ನಿಷ್ಪಾಪಿ ಸಸ್ಯಗಳು (ಭಾಗ ೯೬) - ಅನಂತ ಪುಷ್ಪ



ನಾವು ನಮ್ಮ ಬಾಲ್ಯದಲ್ಲಿ ರಜೆ ಸಿಕ್ಕರೆ ಸಾಕು. ಅಜ್ಜಿ ಮನೆಗೆ ಓಡುತ್ತಿದ್ದೆವು. ಗುಡುಗು, ಗಾಳಿ, ಮಳೆಗೆ ಬೀಳುವ ತರಹಾವರಿ ಮಾವಿನ ಹಣ್ಣುಗಳನ್ನು ಸ್ಪರ್ಧೆಗೆಂಬಂತೆ ಹೆಕ್ಕುತ್ತಿದ್ದೆವು, ತಿನ್ನುತ್ತಿದ್ದೆವು. ಮುಳ್ಳಿನ ಗಿಡಗಳ ನಡುವೆ ಅನಾನಸು ಹಣ್ಣುಗಳಿಗೆ ಲಗ್ಗೆ ಇಡುತ್ತಿದ್ದೆವು. ಬಣ್ಣಬಣ್ಣಗಳ ಗೋರಂಟೆ ಹೂವುಗಳ ಮಾಲೆ ಮಾಡಿ ತಲೆತುಂಬಾ ಮುಡಿಯುತ್ತಿದ್ದೆವು. ಬೆಟ್ಟುಗದ್ದೆಗಳ ನಡುವಿನ ನೇರಳೆ ಹಣ್ಣಿನ ಮರಕ್ಕೆ ಕೂಡಿದಷ್ಟು ಕಲ್ಲೆಸೆಯುತ್ತಿದ್ದೆವು. ಆ ಬೆಟ್ಟು ಗದ್ದೆಗಳಿಗೆ ಒಂದೊಂದಕ್ಕೂ ಒಂದೊಂದು ಹೆಸರಿತ್ತು. ಸತ್ತವರ ಹೆಣ ಸುಡಲೆಂದೇ ಮೀಸಲಾದ "ದೂಪೆದೊಟ್ಟು" ಎನ್ನುವ ಬೆಟ್ಟು ಗದ್ದೆಯೂ ಅದರಲ್ಲೊಂದು. ಬಹಳ ಹಳೆಯದಾದ ಅಂದರೆ ಎಷ್ಟೋ ವರ್ಷಗಳಿಂದ ಆ ಗದ್ದೆಯ ಬದುವಿನಲ್ಲೊಂದು ಅನಂತ ಪುಷ್ಪದ ಗಿಡವಿತ್ತು.
ಅದರ ಯೋಗಕ್ಷೇಮವನ್ನು ಯಾರೂ ನೋಡುವವರಿರಲಿಲ್ಲ. ಆದರೂ ಆ ಗಿಡ ಬೇಸಿಗೆ ಬಂತೆಂದರೆ ಬಿಳಿ ಬಟ್ಟೆ ಹೊದ್ದು ನಿಂತಂತೆ ಕೆನೆ ಬಣ್ಣದ ಹೂಗಳಿಂದ ತುಂಬಿರುತ್ತಿತ್ತು. ಸುಮಾರು ಆರೇಳಡಿ ಎತ್ತರಕ್ಕೆದ್ದ ಈ ಗಿಡ ಹರಡಿಕೊಂಡು ಮೇಲ್ನೋಟಕ್ಕೆ ವೃತ್ತಾಕಾರವಾಗಿತ್ತು. ಎಲೆಗಳು ಹೊಳೆಯುವ ಹಸಿರಿನಿಂದ ದೂರಕ್ಕೇ ಕಂಗೊಳಿಸುತ್ತಿದ್ದವು. ಒಂದೇ ಗಂಟಿನಲ್ಲಿ ಗುಂಪು ಎಲೆಗಳಂತೆ ಬೆಳೆಯುವ ಎಲೆಗಳು ಒಟ್ಟೊಟ್ಟಿಗೆ ಸುತ್ತಿಕೊಂಡಂತೆ ಕಂಡರೂ ಪರಸ್ಪರ ವಿರುದ್ಧ ದಿಕ್ಕಿಗೆ, ಕೆಲವೊಮ್ಮೆ ಪರ್ಯಾಯವಾಗಿಯೂ ಇತ್ತು. ಅದು ಸ್ವಲ್ಪ ಗಟ್ಟಿ ಜಾತಿಯ ಗಿಡವೆಂದರೂ ತಪ್ಪಲ್ಲ.
