ನಿಷ್ಪಾಪಿ ಸಸ್ಯಗಳು (ಭಾಗ ೯೩) - ಜೀರಿಗೆ ಮೆಣಸು

ನಿಷ್ಪಾಪಿ ಸಸ್ಯಗಳು (ಭಾಗ ೯೩) - ಜೀರಿಗೆ ಮೆಣಸು

ಪರೀಕ್ಷೆಗಳ ನಡುವೆ ನಾವಿಂದು ಸಣ್ಣ ಪ್ರಮಾಣದ ಹೊರಸಂಂಚಾರಕ್ಕೆ ಹೋಗೋಣ... ತಯಾರಾಗಿದ್ದೀರಾ? ಇದು ಕರ್ನಾಟಕ ಕೇರಳದ ಗಡಿ ಭಾಗದ ದೈಗೋಳಿ. ಇಲ್ಲೇ ದಕ್ಷಿಣಕ್ಕೆ ಒಂದೆರಡು ಕಿ.ಮೀ. ಹೋದರೆ ಸಿಗುವುದೇ ಬೂದಿಮೂಲೆ ಅಥವಾ ಬೊಂಞದ ಮೂಲೆ. ಇಲ್ಲಿ ತಾತ, ಮುತ್ತಾತನ ಕಾಲದಿಂದ ಕೃಷಿ ಬದುಕು ನಡೆಸುತ್ತಿರುವ ಅಲ್ಬರ್ಟ್ ಡಿಸೋಜ ರ ಮನೆ ಹಾಗೂ ತೋಟವಿದೆ. ಬನ್ನಿ ಅವರನ್ನಿಂದು ಮಾತನಾಡಿಸೋಣ.

ಶಿಕ್ಷಕಿ: ನಮಸ್ತೆ ಸರ್. ನಾವು ನಿಮ್ಮ ಬಳಿ ಕೆಲವು ಸಸ್ಯಗಳ ಬಗ್ಗೆ ಮಾಹಿತಿ ಪಡೆಯೋಣವೆಂದು ಬಂದೆವು...

ಅಲ್ಬರ್ಟ್ ಡಿಸೋಜ: ಓ...ಬಹಳ ಸಂತೋಷ. ಬನ್ನಿ ಬನ್ನಿ...ಕುಳಿತುಕೊಳ್ಳಿರಿ. ಮೊದಲು ಬಾಯಾರಿಕೆ ಕುಡಿಯಿರಿ.

ಶಿಕ್ಷಕಿ: ಮಕ್ಕಳೇ, ಎಲ್ಲರೂ ಸರತಿಯ ಸಾಲಲ್ಲಿ ನಿಂತು ಮಜ್ಜಿಗೆ ನೀರು ತೆಗೆದುಕೊಂಡು ಕುಡಿಯಿರಿ.

ನಿಹಾಲ: ಟೀಚರ್.. ಮಜ್ಜಿಗೆ ನೀರು ತುಂಬಾ ರುಚಿಯಾಗಿದೆ!

ರಜನಿ: ಟೀಚರ್... ಈ ಮಜ್ಜಿಗೆ ನೀರು ನನಗೆ ಬೇಡವಿತ್ತು.. ಬಾಯಿ ಉರಿಯುತ್ತಿದೆ.

ಶಿಕ್ಷಕಿ: ಮಕ್ಕಳೇ ನಾಲಿಗೆಗೆ ಸ್ವಲ್ಪ ಖಾರವೇ ಆಗಿದ್ದರೂ ಮಜ್ಜಿಗೆ ರುಚಿಯಾಗಿದೆ, ಸುವಾಸನೆ ಇದೆ ಗಮನಿಸಿದಿರಾ?

ಅಭಿನಂದನ್ : ಹೌದು ಟೀಚರ್, ಜೀರಿಗೆ ಮೆಣಸಿನದ್ದೇ ಪರಿಮಳ !

