿ ಹಾಕಿ ಸುಟ್ಟು ಬಿಡುವರು.

ಸೋಮಪ್ಪ: ಹ್ಹ ಹ್ಹ ಹ್ಹ.. ಎಷ್ಟು ಬೆಂಕಿ ಕೊಟ್ಟರೂ ಅದರ ಲಕ್ಷಾಂತರ ಬೀಜಗಳು ಮಳೆ ಬಂದಾಗ ಮೊಳಕೆಯೊಡೆಯತ್ತವೆ. ಕಳೆನಾಶಕ ಸಿಂಪಡಿಸಿದರೂ ಮೇಲೆ ಒಣಗಿದಂತಾಗಿ ಅವಕಾಶ ಸಿಕ್ಕಕೂಡಲೇ ಚಿಗುರಿಕೊಳ್ಳುತ್ತವೆ. ಇದು ಬೇರಿನ ಮೂಲಕವೇ ಹೆಚ್ಚು ಹರಡಿಕೊಳ್ಳುತ್ತದೆ. ಈ ನಿಷ್ಪಾಪಿ ಸಸ್ಯ ಬರಿಯ ಕಳೆ ಸಸ್ಯವೇನಲ್ಲ. ಇದರಿಂದ ಸಾಕಷ್ಟು ಪ್ರಯೋಜನಗಳಿವೆ.

ಸಜ್ಜಾದ್: ನನ್ನ ಮಾವ ಆಸ್ಟ್ರೇಲಿಯಾದಲ್ಲಿದ್ದಾರೆ. ಕಳೆದ ಬಾರಿ ಬಂದಾಗ ನಮ್ಮ ಬೈಲು ಗದ್ದೆಯ ಬದಿಯಿಂದ ನಾಚಿಕೆ ಮುಳ್ಳಿನ ಚಂದದ ಸಣ್ಣ ಗಿಡವನ್ನು ಕೊಂಡೊಯ್ದಿದ್ದಾರೆ!

ಆಶಾ: ಅರೆ! ಯಾಕಂತೆ?

ಸಜ್ಜಾದ್: ನಾನೂ ಕೇಳಿದೆ. ಅಮ್ಮ ಕೂಡ ವಿಚಾರಿಸಿದರು. ಅವರು ಅಲ್ಲಿ ಚಟ್ಟಿಯಲ್ಲಿ ನೆಟ್ಟು ಬೆಳೆಸುವೆ ಅಂತ ಹೇಳುತ್ತಾ ಅದರ ಜೊತೆ ಮಾತನಾಡುತ್ತಾ ಇರಲು ಚೆನ್ನಾಗಿರ್ತದೆ ಅಂತಂದರು.

ಟೀಚರ್: ಹೌದು ಮಕ್ಕಳೇ. ಗಿಡಗಳ ಜೊತೆ ಮಾತನಾಡುವುದು ಒಂದು ಒಳ್ಳೆಯ ಅಭ್ಯಾಸ. ದಿನವೂ ಈ ಗಿಡದ ಎಲೆಗಳನ್ನು ಮುಟ್ಟುತ್ತಾ ಮಾತನಾಡುತ್ತಾ ಇದ್ದರೆ ಎರಡು ಮೂರು ತಿಂಗಳ ಬಳಿಕ ಮುಟ್ಟಿದರೂ ಗಿಡ ಮುದುಡಿಕೊಳ್ಳುವುದಿಲ್ಲ ಎನ್ನುತ್ತಾರೆ. ನೀವೂ ಪ್ರಯತ್ನಿಸಬಾರದೇಕೆ?ಮಕ್ಕಳಿಗೆ ಆಟವಾಡಲೂ ಕೆಲವರು ಚಟ್ಟಿಯಲ್ಲಿ ಬೆಳೆಸುತ್ತಾರೆ.

ಸೋಮಪ್ಪ : ಮಕ್ಕಳೇ, ನೀವು ಈ ಗಿಡದ ಉಪಯೋಗಗಳನ್ನು ಅರಿತುಕೊಳ್ಳಬೇಕು. ನಾಚಿಕೆ ಮುಳ್ಳಿನ ಗಿಡಗಳಿದ್ದಲ್ಲಿ ಹಾವುಗಳ ಸಂಚಾರ ಬಹಳ ಕಡಿಮೆ ಇರುತ್ತದೆ ಎನ್ನುತ್ತಾರೆ. 

