ನಿಷ್ಪಾಪಿ ಸಸ್ಯಗಳು (ಭಾಗ ೯೮) - ಮೂಂಡಿ ಗಿಡ



ನಮ್ಮ ಬಾಲ್ಯವು ಕೃಷಿ ಬದುಕಿನ ನಡುವೆ ಸಮೃದ್ಧವಾಗಿತ್ತು. ಸುಗ್ಗಿ ಬೆಳೆಯಲು ಗದ್ದೆ ಉತ್ತು ಹದಗೊಳಿಸುವ ಕಾರ್ಯದಲ್ಲಿ ಸಾಂದರ್ಭಿಕವಾಗಿ ಹಲವು ವೇಳೆ ನೆರೆಹೊರೆಯ ಎತ್ತು ಕೋಣಗಳನ್ನು ಕರೆಸಲಾಗುತ್ತಿತ್ತು. ಈ ವೇಳೆ ಬೆಳಗ್ಗೆ ಬೇಗನೇ ಎದ್ದು ರೈತರು ಗದ್ದೆ ಉಳುಮೆ ಮಾಡಲು ತಯಾರಾಗುವುದಲ್ಲದೇ, ಉಳುಮೆಗಿಂತ ಮೊದಲು ಗದ್ದೆಗೆ ಹಾಕಿದ್ದ ಗೊಬ್ಬರವನ್ನು ಗದ್ದೆ ಪೂರ್ತಿ ಹರಡಿಸುವ ಕೆಲಸವೂ ಬೆಳಕು ಹರಿವ ಮೊದಲು ಮುಗಿಯಬೇಕಿತ್ತು. ಈ ಸಂದರ್ಭದಲ್ಲೆಲ್ಲ ಹೊಟ್ಟೆ ತುಂಬಿಸಲು ತಯಾರಾಗುತ್ತಿದ್ದ ವಿಶೇಷ ತಿಂಡಿಯೆಂದರೆ ಮಣ್ಣಿ. ಈ ಮಣ್ಣಿಯನ್ನು ಹರಡಲು ಬಳಸುತ್ತಿದ್ದ ವಿಶೇಷವಾದ ಎಲೆಯೇ ಮೂಂಡಿ ಗಿಡದ ಎಲೆ.
ಮಳೆಗಾಲ ಕಳೆಯುತ್ತಿದ್ದಂತೆ ಹೇಳದೆ ಕೇಳದೆ ಓಡಿ ಬರುವ ಮಳೆಗೆ ಗದ್ದೆ ತೋಟಗಳಲ್ಲಿ ಕೆಲಸ ಮಾಡುತ್ತಿದ್ದವರು ಒದ್ದೆಯಾಗುವ ಸಂಭವನೀಯತೆ ಸೃಷ್ಟಿಯಾಗುತ್ತಿದ್ದಾಗ ಕೊಡೆಯಂತೆ ರಕ್ಷಣೆ ನೀಡುತ್ತಿದ್ದುದು ಮೂಂಡಿ ಎಲೆ. ಹಪ್ಪಳ, ಸಂಡಿಗೆ ಒಣಗಿಸಲು ಎಲೆ ಬೇಕೇ ಬೇಕು. ಮಳೆಗೆ ಒದ್ದೆಯಾಗಿ ಶೀತ ಜ್ವರ ಆರಂಭವಾಗಿ ಮೂಗು ಸೋರ ತೊಡಗಿ, ತಲೆನೋವು ಕಾಣಿಸಿಕೊಂಡರೆ ಮೂಂಡಿ ಎಲೆಯ ದಂಡು ತಂದು ಬಿಸಿ ಬೂದಿ ಇರುವ ಒಲೆಗೆ ಹಾಕಿ ಹಾಕಿ ಬೆಂದ ಬಳಿಕ ಅದರ ರಸ ತಲೆಗೆ ಹಿಂಡುತ್ತಿದ್ದರು. ಅದರಲ್ಲೇ ಗುಣವೂ ಆಗುತ್ತಿತ್ತು. ನೇಜಿ ನೆಡುವ ಕಾರ್ಯಕ್ಕೆ ಬಂದ ಹತ್ತಾರು ಜನ ಊಟಕ್ಕಿದ್ದರೂ ಕಡ್ಲೆಯ ಜೊತೆ ಸಹಕರಿಸುತ್ತಿದ್ದುದು ಮೂಂಡಿ ಗಡ್ಡೆ!
