ನಿಷ್ಪಾಪಿ ಸಸ್ಯಗಳು (ಭಾಗ ೯೪) - ಬಿಂಬುಳಿ ಗಿಡ


ಕೆಲವು ಗಿಡ ಮರ ಬಳ್ಳಿಗಳನ್ನು ಕಂಡಾಗ ನಮಗೇನೋ ವಿಶೇಷ ಮಮತೆ ಮೂಡುವುದುಂಟು. ಅವುಗಳ ಎಲೆಗಳ ಜೋಡಣೆ, ಹೂಗಳ ಸೌಂದರ್ಯ, ಬೆಳೆಯುವ ಕ್ರಮ.. ಹೀಗೆ ಏನಾದರೊಂದು ಹಿನ್ನೆಲೆ ಇದ್ದೇ ಇರುವುದು. ಕೆಲವು ಸಸ್ಯಗಳಿಗೆ ತಮ್ಮ ಹೂ, ಕಾಯಿ, ಹಣ್ಣುಗಳ ಬಗ್ಗೆ ಅತೀವ ಪ್ರೀತಿ. ಮೈತುಂಬಾ ತಮ್ಮ ಮರಿಗಳನ್ನು ಹೊತ್ತುಕೊಳ್ಳುತ್ತವೆ. ಅದೂ ಋತುಮಾನ ಮೀರಿ ಇಡೀ ವರ್ಷ ಹೂ, ಕಾಯಿ, ಹಣ್ಣುಗಳನ್ನು ಬಿಡುತ್ತಿರಬೇಕಾದರೆ ಗಿಡದ ಆರೋಗ್ಯ ಪ್ರಜ್ಞೆ ಎಷ್ಟಿರಬೇಕು! ಸೋಜಿಗವಲ್ಲವೇ! 'ಬಿಂಬುಳಿ' ಹೀಗೆ ನಮ್ಮನ್ನು ಚಕಿತಗಳಿಸುವಂತಹ ಒಂದು ನಿಷ್ಪಾಪಿ ಸಸ್ಯ. ಬಿಂಬುಳಿಯ ಹೆಸರು ಕೇಳಿದೊಡನೆ ನಾಲಿಗೆಯಲ್ಲಿ ನೀರೂರದಿರದು. ನೆಲ್ಲಿಕಾಯಿ ಎಲೆಯನ್ನೇ ಹೋಲುವ ದೊಡ್ಡ ಗಾತ್ರದ 30-60 ಸೆ.ಮೀ. ಉದ್ದದ ಪರ್ಯಾಯ ಗರಿರೂಪದ ಅಂಡಾಕಾರದ ಎಲೆಗಳು. ಎಲೆಗಳಿಗೂ ಹುಳಿ ರುಚಿ.
ಕಾಂಡದ ಮೇಲೆ ನೆಲದಿಂದ ತುದಿಯವರೆಗೂ ಸೂಕ್ಷ್ಮ ಕಣ್ಣುಗಳಲ್ಲೆಲ್ಲ ಗುಂಪು ಗುಂಪಾದ ಹೂಗೊಂಚಲುಗಳು ಮೂಡುವುದು ಈ ಗಿಡದ ವಿಶೇಷತೆ. ಐದು ದಳಗಳ ಹಳದಿ - ಹಸಿರು, ಕೆಂಪು ನೇರಳೆ ಹೂಗಳಿಗೆ ನವಿರಾದ ಸುವಾಸನೆಯಿದೆ. ಇದು ಉಷ್ಣವಲಯದ ಸಣ್ಣ ಜಾತಿಯ ಮರ. 15 ಮೀಟರ್ ಗಳೆತ್ತರಕ್ಕೂ ಬೆಳೆಯಬಲ್ಲದು. ಕಾಂಡವು ತ್ವರಿತವಾಗಿ ವಿಭಜನೆಗೊಳ್ಳುತ್ತಾ ಗುಂಪಾದ ಸಸ್ಯಗಳಂತೆ ಶಾಖೆಗಳು