ಆಲ್ಬರ್ಟ್ ಡಿಸೋಜ : ಅದು ಗಾಂಧಾರಿ ಮೆಣಸು ಮಗು. ಬರ್ಡ್ ಐ ಪೆಪ್ಪರ್ ಅಥವಾ ಬರ್ಡ್ ಐ ಚಿಲ್ಲಿ ಅಂತಲೂ ಕರೀತಾರೆ.

 

ಶಿಕ್ಷಕಿ: ಆಯುರ್ವೇದದಲ್ಲಿ ಕಾಳು ಮೆಣಸಿನ ನಂತರ ಸ್ಥಾನ ಗಾಂಧಾರಿ ಮೆಣಸಿಗಿದೆಯಂತೆ ನಿಜವೆ? ಇದರ ಬೇರೆ ಹೆಸರುಗಳೇನು ಸರ್?

ಅಲ್ಬರ್ಟ್ : ಹೌದು ಟೀಚರ್.. ಇದೊಂದು ಗಿಡಮೂಲಿಕೆ. ನಮ್ಮಲ್ಲಿ ಜೀರಿಗೆ ಮೆಣಸು ಅಂತ ಇದೆ. ಅದು ಗಾಂಧಾರಿ ಮೆಣಸಿಗಿಂತ ಸ್ವಲ್ಪ ದೊಡ್ಡದಿದೆ. ಗಾಂಧಾರಿ ಒಂದೆರಡು ಸೆ.ಮೀ. ಗಿಂತಲೂ ಸಣ್ಣದು. ಖಾರವೂ ಹೆಚ್ಚು. ಇದನ್ನು ಗಾಂಧಾರಿ ಮೆಣಸು, ಜಾರು ಮೆಣಸು, ನುಚ್ಚು ಮೆಣಸು ಸಣ್ಣ ಮೆಣಸು, ಕಾಂತರಿ ಜೀರಿಗೆ ಮೆಣಸು, ಕಾಡುಮೆಣು, ಪರಂಗಿ ಮೆಣಸು ಅಂತಲೂ ಕರೀತಾರೆ. ಇಂಗ್ಲಿಷ್ ನಲ್ಲಿ ಬರ್ಡ್ ಐ ಚಿಲ್ಲಿ ಅನ್ನುವರು.

ನಂದನ್ : ಇದನ್ನು ನೀವು ಕೃಷಿಯಾಗಿ ಮಾಡುತ್ತಿರುವಿರಾ?

ಅಲ್ಬರ್ಟ್ : ಇದೊಂದು ಕುರುಚಲು ಗಿಡ. ವರ್ಷಪೂರ್ತಿ ಹೂ, ಹಣ್ಣು ಕೊಡ್ತದೆ. ತಿನ್ನಬಹುದಾದ ತುಂಬಾ ಖಾರದ ಹಣ್ಣು. ಗಿಳಿ, ನವಿಲು, ಬುಲ್ ಬುಲ್, ಪಿಕಳಾರಗಳಿಗೆ ತುಂಬಾ ಇಷ್ಟ. ಇತರ ಪಕ್ಷಿಗಳೂ ತಿನ್ನುತ್ತವೆ. ಹಕ್ಕಿಗಳ ಹಿಕ್ಕೆಯ ಮೂಲಕವೇ ಬೀಜ ಪ್ರಸಾರ ಹೆಚ್ಚು!ಹಾಗಾಗಿ ನಾನಿದನ್ನ ಕೃಷಿಯಾಗಿ ಆಯ್ಕೆ ಮಾಡಿರದಿದ್ದರೂ ಎಲ್ಲಡೆ ಗಿಡಗಳಿವೆ. ಮಲೆನಾಡಿನಲ್ಲಿ ಇದರ ಗಿಡಗಳಿರದ ಹಿತ್ತಲು ಕಾಣದು. ಈಗ ಎಲ್ಲರ ಕಣ್ಣು ಈ ಮೆಣಸಿನ ಮೇಲಿದೆ!