ಹೀಗೆ ಕೃಷಿಕರ ಬದುಕಿನ ಜೊತೆ ಹಾಸು ಹೊಕ್ಕಾಗಿ ಬದುಕುತ್ತ ತೆರೆಮರೆಗೆ ಸರಿಯುತ್ತಿರುವ ನಿಷ್ಪಾಪಿ ಸಸ್ಯವೇ ಮೂಂಡಿ ಅಥವಾ ಅಲೋಕಾಸಿಯಾ ಮ್ಯಾಕ್ರೋರೈಜೋಸ್ (Alocasia macrorrhizos). ಜೈಂಟ್ ಟ್ಯಾರೋ ಎಂದು ಕರೆಯಲ್ಪಡುವ ಈ ಸಸ್ಯ ಅರೇಸಿ(Araceae) ಕುಟುಂಬದ ಸದಸ್ಯ. ಮಾನವನಿಗೆ ಹಣ್ಣು ಹಂಪಲು ಹಾಗೂ ಗೆಡ್ಡೆ ಗೆಣಸು ಪಾರಂಪರಿಕ ಆಹಾರ. ಪ್ಲಾಸ್ಟಿಕ್ ಹುಟ್ಟಿರದ ಕಾಲಘಟ್ಟದಲ್ಲಿ ಮೂಂಡಿ ಎಲೆ ಹಲವಾರು ಕೆಲಸ ಕಾರ್ಯ ನಿರ್ವಹಿಸಲು ಸಹಾಯಕವಾಗಿತ್ತು.
ಈಗಲೂ ತ್ಯಾಜ್ಯ, ಗೊಬ್ಬರ ಹಾಕುವ ಸ್ಥಳಗಳಲ್ಲಿ, ಬಟ್ಟೆ ಒಗೆದ ನೀರು ಹರಿದಲ್ಲಿ, ಅಡಿಕೆ ತೋಟದಲ್ಲಿ ಮೂಂಡಿ ಗಿಡ ಮಾಯಾವಿಯಂತೆ ಜನ್ಮ ತಳೆಯುತ್ತದೆ. ಒಂದೆರಡು ಮರಿಗಳಲ್ಲವೇ... ಇರಲಿ ಎಂದು ಬೆಳೆಯಲು ಬಿಟ್ಟರೆ ಹಿಂಡಾಗಿ ಮೈತುಂಬಿಕೊಳ್ಳುತ್ತಾ ಸವಾಲಾಗಿ ಕಾಡುವಷ್ಟರ ಮಟ್ಟಿಗೆ ಬೆಳೆದುನಿಲ್ಲುತ್ತದೆ.
ಕೆಸು, ಗೆಣಸು ಇತ್ಯಾದಿಗಳು ವಾರ್ಷಿಕ ಸಸ್ಯಗಳಾಗಿ ಮಣ್ಣಿನೊಳಗೆ ಬೆಳೆದರೆ ಮೂಂಡಿ ಬಹುವಾರ್ಷಿಕ ಸಸ್ಯವಾಗಿ ಮಣ್ಣಿಗಿಂತ ಮೇಲೆ ಬೆಳೆಯುತ್ತದೆ. ಪ್ರಪಂಚದಾದ್ಯಂತ ಉಷ್ಣವಲಯ, ಉಪೋಷ್ಣವಲಯದ ಹವಾಮಾನದಲ್ಲಿ ವ್ಯಾಪಕವಾಗಿ ಬೆಳೆಯುವ ಮೂಂಡಿ ಫಿಲಿಫೈನ್ಸ್, ದ. ಏಷ್ಯಾ, ಫೆಸಿಫಿಕ್ ದ್ವೀಪಗಳಲ್ಲಿ ದೀರ್ಘ ಕಾಲದಿಂದ ಬಳಕೆಯಲ್ಲಿದೆ. ಗಡ್ಡೆಯ ಒಂದು ತುಣುಕು, ಸಸ್ಯದ ತುದಿ ಅಥವಾ ಬೀಜದ ಮೂಲಕ ಜನ್ಮ ತಳೆವ ಮೂಂಡಿ ನೇರವಾಗಿ ಬೆಳೆಯುತ್ತದೆ. ಇದರ ಎಲೆಗಳು ಗಟ್ಟಿಮುಟ್ಟಾದ ಉದ್ದನೆಯ ತೊಟ್ಟಿನ ತುದಿಗೆ ಕಿರೀಟದಂತೆ ಅರಳಿ ಶೋಭೆಯನ್ನು