ನಿಷ್ಪಾಪಿ ಸಸ್ಯಗಳು (ಭಾಗ ೮೯) - ಮಾರ್ನಿಂಗ್ ಗ್ಲೋರಿಯಾ


ಕಳೆದ ವಾರ ನೀವು ಕಾಡು ಉತ್ತರಾಣಿಯ ಪರಿಚಯ ಮಾಡಿಕೊಂಡಿರುವಿರಿ. ಇಂದು ನಾವು ಬೆಳ್ತಂಗಡಿ ತಾಲೂಕಿನ ಒಂದು ಪುಟ್ಟ ಗ್ರಾಮದಲ್ಲಿರುವ ಬೊಳಿಯೇಲ ಮಲೆ ಎಂಬ ಗುಡ್ಡಕ್ಕೆ ಹೋಗೋಣ. ಈ ಗುಡ್ಡದಲ್ಲಿ ನಮ್ಮ ಹಿರಿಯರ ಕಾಲದಲ್ಲಿ ಹುಲಿಗಳಿದ್ದುವಂತೆ! ಈಗ ಹುಲಿಗಳಿಲ್ಲ. ಹಾಗಾಗಿ ಕಾಡೂ ಇಲ್ಲ. ಗುಡ್ಡದ ಕೆಳಭಾಗಗಳು ಬೋಳಾಗಿವೆ. ಒಂದಿಷ್ಟು ಕುರುಚಲು ಗಿಡಗಳನ್ನು ಮಾತ್ರ ಕಾಣುವಿರಿ. ಬನ್ನಿ... ಈ ಗುಡ್ಡದ ಬದಿಯಲ್ಲೇ ಪೈಪ್ ಲೈನೊಂದು ಹಾದು ಹೋಗಿದೆ. ಈಗ ಅದೇ ಒಂದು ಮಾರ್ಗವಾದಂತಿದೆ. ಅದೇ ದಾರಿಯಲ್ಲಿ ನಾವೂ ನಡೆಯೋಣ.
ದೂರದಿಂದಲೇ ಎತ್ತರವಾದ ಗುಡ್ಡಗಳು ಉದ್ದಕ್ಕೂ ಆಗಸವನ್ನೇ ಆವರಿಸಿದಂತಿವೆ ಕಾಣುತ್ತಿದೆಯೇ? ನಾವು ಈ ಬೈಲು ಗದ್ದೆಯನ್ನು ದಾಟಬೇಕಾಗಿದೆ. ಕಣ್ಣಳತೆಯಷ್ಟು ದೂರಕ್ಕೂ ಇಕ್ಕೆಲಗಳಲ್ಲಿ ಭತ್ತದ ಪೈರು ಕಟಾವು ಆದ ಗದ್ದೆಗಳು. ಆ ಮೂಲೆಯಲ್ಲಿ ನವಿಲುಗಳ ಹಿಂಡು ಬಿದ್ದಿರುವ ಭತ್ತದ ಕಾಳು, ಹುಳ ಹುಪ್ಪಟೆಯನ್ನು ತಿನ್ನುತ್ತಿವೆ ನೋಡಿದಿರಾ. ನಮ್ಮೆದುರಲ್ಲಿ ಟಿಟ್ಟಿಭ ಪಕ್ಷಿಗಳೆರಡು ಕೂಗುತ್ತಾ ಹಾರಾಡುತ್ತಿವೆ... ಯಾಕೆ ಈ ರೀತಿ ಕೂಗುತ್ತಿದೆ ಬಲ್ಲಿರಾ? ಕಾರಣವಿದೆ ಮಕ್ಕಳೇ, ಅದರ ಮೊಟ್ಟೆ ಅಥವಾ ಮರಿಗಳು ಇಲ್ಲೇ ಎಲ್ಲಾದರೂ ಖಂಡಿತ ಇರಬಹುದು! ಎಚ್ಚರ ಕೊಡುವ ರೀತಿ ಇದು. ಬನ್ನಿ ಮುಂದಕ್ಕೆ ಹೋಗೋಣ. ನಾವೀಗ ಗುಡ್ಡದ ತಪ್ಪಲನ್ನು ಮುಟ್ಟಿದೆವು. ನಾಲ್ಕಾರು ಹಸುಗಳು ಹಾಯಾಗಿ ಮೇಯುತ್ತಾ ಇದ್ದರೆ ಮರದ ಕೆಳಗೆ ಮಲಗಿದ ಒಂದೆರಡು ಹಸುಗಳು ಮೆಲುಕು ಹಾಕುತ್ತಿವೆ. ಅಲ್ಲೇ ಬದಿಯ ಪೊದೆಗಳನ್ನೊಮ್ಮೆ ನೋಡಿರಿ. ಬಿಳಿ ವರ್ಣದ ಗಂಟೆಯ ಆಕೃತಿಯ ಹೂಗಳ ರಾಶಿ! ಎಂತಹ ಆಕರ್ಷಕ ಹೂಗಳಲ್ಲವೇ?
