ನಿಷ್ಪಾಪಿ ಸಸ್ಯಗಳು (ಭಾಗ ೮೮) - ಕಾಡು ಉತ್ತರಾಣಿ



ಇಂದು ನಾನು ನಿಮ್ಮ ಬಳಿಗೆ ಬರುವಾಗ ದಾರಿಯಲ್ಲಿ ಸಿಕ್ಕಿದ ಗಿಡಗಳ ಹಿಂಡಿನಿಂದ ಒಂದು ಗಿಡವನ್ನು ಕಿತ್ತು ತಂದಿರುವೆ. ನೋಡಿದಿರಾ? ಈ ಗಿಡ ನಿಮ್ಮ ಮನೆಯ ಸಮೀಪದ ತೋಟಗಳಲ್ಲಿ,ಮಾರ್ಗದ ಬದಿಗಳಲ್ಲಿ, ಪಾಳುಬಿದ್ದ ಭೂಮಿಯಲ್ಲಿ ಕಾಣಸಿಗುತ್ತದೆ. ಇದೊಂದು ಪೊದೆ ಸಸ್ಯ. ಈ ಮೊದಲು ನೀವು ಉತ್ತರಾಣಿ ಎಂಬ ಗಿಡವೊಂದನ್ನು ಗುರುತಿಸಿದ ನೆನಪಿದೆಯೆ? ಅದೂ ನಮ್ಮ ಬೈಲು ಗದ್ದೆಗಳಲ್ಲಿ, ತೋಟಗಳಲ್ಲಿ ಸಾಮಾನ್ಯವಾಗಿ ಕಾಣಿಸಿಗುವ ಸಸ್ಯ. ಅದರಂತೆಯೇ ಕಾಣಿಸುವ ಆದರೆ ಸ್ವಲ್ಪ ಎತ್ತರವಾಗಿ ಗಡುಸಾಗಿರುವ ಸಸ್ಯ ಇದು. ಇದನ್ನು ಕಾಡು ಉತ್ತರಾಣಿ ಎಂದೇ ಕರೆಯುತ್ತಾರೆ. ನೀಲಿ ಹಾವಿನ ಗಿಡ, ನೇರಳೆ ಹಾವಿನ ಗಿಡವೆನ್ನುವುದೂ ಇದೆ. ಸ್ಟ್ಯಾಕಿಟಾರ್ಫೆಟಾ ಜಮೈಸೆನ್ಸಿಸ್ (Stachytarpheta jamaicensis) ಎಂಬುವುದು ಈ ಕಾಡು ಉತ್ತರಾಣಿಯ ವೈಜ್ಞಾನಿಕ ಹೆಸರು. ವರ್ಬೆನೇಸಿ ಕುಟುಂಬದ ಈ ಸಸ್ಯ ಹೂ ಬಿಡುವ ಸಂಕುಲಕ್ಕೆ ಸೇರಿದೆ.
ಈ ಕಾಡು ಉತ್ತರಾಣಿಯ ಎಲೆಗಳು ಅಭಿಮುಖವಾಗಿದ್ದು ಅಂಡಾಕಾರವಾಗಿವೆ. ಅಂಚುಗಳು ವಕ್ರವಾಗಿ ಗರಗಸದ ಹಲ್ಲುಗಳಂತೆ ರಚನೆಯಿದೆ ಗಮನಿಸಿರಿ. ಎಲೆಗಳ ಮೇಲ್ಭಾಗವೂ ಒರಟಾಗಿದೆ ಮಾತ್ರವಲ್ಲ ಸುಕ್ಕುಗಟ್ಟಿದಂತಿದೆ. ಎಲ್ಲಕ್ಕಿಂತ ಮುಖ್ಯವಾಗಿ ಗಮನಸೆಳೆಯುವುದು ಈ ಗಿಡದ ಎಲ್ಲಾ ಶಾಖೆಗಳ ತುದಿಗಳಲ್ಲಿ 40-45 ಸೆಂ.ಮೀ ಉದ್ದದ ಚೂಪಾದ ಕಡ್ಡಿಗಳು. ಇವುಗಳಲ್ಲಿ ನೀಲಿ ನೇರಳೆ ಬಣ್ಣದ ಪುಟಾಣಿ ಹೂಗಳು ಏರಿಕೆಯಾಗಿ ಅರಳುವುದು. ಇವು ದ್ವಿಲಿಂಗಿ ಪುಷ್ಪಗಳಾಗಿವೆ. ಉದ್ಯಾನವನಗಳಲ್ಲಿ ಇದನ್ನು ಅಲಂಕಾರಿಕ ಸಸ್ಯವಾಗಿಯೂ ಬೆಳೆಸುವರು. ಚಿಟ್ಟೆ ಉದ್ಯಾನಗಳಲ್ಲಿ ಇದು ಮುಖ್ಯ ಸ್ಥಾನ ಪಡೆಯುತ್ತದೆ. ಯಾಕೆಂದರೆ ವಿಶ್ವದೆಲ್ಲೆಡೆ ಸುಮಾರು 98 ಜಾತಿಯ ಚಿಟ್ಟೆಗಳಿಗೆ ಈ ಹೂಗಳು ಮಕರಂದದ ರೂಪದಲ್ಲಿ ಪೋಷಣೆ ಮಾಡುತ್ತವೆ ಗೊತ್ತಾ? ಈ ನಿಷ್ಪಾಪಿ ಸಸ್ಯವನ್ನು ಕಳೆಯೆಂದು ಮನುಷ್ಯ ದೂರವಿಟ್ಟರೂ ಪರಿಸರ ಸಮತೋಲನ ಕಾಪಾಡಲು ಇದರ ಪಾಲು ಇದ್ದೇ ಇದೆ.