ಶಿಕ್ಷಕಿ : ಅದು ನಿಜ ಸರ್. ಗಾಂಧಾರಿ ಮೆಣಸಿನ ಮೂಲ ಥೈಲ್ಯಾಂಡ್ ಎಂದು ಗುರುತಿಸಿದ್ದಾರೆ. ವೈಜ್ಞಾನಿಕವಾಗಿ ಕ್ಯಾಪ್ಸಿಕಂ ಚೈನೀಸ್ ಎಂಬ ಹೆಸರಿದೆ. ಸೊಲನೇಸಿ ಕುಟುಂಬಕ್ಕೆ ಸೇರಿದೆ. ತುಳುವಿನಲ್ಲಿ ದೀರ್ಸಲೆ, ಗಾಂಧಾರಿ ಮುಂಚಿ ಎನ್ನುವರು.

ಅಲ್ಬರ್ಟ್ : ಇದು ಗಾತ್ರದಲ್ಲಿ ಸಣ್ಣದಾದರೂ ಬಲು ಖಾರ. ಹಣ್ಣಾದಾಗ ಕೆಂಪುಕೆಂಪಾಗಿ ಗಿಡವೇ ಸುಂದರವಾಗಿ ಕಾಣುತ್ತದೆ. ಹಳ್ಳಿಗಳಲ್ಲಿದು ಚಿರಪರಿಚಿತ ಸಸ್ಯ. ಈಗ ಅದರ ಅದ್ಭುತ ಗುಣಗಳನ್ನು ತಿಳಿದು , ವಾಣಿಜ್ಯ ಮೌಲ್ಯವೂ ಏರಿದೆ ! 

ರಜನಿ : ಅಡುಗೆಯಲ್ಲಿ ಬಳಸಿದಾಗ ಖಾರ ಹೆಚ್ಚಾದರೆ ದೇವರೇ ಕಾಪಾಡಬೇಕು!

ಅಲ್ಬರ್ಟ್: ರುಚಿ ಎಷ್ಟೇ ಖಾರವಾದರೂ ದೇಹಕ್ಕೆ ತಂಪು. ಜೀರ್ಣ ಕ್ರಿಯೆ ವೃದ್ಧಿಯಾಗಿ ಹೃದಯದ ಆರೋಗ್ಯಕ್ಕೆ ಉತ್ತಮ. ಬೊಜ್ಜನ್ನು ತಡೆಗಟ್ಟುತ್ತದೆ. ವೈದ್ಯರು ಕೂಡ ಇದರ ಬಳಕೆಯನ್ನು ಸೂಚಿಸುವುದುಂಟು. 

ಶಿಕ್ಷಕಿ : ಹಸಿ ಮೆಣಸಿನ ಬಳಕೆ ಹಿತವಲ್ಲವಾದರೂ ಗಾಂಧಾರಿಮೆಣಸು ಆ ಬಗ್ಗೆ ರಿಯಾಯಿತಿ ಪಡೆಯುತ್ತದೆ. ಮೆಣಸಿನಲ್ಲಿ ಹಲವಾರು ತಳಿಗಳಿವೆ. ತರಕಾರಿಯಾಗಿಯೂ ಬಳಸುತ್ತೇವೆ. ಇಷ್ಟು ಹಸಿರಾದ ಸಣ್ಣ ಗಾತ್ರದ ಈ ನಿಷ್ಪಾಪಿ ಸಸ್ಯಗಳು ಸದಾ ಹೂ ಹಣ್ಣು ತುಂಬಿ ನಳನಳಿಸುವುದು ಕಣ್ಣಿಗೊಂದು ಹಬ್ಬ. ಮಕ್ಕಳೇ, ಗಾಂಧಾರಿ ಮೆಣಸಿನ ಗಿಡಗಳು ನೋಡಲು ಅದೆಷ್ಟು ಮುದ್ದಾಗಿವೆ ಗಮನಿಸಿ.