ನೀಡುತ್ತದೆ. ಗಿಡವೊಂದು ಯಕ್ಷಗಾನದ ವೇಷದಂತೆ ಪರಿಣಾಮ ಸೃಷ್ಟಿಸುತ್ತದೆ. ಆದ್ದರಿಂದಲೇ ಮಕ್ಕಳು ಮೂಂಡಿ ಎಲೆ ಕಟ್ಟಿಕೊಂಡು ಯಕ್ಷಗಾನದ ಅನುಕರಣೆ ನಡೆಸುತ್ತಾರೆ. ಮೂಂಡಿಯ ಹಸಿರಾದ ಎಲೆಗಳಲ್ಲಿ ಎದ್ದು ಕಾಣುವ ನಾಳಗಳಿದ್ದು ಮೂರರಿಂದ ಆರಡಿ ಉದ್ದ, ಎರಡರಿಂದ ನಾಲ್ಕಡಿ ಅಗಲದ ಹೃದಯದಾಕಾರದ ಎಲೆಗೆ ತುದಿ ಚೂಪಾಗಿರುತ್ತದೆ. ಆನೆಯ ಕಿವಿಯನ್ನು ಹೋಲುವುದರಿಂದ ಆನೆ ಕಿವಿ ಸಸ್ಯವೆಂದೂ ಕರೆಯುವರು. ವಿಟಮಿನ್ C, ಕಬ್ಬಿಣ, ರಂಜಕದ ಉತ್ತಮ ಮೂಲವಿದು. ಮೂಂಡಿಯ ತಿಳಿ ಕಂದು ಬಣ್ಣದ ನೇರ ಸಿಲಿಂಡರಾಕಾರದ ಕಾಂಡವು ಒರಟಾದ ಹೊರಮೈ ಪಡೆದಿದೆ. ಕ್ಯಾಲ್ಸಿಯಂ ಅಕ್ಸಲೇಟ್ ಇರುವ ಕಾರಣ ಸರಿಯಾಗಿ ನಿರ್ವಹಿಸದಿದ್ದರೆ ಕೈ ಬಾಯಿ ತುರಿಸಬಹುದು. ಆಗ ಬಿಸಿನೀರು, ಹುಣಸೆ ಹಣ್ಣು ಸಹಾಯಕ್ಕೆ ಬರುತ್ತದೆ. ಗಡ್ಡೆಯ ಬಳಕೆಯಲ್ಲಿ ಸಿಪ್ಪೆ ತೆಗೆದ ನಂತರವೇ ನೀರು ಮುಟ್ಟಿಸಬೇಕು. ಕೀಟನಾಶಕಗಳಲ್ಲಿ ಮಿಂದೆದ್ದ ಎಲೆಕೋಸು ಹೂಕೋಸುಗಳು ನಮ್ಮ ಅಡುಗೆ ಮನೆಯ ಖಾಯಂ ಗಿರಾಕಿಗಳಾಗಿದ್ದು ಗೆಡ್ಡೆ ಗೆಣಸು, ಮೂಂಡಿಗಳನ್ನು ನಾವು ಮೂಲೆಗೆಸೆದಾಗಿದೆ. ಇಪ್ಪತ್ತನೇ ಶತಮಾನದವರೆಗೆ ಆರೋಗ್ಯಕರ ಆಹಾರವೆಂದು ಪರಿಗಣಿಸಲ್ಪಟ್ಟ ಕಂದ ಮೂಲಗಳು ಈಗ ಕಡೆಕಣ್ಣ ನೋಟಕ್ಕೂ ನಿಲುಕದಲ್ಲಿ ಸೊರಗಿವೆ. ಎಲ್ಲಾದರೂ ಬ್ರಹ್ಮಕಲಶೋತ್ಸವ, ಜಾತ್ರೆಗಳ ಹೊರೆಕಾಣಿಕೆ ನಡೆಯುವುದಿದ್ದರೆ ಬೆಳೆದ ಮೂಂಡಿ ನೀಡಿ ಕೃತಾರ್ಥರಾಗುತ್ತೇವೆ. ಇದನ್ನು 'ನಾವು ತಿನ್ನದ್ದನ್ನು ಯಾರಾದರೂ ತಿನ್ನಲಿ' ಎಂಬ ಮನೋಭಾವ ಎನ್ನಲೇ? ಆದರೆ ತಿಂದವರಿಗೆ ಗೊತ್ತು ಇದರ ರುಚಿ ಏನೆಂದು.