ಬನ್ನಿ... ಆ ನಿಷ್ಪಾಪಿ ಸಸ್ಯ ಸಮೂಹದ ಬಳಿಗೆ ಹೋಗೋಣ. ಬೆಳಗಿನ ಜಾವದಲ್ಲಿ ಮಾತ್ರವೇ ನಳನಳಿಸುವ ಈ ಹೂಗಳು ಬಹಳ ಸುಕೋಮಲವಾಗಿವೆ. ಸೂರ್ಯನ ತಾಪ ಹೆಚ್ಚುತ್ತಾ ಹೋದಂತೆ ಈ ಬಿಳೀ ಹೂಗಳು ಬಸವಳಿದು ಬಾಡಿ ಮಾಯವಾಗುತ್ತವೆ. ಆದ್ದರಿಂದಲೇ ಇದನ್ನು ಮಾರ್ನಿಂಗ್ ಗ್ಲೋರಿಯ ಎನ್ನುತ್ತಾರೆ. ಬೆಳಗಿನ ವೈಭವದ ಕುಟುಂಬ ಎಂದೇ ಅನ್ನಿಸಿಕೊಳ್ಳುತ್ತದೆ. ಮುಂಜಾನೆ ಹೊತ್ತು ಇದನ್ನು ನೋಡುವುದೇ ಕಣ್ಣಿಗೆ ತಂಪು. ವಸಂತಕಾಲದುದ್ದಕ್ಕೂ ಹೂಗಳಿಂದ ತುಂಬಿರುವುದಷ್ಟೇ ಅಲ್ಲ.. ಸುಡು ಬೇಸಗೆಯಲ್ಲೂ ಬೆಳ್ಳಿಬೆಟ್ಟದಂತೆ ಹೂಗಳು ಅರಳಿರುತ್ತವೆ. ಎರಡು ಅಥವಾ ಗೊಂಚಲುಗಳ ರೂಪದಲ್ಲಿ ಮೊಗ್ಗು ಹೂಗಳಿರುತ್ತವೆ. ಐದು ದಳಗಳಿದ್ದು ಆಲಿಕೆಯಂತಿರುವ ಹೂಗಳಲ್ಲಿ ತುಂಬಿರುವ ಮಧು ಚಿಟ್ಟೆಗಳನ್ನು, ಹಕ್ಕಿಗಳನ್ನು ಆಕರ್ಷಿಸುತ್ತವೆ. ಪುಷ್ಪಪತ್ರ ಸಮೂಹ ಆಳವಾಗಿ ವಿಭಾಗವಾಗಿದೆಯಲ್ಲವೇ? ಹೃದಯದಾಕಾರದ ಹಸಿರಾದ ಎಲೆ ಗಳನ್ನು ಗಮನಿಸಿರಿ. ತುದಿಯು ಚೂಪಾಗಿದೆ. 6ರಿಂದ 9 ಇಂಚಿನಷ್ಟು ಉದ್ದದ ಎಲೆಗಳು!.