ದನಗಳನ್ನು ಮೇಯಲು ಬಿಟ್ಟರೆ ನಮ್ಮತ್ತೆ ಅದರ ಬಳಿಯಲ್ಲೇ ಸಾಗುತ್ತಾ ಒಂದು ಹೂವನ್ನು ಮುಡಿದು ನಮಗೂ ಒತ್ತಾಯದಿಂದ ಮುಡಿಸುತ್ತಿದ್ದರು. ನಮಗಾಗ ಅದರ ಘಮ್ಮೆನ್ನುವ ಸುವಾಸನೆಯ ಸ್ನಾನವಾಗುತ್ತಿತ್ತು..! ಆ ಪರಿಮಳಕ್ಕೆ ಎಂತಹ ದಿವ್ಯ ಅನುಭೂತಿ ಇತ್ತೆಂದರೆ ಕಣ್ಣುಗಳು ಅರಿವಿರದೆ ಮುಚ್ಚಿಕೊಳ್ಳುತ್ತಿದ್ದವು. ಹಾಯೆನಿಸುವಷ್ಟು ಪ್ರಶಾಂತ ಹರಿವು..!
ಆದರೆ ಹೆಣ ಸುಡುವ ಗದ್ದೆಯಾದುದರಿಂದ ಭಯದಿಂದ ನಾವು ಒಬ್ಬೊಬ್ಬರೇ ಅಲ್ಲಿ ಹೋಗಿ ಹೂವು ಕೀಳುವ ದುಸ್ಸಾಹಸ ಮಾಡುತ್ತಿರಲಿಲ್ಲ. ಅತ್ತೆಗೋ ಬಿಡುವಿನ ವೇಳೆಯೇ ಅಪರೂಪ. ಅಂತೂ ಆ ಹೂವು ರಜಾ ದಿನಗಳಲ್ಲಿ ಕಾಡುತ್ತಲೇ ಇತ್ತು. ಹತ್ತು ಮಿ.ಮೀ. ನಷ್ಟುದ್ದದ ತೊಟ್ಟಿಗೆ ಅಡರಿಕೊಂಡ ಪುಷ್ಪ ಪಾತ್ರೆ. ಅದರ ತುದಿಯಲ್ಲಿ ಲಾಸ್ಯದಿಂದ ಅರಳಿದ ವೈಯ್ಯಾರದ ಕೆನೆವರ್ಣದ ಹೂವಿನೆಸಳುಗಳು..! ಅಡಿಭಾಗದಲ್ಲಿ ಐದಾರು ಸೆಂ.ಮೀ. ಉದ್ದದ ಐದು ಅಂಡಾಕಾರದ ಪಕಳೆಗಳು, ಅದರ ಮೇಲ್ಭಾಗದಲ್ಲಿ ಮತ್ತೆ ಒಳವೃತ್ತದಲ್ಲಿ ನಾಲ್ಕೈದು ಹಾಗೂ ಮೂರನೇ ಸುತ್ತಿನಲ್ಲಿ ಮತ್ತೆ ನಾಲ್ಕೈದು ಪಕಳೆಗಳು. ಇವುಗಳು ಮುಂಜಾವಿನಿಂದ ಹೊತ್ತೇರುವವರೆಗೂ ನಿಧಾನಕ್ಕೆ ಬಿಚ್ಚಿಕೊಳ್ಳುತ್ತಾ ಕೊನೆಗೆ ಹಳದಿ ವರ್ಣದ ಕೇಸರಗಳು ಕಾಣಿಸುತ್ತವೆ. ನಿಶೆ ಸರಿವ ಹೊತ್ತಲ್ಲಿ ವಾತಾವರಣಕ್ಕೆ ನಶೆ ಏರಿಸುವ ಈ ಪುಷ್ಪದ ಸುವಾಸನೆ ಪ್ರಕೃತಿಯ ಅಪೂರ್ವ ಕೊಡುಗೆ ಎಂದರೆ ತಪ್ಪಲ್ಲ. ಒಂದು ಹೂವಿದ್ದರೆ ಇಡೀ ಕೋಣೆಗೇ ಆವರಿಸಿಕೊಳ್ಳುವ ಶಕ್ತಿಯುತ ಪರಿಮಳ ಹೊತ್ತ ಈ ಹೂವೇ ಅನಂತಪುಷ್ಪ ಅಥವಾ ಗಾರ್ಡೇನಿಯಾ ಜಾಸ್ಮಿನಾಯ್ಡ್ಸ್ (Gardenia jasminoides).