ಅಲ್ಬರ್ಟ್: ಅದೂ ನಿಜ. ನಾವು ನೆಟ್ಟಿಲ್ಲ, ಸಾಕಿಲ್ಲ, ಗೊಬ್ಬರ ಹಾಕಿಲ್ಲ. ಸಿಕ್ಕಿದ ನೀರು ಮಣ್ಣಿನಲ್ಲಿ ಬೇಸರವಿಲ್ಲದೆ ಬೆಳೆದು ಮೈತುಂಬಾ ಕಾಯಿ ಕೊಟ್ಟು ಪ್ರಕೃತಿಗೆ ಉಪಕರಿಸುವುದೇ ತನ್ನ ಧರ್ಮವೆಂದು ಈ ಗಿಡಗಳು ನಂಬಿವೆ. ಗಂಟಲುನೋವಿಗೆ ಇದು ಅತ್ಯುತ್ತಮ ಔಷಧಿ. ನಾವು ಸಣ್ಣದಿರುವಾಗ ಅದನ್ನು ಅರೆದು ಗಂಟಲಿನ ಒಳ ಭಾಗಕ್ಕೆ ಲೇಪಿಸಿ ಕಫ ತೆಗೆಯುತ್ತಿದ್ದರು.. ಆಗ ಕಣ್ಣು ಮೂಗಲ್ಲೆಲ್ಲಾ ನೀರು!. ನಿಮಗದರ ಉಪ್ಪಿನಕಾಯಿ ಬಗ್ಗೆ ಗೊತ್ತಾ?

ಶಿಕ್ಷಕಿ : ಇಲ್ಲ ಸರ್.. ಹೇಗೆ ಮಾಡೋದು?

ಅಭಿನಂದನ್: ಮಾಮ.. ಅದರ ಉಪ್ಪಿನಕಾಯಿ ತಿನ್ನೋದ್ಯಾರು.. ಅಬ್ಬಬ್ಬಾ.. ಅದೆಷ್ಟೊಂದು ಖಾರ ಇರಬಹುದು!

ಅಲ್ಬರ್ಟ್ : ಇಲ್ಲ ಮಗೂ.. ಖಾರಕ್ಕೆ ಅಂಜಬೇಕೆಂದಿಲ್ಲ. ಒಮ್ಮೆ ತಿಂದ್ರೆ ನೀನು ಬಿಡಲಾರೆ ಗೊತ್ತಾ? ಉಪ್ಪಿನಕಾಯಿ ಮಾಡೋದು ತುಂಬಾನೆ ಸುಲಭ. ಈ ಗಾಂಧಾರಿ ಮೆಣಸನ್ನು ಉಪ್ಪು , ಲಿಂಬೆಹಣ್ಣು, ಹಸಿ ಶುಂಠಿ, ಇಂಗು, ಹಾಗಲ ಜೊತೆ ಸೇರಿಸಿದ್ರೆ ಉಪ್ಪಿನಕಾಯಿ ರೆಡಿ.

ರಜನಿ: ನಂಗೆ ಬಾಯಲ್ಲಿ ನೀರೂರಿತು.. ಎಷ್ಟು ರುಚಿಯಾಗಿಬಹುದಲ್ವಾ?

ಅಲ್ಬರ್ಟ್: ಅಷ್ಟು ಮಾತ್ರವಲ್ಲ. ಈ ಗಾಂಧಾರಿ‌ಮೆ‌ಣಸನ್ನು ಉಪ್ಪು, ಹುಳಿ, ಬೆಲ್ಲದ‌ ಜೊತೆ ರುಬ್ಬಿ ಬಾಣಲೆಯಲ್ಲಿ ಕುದಿಸಿ. ಇಳಿಸುವಾಗ ಇಂಗು ಸಾಸಿವೆ, ಮೆಂತೆ ಹುರಿದು ಪುಡಿ ಮಾಡಿ ಸೇರಿಸಿ.. ಅನ್ನ, ದೋಸೆ, ಇಡ್ಲಿ ಜೊತೆ ತಿಂದು ಹೇಗಿದೆ ಹೇಳಿ.

ಶಿಕ್ಷಕಿ: ವಾವ್! ನೀವು ಹೇಳುವಾಗಲೇ ಆಸೆಯಾಗ್ತಿದೆ..

