ನಿಸರ್ಗದಲ್ಲಿಯೇ ಸಿಗುವ ಪುಕ್ಕಟೆ ಗೊಬ್ಬರ (ರೈತರೇ ಬದುಕಲು ಕಲಿಯಿರಿ-೯)

ನಿಸರ್ಗದಲ್ಲಿಯೇ ಸಿಗುವ ಪುಕ್ಕಟೆ ಗೊಬ್ಬರ (ರೈತರೇ ಬದುಕಲು ಕಲಿಯಿರಿ-೯)

ಬರಹ

(ಸುಭಾಷ ಪಾಳೇಕರ ಅವರ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ವಿಧಾನದ ಪರಿಚಯ, ಮಳೆ ನೀರಿನ ಸದುಪಯೋಗ, ಕಡಿಮೆ ಮಳೆಯಲ್ಲಿಯೂ ಬೆಳೆಯುವ ವಿಧಾನಗಳು ಹಾಗೂ ರೈತರಿಗೆ ಬದುಕುವ ದಾರಿ ತೋರುವ ಕೈಪಿಡಿ)


ಸಸ್ಯಗಳ ಬೆಳವಣಿಗೆಗೆ ಬೇಕಾದ ಗೊಬ್ಬರ ಅಥವಾ ಪೋಷಕಾಂಶಗಳು ನಿಸರ್ಗದಲ್ಲಿಯೇ ಹೇರಳವಾಗಿವೆ. ಅದು ಹೇಗೆ ಗೊತ್ತೆ?

ನಮ್ಮ ಶರೀರವನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಿ. ನಮ್ಮ ಶರೀರದಲ್ಲಿ ವಿವಿಧ ಧಾತುಗಳು ವಿವಿಧ ಪ್ರಮಾಣದಲ್ಲಿವೆ. ಇದರಿಂದಾಗಿ ಶರೀರ ವ್ಯವಸ್ಥೆ ಸರಿಯಾಗಿ ನಡೆದುಕೊಂಡು ಬರುತ್ತಿದೆ. ರಕ್ತದಲ್ಲಿ ಕಬ್ಬಿಣದ ಅಂಶವಿದೆ. ಇನ್ನು ಜಲಜನಕ, ಆಮ್ಲಜನಕ, ಇಂಗಾಲ, ಸಾರಜನಕದಂತಹ ಧಾತುಗಳಂತೂ ಹೇರಳವಾಗಿವೆ. ಇವೆಲ್ಲ ಎಲ್ಲಿಂದ ಬಂದವು?

ನಿಸರ್ಗದಿಂದ.

ನಮ್ಮ ದೇಹದಲ್ಲಿರುವಂತೆ ಸಸ್ಯಗಳಲ್ಲಿಯೂ ವಿವಿಧ ಧಾತುಗಳಿವೆ. ಒಟ್ಟು ೧೦೮ ಧಾತುಗಳು ಸಸ್ಯಗಳ ಬೆಳವಣಿಗೆಯ ಹಿಂದಿವೆ. ಕೆಲವು ಪ್ರತ್ಯಕ್ಷವಾಗಿ, ಇನ್ನು ಕೆಲವು ಧಾತುಗಳು ಪರೋಕ್ಷವಾಗಿ ಸಸ್ಯಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ವಿಜ್ಞಾನಿಗಳು ಇವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿದ್ದಾರೆ.

ಭಾಗ-೧
ಇಂಗಾಲ (ಕಾರ್ಬನ್), ಜಲಜನಕ (ಹೈಡ್ರೋಜನ್) ಹಾಗೂ ಆಮ್ಲಜನಕ (ಆಕ್ಸಿಜನ್).

ಭಾಗ-೨
ನೈಟ್ರೋಜನ್ (ಸಾರಜನಕ), ಫಾಸ್ಪರಸ್ (ರಂಜಕ) ಹಾಗೂ ಪೊಷ್ಯಾಷಿಯಂ.

ಭಾಗ-೩
ಕ್ಯಾಲ್ಸಿಯಂ (ಸುಣ್ಣ), ಸಲ್ಫರ್ (ಗಂಧಕ) ಹಾಗೂ ಮ್ಯಾಗ್ನೀಷಿಯಂ.

ಭಾಗ-೪
ಲಘು ಪೋಷಕಾಂಶಗಳು (ವಿವಿಧ ಧಾತುಗಳು ಅತ್ಯಲ್ಪ ಪ್ರಮಾಣದಲ್ಲಿರುತ್ತವೆ)

ಮೊದಲು ಹೆಸರಿಸಿದ ಮೂರು ಭಾಗಗಳಲ್ಲಿರುವ ಧಾತುಗಳು ಸಸ್ಯಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು ಶೇ.೯೯ ಅಂಶ ಇವುಗಳನ್ನು ಒಳಗೊಂಡಿರುತ್ತದೆ. ಇನ್ನು ಶೇ.೧ ಭಾಗ ನಾಲ್ಕನೇ ಗುಂಪಿನಿಂದ ಬರುತ್ತದೆ. ಅಂದರೆ ಮೊದಲ ಮೂರು ಭಾಗಗಳಲ್ಲಿರುವ ಧಾತುಗಳೇ ಸಸ್ಯಗಳ ಬೆಳವಣಿಗೆಯ ಶೇ.೯೯ ಭಾಗವನ್ನು ನಿರ್ಧರಿಸುವುದು. ಲಘು ಪೋಷಕಾಂಶಗಳ ಪಾತ್ರ ಏನಿದ್ದರೂ ಕೇವಲ ಶೇ.೧ ಮಾತ್ರ.