ಹರಡಿಕೊಳ್ಳುತ್ತವೆ. ಇಂಡೋನೇಷ್ಯಾ ದ ದ್ವೀಪಗಳಿಗಿದು ಸ್ಥಳೀಯ ಸಸ್ಯ. ಆಗ್ನೇಯ ಏಷ್ಯಾ ಭಾಗದಲ್ಲಿ ಇದೊದು ಸಾಮಾನ್ಯ ಸಸ್ಯ. ದಕ್ಷಿಣ ಏಷ್ಯಾ, ಅಮೇರಿಕಾದ ಕೆಲವು ಭಾಗಗಳಿಗೆ ನಿಧಾನಕ್ಕೆ ಹರಡಿಕೊಂಡಿತು. ಭಾರತದ ಕರವಳಿಯಲ್ಲಿ , ತೋಟ , ಗದ್ದೆ ಬದುಗಳಲ್ಲಿ ಯಾರ ಕೋರಿಕೆಯೂ ಇರದೆ ಹುಟ್ಟಿಕೊಳ್ಳುವ ಗಿಡ. ಹತ್ತಾರು ಮನೆಗಳಿಗೆ ಒಂದು ಗಿಡವಿದ್ದರೆ ಸಾಕು. ಎಲ್ಲಾ ಮನೆಗಳ ಹುಳಿಯ ಅಗತ್ಯವನ್ನು ಪೂರೈಸಬಲ್ಲದು!. ತೊಂಡೆ ಕಾಯಿಯನ್ನು ಹೋಲುವ ಮೃದುವಾದ ಕಾಯಿಗಳು. ತೆಳುವಾದ ಸಿಪ್ಪೆ. ಹಸಿರು ಹಳದಿ ವರ್ಣದ ಹಣ್ಣುಗಳು ಆಕರ್ಷಕವಾಗಿರುತ್ತವೆ. ಚಪ್ಪಟೆಯಾದ ಕಂದು ಬಣ್ಣದ ಆರೇಳು ಬೀಜಗಳಿರುತ್ತವೆ. ಕಾಯಿ, ಹಣ್ಣಿನ ನೀರು ಸ್ವಲ್ಪ ಅಂಟಿನಂತೆ ಕೈಗೆ ಮೆತ್ತಿಕೊಳ್ಳುತ್ತದೆ. ಹಣ್ಣನ್ನು ಬಳಕೆ ಮಾಡುವುದು ಕಡಿಮೆ. ಎಲ್ಲಾ ಋತುಮಾನದಲ್ಲೂ ಈ ಗಿಡ ಫಲದಿಂದ ತುಂಬಿತುಳುಕುತ್ತಿರುತ್ತದೆ. ಕಾಯಿ, ಹಣ್ಣುಗಳಿಗೆ ವಿಶೇಷ ಪರಿಮಳವಿದೆ. ಪಕ್ಷಿಗಳಿಂದ, ಬಾವಲಿಯಂತಹ ಸಣ್ಣ ಪುಟ್ಟ ಪ್ರಾಣಿಗಳಿಂದ ಈ ಬಿಂಬುಲಿಯ ಬೀಜ ಪ್ರಸಾರವಾಗುವುದು.
ಅವೆರ್ಹೋವಾ ಬಿಲಿಂಬಿ (Averrhoa bilimbi) ಎಂಬ ವೈಜ್ಞಾನಿಕ ನಾಮಧೇಯದ ಬಿಂಬುಲಿ ಅಕ್ಸಲಿಡೇಸಿ (Oxalidaceae) ಕುಟುಂಬಕ್ಕೆ ಸೇರಿದೆ. ಕನ್ನಡದಲ್ಲಿ ಬಿಳಿಂಬಿ, ಬಿಂಬಿಲಿ ಎಂಬ ಹೆಸರಿದ್ದು ತುಳುವಿನಲ್ಲಿ ಬಿಂಬುಲಿ (ಳಿ) ಎನ್ನುವರು.