ರೂಬಿಯೇಸಿ (Rubiaceae) ಕುಟುಂಬದ ಸದಸ್ಯ ಸಸ್ಯವಾದ ಈ ಅನಂತ ಪುಷ್ಪವನ್ನು ಆಂಗ್ಲ ಭಾಷೆಯಲ್ಲಿ ಕೇಪ್ ಜಾಸ್ಮಿನ್, ಕನ್ನಡದಲ್ಲಿ ಸುವಾಸನೆ ಮಲ್ಲೆ ಹಿಂದಿಯಲ್ಲಿ ಗಂಧರಾಜ ಎಂದೂ ಕರೆಯುವರು. ಕಪ್ & ಸಾಸರ್, ಇಂದ್ರಕಮಲ, ಎಂಬ ವಿಶಿಷ್ಟವಾದ ಹೆಸರುಗಳನ್ನು ಕಂಡಾಗ ಈ ಹೂವಿನ ಘನತೆ ಅರಿವಿಗೆ ಬರದಿರದು. ಇದೊಂದು ಹೂ ಬಿಡುವ ಸಸ್ಯ ಜಾತಿ.6 ರಿಂದ 10 ಅಡಿಗಳೆತ್ತರ ಬೆಳೆವ ಈ ಪೊದೆಸಸ್ಯ ದಟ್ಟವಾದ ರೆಂಬೆಕೊಂಬೆಗಳ ಜೊತೆ ಸಮಾನವಾಗಿ ಸುತ್ತಲೂ ಹರಡಿಕೊಳ್ಳುತ್ತದೆ.
ವಿಯೆಟ್ನಾಂ ನಲ್ಲಿ ಜನಿಸಿದೆ ಎಂದು ಹೇಳಲಾದ ಅನಂತ ಪುಷ್ಪ ಜಪಾನ್, ಚೀನಾ, ಪೂರ್ವ ಹಿಮಾಲಯಕ್ಕೆ ಸ್ಥಳೀಯವಾಗಿದೆ. ಹೊಳೆ, ಪರ್ವತಗಳ ಇಳಿಜಾರು, ಬೆಟ್ಟ ಕಣಿವೆ, ಹೊಲಗಳ ಬದಿಗಳಲ್ಲಿ ಒಟ್ಟಾರೆ ಸಮುದ್ರಮಟ್ಟದಿಂದ 1500 ಮೀ ಎತ್ತರದವರೆಗೂ ಬೆಳೆಯಬಲ್ಲದು. ಉಷ್ಣ ಹವಾಗುಣ ಆಶಿಸುವ ಈ ನಿಷ್ಪಾಪಿ ಸಸ್ಯ ಆಫ್ರಿಕಾ, ಏಷ್ಯಾ, ಮಡಗಾಸ್ಕರ್, ಆಸ್ಟ್ರೇಲಿಯಾ, ಫೆಸಿಫಿಕ್ ದ್ವೀಪಗಳಲ್ಲೂ ಹರಡಿದೆ. ಆರರಿಂದ ಹತ್ತಿಪ್ಪತ್ತು ಎಸಳುಗಳವರೆಗೆ ವಿವಿಧ ವಿನ್ಯಾಸದ ಹೂವುಗಳನ್ನು ನೀಡುವ 128 ವಿಧದ ಸಸ್ಯಗಳನ್ನು ಈ ಗಾರ್ಡೇನಿಯಾ ಜಾಸ್ಮಿನಾಯ್ಡ್ಸ್ ನಲ್ಲಿ ಗುರುತಿಸಿದ್ದಾರೆ.
ಕಾರ್ಲ್ ಅನ್ನಾಸೆಸ್ ಹಾಗೂ ಜೊನ್ ಎಲ್ಲಿಸ್ ರವರು ಅಲೆಕ್ಸಾಂಡರ್ ಗಾರ್ಡೆನ್ ರವರ ನೆನಪಿಗೆ ಈ ಹೆಸರನ್ನು ನೀಡಿದ್ದಾರೆನ್ನಲಾಗಿದೆ. ರಾಯಲ್ ಹಾರ್ಟಿಕಲ್ಚರಲ್ ಸೊಸೈಟಿಯ ಪ್ರತಿಷ್ಠಿತ ಗಾರ್ಡನ್ ಮೆರಿಟ್ ಪ್ರಶಸ್ತಿ ನಮಗೆ ಕಾಟು ಹೂವಾಗಿ ಕಾಣಿಸುವ ಅನಂತ ಪುಷ್ಪಕ್ಕೆ ದೊರಕಿದೆ. ಚೀನಾದಲ್ಲಿ ಕನಿಷ್ಟ ಒಂದು ಸಾವಿರ ವರ್ಷದಿಂದ ಬೆಳೆಯುತ್ತಿರುವ ಈ ಸಸ್ಯದ ಹೂವನ್ನು ಫ್ರಾನ್ಸ್ ನಲ್ಲಿ ಸುಂದರವಾಗಿ ಕಾಣಲು ಪುರುಷರು ಮುಡಿದುಕೊಳ್ಳುವರಂತೆ ಗೊತ್ತಾ!