ಅಲ್ಬರ್ಟ್ : ಹ್ಹ ಹ್ಹ.. ಅಷ್ಟು ಮಾತ್ರವಲ್ಲಮ್ಮ.. ಉದ್ದಿನ ಬೇಳೆ ನೆನೆಸಿ ಉಪ್ಪು ಸೇರಿಸಿ ಅರೆದು ಬಾಳೆಲೆಯಲ್ಲಿ ಹಚ್ಚಿ ಒಣಗಿಸಿಟ್ರೆ ಊಟದ ಸಮಯದಲ್ಲಿ ಎಣ್ಣೆಯಲ್ಲಿ ಕರಿದು ಬಳಕೆ ಮಾಡಬಹುದು. ಚಿತ್ರಾನ್ನಕ್ಕೆ ಹುಣಸೆ ಹುಳಿ ಜೊತೆ ಗಾಂಧಾರಿ ಮೆಣಸನ್ನು ತೆಂಗಿನಕಾಯಿ ಜೊತೆ ರುಬ್ಬಿ ಹಾಕಿ ರುಚಿ.. ಪರಿಮಳ ನೋಡಿ..

ಶಿಕ್ಷಕಿ : ಒಹ್! ನಮ್ಮಲ್ಲಿ ಕೆಂಪು ಮೆಣಸಿನ ಪುಡಿ ಹಪ್ಪಳ, ಸೆಂಡಿಗೆಗೆ, ಸಾರಿಗೆ ಹಾಕ್ತಾರೆ.. ಅದರ ಬದಲು ಈ ಗಾಂಧಾರಿ ಮೆಣಸನ್ನು ಒಣಗಿಸಿ ಪುಡಿ ಮಾಡಿಟ್ಟು ಬಳಸಬಹುದು.

ಅಲ್ಬರ್ಟ್: ಹೌದು, ಖಂಡಿತ. ತೊಟ್ಟು ತೆಗ್ದು ನಿಂಬೆ ಜೊತೆ ಉಪ್ಪಲ್ಲಿ ಸೇರಿಸಿಟ್ರೆ ಬೇಸಿಗೆಯಲ್ಲಿ ಗಂಜಿಗೆ, ಮಜ್ಜಿಗೆಗೆ ಸೇರಿಸಿ ಬಳಸಬಹುದು. ಕೊಡಗಿನಲ್ಲಿ ಇದರ ಸ್ಪೆಶಲ್ ವೈನ್ ತಯಾರಿಸುತ್ತಾರೆ. ಒಂದು ಚಮಚ ವೈನ್ ಗೆ ಒಂದು ಚಮಚ ಜೇನು ಸೇರಿಸಿ ಸೇವನೆ ಮಾಡಿದರೆ ಕಫ, ಕೆಮ್ಮು, ಶೀತ, ಗಂಟಲು ಕೆರೆತ ನಿಂತೇ ಹೋಗುತ್ತದೆ. ಮಹಾರಾಷ್ಟ್ರದಲ್ಲಿ ಟೇಚ ಅಂತ ಇದರ ಚಟ್ನಿ ತಯಾರಿಸ್ತಾರೆ. ಗೋವಾದಲ್ಲಿ ಇದನ್ನು ಬಳಸಿ ಹಪ್ಪಳ ತಯಾರಿಸುವರು. ಗೋಳಿಬಜೆ, ತರಕಾರಿ ಸಲಾಡ್, ರಸಂ, ಪಲಾವ್, ಗೀ ರೈಸ್, ಪಲ್ಯಗಳಿಗೆ ಎಲ್ಲೆಡೆಯೂ ಬಳಸಲು ಆರಂಭಿಸಿದ್ದಾರೆ. ಆದ್ದರಿಂದಲೇ ಚಟಾಕು, ಪಾವು ಅಂತ ಮಾರಾಟವಾಗುತ್ತದೆ. ನೂರು ಗ್ರಾಮ್ ಗಾಂಧಾರಿ ಮೆಣಸಿಗೆ 650 - 700 ರುಪಾಯಿ ಕ್ರಯವಿದೆ. ಜಾನುವಾರುಗಳ ಜ್ವರ ಸಂಬಂಧಿ ಔಷಧಗಳಲ್ಲೂ ಬಳಕೆ ಇದೆ. ಮನುಷ್ಯರಿಗೂ ಜೀರ್ಣಕ್ರಿಯೆ, ಕೈಕಾಲು ಊತ, ಹಲ್ಲು ನೋವು, ಸಂಧಿವಾತ, ಸ್ನಾಯುಸೆಳೆತ, ರಕ್ತದೊತ್ತಡದ ನಿಯಂತ್ರಣ ಕ್ಕೆ ಸಹಕಾರಿ.