ಅತ್ಯಂತ ತೇವ ಭಾಗದಲ್ಲಿ ಬೆಳೆಯದ ಬಿಂಬುಳಿ ಗಾಳಿ, ಶೀತಕ್ಕೆ ಹೆದರುತ್ತದೆ. ಬಟ್ಟೆಗೆ ಬಣ್ಣ ಹಾಕಲು, ಕಲೆ ನಿವಾರಿಸಲು, ಬ್ಲೇಡ್ ನಂತಹ ವಸ್ತುಗಳ ಹಾಗೂ ಹಿತ್ತಾಳೆ ತಾಮ್ರಗಳ ಪಾತ್ರೆಗಳನ್ನು ತೊಳೆಯಲು ಬಿಂಬುಳಿ ಬಳಕೆಯಾಗುತ್ತದೆ. ಶುಷ್ಕ ಋತುವಿನಲ್ಲಿ ಈ ಹಣ್ಣುಗಳಲ್ಲಿ ವಿಟಮಿನ್ C ಅತ್ಯಧಿಕವಾಗಿರುತ್ತದೆ. ಕ್ಯಾಲ್ಸಿಯಂ, ಪೊಟಾಸಿಯಂ ಸಮೃದ್ಧವಾಗಿರುತ್ತದೆ. ಹಣ್ಣುಗಳು ಸೇವನೆಗೆ ಸುರಕ್ಷಿತವಾದರೂ ಒಂದೇ ಬಾರಿಗೆ ತುಂಬಾ ಕಾಯಿ, ಹಣ್ಣು ಸೇವಿಸುವುದು ಅಥವಾ ನಿಯಮಿತವಾಗಿ ಬಳಸುವುದು ಉತ್ತಮವಲ್ಲ. ಇದರಿಂದ ಅಜೀರ್ಣ, ಎದೆಯುರಿ, ಜಠರ ಕರುಳಿನ ಸಮಸ್ಯೆಗೆ ಕಾರಣವಾಗಬಹುದು. ಕೊಲೆಸ್ಟರಾಲ್ ಚಿಕಿತ್ಸೆಗೆಂದು ಬಳಸಿದರೂ ಇದು ಮೂತ್ರಪಿಂಡಕ್ಕೆ ಸಮಸ್ಯೆ ನೀಡಬಲ್ಲದು. ಮಧುಮೇಹ ವಿರೋಧಿ, ಅಧಿಕ ರಕ್ತದೊತ್ತಡ ನಿವಾರಕ, ಕ್ಯಾನ್ಸರ್ ವಿರೋಧಿ ಗಾಯವನ್ನು ಬೇಗ ಗುಣಪಡಿಸುತ್ತದೆ, ಅಲರ್ಜಿ, ಮೂಲವ್ಯಾಧಿ, ಬೊಜ್ಜು ನಿವಾರಕವೆಂದು ಸಂಶೋಧನೆಗಳು ತಿಳಿಸಿದರೂ ವೈದ್ಯರ ಸಲಹೆ ಇರದೆ ಸೇವಿಸುವುದು ಒಂದಿಷ್ಟು ಅಪಾಯಕಾರಿಯೇ ಸರಿ.