ಟೀಚರ್ : ನಮ್ಮ ಸೋಮಪ್ಪ ಸರ್ ಖ್ಯಾತ ನಾಟಿ ವೈದ್ಯರು. ಹಲವಾರು ಖಾಯಿಲೆ ಗಳಿಗೆ ಪರಂಪರಾಗತ ಔಷಧಿಗಳನ್ನು ನೀಡುವವರು. ಈ ನಾಚಿಕೆ ಮುಳ್ಳು ಗಿಡದ ಪ್ರಯೋಜನಗಳ ಬಗ್ಗೆ ಏನು ಹೇಳುತ್ತಾರೆ ನೋಡೋಣ. ಸರ್ ನಮ್ಮ ಮಕ್ಕಳಿಗೆ ಈ ಗಿಡದ ಔಷಧೀಯ ಗುಣಗಳ ಬಗ್ಗೆ ದಯವಿಟ್ಟು ವಿವರಿಸಿ.

ಸೋಮಪ್ಪ: ಸರಿ ಟೀಚರ್... ಮಕ್ಕಳೇ, ಈ ನಾಚಿಕೆ ಮುಳ್ಳಿನ ಗಿಡದ ಹೂ, ಕಾಯಿ, ಚಿಗುರು, ಎಲೆ, ಕಾಯಿಗಳು ಮಾನವರ ಮತ್ತು ದನಕರುಗಳ ಹಲವಾರು ರೋಗಗಳಿಗೆ ರಾಮಬಾಣವಾಗಿದೆ. ನೀವು ಆಟವಾಡಿ ಬಿದ್ದಾಗ ಗಾಯಗಳಾದಾಗ ಗಾಯ ತೊಳೆದು ಇದರ ಎಲೆಗಳ ರಸವನ್ನು ಹಾಕಿದರೆ ಆಲೋಪತಿಯ ಟಿಂಚರ್ ನಂತೆ ಒಮ್ಮೆ ಉರಿದಂತಾಗಿ ಮತ್ತೆ ತಣ್ಣಗಾಗುತ್ತದೆ. ರಕ್ತ ಸುರಿಯುವುದು ತಕ್ಷಣ ನಿಲ್ಲುವುದಲ್ಲದೆ ಗಾಯವೂ ಬೇಗನೆ ಗುಣವಾಗುವುದು. ಕಾಲು ಕೈ ಊದಿಕೊಂಡಾಗ, ಮೂತ್ರಕೋಶದಲ್ಲಿ ಕಲ್ಲಾದಾಗ, ಅನಿಯಮಿತ ಋತುಚಕ್ರ , ಹಲ್ಲುನೋವು, ಮೊಡವೆ, ಜ್ವರ, ಗ್ರಂಥಿಗಳ ಊತ, ಮೂತ್ರಪಿಂಡದ ಊತ, ಉರಿಮೂತ್ರ ಇತ್ಯಾದಿಗಳಿಗೆ ಉತ್ತಮ ಔಷಧಿಯಾಗಿದೆ. ಮೂಲವ್ಯಾಧಿಗೆ ಈ ಗಿಡ ಅತ್ಯುತ್ತಮ ಔಷಧಿಯಾಗಿದೆ. ಇದರ ರಸ ಸೇರಿಸಿ ಕಾಯಿಸಿದ ಎಣ್ಣೆ ಮೈಗೆ ಹಚ್ಚಿ ಸ್ನಾನ ಮಾಡಿದರೆ ಚರ್ಮದ ಆರೋಗ್ಯಕ್ಕೆ ಉತ್ತಮ. ಚಿಗುರಿನ ತಂಬಳಿ, ಪಲ್ಯ, ಕಷಾಯ ಮಾಡಿ ಯಾರೂ ಸೇವಿಸಬಹುದು. ಪ್ರಾಣಿಗಳಿಗೆ ಉತ್ತಮ ಆಹಾರ. ಆಡು ಕುರಿಗಳು ಮುಳ್ಳು ಚುಚ್ಚಿದರೂ ಸಹಿಸಿಕೊಂಡು ಇಷ್ಟಪಟ್ಟು ತಿನ್ನುತ್ತವೆ.