ಈ ಸಸ್ಯ ಮಧ್ಯ ಅಮೇರಿಕಾದಿಂದ ಎಲ್ಲೆಡೆ ಹರಡಿದೆ ಎನ್ನುತ್ತಾರೆ. ಇಪೋಮಿಯಾ ಕಾರ್ನಿಯಾ (Ipomoea carnies) ಎಂಬ ಸಸ್ಯ ಶಾಸ್ತ್ರೀಯ ಹೆಸರಿರುವ ಇದು ಕನ್ವೊಲ್ವುಲೇಸಿ ಕುಟುಂಬಕ್ಕೆ ಸೇರಿದೆ. ಇದರಲ್ಲಿ 600 ರಷ್ಟು ಪ್ರಭೇದಗಳಿದ್ದು 50 ವಿಧದ ಸಸ್ಯಗಳು ಭಾರತದಲ್ಲೇ ಇವೆಯಂತೆ! ತೋಟಗಾರಿಕೆಯಲ್ಲಿ ಅಲಂಕಾರಕ್ಕಾಗಿ ಐಪೋಮಿಯ ಟ್ರೈಕಲರ್, ಐಪೋಮಿಯ ಕ್ವಾಮೊಕ್ಲಿಟ್ ಮೊದಲಾದ 11 ಜಾತಿಯ ಸಸ್ಯಗಳನ್ನು ಬೆಳಸುತ್ತಿದ್ದಾರೆ. ಈ ಸಸ್ಯದ ಕಾಂಡಗಳನ್ನು ಗಮನಿಸಿ. ಅಡ್ಡಾದಿಡ್ಡಿಯಾಗಿ ಹರಡಿದ ಇವು ಟೊಳ್ಳಾಗಿವೆ. ಕಾಗದ ತಯಾರಿಗೆ ಇದನ್ನು ಬಳಸುವರು ಮಾತ್ರವಲ್ಲದೇ ಬ್ರೆಜಿಲ್ ನಲ್ಲಿ ಈ ಟೊಳ್ಳಾದ ಕಾಂಡಗಳನ್ನು ತಂಬಾಕು ಪೈಪ್ ಗಳಿಗೆ ಟ್ಯೂಬ್ ತಯಾರಿಸಲು ಬಳಸುವರು. ಆದ್ದರಿಂದಲೇ ಪೈಪ್ ಕೇನ್ ಎಂಬ ಹೆಸರೂ ಈ ಸಸ್ಯಕ್ಕಿದೆ !
ಈ ಸಸ್ಯಗಳ ಕೆಲವು ಪ್ರಭೇದಗಳು ವಿದೇಶಗಳಲ್ಲಿ ಆಹಾರವಾಗಿವೆ. ಕೆಲವೆಡೆ ಇದರ ಬೀಜ ಹಾಗೂ ಎಲೆಗಳು ಧಾರ್ಮಿಕ ಆಚರಣೆಯಲ್ಲಿ ಬಳಸಲ್ಪಡುತ್ತವೆ. ಗೊಬ್ಬರವಾಗಿ, ಕಳೆ ನಿಯಂತ್ರಕವಾಗಿಯೂ ಬಳಸುವರು. ನಮ್ಮಲ್ಲಿ ಬೆಳೆಯುವ ಈ ಸಸ್ಯವರ್ಗಗಳು ಬಹುತೇಕ ವಿಷದಂಶ ಹೊಂದಿವೆಯಾದರೂ ಹುಣ್ಣು, ಮೊಡವೆ, ನೋವು, ಯಕೃತ್ ದೋಷ ನಿವಾರಕ, ಕಣ್ಣಿನ ದೋಷ, ಮಲಬದ್ಧತೆ ಹಾಗೂ ಮೂತ್ರವರ್ಧಕವಾಗಿದೆ. ನಿದ್ರಾಜನಕ, ಸೆಳವು ನಿರೋಧಕ, ಕ್ಯಾನ್ಸರ್ ವಿರೋಧಿಯಾಗಿದೆ. 1950 ರಿಂದಲೇ ಈ ಗಿಡದ ಬಗ್ಗೆ ಸಂಶೋಧನೆ ಗಳಾಗುತ್ತಿವೆಯಾದರೂ ಇದೀಗ ಅಳಿವಿನಂಚಿಗೆ ಸರಿದ ಸಸ್ಯವೆಂದೇ ಗುರುತಿಸಲಾಗುತ್ತಿದೆ. ಕಾಡು ಬರಿದಾಗುತ್ತಿರುವ ಪರಿಸರದಲ್ಲಿ ಇಂತಹ ಸಸ್ಯಗಳು ಉಳಿದುಕೊಳ್ಳಬೇಕಾದರೆ ಮಾನವನ ಸಹಕಾರ ಬೇಕೇಬೇಕಲ್ಲವೇ?
ಚಿತ್ರ - ಬರಹ : ವಿಜಯಾ ಬಿ ಶೆಟ್ಟಿ ಸಾಲೆತ್ತೂರು, ಬಂಟ್ವಾಳ