ಸಿಪ್ಪೆ ತೆಗೆದು ಮೆಟ್ಟು ಕತ್ತಿಯಲ್ಲಿ ಸೀಳಿ ತೆಳ್ಳನೆಯ ತುಂಡುಗಳನ್ನಾಗಿ ಮಾಡಿ ಮತ್ತೆ ಅದನ್ನು ಸಣ್ಣದಾಗಿ ಕತ್ತರಿಸಿ ನೀರಿಗೆ ಹಾಕುತ್ತಾರೆ. ಒಗ್ಗರಣೆ ಚಟಪಟವೆನ್ನುವಾಗ ಹೋಳುಗಳನ್ನು ಸೇರಿಸಿ ಬಾಡಿಸಿದರೆ ಬೇಗನೆ ಬೇಯುತ್ತದೆ ಎನ್ನುತ್ತಾರೆ. ಕೆಲವೊಮ್ಮೆ ಬೇಯಲು ಸತಾಯಿಸುವ ಗಡ್ಡೆಗಳೂ ಇರುತ್ತವೆ. ಆಗ ತೆಂಗಿನ ಗೆರಟೆ ಒಲೆಗೆ ಹಾಕಿದರೆ ಬೇಗ ಬೇಯುತ್ತದೆ ಎಂಬ ನಂಬಿಕೆ ಇದೆ. ಇದರಿಂದ ಕಾಯಿಹುಳಿ, ಉಪ್ಪಿನಕಾಯಿ, ಗಸಿ, ಸಾಂಬಾರ್, ಪಲ್ಯ ತಯಾರಿಸುತ್ತಾರೆ.
ಜೇಡ, ಮೀಲಿಬಗ್, ಶಲ್ಯಕೀಟ, ಗಿಡ ಹೇನು, ಬೇರು ಕೊಳೆತ, ಎಲೆಚುಕ್ಕೆ ರೋಗ ಹೀಗೆ ಹಲವು ಶತ್ರುಗಳ ನಡುವೆಯೂ ಬೆಳೆಯುವ ಮೂಂಡಿ ಹಂದಿ, ಹೆಗ್ಗಣಗಳಿಗೂ ಪ್ರಿಯವಾಗುವುದಿದೆ. ಸೂಕ್ತ ಪರಿಸ್ಥಿತಿಯಲ್ಲಿ ಗಣನೀಯ ಎತ್ತರವನ್ನು ತ್ವರಿತವಾಗಿ ತಲುಪುತ್ತದೆ. ಹಸಿರು ಬಿಳಿ ಪುಷ್ಪ ಸಮೂಹವು ಗುಚ್ಛ ದ ರೂಪದಲ್ಲಿ ಅಪರೂಪಕ್ಕೆ ಕಾಣಿಸುತ್ತದೆ. ಉಷ್ಣವಲಯದ ಹವಾಮಾನದಲ್ಲಿ ವರ್ಷವಿಡೀ ಹೂಗುಚ್ಛ ಕಾಣಬಹುದು.
ಕೋಮಲವಾದ ಬಹುವಾರ್ಷಿಕ ಸಸ್ಯವಾದ ಮೂಂಡಿಯು ತಂಪು ಬಯಸದಿದ್ದರೂ ತೇವವನ್ನು ಇಷ್ಪಪಡುತ್ತದೆ. ಬಳಕೆಗೆ ಮಾತ್ರವಲ್ಲದೆ ಅಲಂಕಾರಕ್ಕಾಗಿ ಬೆಳೆಯಬಹುದು. ನೆಲದಲ್ಲಿಯೇ ಅಲ್ಲದೆ ಕುಂಡದಲ್ಲೂ ಬೆಳೆಸಬಹುದು. ಇನ್ನೇಕೆ ತಡ.. ಮೂಂಡಿಯ ಜೊತೆ ಸ್ನೇಹ ಮಾಡಿ ಮಾತನಾಡಿ.
ಚಿತ್ರ - ಬರಹ : ವಿಜಯಾ ಬಿ ಶೆಟ್ಟಿ ಸಾಲೆತ್ತೂರು, ಬಂಟ್ವಾಳ