ನಾಯಿ, ಬೆಕ್ಕು, ಕುದುರೆಗೆ ವಿಷವಾಗಿ ಕಾಡುವ ಅನಂತ ಪುಷ್ಪದ ಸಾರಭೂತ ತೈಲ ಅಂತರಾಷ್ಟ್ರೀಯ ವ್ಯಾಪಾರದ ವಸ್ತುವಾಗಿದೆ. ಇದರ ಪುಟಾಣಿ ಹಣ್ಣೂ ಬಟ್ಟೆಗೆ ಬಣ್ಣಕ್ಕಾಗಿ ಬಳಕೆಯಲ್ಲಿದೆ. ಮಾನವನಿಗೆ ತಲೆನೋವು, ನರಗಳ ಅಸ್ವಸ್ಥತೆ, ಗಂಟಲು ನೋವು, ಜ್ವರ, ಮೂತ್ರಪಿಂಡ, ಶ್ವಾಸಕೋಶದ ತೊಂದರೆ ಇತ್ಯಾದಿಗಳಿಗೆ ಜಾನಪದ, ಸಿದ್ಧ, ಸಾಂಪ್ರದಾಯಿಕ ಔಷಧಿಯಾಗಿದೆ. ಚೀನದಲ್ಲಿದು ಪಾರಂಪರಿಕ ಔಷಧೀಯ ಸಸ್ಯವಾಗಿದೆಯಂತೆ!
ಏಷ್ಯಾ, ಚೀನಾ, ಕೊರಿಯಾದಲ್ಲಿ ಈ ಸಸ್ಯ ಔಷಧಿ ಮಾತ್ರವಲ್ಲದೆ ಆಹಾರಕ್ಕಾಗಿಯೂ ಬಳಕೆಯಲ್ಲಿದೆ. ಪೂರ್ಣ ಸೂರ್ಯನ ಬೆಳಕನ್ನು ಪ್ರೀತಿಸುವ ಅನಂತಪುಷ್ಪ ಸ್ಥಿರವಾದ ತೇವಾಂಶ, ಆಮ್ಲೀಯ ಸಾವಯವ ಸಮೃದ್ಧ ಮಣ್ಣಿನಲ್ಲಿ ನೀರು ಬಸಿದು ಹೋಗುವ ಸ್ಥಳವನ್ನು ಇಷ್ಟ ಪಡುತ್ತದೆ. ನೈಟ್ರೋಜನ್ ಮತ್ತು ಕ್ಯಾಲ್ಸಿಯಂ ಕೊರತೆಯಾದರೆ ಎಲೆಗಳು ಹಳದಿಯಾಗಬಹುದು. ಮೊಗ್ಗುಗಳು ಉದುರಬಹುದು. ಚಟ್ಟಿಯಲ್ಲೇ ಸಾಕಬಹುದಾದ ಹಲವು ವಿನ್ಯಾಸದ ಪುಷ್ಪಗಳನ್ನು ನೀಡುವ ಸಸ್ಯಗಳನ್ನೀಗ ನರ್ಸರಿಯಲ್ಲಿ ಕಾಣಬಹುದು. ನಿಯಮಿತವಾಗಿ ಕತ್ತರಿಸುತ್ತಿದ್ದರೆ ಅದರ ಎಲೆಗಳನ್ನೇ ಗೊಬ್ಬರವಾಗಿ ಬಳಸಿಕೊಂಡು ಹರಡಿಕೊಂಡು ಬೆಳೆದರೆ ನಿತ್ಯವೂ ಹೂವು ನಿಶ್ಚಿತ. ಹೂಗಳಿಗೆ ರೋಗ ಬಾಧೆ ಇದ್ದರೂ ಗಿಡದ ಜೊತೆ ನಿತ್ಯವೂ ಮಾತನಾಡುತ್ತಿದ್ದರೆ ಅಷ್ಟೇನು ಕಾಡದು. ಆದ್ದರಿಂದ ರಜೆಯಲ್ಲಿ ಸುತ್ತಾಡುವ ನೀವು ಈ ಹೂವಿನ ಗಿಡವನ್ನು ಯಾರ ಮನೆಯಲ್ಲಾದರೂ ಕಂಡೇ ಕಾಣುವಿರಿ. ಸುವಾಸನೆ ಮಲ್ಲೆಯನ್ನೊಮ್ಮೆ ಆಘ್ರಾಣಿಸಿ ಆನಂದಿಸಿರಿ.
ಚಿತ್ರ - ಬರಹ : ವಿಜಯಾ ಬಿ ಶೆಟ್ಟಿ ಸಾಲೆತ್ತೂರು, ಬಂಟ್ವಾಳ