ಸಸ್ಯಗಳ ಬೆಳವಣಿಗೆಗೆ ಬೇಕಾದ ಮುಖ್ಯ ಧಾತುಗಳಾದ ಇಂಗಾಲ, ಜಲಜನಕ ಮತ್ತು ಆಮ್ಲಜನಕ ಸುತ್ತಲಿನ ವಾತಾವರಣದಿಂದ ದೊರೆಯುತ್ತವೆ. ಸಸ್ಯಗಳು ಇವನ್ನು ನೇರವಾಗಿ ಬಳಸಿಕೊಳ್ಳಬಲ್ಲವು. ಆದರೆ ವಾತಾವರಣದ ಶೇ.೭೮.೬ರಷ್ಟು ಪಾಲು ಹೊಂದಿರುವ ಸಾರಜನಕವನ್ನು ಸಸ್ಯಗಳು ನೇರವಾಗಿ ಹೀರಿಕೊಳ್ಳಲಾರವು. ಈ ಕೆಲಸವನ್ನು ದ್ವಿದಳ ಧಾನ್ಯದ (ಶೇಂಗಾ, ತೊಗರಿ, ಅಲಸಂದೆ ಮುಂತಾದವು) ಬೇರಿನ ಗಂಟುಗಳಲ್ಲಿರುವ ರೈಜೋಬಿಯಂ ಜೀವಾಣುಗಳು ಮಾಡುತ್ತವೆ. ಈ ಜೀವಾಣುಗಳು ವಾತಾವರಣದ ಸಾರಜನಕವನ್ನು ಹೀರಿಕೊಂಡು ಅವನ್ನು ಸಸ್ಯಗಳಿಗೆ ಪೂರೈಸುತ್ತವೆ.

ಅದೇ ರೀತಿ ಮಣ್ಣಿನಲ್ಲಿರುವ ಜೀವಾಣುಗಳು (ಇವು ಬರಿ ಕಣ್ಣಿಗೆ ಕಾಣುವುದಿಲ್ಲವಾದರೂ ಒಂದು ಹಿಡಿ ಮಣ್ಣಿನಲ್ಲಿ ಕೋಟ್ಯಂತರ ಸಂಖ್ಯೆಯಲ್ಲಿರುತ್ತವೆ) ಪೊಟ್ಯಾಷ್, ರಂಜಕ, ಸುಣ್ಣ ಮುಂತಾದ ಧಾತುಗಳನ್ನು ಸಸ್ಯಗಳಿಗೆ ಪೂರೈಸುತ್ತವೆ.

ಆದರೆ ಇಂತಹ ಎಲ್ಲ ಸೂಕ್ಷ್ಮ ಜೀವಿಗಳನ್ನು ಪೋಷಿಸುವುದು ಸೂರ್ಯನ ಬೆಳಕು. ಸೂರ್ಯನ ಬಿಸಿಲಿನಿಂದಾಗಿ ಜೀವಶಕ್ತಿ ಜಾಗೃತವಾಗಿ ಸುತ್ತಲಿನ ವಾತಾವರಣದಿಂದ ಧಾತುಗಳ ಅಂಶಗಳನ್ನು ಹೀರಿಕೊಳ್ಳುವಂತೆ ಸಸ್ಯವನ್ನು ಪ್ರಚೋದಿಸುತ್ತದೆ. ನೀರಿನ ಕಣಗಳ ಮೂಲಕ ಹರಿದುಬರುವ ಈ ಧಾತುಗಳ ಸಹಾಯದಿಂದ ಗಿಡ ಬೆಳೆಯುತ್ತದೆ. ವಾತಾವರಣದಲ್ಲಿರುವ ಇಂಗಾಲ, ಆಮ್ಲಜನಕ ಮತ್ತು ಜಲಜಕವನ್ನು ಸಸ್ಯ ನೇರವಾಗಿ ಪಡೆಯುತ್ತದೆ. ಇನ್ನು ಸಸ್ಯಗಳ ಪೈಕಿ ಕೇವಲ ದ್ವಿದಳ ಧಾನ್ಯಗಳು ಮಾತ್ರ ವಾತಾವರಣದ ಸಾರಜನಕವನ್ನು ನೇರವಾಗಿ ಬಳಸಿಕೊಳ್ಳುವ ಸಾಮರ್ಥ್ಯ ಹೊಂದಿವೆ. ಕೇವಲ ಮುಂಗಾರಿನ ಗುಡುಗು ಮತ್ತು ಮಿಂಚು ಮಾತ್ರ ವಾತಾವರಣದ ಸಾರಜನಕವನ್ನು ಕರಗಿಸಿ ಮಳೆ ಮೂಲಕ ಭೂಮಿಗೆ ಸುರಿಸುತ್ತವೆ. ಶೇ.೨೫ ಸಾರಜನಕ ಭೂಮಿಗೆ ಲಭ್ಯವಾಗುವುದು ಹೀಗೆ.