ಬಾಲ್ಯದಲ್ಲಿ ಉಪ್ಪಿನಲ್ಲಿ ಹಾಕಿಟ್ಟ ಹುಳಿ.. ಹುಳಿ ಬಿಂಬುಳಿ ತಿನ್ನುವುದರಲ್ಲೇ ಒಂದು ಸೊಗಸಿತ್ತು. ಬಾಯಲ್ಲಿ ನೀರೂರಿಸುವ ಇದರ ಉಪ್ಪಿನಕಾಯಿಯನ್ನು ಕ್ಷಿಪ್ರವಾಗಿ ತಯಾರಿಸಬಹುದು.. ಹಾಗೂ ಅದೇ ವೇಗದಲ್ಲದು ಕೊಳೆತೂ ಹೋಗಬಹುದು. ಗಾಂಧಾರಿ ಮೆಣಸು, ಬೆಳ್ಳುಳ್ಳಿ ಜೀರಿಗೆ ಉಪ್ಪು ಕಾಯಿತುರಿ ಹಾಕಿ ಕುಟ್ಟಿಮಾಡಿದ ತರಿತರಿ ಚಟ್ನಿಗೆ ಸಾಸಿವೆ, ಉದ್ದಿನಬೇಳೆ, ಒಣಮೆಣಸು, ಕರಿಬೇವು ಹಾಕಿದ ತೆಂಗಿನೆಣ್ಣೆಯ ಒಗ್ಗರಣೆ ಊಟ ಸೇರದವನನ್ನೂ ಉಣಿಸುವುದು. ಟೊಮೆಟೊ ಬದಲು ಇದನ್ನು ಬಳಸಬಹುದು. ಆದರೆ ತುಂಬಾ ಪಿತ್ತ ಹಾಗೂ ತುಂಬಾ ಉಷ್ಣವೆಂಬುದನ್ನು ಮರೆಯಲಾಗದು. ಇದರ ಎಲೆಗಳನ್ನು ಸೂಪ್ ತಯಾರಿಕೆಗೆ ಬಳಸುವರು. ಬೇಗ ಬೇಯದ ತರಕಾರಿಗೆ ನಾಲ್ಕು ಬಿಂಬುಳಿ ಹಾಕುವುದು ಹಿರಿಯರ ರೂಢಿಯಾಗಿತ್ತು. ಕರಾವಳಿಯಲ್ಲಿ ಮೀನು ಸಾರಿಗೆ ಬಳಸದ ಮನೆಗಳೇ ವಿರಳವೇನೊ. ಬಿಂಬುಳಿಯನ್ನು ಉಪ್ಪಲ್ಲಿ ಹಾಕಿಟ್ಟು ಒಣಗಿಸಿ ಅಥವಾ ಹುಡಿಮಾಡಿಟ್ಟು ಕೂಡ ಬಳಸುವರು. ಪೇಸ್ಡ್, ಹುಳಿ ಮಸಾಲೆ, ಜಾಮ್, ಜೆಲ್ಲಿ, ಪಾನೀಯಗಳಾಗಿ ಎಲ್ಲಡೆ ಬಳಕೆಯಲ್ಲಿದೆ. ಹಿತಮಿತವಾಗಿ ಬಳಸಿದರೆ ಬಿಂಬುಳಿಯನ್ನು ಒಂದು ಔಷಧಿಯಾಗಿ ಒಂದು ತರಕಾರಿಯಾಗಿ ಸ್ವೀಕರಿಸಬಹುದು. ವರ್ಷವಿಡೀ ದೊರಕುವ ಸಾಮರ್ಥ್ಯ ಹೊಂದಿರುವ ಬಲು ಅಪರೂಪದ ಸಸ್ಯವನ್ನು ನಾವೂ ಬೆಳೆಸಬಹುದು. ಕಾಂಡವು ಬೇಗನೆ ಬೆಳೆಯುವ ಮರವಲ್ಲವಾದ ಕಾರಣ ಕುಬ್ಜವಾಗಿಯೂ ಕಾಪಾಡಿಕೊಳ್ಳಬಹುದು. ರಜೆಯಲ್ಲಿ ಅಜ್ಜಿಮನೆ, ಮಾವನ ಮನೆಗೆಂದು ತಿರುಗಾಟ ನಡೆಸುವ ನೀವೊಮ್ಮೆ ಬಿಂಬುಳಿಯ ರುಚಿಯನ್ನು ಸವಿಯಲೇ ಬೇಕು.. ಏನಂತೀರಿ?
ಚಿತ್ರ - ಬರಹ : ವಿಜಯಾ ಬಿ ಶೆಟ್ಟಿ ಸಾಲೆತ್ತೂರು, ಬಂಟ್ವಾಳ