ಅಭಿನಂದನ್: ಅಬ್ಬಾ! ಈ ವಾಮನ ರೂಪೀ ಮೆಣಸಿನ ಹಿಂದೆ ಪರಾಕ್ರಮಗಳ ಪಟ್ಟಿ ಬಹಳ ಉದ್ದವಿದೆ!

ಶಿಕ್ಷಕಿ : ಹೌದು ಮಕ್ಕಳೇ.. ಈ ಪ್ರಕೃತಿಯಲ್ಲಿ ಯಾವುದೂ ಕೀಳಲ್ಲ, ಯಾವುದೂ ಮೇಲಲ್ಲ. ಮಾನವನಿಗಂತೂ ಎಲ್ಲ ಸಸ್ಯಗಳೂ ಉಪಕಾರವನ್ನೇ ಮಾಡುತ್ತವೆ.

ಅಲ್ಬರ್ಟ್ : ಹೌದು, ಮಾನವನಿಂದ ಸಸ್ಯಗಳಿಗೆ ಯಾವುದೇ ಪ್ರಯೋಜನ ದೊರೆಯದು. ಆದರೆ ಪ್ರತಿ ಗಿಡ, ಮರ, ಬಳ್ಳಿಗಳು ಮಾನವನಿಗೆ ಸಹಕರಿಸುತ್ತವೆ. ಬದುಕಿಗೆ ಪೂರಕವಾಗಿ ಬಾಳುತ್ತವೆ. ಮಾನವ ಅವುಗಳ ಉಪಯೋಗ ಪಡೆದು ಕೃತಜ್ಞತೆ ಸಲ್ಲಿಸದೆ ಕೃತಘ್ನನಾಗಿ ಅವುಗಳ ನಾಶದತ್ತ ಮನಮಾಡುವ ಮೂಲಕ ತನ್ನ ನಾಶಕ್ಕೆ ತಾನೇ ಮುನ್ನುಡಿ ಬರೆಯುತ್ತಿದ್ದಾನೆ.

ಶಿಕ್ಷಕಿ: ನಿಜ, ನಾವದನ್ನು ಈ ನಿಷ್ಪಾಪಿ ಸಸ್ಯಗಳ ಪರಿಚಯ ಮಾಡಿಕೊಳ್ಳುವ ಮೂಲಕ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದೇವೆ. ಈ ಗಾಂಧಾರಿ ಮೆಣಸಿನ ಒಂದೆರಡು ಸಸಿಗಳನ್ನು ಚಟ್ಟಿಯಲ್ಲಿ ನೆಟ್ಟರೂ ದಿನದ ಖರ್ಚಿಗೆ ಸಾಕು. ನಾವಿದರ ಬಗ್ಗೆ ಗಮನ ಹರಿಸೋಣ. ಮಕ್ಕಳೇ, ರಾಬರ್ಟ್ ಸರ್ ರವರು ಈ ಚೋಟುದ್ದದ ಮೆಣಸಿನ ಮಹಾತ್ಮೆಯನ್ನು ಸವಿಸ್ತಾರವಾಗಿ ತಿಳಿಸಿದ್ದಾರೆ. ಅವರಿಗೆ ವಂದನೆಗಳನ್ನು ಸಲ್ಲಿಸೋಣ.

ಚಿತ್ರ ಮತ್ತು ಬರಹ : ವಿಜಯಾ ಬಿ ಶೆಟ್ಟಿ ಸಾಲೆತ್ತೂರು, ಬಂಟ್ವಾಳ