ಈ ರೀತಿ ಬಿದ್ದ ಸಾರಜನಕ ಅತ್ಯುತ್ತಮ ಗೊಬ್ಬರವಾಗಿದ್ದು ಸಸ್ಯಗಳ ಬೆಳವಣಿಗೆಯನ್ನು ವರ್ಧಿಸುತ್ತದೆ. ಹೀಗಾಗಿ ಮಳೆಗಾಲದಲ್ಲಿ ಸಸ್ಯ ಜಗತ್ತಿನ ಬೆಳವಣಿಗೆ ವೇಗವಾಗುತ್ತದೆ.

ಲೆಕ್ಕ ಹಾಕಿದರೆ ಒಂದು ಎಕರೆಯಲ್ಲಿ ಬೆಳೆ ಬೆಳೆಯಲು ೩೧ ಕೆ.ಜಿ. ಸಾರಜನಕ ಬೇಕಾಗುತ್ತದೆ. ಇದರಲ್ಲಿ ಒಂದಿಷ್ಟು ಪಾಲು ಮಳೆ ನೀರಿನಿಂದ ಬರುತ್ತದೆ. ಉಳಿದಿದ್ದನ್ನು ನಾವು ಭೂಮಿಗೆ ಸೇರಿಸಬೇಕಾಗುತ್ತದೆ. ಒಂದು ವೇಳೆ ನೈಸರ್ಗಿಕ ಕೃಷಿ ಪದ್ಧತಿಯನ್ನು ಅನುಸರಿಸಿದ್ದಾದರೆ ಒಂದು ಗ್ರಾಮ್ ಸಾರಜನಕವನ್ನೂ ಹೊರಗಿನಿಂದ ತಂದು ಸುರಿಯಬೇಕಾಗಿಲ್ಲ.

ಏಕೆಂದರೆ ಹೊಲದಲ್ಲಿ ಬಿತ್ತುವ ದ್ವಿದಳ ಧಾನ್ಯಗಳು ಭೂಮಿಗೆ ಹಾಗೂ ಬೆಳೆಗೆ ಅಗತ್ಯವಾಗಿ ಬೇಕಾದ ಪ್ರಮಾಣದ ಸಾರಜನಕವನ್ನು ತಾವೇ ಉತ್ಪಾದಿಸಿಕೊಳ್ಳುತ್ತವೆ. ಉದ್ದು, ಹೆಸರು, ಅಲಸಂದೆ, ಶೇಂಗಾ, ಕಡಲೆ, ತೊಗರಿ, ಬಟಾಣೆ, ಮೆಂತ್ಯ- ಹೀಗೆ ಸಾಕಷ್ಟು ದ್ವಿದಳ ಸಸ್ಯಗಳ ಬೇರಿನಲ್ಲಿರುವ ರೈಜೋಬಿಯಂ ಜೀವಾಣುಗಳು ವಾತಾವರಣದ ಸಾರಜನಕವನ್ನು ಹೀರಿಕೊಂಡು ಮಣ್ಣಿಗೆ ಸೇರಿಸುತ್ತವೆ. ಒಂದು ಪೈಸೆ ಖರ್ಚಿಲ್ಲದೇ ಅತ್ಯಂತ ಫಲವತ್ತಾದ ಸಾರಜನಕ (ನೈಟ್ರೋಜನ್) ಗೊಬ್ಬರ ನಮಗೆ ದಕ್ಕುತ್ತದೆ.

ಅದೇ ರೀತಿ ಇತರ ಪೋಷಕಾಂಶಗಳು ವಿವಿಧ ಬೆಳೆಗಳ ಮೂಲಕ ಭೂಮಿಯನ್ನು ಸೇರುತ್ತ ಹೋಗುತ್ತವೆ. ನಿಸರ್ಗ ಈ ಕೆಲಸವನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸುತ್ತದೆ. ಯಾವ್ಯಾವ ಬೆಳೆಗಳಲ್ಲಿ ಯಾವ್ಯಾವ ಸೂಕ್ಷ್ಮಜೀವಿಗಳಿವೆ, ಅವು ಭೂಮಿಗೆ ಸೇರಿಸುವ ಪೋಷಕಾಂಶಗಳು ಯಾವವು, ಅವು ಎಲ್ಲಿ ದೊರೆಯುತ್ತವೆ ಎಂಬುದನ್ನು ತಿಳಿದುಕೊಂಡರೆ ಸಾಕು, ಕೃಷಿಯ ರಹಸ್ಯ ನಿಮಗೆ ದಕ್ಕಿದಂತೆ.

(ಮುಂದುವರಿಯುವುದು)

- ಚಾಮರಾಜ ಸವಡಿ