ಸಜ್ಜಾದ್: ನಾಚಿಕೆ ಮುಳ್ಳಿನ ಗಿಡವನ್ನು ಕಂಡರೆ ಕಿರಿಕಿರಿ ಅನಿಸುತ್ತಿತ್ತು. ಇನ್ನು ನಾನು ಹಾಗೆ ಭಾವಿಸಲಾರೆ.

ಶಶಿಕಲಾ: ಹೌದು. ಈಗ ನನಗೆ ಅದರ ಹೂ ಕೂಡ ಸುಂದರವಾಗಿಯೆ ಕಾಣಿಸುತ್ತಿದೆ. ಗಿಡದ ಶಾಖೆಗಳ ತುದಿಗಳಲ್ಲಿ ಒಂದೆರಡು ಸೆ.ಮೀ. ನಷ್ಟು ವ್ಯಾಸದ ತಿಳಿನೇರಳೆ ಬಣ್ಣದ ಗುಂಡನೆಯ ಚೆಂಡಿನಾಕಾರದ ಹೂ ಅತ್ಯಾಕರ್ಷಕವಾಗಿದೆ.

ಸೋಮಪ್ಪ: ನಾವು ಗಿಡಗಳ ಬಗ್ಗೆ ಅರಿತುಕೊಂಡಾಗ ಸಹಜವಾಗಿಯೇ ಸ್ನೇಹ ಮೂಡುತ್ತದೆ. ಅದರ ಚಪ್ಪಟೆಯಾದ ಕೋಡುಗಳನ್ನು ನೋಡಿ. ಮೂರರಿಂದ ಐದು ಬೀಜಗಳಿರುತ್ತವೆ.

ಟೀಚರ್: ಇದರ ಬೇರುಗಳನ್ನು ನೋಡಿ. ಬೇರುಗಳಲ್ಲಿ ಗಂಟುಗಳು ಕಾಣಿಸುತ್ತಿವೆ. ಸಾರಜನಕ ಈ ರೀತಿಯಲ್ಲಿ ಸಂಗ್ರಹವಾಗಿರುತ್ತದೆ. ಮಣ್ಣಿಗೆ ಸಾರಜನಕ ಸ್ಥಿರೀಕರಣ ಮಾಡುವ ಈ ಸಸ್ಯ ಕೃಷಿಗೆ ಉಪಯುಕ್ತ ವಾದುದು. ಇನ್ನೊಂದು ವಿಚಾರವೇನೆಂದರೆ ಇದು ಕತ್ತಲು ಕವಿಯುತ್ತಿದ್ದಂತೆ ತಮ್ಮ ಎಲೆಗಳನ್ನು ಮಡಚಿಕೊಳ್ಳುತ್ತವೆ. ಬೆಳಗ್ಗೆ ಸೂರ್ಯನ ಕಿರಣಗಳು ಸ್ಪರ್ಶಿಸುತ್ತಿದ್ದಂತೆ ಎಲೆಗಳನ್ನರಳಿಸುತ್ತವೆ. ಇದನ್ನು ನಿಕ್ಟಿನಾಸ್ಟಿಕ್ ಚಲನೆ (Nyctinastic movement) ಎನ್ನುವರು. ಅಂದರೆ ಸಸ್ಯಗಳೂ ನಿದ್ರಿಸುತ್ತವೆ, ಸಸ್ಯಗಳೂ ಪ್ರಚೋದನೆಗೆ ತಕ್ಕ ಪ್ರತಿಕ್ರಿಯೆ ನೀಡುತ್ತವೆ ಎಂಬುದಕ್ಕೆ ನಾಚಿಕೆಮುಳ್ಳು ಸಸ್ಯ ಬಹಳ ಸಮರ್ಪಕ ಉದಾಹರಣೆಯಾಗಿದೆ. ಮಕ್ಕಳೇ, ಸಂಜೆಯಾಗುತ್ತಾ ಬಂತು. ನಾವಿನ್ನು ಹೊರಡೋಣ. ಬಹಳಷ್ಟು ಮಾಹಿತಿ ನೀಡಿದ ಸೋಮಪ್ಪರವರಿಗೂ ನಮ್ಮೆಲ್ಲರ ಪರವಾಗಿ ವಂದನೆಗಳು.

ಚಿತ್ರ - ಬರಹ : ವಿಜಯಾ ಬಿ ಶೆಟ್ಟಿ ಸಾಲೆತ್ತೂರು, ಬಂಟ್ವಾಳ