ನೀವು ಈ ಕಾಡು ಉತ್ತರಾಣಿಯನ್ನು ಎಲ್ಲಾದರೂ ಕಂಡರೆ ನಾಶಪಡಿಸುವ ಕೆಲಸಕ್ಕೆ ಕೈಹಾಕದಿರಿ. ಯಾಕೆ ಗೊತ್ತೇ? ಅದು ಮಾನವನಿಗೆ ಔಷಧ ನೀಡುವ ಗಿಡಮೂಲಿಕೆಯೂ ಹೌದು. ಅಸ್ತಮಾ, ಹೊಟ್ಟೆಹುಣ್ಣು, ಉಸಿರಾಟದ ಸಮಸ್ಯೆ, ಕೆಮ್ಮು , ಮೂತ್ರವರ್ಧಕ, ಭೇದಿ, ನೋವು ಮೊದಲಾದ ತೊಂದರೆಗಳಿಗೆ ಉಪಶಮನ ನೀಡುತ್ತದೆ. ಲ್ಯಾಟಿನ್ ಅಮೆರಿಕದ ಜನರು ಈ ಸಸ್ಯಗಳ ಸಾರವನ್ನು ಮಲೇರಿಯಾದ ಚಿಕಿತ್ಸೆಗೆ, ಪೆರು ದೇಶದಲ್ಲಿ ಮಧುಮೇಹ ನಿಯಂತ್ರಣಕ್ಕೆ, ಆಫ್ರಿಕಾದಲ್ಲಿ ಮಕ್ಕಳ ಕಿವಿ ಹುಣ್ಣಿಗೆ, ಕಣ್ಣಿನ ಪೊರೆ ಚಿಕಿತ್ಸೆಗೂ ಬಳಸುತ್ತಾರಂತೆ. ಮೆಕ್ಸಿಕೋದ ಉಷ್ಣವಲಯದಿಂದ ಅಮೇರಿಕಾ, ಆಫ್ರಿಕಾ, ಏಷ್ಯಾ ಖಂಡದ ಬಹುತೇಕ ಭಾಗಗಳಲ್ಲಿ ಸ್ಥಾನ ಪಡೆದಿರುವ ಈ ಸಸ್ಯದಲ್ಲಿ ನೀಲಿ, ನೇರಳೆ, ಬಿಳಿ, ಗುಲಾಬಿ ವರ್ಣದ ಹೂ ಬಿಡುವ ಪ್ರಭೇದಗಳೂ ಇವೆ.
ಭೂಮಿಯ ಮೇಲಿನ ಈ ವಿಸ್ತಾರವಾದ ಹಸಿರು ತುಂಬಿದ ಪ್ರಕೃತಿಯಲ್ಲಿ ಉದ್ದೇಶವಿಲ್ಲದೆ ಸೇರಿಕೊಂಡ ಸಸ್ಯಗಳಾಗಲೀ ಪ್ರಾಣಿಗಳಾಗಲಿ ಯಾವುದೂ ಇಲ್ಲ. ಒಂದಕ್ಕೊಂದು ಜೊತೆಯಾಗಿ ಪೂರಕವಾಗಿ ಬೆಳೆದುಕೊಂಡು ಜೀವಜಗತ್ತು ಭೂಮಿಗಾಸರೆಯಾಗಿದೆ. ಇದರೊಳಗೆ ಮಾನವನೂ ಸೇರಿದ್ದಾನೆ. ಬುದ್ಧಿವಂತರಾದ ನಾವು ಇಲ್ಲಿ ಯಾವುದೂ ಕಳೆಯಲ್ಲ ಎಂಬುದನ್ನು ನಾವು ನೆನಪಿಟ್ಟು ನಡೆದುಕೊಳ್ಳಬೇಕಲ್ಲವೇ?
ಚಿತ್ರ ಮತ್ತು ಬರಹ : ವಿಜಯಾ ಬಿ ಶೆಟ್ಟಿ ಸಾಲೆತ್ತೂರು, ಬಂಟ್ವಾಳ